ಬೆಂಗಳೂರು: ಕಾಂಗ್ರೆಸ್  ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.

ಇಂದು ಶಾಸಕರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎಷ್ಟೇ ಮನವಿ ಮಾಡಿದರೂ ಡಿ.ಜೆ. ಹಳ್ಳಿ ಕೆ.ಜಿ ಹಳ್ಳಿ ಗಲಭೆಗೆ ಸಂಚು ಮಾಡಿದವರ ಮೇಲೆ ಡಿಕೆ ಶಿವಕುಮಾರ್ ಇನ್ನೂ ಸಹ ಕ್ರಮ ಕೈಗೊಂಡಿಲ್ಲ. ನನಗೆ ಹೀಗಾಯ್ತು ಅಂತ ಡಿಕೆ ಶಿವಕುಮಾರ್ ಒಂದೇ ಒಂದು ಫೋನ್ ಕೂಡ ಮಾಡಿಲ್ಲ. ಒಬ್ಬ ಶಾಸಕನಾಗಿ ನಾವೆಲ್ಲ ಬೀದಿಯಲ್ಲಿದ್ದೀವಿ, ಆದರೆ ನಮ್ಮನ್ನು ಡಿಕೆ ಶಿವಕುಮಾರ್ ಮಾತೇ ಆಡಿಸಿಲ್ಲ ಎಂದರು. ನಾನು ಹೈಕಮಾಂಡ್​​ಗೆ ಪತ್ರ ಬರೆಯುತ್ತೇನೆ. ನನ್ನ ಮನೆಗೆ ಬೆಂಕಿ ಹಾಕಿದ, ಸಂಚು ಮಾಡಿದವರ ಜೊತೆಗೆ ಡಿಕೆ ಶಿವಕುಮಾರ್ ನಿಂತಿದ್ದಾರೆ ಎಂದು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ರು.

ಇನ್ನು ರಣದೀಪ್ ಸಿಂಗ್ ಸುರ್ಜೇವಾಲ ಮೊದಲು ನನ್ನ ಮನವಿಗೆ ನ್ಯಾಯ ಕೊಡಲಿ. ಸುರ್ಜೇವಾಲಗೆ ನಾನೇ ಹೋಗಿ ಮನವಿ ಕೊಟ್ಟಿದ್ದೆ. ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ನನ್ನ ಮನೆ ಸುಟ್ಟವರ ಮೇಲೆ ಕ್ರಮ ಕೈಗೊಳ್ಳಿ ಅಂತ ಮನವಿ ಮಾಡಿದ್ದೆ. ಆ ನನ್ನ ಮನವಿ ಹಿನ್ನೆಲೆಯಲ್ಲಿ ಇನ್ನೂ ಏನೂ ಕ್ರಮ ಕೈಗೊಂಡಿಲ್ಲ ಅಂತ ಸುರ್ಜೇವಾಲ ವಿರುದ್ಧವೂ ಅಖಂಡ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ರು.

ಸಿದ್ದರಾಮಯ್ಯನವರೇ ಮುಂದಿನ ಸಿಎಂ ಆಗಬೇಕು
ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಬೇಕು, ಅವರ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಮಾತ್ರ 150 ಸೀಟ್ ಬರುತ್ತೆ. ಸಿದ್ದರಾಮಯ್ಯ ಅವರೇ ನಮ್ಮ ನಾಯಕರು, ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಷ್ಟೇ. ನನ್ನ ನಾಯಕ ಸಿದ್ದರಾಮಯ್ಯ ಎಂದು ಶ್ರೀನಿವಾಸಮೂರ್ತಿ ಹೇಳಿದ್ರು. ಸಿದ್ದರಾಮಯ್ಯನವರೇ ಮುಂದಿನ ಸಿಎಂ ಅಂತ ನಾವೆಲ್ಲ ಶಾಸಕರೂ ಘೋಷಣೆ ಮಾಡ್ತೀವಿ ಎಂದರು.

2013 ರಿಂದ 2018ರವರೆಗೆ ಕರ್ನಾಟಕ‌ ಮುಖ್ಯಮಂತ್ರಿ ಆಗಿದ್ದವರು ಸಿದ್ದರಾಮಯ್ಯ. ಜನರು ಕೂಡ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಬೇಕು ಅಂತಿದ್ದಾರೆ. ನನ್ನ ಅಭಿಪ್ರಾಯ ಕೂಡ ಅದೇ. ಅವರು ಮುಖ್ಯಮಂತ್ರಿ ಆದರೆ ರಾಜ್ಯಕ್ಕೆ ಒಳ್ಳೇದಾಗುತ್ತದೆ. ಸಿದ್ದರಾಮಯ್ಯ ಕೈ ಬಲಪಡಿಸುವ ಕೆಲಸ ಮಾಡುತ್ತೇವೆ. ನಮ್ಮನ್ನ ಪಕ್ಷಕ್ಕೆ ಕರೆದುಕೊಂಡ ಬಂದವರು ಸಿದ್ದರಾಮಯ್ಯ. ಅವರನ್ನ ಸಿಎಂ‌ ಅಭ್ಯರ್ಥಿಯೆಂದು ಘೋಷಣೆ ಮಾಡುವ ವಿಚಾರವಾಗಿ ಹೈಕಮಾಂಡ್ ಭೇಟಿ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಅಖಂಡ ಶ್ರೀನಿವಾಸಮೂರ್ತಿ ತಿಳಿಸಿದ್ರು.

ಮೊದಲ ಬಾರಿ ಸಿಎಂ ಆಗಿದ್ದಾಗ ಪ್ರಮಾಣ ವಚನ ಸ್ವೀಕರಿಸಿದ ಕ್ಷಣವೇ ರಾಜ್ಯದ ಜನರಿಗೆ ಉಚಿತ ಅಕ್ಕಿ ಘೋಷಣೆ ಮಾಡಿದವರು ಸಿದ್ದರಾಮಯ್ಯ. ಹೀಗಾಗಿ ಅವರು ರಾಜ್ಯದ ಸಿಎಂ ಆಗಬೇಕು ಅಂತ ಜನ ಬಯಸುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಾಡಿದ ಕೆಲಸಗಳನ್ನು ಜನ ಈಗಲೂ ನೆನೆಯುತ್ತಿದ್ದಾರೆ ಎಂದು ಶ್ರೀನಿವಾಸಮೂರ್ತಿ ಕೊಂಡಾಡಿದರು.

The post ‘ನನ್ನ ಮನೆಗೆ ಬೆಂಕಿ ಹಾಕಿದವ್ರ ಜೊತೆ ಡಿ.ಕೆ ಶಿವಕುಮಾರ್ ನಿಂತಿದ್ದಾರೆ’ -ಅಖಂಡ ಬಹಿರಂಗ ವಾಗ್ದಾಳಿ appeared first on News First Kannada.

Source: newsfirstlive.com

Source link