ಐಪಿಎಲ್ 2022ರ ಮೆಗಾ ಹರಾಜು ಪ್ರಕ್ರಿಯೆಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಹ ಮಾಲೀಕ ಎನ್. ಶ್ರೀನಿವಾಸನ್ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಭವಿಷ್ಯದ ಕುರಿತು ಶಾಕಿಂಗ್ ಮಾಹಿತಿಯನ್ನು ಹೊರಹಾಕಿದ್ದಾರೆ.
ಬಿಸಿಸಿಐ 2022ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಗೆ ಸಿದ್ದವಾಗಿದ್ದು, ಈ ಬಾರಿಯ ಆವೃತ್ತಿಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಎರಡು ಫ್ರಾಂಚೈಸಿಗಳಿಗೆ ತಂಡವನ್ನು ಆಯ್ಕೆ ಮಾಡಿಕೊಳ್ಳಲು ಉತ್ತಮ ಅವಕಾಶ ಮಾಡಿಕೊಡಲು ಮುಂದಾಗಿದೆ. ಅಹ್ಮದಾಬಾದ್ ಹಾಗೂ ಲಕ್ನೋ ತಂಡಗಳ ಸೇರ್ಪಡೆಯಿಂದ ಈ ಬಾರಿಯ ಐಪಿಎಲ್ನಲ್ಲಿ 10 ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಸಲಿದೆ.
ಎರಡು ಹೊಸ ತಂಡಗಳ ಸೇರ್ಪಡೆಯಿಂದ ಆಟಗಾರರಿಗೆ ಬೇಡಿಕೆಯೂ ಕೂಡ ಹೆಚ್ಚಾಗಿದ್ದು, ಫ್ರಾಂಚೈಸಿಗಳು ರಿಟೈನ್ ಮಾಡಿಕೊಳ್ಳುವ ಆಟಗಾರರ ಪಟ್ಟಿ ನೀಡಲು ಬಿಸಿಸಿಐ ಸೂಚನೆ ನೀಡಿದೆ. ಸದ್ಯ ಇರೋ 8 ತಂಡಗಳಿಗೆ ತಲಾ 4 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅದರಲ್ಲಿ ಮೂವರು ಭಾರತೀಯ ಆಟಗಾರರು ಹಾಗೂ ಓರ್ವ ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಮಾತ್ರ ಅವಕಾಶವಿದೆ.
ಅದರಲ್ಲೂ ಚೆನ್ನೈ ಕ್ಯಾಪ್ಟನ್ ಧೋನಿ ರಿಟೈನ್ ಮಾಡಿಕೊಳ್ಳುವ ವಿಚಾರ ಈ ಬಾರಿ ಚರ್ಚೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸನ್, ಧೋನಿ ಬಹಳ ನ್ಯಾಯಯುತ ವ್ಯಕ್ತಿ.. ಅವರನ್ನು ಸಿಎಸ್ಕೆ ರಿಟೈನ್ ಮಾಡಿಕೊಳ್ಳಲು ಸಿಎಸ್ಕೆ ಹೆಚ್ಚು ಹಣ ಕಳೆದುಕೊಳ್ಳಬೇಕಾದ ಕಾರಣ, ಧೋನಿ ರಿಟೈನ್ ನೀತಿಯಿಂದ ಹೊರಬರಲು ಬಯಸಿದ್ದಾರೆ. ಆದ್ದರಿಂದಲೇ ಅವರು ಜನರಿಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದರು. ಸಿಎಸ್ಕೆ ತಂಡವನ್ನು ಬಿಟ್ಟು ಹೋಗುತ್ತೀರಾ ಎಂದು ಕೇಳಿದಾಗ ನಾನು ಹೋಗಿಲ್ಲ ಅಂತಾ ಹೇಳುವ ಮೂಲಕ ಎಲ್ಲವನ್ನು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಐಪಿಎಲ್ ನಿಯಮಗಳ ಅನ್ವಯ ಆಟಗಾರರನ್ನು ತಂಡವನ್ನು ರಿಟೈನ್ ಮಾಡಿಕೊಳ್ಳಬೇಕಾದರೆ 90 ಕೋಟಿ ರೂಪಾಯಿ ವ್ಯಯಿಸಬೇಕಾಗುತ್ತದೆ. ಅದರಲ್ಲೂ 4 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬೇಕಾದರೆ 42 ಕೋಟಿ ರೂಪಾಯಿ, ಮೂವರು ಆಟಗಾರರಿಗೆ 33 ಕೋಟಿ ರೂಪಾಯಿ, ಇಬ್ಬರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಬೇಕಾದರೆ 24 ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ.
ಅದರಲ್ಲೂ ಸಿಎಸ್ಕೆ ಧೋನಿರನ್ನು ರಿಟೈನ್ ಮಾಡಿಕೊಳ್ಳಲು ಈ ಬಾರಿ ಹೆಚ್ಚುವರಿಯಾಗಿ 6 ರಿಂದ 7 ಕೋಟಿ ರೂಪಾಯಿ ನೀಡಬೇಕಾಗುತ್ತದೆ. ಧೋನಿ ಮುಂದಿನ ಮೂರು ಆವೃತ್ತಿ (2022 ರಿಂದ 2025)ಗಳನ್ನು ಆಡೋದು ಅನುಮಾನ ಆಗಿರೋ ಕಾರಣ ಅವರ ಮೇಲೆ ಅಷ್ಟೋಂದು ಹಣ ಖರ್ಚು ಮಾಡೋದು ಸಿಎಸ್ಕೆಗೆ ಇದು ತಲೆನೋವಾಗಿತ್ತು. ಇನ್ನು ಸಿಎಸ್ಕೆ ನಾಯಕತ್ವದ ಭವಿಷ್ಯದ ಕುರಿತು ಉತ್ತರಿಸಲು ನಿರಾಕರಿಸಿದ ಶ್ರೀನಿವಾಸನ್, ನನಗೆ ಮುಂದೇನಾಗುತ್ತೆ ಎಂಬ ಬಗ್ಗೆ ಗೊತ್ತಿದೆ. ಆದರೆ ನಾನು ಇದಕ್ಕೆ ಈಗ ಉತ್ತರ ನೀಡಬೇಕೋ ಇಲ್ಲವೋ ಗೊತ್ತಿಲ್ಲ. ಆದರೆ ಇದು ಖುಷಿ ವಿಚಾರವೇ ಆಗಿದೆ ಎಂದು ಹೇಳಿದ್ದಾರೆ.