ಉಡುಪಿ: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಇರುವಾಗಲೇ ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ಚರ್ಚೆ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಮತ್ತು ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ನಡುವೇ ಸಿಎಂ ಗಾದಿಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಹೀಗಿರುವಾಗಲೇ ಡಿ.ಕೆ ಶಿವಕುಮಾರ್​​ ಅವರು, ಕಾಂಗ್ರೆಸ್​ನ ಮುಂದಿನ ಸಿಎಂ ಅಭ್ಯರ್ಥಿ ಯಾರು ಎನ್ನುವುದರ ಕುರಿತು ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಡಿ.ಕೆ ಶಿವಕುಮಾರ್, ನನ್ನನ್ನು ಸಿಎಂ ಮಾಡಿ ಎಂದು ಯಾರ ಬಳಿಯೂ ಎಂದೂ ಕೇಳಿಕೊಂಡಿಲ್ಲ. ಕಾಂಗ್ರೆಸ್​ನ ಮುಂದಿನ ಸಿಎಂ ಅಭ್ಯರ್ಥಿ ಬಗ್ಗೆ ಈಗ ಮಾತಾಡೋದು ಬೇಡ. ಕೊರೋನಾ ಕಾಲದಲ್ಲಿ ಜನರ ಸಮಸ್ಯೆ ಆಲಿಸಿ ನ್ಯಾಯ ಒದಗಿಸೋಣ. ಕೋವಿಡ್​​-19 ತೀವ್ರಗೊಳ್ಳುತ್ತಿರುವಾಗ ಜನರ ಜೀವನದ ಬಗ್ಗೆ ಯೋಚಿಸಬೇಕು, ಜೀವವಿದ್ದರೆ ಜೀವನ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಸ್ಪರ್ಧೆ ನೋ ಟಾಕ್ಸ್

ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡುವುದನ್ನು ಕಾಂಗ್ರೆಸ್​ ಪಕ್ಷ ನಿರ್ಧರಿಸಲಿದೆ. ನಾವು ಪಕ್ಷದಲ್ಲಿ ತೀರ್ಮಾನಿಸುವ ವಿಚಾರದ ಬಗ್ಗೆ ಇಲ್ಲಿ ಚರ್ಚೆ ಬೇಡ. ಇದರ ಕುರಿತು ನಾನೇನು ಮಾತಾಡುವುದಿಲ್ಲ  ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲೀ. ನಮ್ಮ ರಾಜ್ಯಕ್ಕೆ ಹೆಚ್ಚಿನ ಅವಕಾಶಗಳು ಸಿಗಲಿ. ಹೊಸದಾಗಿ ಆಯ್ಕೆಯಾಗುವವರು ರಾಜ್ಯದ ಧ್ವನಿಯಾಗಲಿ. ನಮ್ಮ 25 ಸಂಸದರು ಬಾಯಿಮುಚ್ಚಿಕೊಂಡು ಇದ್ದಾರೆ. ಸಂಸದರು ನಮ್ಮ ರಾಜ್ಯದ ಬಗ್ಗೆ ಬಾಯಿಯನ್ನೇ ಬಿಚ್ಚುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಕರ್ನಾಟಕಕ್ಕೆ ಸುಣ್ಣ, ಗುಜರಾತಿಗೆ ಬೆಣ್ಣೆ

ಹೀಗೆ ಮುಂದುವರಿದ ಅವರು, ವ್ಯಾಕ್ಸಿನ್ ಹಂಚಿಕೆಯಲ್ಲಿ ಬಹಳ ತಾರತಮ್ಯ ಆಗುತ್ತಿದೆ. ಗುಜರಾತ್ ಮತ್ತು ಕರ್ನಾಟಕದ ವ್ಯಾಕ್ಸಿನ್ ಹಂಚಿಕೆಯ ತುಲನೆಯಾಗಲಿ. ರಾಜ್ಯದ ಸಂಸದರು ಇನ್ನಾದರೂ ಮಾತನಾಡಲಿ. ಗುಜರಾತಿಗೆ ಅತಿಹೆಚ್ಚು ವ್ಯಾಕ್ಸಿನ್ ಕಳುಹಿಸಿಕೊಡಲಾಗುತ್ತಿದೆ. ಕರ್ನಾಟಕದಲ್ಲಿ ವ್ಯಾಕ್ಸಿನ್ ಸಿಗದೇ ಜನ ಹೊಡೆದಾಡಿಕೊಳ್ಳುತ್ತಿದ್ದಾರೆ. ಕರ್ನಾಟಕಕ್ಕೆ ಸುಣ್ಣ, ಗುಜರಾತಿಗೆ ಬೆಣ್ಣೆ ಎಂದು ಕೇಂದ್ರದ ವಿರುದ್ಧ ಕೆಂಡ ಕಾರಿದರು.

ವ್ಯಾಕ್ಸಿನೇಷನ್​​​ ನಂಬರ್ಸ್​ ಬೋಗಸ್​​

ಸರ್ಕಾರ ಹೇಳುತ್ತಿರುವ ವ್ಯಾಕ್ಸಿನೇಷನ್ ನಂಬರ್ಸ್ ಬೋಗಸ್. ರಾಜ್ಯದ ಆರೋಗ್ಯ ಸಚಿವರು ದೆಹಲಿಗೆ ಹೋಗಿದ್ದಾರೆ. ವ್ಯಾಕ್ಸಿನ್ ಇವಾಗ ಕೊಟ್ಟಿಲ್ಲ ಅಂದ್ರೆ ಮತ್ತೆ ಯಾವಾಗ ಕೊಡುತ್ತೀರಿ. ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ವ್ಯಾಕ್ಸಿನ್ ನೀಡಲಾಗುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಬಗ್ಗೆ ಅಸಡ್ಡೆ ತೋರುತ್ತಿದೆ. ಖಾಸಗಿಯವರಿಗೆ ಲಸಿಕೆ ಕೊಡುತ್ತಾರೆ. ಉಚಿತ ಲಸಿಕೆ ಕೊಡಲು ತಾರತಮ್ಯ ಮಾಡುತ್ತಾರೆ ಎಂದು ಸಿಡಿಮಿಡಿಗೊಂಡರು.

 

 

 

The post ‘ನನ್ನ ಸಿಎಂ ಮಾಡಿ ಅಂತ ಯಾರ ಬಳಿಯೂ ಅಂಗಲಾಚಿಲ್ಲ’ ಡಿ.ಕೆ ಶಿವಕುಮಾರ್​ ಹೀಗಂದಿದ್ಯಾಕೇ? appeared first on News First Kannada.

Source: newsfirstlive.com

Source link