ನಮಗೆ ಅಧಿಕಾರ ಕೊಡಿ ಹಳ್ಳಿಗಳತ್ತ ಹೋಗುತ್ತೇನೆ, ಇದು ನನ್ನ ಕೊನೆಯ ಹೋರಾಟ: ಹೆಚ್​ಡಿ ಕುಮಾರಸ್ವಾಮಿ | HD Kumaraswamy on Karnataka Assembly Election Congress Karnataka Politics


ನಮಗೆ ಅಧಿಕಾರ ಕೊಡಿ ಹಳ್ಳಿಗಳತ್ತ ಹೋಗುತ್ತೇನೆ, ಇದು ನನ್ನ ಕೊನೆಯ ಹೋರಾಟ: ಹೆಚ್​ಡಿ ಕುಮಾರಸ್ವಾಮಿ

ಹೆಚ್‌.ಡಿ. ಕುಮಾರಸ್ವಾಮಿ

ಬೆಂಗಳೂರು: ಸಿಂದಗಿ ಬೈಎಲೆಕ್ಷನ್‌ನಲ್ಲಿ ಸೂಟ್‌ಕೇಸ್ ಕೊಟ್ಟಿದ್ದಕ್ಕೆ ಹೆಚ್.ಡಿ. ಕುಮಾರಸ್ವಾಮಿ ಚುನಾವಣಾ ಪ್ರಚಾರಕ್ಕೆ ಬಂದಿದ್ದಾರೆ ಎಂದು ಹೇಳಿದ್ರು. ನಾನು ಆ ನೋವನ್ನೆಲ್ಲ ನುಂಗಿಕೊಂಡು ಪ್ರಚಾರ ಮಾಡಿದ್ದೆ. ಯಾರೂ ಸಹ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಸಿಂದಗಿ ಬೈಎಲೆಕ್ಷನ್ ಬಳಿಕ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಯಾವುದೇ ಪಕ್ಷದ ನಾಯಕನ ಬಗ್ಗೆಯೂ ಚರ್ಚೆ ಮಾಡಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದು ದೇವನಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಇನ್ನು ಯಾರೂ ರೈತರ ಸಾಲಮನ್ನಾ ಮಾಡಲ್ಲ. ಸಾಲಮನ್ನಾ ಮಾಡಿದ್ರೂ ಏನೂ ಉಪಯೋಗಕ್ಕೆ ಬರಲ್ಲ. 25 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದೆ. ಹೈನುಗಾರಿಕೆ, ದ್ರಾಕ್ಷಿ, ತೋಟಗಾರಿಕೆ ಬೆಳೆಗೆ ಕೊಟ್ರೆ ಅನುಕೂಲ ಆಗುತ್ತದೆ. ನಾನೂ ಸಹ ಹಸುಗಳನ್ನ ಸಾಕಿ ಹೈನುಗಾರಿಕೆ ಕಷ್ಟ ತಿಳಿದಿದ್ದೇನೆ. ನನಗೆ ಐದು ವರ್ಷ ಸರ್ಕಾರ ರಚಿಸಲು ಅವಕಾಶ ಕೊಟ್ಟರೆ ರೈತರು 1 ರೂಪಾಯಿ ಸಾಲ ಮಾಡದಂತೆ ನೋಡಿಕೊಳ್ಳುತ್ತೇನೆ. ನಮಗೆ ಅಧಿಕಾರ ಕೊಡಿ ಹಳ್ಳಿಗಳತ್ತ ಹೋಗುತ್ತೇನೆ. ಇದು ನನ್ನ ಕೊನೆಯ ಹೋರಾಟ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ನೀರು ಕೊಡುತ್ತೇವೆಂದು ಹೇಳಿ ಎತ್ತಿನಹೊಳೆ ಹಣ ಲೂಟಿ ಮಾಡುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳಿಗೆ ಕೊಳಚೆ ನೀರು ತುಂಬಿ ವಿಷ ಕೊಡುತ್ತಿದ್ದೀರಾ? ಸರ್ಕಾರದ 100 ದಿನಗಳ ಸಾಧನೆ ಜಾಹೀರಾತಿಗಾಗಿ 10 ರಿಂದ 20 ಕೋಟಿ ಖರ್ಚು ಮಾಡಿದ್ದಾರೆ. ಜಾಹೀರಾತು ಮೂಲಕ ಜನರನ್ನ ಮರುಳು ಮಾಡಲು ಯತ್ನ ನಡೆಸಿದ್ದಾರೆ. ಎತ್ತಿನಹೊಳೆಗೆ ಸಿದ್ದರಾಮಯ್ಯ 16 ಸಾವಿರ ಕೋಟಿ ಕೊಟ್ರು. ಎತ್ತಿನಹೊಳೆ ನೀರು ಇನ್ನೂ ಸಕಲೇಶಪುರ ದಾಟಿ ಬಂದಿಲ್ಲ. 1 ವರ್ಷದಲ್ಲಿ ಎತ್ತಿನಹೊಳೆ ನೀರು ಹರಿಸುತ್ತೇವೆ ಅಂದಿದ್ರು. ಆದ್ರೆ ಯೋಜನೆ ಆರಂಭವಾದ ಬಳಿಕ ಸಿಎಂ ಆಗಿ ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್, ನಾನು, ಬಿ.ಎಸ್‌. ಯಡಿಯೂರಪ್ಪ ಬಂದುಹೋದರು. ಈಗ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಬಂದು ಕೂತಿದ್ದಾರೆ. 8 ಸಾವಿರ ಕೋಟಿಯಿಂದ ಆರಂಭವಾದ ಎತ್ತಿನಹೊಳೆ ಯೋಜನೆ ಈಗ 24 ಸಾವಿರ ಕೋಟಿಗೆ ಬಂದು ನಿಂತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಜೆಡಿಎಸ್ ಎಲ್ಲಿದೆ ಎಂದು ಕೆಲವರು ಮಾತನಾಡುತ್ತಾರೆ. 2018ರ ಎಲೆಕ್ಷನ್ ಬಳಿಕ ಕಾಂಗ್ರೆಸ್ ಸಹವಾಸ ಮಾಡಿದ್ನಲ್ಲ, ಆಗ ಜೆಡಿಎಸ್ ಪಕ್ಷವನ್ನು ಮುಗಿಸುವ ಕಥೆ ಶುರುವಾಗಿತ್ತು. ಆದ್ರೆ ದೇವರ, ಜನರ ಆಶೀರ್ವಾದದಿಂದ ಇಂದಿಗೂ ಜೆಡಿಎಸ್ ಇದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ದೇವನಹಳ್ಳಿಯಲ್ಲಿ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ನಾಳೆಯಿಂದ 8 ದಿನಗಳ ಕಾಲ ಪಕ್ಷ ಸಂಘಟನೆಗೆ ಸಭೆ ನಡೆಸುತ್ತೇವೆ. ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಜಿಲ್ಲಾವಾರು, ರಾಜ್ಯ ಮಟ್ಟದ ಜೆಡಿಎಸ್ ನಾಯಕರ ಸಭೆ ನಡೆಸುವೆ. ಜನರ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸ್ಥಳೀಯಸಂಸ್ಥೆ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ತೇವೆ. ಒಂದು ವಾರದೊಳಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಬಿಟ್​ಕಾಯಿನ್ ದಂಧೆ ಬಗ್ಗೆ ಇಡಿ ತನಿಖೆಗೆ ಎಚ್​ಡಿ ಕುಮಾರಸ್ವಾಮಿ ಒತ್ತಾಯ

ಇದನ್ನೂ ಓದಿ: ಸಂಘಟನೆ, ಸಿದ್ಧಾಂತ, ನೇತೃತ್ವ ಮೂರೂ ಸರಿ ಇಲ್ಲದಿದ್ದಾಗ ಆಗಬೇಕಾಗಿದ್ದೆ ಆಗಿದೆ: ಜೆಡಿಎಸ್ ಸೋಲಿನ ಬಗ್ಗೆ ಸಿಟಿ ರವಿ ಪ್ರತಿಕ್ರಿಯೆ

TV9 Kannada


Leave a Reply

Your email address will not be published.