ನಮಾಜ್ ನಿಲ್ಲಿಸಿ, ಹಿಂದೂ ತಾಯಿಯ ಅಂತಿಮ ಯಾತ್ರೆಯನ್ನು ತಮ್ಮ ಹೆಗಲ ಮೇಲೆ ಮಾಡಿಸಿದರು! ಇದು ಸಾಂಸ್ಕೃತಿಕ ನಗರಿಯ ಸಂಸ್ಕೃತಿ | Communal harmony in Mysore muslim youths perform last rites of hindu mother Jayamma


ನಮಾಜ್ ನಿಲ್ಲಿಸಿ, ಹಿಂದೂ ತಾಯಿಯ ಅಂತಿಮ ಯಾತ್ರೆಯನ್ನು ತಮ್ಮ ಹೆಗಲ ಮೇಲೆ ಮಾಡಿಸಿದರು! ಇದು ಸಾಂಸ್ಕೃತಿಕ ನಗರಿಯ ಸಂಸ್ಕೃತಿ

ನಮಾಜ್ ನಿಲ್ಲಿಸಿ, ಹಿಂದೂ ತಾಯಿಯ ಅಂತಿಮ ಯಾತ್ರೆಯನ್ನು ತಮ್ಮ ಹೆಗಲ ಮೇಲೆ ಮಾಡಿಸಿದರು! ಇದು ಸಾಂಸ್ಕೃತಿಕ ನಗರಿಯ ಸಂಸ್ಕೃತಿ

ರಾಜ್ಯದಾದ್ಯಂತ ಹಿಂದೂ ಮುಸ್ಲಿಂರ ನಡವೆ ಧರ್ಮ ದಂಗಲ್ ಜೋರಾಗಿ ನಡೆದಿದೆ. ಹಿಜಾಬ್‌ನಿಂದ ಆರಂಭವಾದ ಸಂಘರ್ಷ ಇದೀಗ ಬೇರೆ ಬೇರೆ ಆಯಾಮ ಪಡೆದುಕೊಂಡು ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡುತ್ತಿದೆ. ಕೋಮು ಕೋಮುಗಳ ನಡುವೆ ಸಂಘರ್ಷ ತಾರಕ್ಕೇರಿದೆ. ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನ ವೃದ್ದೆಯ ಸಾವಿನಲ್ಲಿ ಹಿಂದು ಮುಸ್ಲಿಂರು ನಡೆದುಕೊಂಡ ರೀತಿ ಕುವೆಂಪು ಅವರ ವಿಶ್ವಮಾನವ ಸಂದೇಶಕ್ಕೆ ಸಾಕ್ಷಿಯಾಗಿದೆ.

ಎಲ್ಲರನ್ನೂ ತಾಯಿಯಂತೆ ಸಲುಹಿದ್ದ ಹಿರಿಯ ಜೀವ
ಅವರು ಜಯಮ್ಮ. ವಯಸ್ಸು 60. ಮೈಸೂರಿನ ಗೌಸಿಯಾ ನಗರದ ನಿವಾಸಿ. ಜಯಮ್ಮ ಪತಿ ದೇವರಾಜು. ಇವರಿಗೆ ಇಬ್ಬರು ಮಕ್ಕಳು ಶಿವರಾಮ್ ಹಾಗೂ ಭವ್ಯ. ಇಬ್ಬರು ಮಕ್ಕಳಿಗೂ ಜಯಮ್ಮ ದಂಪತಿ ಮದುವೆ ಮಾಡಿದ್ದಾರೆ. ಇನ್ನು ಜಯಮ್ಮ ವಾಸವಾಗಿರುವ ಗೌಸಿಯಾ ನಗರದಲ್ಲಿ ಸುಮಾರು 3 ಸಾವಿರ ಮನೆಗಳಿವೆ. ಅದರಲ್ಲಿ ಎಲ್ಲವೂ ಮುಸ್ಲಿಂ ಸಮುದಾಯದವರೇ ವಾಸವಾಗಿದ್ದಾರೆ. ಕೇವಲ ಇವರು ಮಾತ್ರ ಅಲ್ಲಿ ಹಿಂದೂಗಳು!

ಆದರೆ ಎಂದೂ ಇವರಿಗೆ ತಾವು ’ಅಲ್ಪಸಂಖ್ಯಾತರು’ ಎಂಬ ಭಾವನೆಯಾಗಲಿ, ಭಯವಾಗಲಿ ಬಂದಿಲ್ಲ. ಇದಕ್ಕೆ ಕಾರಣ ಇಲ್ಲಿನವರ ಮನಸ್ಥಿತಿ ಹಾಗೂ ಜಯಮ್ಮ ಅವರ ತಾಯಿ ಮಮತೆ. ಹೌದು ಜಯಮ್ಮ ಅಕ್ಕ ಪಕ್ಕದಲ್ಲಿದ್ದ ಮುಸ್ಲಿಂ ಮಕ್ಕಳಿಗೂ ತಾಯಿಯಾಗಿ ಸಲುಹಿದ್ದರು. ಎಂದೂ ಅವರು, ಮುಸ್ಲಿಂ ನಾವು ಹಿಂದೂಗಳು ಎಂದು ಭೇದ ಭಾವ ಮಾಡಿದವರಲ್ಲ. ಮಗ ಶಿವರಾಮ್ ಜೊತೆ ಅಕ್ಕ ಪಕ್ಕದ ಮನೆಯ ಸುಮಾರು 20 ಮುಸ್ಲಿಂ ಯುವಕರಿದ್ದರು. ಅವರೆಲ್ಲರನ್ನೂ ಜಯಮ್ಮ ತಮ್ಮ ಮಕ್ಕಳಂತೆ ಸಾಕಿದ್ದರು. ಅದರಲ್ಲೂ ಪಕ್ಕದ ಮನೆಯ ಅನ್ಸರ್ ಕಂಡರೆ ಜಯಮ್ಮ ಅವರಿಗೆ ಎಲ್ಲಿಲ್ಲದ ಪ್ರೀತಿ. ಅನ್ಸರ್ ಸೇರಿ ಬಹುತೇಕ ಮುಸ್ಲಿಂ ಯುವಕರು ತಮ್ಮ ಬಾಲ್ಯವನ್ನು ಜಯಮ್ಮ ಮನೆಯಲ್ಲೇ ಕಳೆದಿದ್ದರು. ಆ ಮಕ್ಕಳ ಪೋಷಕರು ಸಹಾ ಎಂದೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಅಷ್ಟರ ಮಟ್ಟಿಗೆ ಇವರ ನಡುವೆ ಅನ್ಯೋನ್ಯತೆಯಿತ್ತು.

ಜಯಮ್ಮ ಸಾವು ಮಿಡಿದ ಮುಸ್ಲಿಂ ಹೃದಯಗಳು
ಎಲ್ಲರನ್ನೂ ತಾಯಿಯಂತೆ ಸಲುಹಿದ್ದ ಹಿರಿಯ ಜೀವ ಜಯಮ್ಮ ನಿನ್ನೆ ಶುಕ್ರವಾರ ಅನಾರೋಗ್ಯದಿಂದ ನಿಧನರಾದರು. ಜಯಮ್ಮ ಅವರ ಸಾವಿನ ವಿಚಾರ ತಿಳಿದಾಗ ಜಯಮ್ಮ ಮನೆಯ ಬಳಿಯ ಎಲ್ಲರೂ ಶುಕ್ರವಾರದ ನಮಾಜ್‌ಗೆ ತೆರಳುತ್ತಿದ್ದರು. ಇನ್ನು ಜಯಮ್ಮ ಅವರ ಕುಟುಂಬಕ್ಕೆ, ಹೇಳಿಕೊಳ್ಳುವಂತಹ ಸಂಬಂಧಿಕರು ಇರಲಿಲ್ಲ. ಈಗಾಗಿ ಏನು ಮಾಡೋದು ಅಂತಾ ಜಯಮ್ಮ ಅವರ ಮನೆಯವರು ಚಿಂತಾಕ್ರಾಂತರಾಗಿದ್ದರು. ಈ ವೇಳೆ ನಮಾಜ್ ಹೋಗುವುದನ್ನು ನಿಲ್ಲಿಸಿ ಮೃತ ಜಯಮ್ಮ ಮನೆಗೆ ಬಂದ ಎಲ್ಲರೂ ಜಯಮ್ಮ ಮಗ ಶಿವರಾಮ್‌ಗೆ ಧೈರ್ಯ ತುಂಬಿದರು. ನಾವೆಲ್ಲರೂ ನಮಾಜ್ ಮುಗಿಸಿ ಬರುತ್ತೇವೆ. ಮೃತ ಜಯಮ್ಮ ಅವರ ಆತ್ಮಕ್ಕೆ ಶಾಂತಿ ಕೋರಿ ಬರುತ್ತೇವೆ. ಅಲ್ಲಿಯವರೆಗೂ ಕಾಯುವಂತೆ ಮನವಿ ಮಾಡಿದರು. ಶಿವರಾಮ್‌ಗೂ ಕಾಯದೇ ಬೇರೆ ದಾರಿಯಿರಲಿಲ್ಲ.

ತುತ್ತು ನೀಡಿ ಸಲುಹಿದವಳ‌ ಋಣ ತೀರಿಸಿದ ಮುಸ್ಲಿಂ ಯುವಕರು
ಜಯಮ್ಮ ಕೈ ತುತ್ತು ತಿಂದು ಬೆಳೆದಿದ್ದ ಅಷ್ಟೂ ಮುಸ್ಲಿಂ ಯುವಕರು ನಮಾಜ್ ಮುಗಿಸಿ ಬಂದವರೇ ನೇರವಾಗಿ ತಮ್ಮ ಮನೆಗಳಿಗೂ ಹೋಗದೆ ಜಯಮ್ಮ ಅವರ ಮನೆಗೆ ಬಂದಿದ್ದಾರೆ. ಮಗ ಶಿವರಾಮ್‌ಗೆ ಧೈರ್ಯ ಹೇಳಿ ಅಂತ್ಯ ಸಂಸ್ಕಾರದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹಿಂದೂ ವಿಧಿ ವಿಧಾನದಂತೆ ಎಲ್ಲಾ ಕಾರ್ಯಗಳನ್ನು ಮುಸ್ಲಿಂ ಯುವಕರೇ ನಿಂತು ನೆರವೇರಿಸಿದ್ದಾರೆ! ಮೃತ ದೇಹಕ್ಕೆ ತಾವೇ ಹೆಗಲು ಕೊಟ್ಟಿದ್ದಾರೆ. ಗಣೇಶ ನಗರದ ರುದ್ರ ಭೂಮಿಯಲ್ಲಿ ಜಯಮ್ಮರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ತಾವೇ ಮುಂದೆ ನಿಂತು ಗುಂಡಿ ತೋಡಿದ್ದಾರೆ. ಮೃತ ದೇಹವನ್ನಿರಿಸಿ ಮಣ್ಣು ಮುಚ್ಚಿದ್ದಾರೆ. ಈ ಮೂಲಕ ಜಯಮ್ಮರ ಅಂತ್ಯಕ್ರಿಯೆಯನ್ನು ಸಂಪ್ರದಾಯಬದ್ದವಾಗಿ ನೆರವೇರಿಸಿಯೂ, ಭಾವೈಕ್ಯತೆ ಮೆರೆದಿದ್ದಾರೆ.

ನಾವು ಸುಮಾರು 42 ವರ್ಷದಿಂದ ಇಲ್ಲೇ ವಾಸವಾಗಿದ್ದೇವೆ. ಇಡೀ ಬಡಾವಣೆಯಲ್ಲಿ ನಮ್ಮದೊಂದೆ ಹಿಂದೂ ಕುಟುಂಬ. ನಮ್ಮ ಅಕ್ಕಪಕ್ಕ ಇರುವ ಎಲ್ಲರೂ ಮುಸ್ಲಿಂ ಸಮುದಾಯದವರೇ. ಆದರೆ ನಮ್ಮ ನಡುವೆ ಯಾವತ್ತೂ ಹಿಂದೂ-ಮುಸ್ಲಿಂ ಅನ್ನೋ ಭೇದ ಬಂದಿಲ್ಲ. ಅವರೂ- ನಾವು ಅಣ್ಣ ತಮ್ಮಂದಿರಂತೆ ಇದ್ದೇವೆ. ನಮ್ಮ ತಾಯಿ ಸಾವನ್ನಪ್ಪಿದ್ದಾಗ ನಾನು ಏನು ಮಾಡೋದು ಅಂತಾ ಗೊತ್ತಾಗದೆ ದಿಕ್ಕು ತೋಚದಂತಾಗಿದ್ದೆ. ಈ ವೇಳೆ ನನಗೆ ಸಮಾಧಾನ ಮಾಡಿ ಧೈರ್ಯ ತುಂಬಿದ ನನ್ನ ಮುಸ್ಲಿಂ ಗೆಳೆಯರು ನಮ್ಮ ತಾಯಿಯ ಅಂತ್ಯ ಸಂಸ್ಕಾರ ನೆರವೇರಿಸಿದರು. ನಿಜಕ್ಕೂ ಇಂತಹ ಸ್ನೇಹಿತರನ್ನು ಪಡೆದಿದಕ್ಕೂ ಸಾರ್ಥಕವಾಯಿತು ಅಂದವರು ಮೃತ ಜಯಮ್ಮ ಅವರ ಮಗ ಶಿವರಾಮ್.

ಜಯಮ್ಮ ನಮ್ಮ ತಾಯಿಯಂತೆ ಇದ್ದರು. ನಮ್ಮನ್ನು ಸಾಕಿ‌ ಸಲುಹಿದ್ದರು. ಕೈ ತುತ್ತು ನೀಡಿದ್ದರು. ಅವರ ಮಗ ಶಿವರಾಮ್ ಹಾಗೂ ನಾನು ಅತ್ಯಂತ ಆತ್ಮೀಯ ಸ್ನೇಹಿತರು. ನಮ್ಮ ನಡುವೆ ಎಂದೂ ಹಿಂದೂ‌ ಮುಸ್ಲಿಂ ಭೇದ ಭಾವ ಬಂದಿಲ್ಲ. ಅವರ ಮನೆಯ ಎಲ್ಲಾ ಕಷ್ಟ ಸುಖದಲ್ಲಿ ನಾನು ಭಾಗಯಾಗಿದ್ದೇನೆ. ನಮ್ಮ ಮನೆಯ ಸುಖ ದುಃಖದಲ್ಲಿ ಅವರ ಮನೆಯವರು ಭಾಗಿಯಾಗಿದ್ದರು. ತಾಯಿಯಂತಿದ್ದ ಜಯಮ್ಮ ಅವರ ಸಾವು ನಮಗೆ ಆಘಾತ ತಂದಿತ್ತು. ಆದರೂ ಸಮಾಧಾನ ಮಾಡಿಕೊಂಡು. ತಮ್ಮ ತಾಯಿಯಂತೆ, ಅವರ ಮಗನಂತೆ ನಿಂತುಕೊಂಡು ಅವರ ಅಂತ್ಯಕ್ರಿಯೆ ನೆರವೇರಿಸಿದ್ದೇನೆ. ನನ್ನ ಜೊತೆ ಹಲವು ಮುಸ್ಲಿಂ ಗೆಳೆಯರು ಸಹಾ ಇದ್ದರು ಎಂದು ಕಣ್ಣೀರು ಹಾಕಿ ಧನ್ಯತಾಭಾವ ಮೆರೆದಿದ್ದು ಮುಸ್ಲಿಂ ಯುವಕ ಅನ್ಸರ್.

ಮನುಷ್ಯ ಜಾತಿ ತಾನೊಂದೆ ವಲಂ
ಆದಿ ಕವಿ ಪಂಪ‌ ಹೇಳಿದ ಹಾಗೆ ಮನುಷ್ಯ ಜಾತಿ ತಾನೊಂದೆ ವಲಂ – ಅಂದರೆ ಮನುಷ್ಯ ಜಾತಿ ಅನ್ನೋದು ಒಂದೇ – ಅನ್ನೋ ಮಾತನ್ನು ಸಾಂಸ್ಕೃತಿಕ ನಗರಿ‌ ಮೈಸೂರಿನ ಹಿಂದೂ ಮುಸ್ಲಿಂ ಭಾಂದವರು ನಿಜವಾಗಿಸಿದ್ದಾರೆ. ಈ ಮೂಲಕ ನಾಡಿಗೆ ವರಕವಿ ಕುವೆಂಪ ಅವರ ವಿಶ್ವ ಮಾನವ ತತ್ವವನ್ನು ಪಸರಿಸಿದ್ದಾರೆ. ರಾಜ್ಯವೇ ಧರ್ಮ ದಂಗಲ್‌ನಿಂದ ಹೊತ್ತಿ ಉರಿಯುವ ವೇಳೆ ಅದಕ್ಕೆ ತುಪ್ಪ ಸುರಿಯುವವರೇ ಹೆಚ್ಚಾಗಿರುವಾಗ ಆ ಧರ್ಮಾಗ್ನಿಗೆ ಸೌಹಾರ್ದತೆಯ ನೀರನ್ನು ಹಾಕುವ ಕೆಲಸವನ್ನು ಮಾಡಿರುವ ಮೈಸೂರಿನ ಮುಸ್ಲಿಂ ಯುವಕರಿಗೂ ತಾಯಿಯ ಅಗಲಿಕೆಯ ನೋವಿನಲ್ಲೂ ಭೇದ ಭಾವ ಎಣಿಸದೇ ಸ್ನೇಹಿತರಿಗೆ ತಮ್ಮ ತಾಯಿಯ ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ನೆರವೇರಿಸಲು ಅವಕಾಶ ಮಾಡಿಕೊಟ್ಟ ಶಿವರಾಮ್ ಅವರಿಗೆ ಸಲಾಂ. ಅವರ ಈ ನಡೆ ಎಲ್ಲರಿಗೂ ಮಾದರಿಯಾಗಲಿ. ಎಲ್ಲೆಡೆ ಶಾಂತಿ ನೆಲೆಸಲಿ ಅನ್ನೋದೆ ನಮ್ಮ ಆಶಯ.
-ರಾಮ್, ಟಿವಿ 9, ಮೈಸೂರು

ಧರ್ಮ ದಂಗಲ್ ರಾಜಕೀಯಕ್ಕಷ್ಟೇ; ಜನಸಾಮಾನ್ಯರಿಗಲ್ಲ ಅಂತ ಸಾರುತ್ತಿದೆ ಈ ವಿಡಿಯೋ

TV9 Kannada


Leave a Reply

Your email address will not be published. Required fields are marked *