ನಮ್ಮ ಕುಟುಂಬದ ಯಾರೂ ಎಂಎಲ್​ಸಿ ಆಗಿಲ್ಲ; ಎಲ್ಲರ ಸಲಹೆ ಪಡೆದು ಅಭ್ಯರ್ಥಿ ಹೆಸರು ಅಂತಿಮ ಮಾಡೋಣ- ದೇವೇಗೌಡ | Jds yet to finalise candidate for legislative council from hassan hd devegowda says nobody from our family made mlc


ನಮ್ಮ ಕುಟುಂಬದ ಯಾರೂ ಎಂಎಲ್​ಸಿ ಆಗಿಲ್ಲ; ಎಲ್ಲರ ಸಲಹೆ ಪಡೆದು ಅಭ್ಯರ್ಥಿ ಹೆಸರು ಅಂತಿಮ ಮಾಡೋಣ- ದೇವೇಗೌಡ

ಹೆಚ್.ಡಿ.ದೇವೇಗೌಡ

ಹಾಸನ: ಸಂಸದ ಪ್ರಜ್ವಲ್​ ರೇವಣ್ಣ ನಿವಾಸದಲ್ಲಿ ಇಂದು ಜೆಡಿಎಸ್​ ಸಭೆ ನಡೆದಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಸಮ್ಮುಖದಲ್ಲಿ ರಾಜ್ಯ ವಿಧಾನ ಪರಿಷತ್​​ ಚುನಾವಣೆಗೆ ಅಭ್ಯರ್ಥಿಯ ಆಯ್ಕೆ ಬಗ್ಗೆ ಚರ್ಚೆಗಳು ನಡೆದವು. ಸಭೆಯಲ್ಲಿ ನಾಯಕರ ಅಭಿಪ್ರಾಯ ಕೇಳಿದ ಬಳಿಕ ದೇವೇಗೌಡರು ಮಾತನಾಡಿ, ನಮ್ಮ ಕುಟುಂಬದ ಯಾರೂ ಎಂಎಲ್ ಸಿ ಆಗಿಲ್ಲ; ಗ್ರಾಮ ಮಟ್ಟದಿಂದ ಎಲ್ಲರ ಸಲಹೆ ಪಡೆದು ಅಭ್ಯರ್ಥಿಯ ಹೆಸರು ಅಂತಿಮ ಮಾಡೋಣ ಎಂದು ಕಿವಿಮಾತು ಹೇಳಿದರು.

ವಿಧಾನ ಪರಿಷತ್ ಚುನಾವಣೆಗಾಗಿ ಅಭ್ಯರ್ಥಿ ಆಯ್ಕೆಗಾಗಿ ಜೆಡಿಎಸ್ ಶಾಸಕರು ಮತ್ತು ಸಂಸದರ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ನಾವು ಪ್ರತೀ ತಾಲ್ಲೂಕಿಗೂ ಹೋಗಬೇಕು. ಗ್ರಾ.ಪಂ, ನಗರ ಸಭೆ, ತಾ.ಪಂ. ನಲ್ಲಿ ಗೆದ್ದವರ ಭೇಟಿ ಆಗಬೇಕು. ಅವರನ್ನೂ ಒಳಗೊಂಡು ಅಭಿಪ್ರಾಯ ಸಂಗ್ರಹ ಮಾಡಬೇಕು. ಎಲ್ಲರ ಸಲಹೆ ಪಡೆದ ಬಳಿಕ ಅಭ್ಯರ್ಥಿ ಯಾರು ಎಂದು ಅಂತಿಮ ಮಾಡೋಣ ಎಂದು ಕಿವಿಮಾತು ಹೇಳಿದ್ದಾರೆ.

ಕೆಲವರು ಭವಾನಿ ರೇವಣ್ಣ ಹೆಸರು ಹೇಳಿದ್ರು, ಸೂರಜ್ ರೇವಣ್ಣ ಹೆಸರೂ ಹೇಳಿದ್ರು. ಆದರೆ ಅಂತಿಮವಾಗಿ ಕೆಟ್ಟ ಹೆಸರು ಬರಬಾರದು. ಕೆಲಸ ಮಾಡಿದ ಕಾರ್ಯಕರ್ತರು ತುಂಬಾ ಜನ ಇದ್ದಾರೆ. ಅವರನ್ನ ಕಡೆಗಣಿಸಿದರು ಅನ್ನೊ ಹಾಗೆ ಆಗಬಾರದು. ಇದುವರೆಗೆ ನಮ್ಮ ಕುಟುಂಬದ ಯಾರೂ ಎಂಎಲ್ ಸಿ ಆಗಿಲ್ಲ. ಹಲವು ಸಮುದಾಯದ ಜನರನ್ನು ನಾವು ಎಂಎಲ್‌ಸಿ ಮಾಡಿದ್ದೇವೆ. ನಾನು ಸಾಕಷ್ಟು ಮಾತನಾಡೋದಿದೆ. ಈ ಪಕ್ಷ ಯಾವುದೇ ಮನೆತನಕ್ಕೆ ಸೇರಿದ್ದಲ್ಲ. ಇಡೀ ರಾಜ್ಯದಲ್ಲಿ ನಾನು ಯಾವ ರೀತಿ ನಡೆದು ಕೊಂಡು ಬಂದೆ ಎಂದು ಬಹಳ ಮಾತನಾಡಬಹುದು. ನಮ್ಮಿಂದಲೆ ಬೆಳೆದ ಹಲವು ನಾಯಕರು ಕಾಂಗ್ರೆಸ್ ನಲ್ಲೂ ಇದ್ದಾರೆ, ಬಿಜೆಪಿಯಲ್ಲೂ ಇದಾರೆ. ಅವರೇ ಹೇಳ್ತಾರೆ 2023 ರ ಚುನಾವಣೆಯಲ್ಲಿ ಜೆಡಿಎಸ್ ಇರಲ್ಲ ಅಂತಾರೆ.

ಕುಮಾರಸ್ವಾಮಿ ಅವರಿಗೆ ಎರಡು ಮೇಜರ್ ಆಪರೇಷನ್ ಆಗಿದೆ. ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ದುಡ್ಡಿನ ಶಕ್ತಿ ನಮಗೆ ಇಲ್ಲಾ, ಒಂದು ಬೈ ಎಲೆಕ್ಷನ್ ಗೆ 25 ಕೋಟಿ ಖರ್ಚು ಮಾಡಿದ್ರು. ಅದನ್ನ ನಮ್ಮ ಕಣ್ಣಾರೆ ನೋಡಿದ್ದೇನೆ. ಅಲ್ಲಿ ಚುನಾವಣೆಗಾಗಿ ಕುಮಾರಸ್ವಾಮಿ, ಪ್ರಜ್ಚಲ್ ಮತ್ತು ನಮ್ಮ ಕಾರ್ಯಕರ್ತರು ಸಾಕಷ್ಟು ಓಡಾಡಿದ್ರು. ನಾವು ಗೆದ್ದರೂ, ಸೋತರೂ ಹಿಗ್ಗೋದು ಇಲ್ಲಾ ಕುಗ್ಗೋದು ಇಲ್ಲಾ. ಹೋರಾಟ ಮಾಡುತ್ತೇವೆ. ಇದು ನಮ್ಮ ಕೆಲಸ. 2023 ಕ್ಕೆ ಯಾರು ನಮ್ಮನ್ನ ತೆಗೆಯುತ್ತೇವೆ ಎನ್ನುತ್ತಾರೋ ಅವರೇ ಜೆಡಿಎಸ್ ಮನೆ ಬಾಗಿಲಿಗೆ ಬರಬಹುದು. ಇದರಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆ ಇಲ್ಲಾ. ಜೆಡಿಎಸ್ ಮುಗಿಸುತ್ತೇವೆ ಎಂದವರೇ ನಮ್ಮ ಮನೆ ಬಾಗಿಲಿಗೆ ಬರ್ತಾರೆ ಎಂದು ಮಾಜಿ ಪ್ರಧಾನಿ ರಾಜಕೀಯ ಭವಿಷ್ಯ ನುಡಿದರು.

ನಮ್ಮನ್ನ ಯಾರೂ ತೆಗೆಯೋಕೆ ಆಗಲ್ಲ. ದೇಶದಲ್ಲಿ‌ ಕಾಂಗ್ರೆಸ್ ಸ್ಥಿತಿ ಏನಿದೆ ಎಂದು ನನಗೆ ಗೊತ್ತಿದೆ. ಪಕ್ಷದ‌ ಸ್ಥಿತಿ ವೃದ್ಧಿಸುತ್ತಿದೆ. ನಾನೂ ಪಕ್ಷ ಸಂಘಟನೆಗೆ ತೀರ್ಮಾನ ಮಾಡಿದ್ದೇನೆ. ತಿಂಗಳಿಗೆ ಎರಡು ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ ಎಂದು ದೇವೇಗೌಡರು ಸಭೆಯಲ್ಲಿ ಹೇಳಿದರು.

ಇದನ್ನೂ ಓದಿ:

ಗೌಡರ ಕುಟುಂಬದಿಂದ ವಿಧಾನಸೌಧಕ್ಕೆ ಮತ್ತೊಬ್ಬರ ಪ್ರವೇಶ? ಭವಾನಿಗೆ ಮೇಲ್ಮನೆ ಟಿಕೆಟ್ ನೀಡುವಂತೆ ಹಾಸನ ಶಾಸಕರ ಒತ್ತಾಯ

(jds yet to finalise candidate for legislative council from hassan hd devegowda says nobody from our family made mlc)

TV9 Kannada


Leave a Reply

Your email address will not be published. Required fields are marked *