ಪ್ರಾತಿನಿಧಿಕ ಚಿತ್ರ
ಚಿಕ್ಕಮಗಳೂರು: ಕರ್ನಾಟಕದ ಕೆಲವು ಶಾಲೆ-ಕಾಲೇಜುಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿರುವುದರಿಂದ ರಾಜ್ಯ ಸರ್ಕಾರ ತಲೆ ಕೆಡಿಸಿಕೊಂಡಿದೆ. ಕೊವಿಡ್ 2ನೇ ಅಲೆ ಮುಗಿದ ಬಳಿಕ ಇತ್ತೀಚೆಗಷ್ಟೇ ಶಾಲೆಗಳು ಆರಂಭವಾಗಿದ್ದವು. ಇದೀಗ ಶಾಲಾ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಮತ್ತೆ ಶಾಲೆಗಳನ್ನು ಬಂದ್ ಮಾಡುವ ಸಾಧ್ಯತೆಗಳು ಕಾಣುತ್ತಿವೆ. ಈಗಾಗಲೇ ಅಗತ್ಯ ಬಂದರೆ ಶಾಲೆಗಳ ಬಾಗಿಲನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳುವ ಸೂಚನೆಯನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನೀಡಿದ್ದಾರೆ. ಇದರ ಮಧ್ಯೆ ಚಿಕ್ಕಮಗಳೂರು ತಾಲೂಕಿನ ನರಸಿಂಹರಾಜಪುರ (ಎನ್.ಆರ್.ಪುರ) ತಾಲೂಕಿನ 35ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಂದು ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಇಂದು ಎನ್ಆರ್ ಪುರದ ಶಾಲೆಯಲ್ಲಿ 35 ಹೊಸ ಕೊರೊನಾ ಕೇಸುಗಳು ಪತ್ತೆಯಾಗಿರುವುದರಿಂದ ಕರ್ನಾಟಕದ ಶಾಲೆಗಳಲ್ಲಿ ಕೊವಿಡ್ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಭಾನುವಾರ ಕರ್ನಾಟಕದಲ್ಲಿ 59 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ವಿದ್ಯಾರ್ಥಿಗಳು ಮಾತ್ರವಲ್ಲದೆ ಮೂವರು ಶಿಕ್ಷಕರಿಗೂ ಕೊರೊನಾ ಸೋಂಕು ತಗುಲಿದ್ದು, 13 ಶಿಕ್ಷಕೇತರ ಸಿಬ್ಬಂದಿಗೆ ಕೊವಿಡ್ ಸೋಂಕು ತಗುಲಿದೆ.
ಕೊವಿಡ್ ಸೋಂಕು ತಗುಲಿರುವ ಶಾಲಾ ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೂ ಕೊರೊನಾ ರೋಗಲಕ್ಷಣಗಳಿಲ್ಲ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಮಗಳೂರಿನ ಜವಾಹರಲಾಲ್ ನವೋದಯ ವಸತ ಶಾಲೆಯ ಮಕ್ಕಳಿಗೆ ಈಗಾಗಲೇ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಆ ಸೋಂಕಿತ ಮಕ್ಕಳು, ಶಿಕ್ಷಕರು, ಶಾಲಾ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ, ನಿಗಾ ವಹಿಸಲಾಗಿದೆ.
ಶಾಲೆಗಳಲ್ಲಿ ಕೊರೊನಾ ಕೇಸುಗಳು ಹೆಚ್ಚುತ್ತಿರುವುದರಿಂದ ವಸತಿ ಶಾಲೆಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ಶಾಲೆಗಳಲ್ಲಿ ಸರ್ಕಾರದಿಂದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಒಮಿಕ್ರಾನ್ ಸೋಂಕು ಕೂಡ ಹರಡುತ್ತಿರುವುದರಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಕೊವಿಡ್ ಸೋಂಕು ಆತಂಕಕ್ಕೆ ಕಾರಣವಾಗಿದೆ.