ಉಡುಪಿ: ನವಜಾತ ಶಿಶುವನ್ನು ಪೊದೆಗೆ ಎಸೆದು ತಪ್ಪಿಸಿಕೊಂಡಿದ್ದ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಲೂರು ಜಡ್ಕಲಿನ ರಾಧಾ(40) ಹಾಗೂ ಸತೀಶ್ (43) ಎಂಬಾತರನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಎಸ್ಟೇಟೊಂದರಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು. ಈ ಮೊದಲು ಆರೋಪಿ ರಾಧಾ ಮತ್ತು ಸತೀಶ್ ಮದುವೆಯಾಗಿದ್ದರು ತಮ್ಮ ಪತಿ, ಪತ್ನಿಯಿಂದ ದೂರವಿದ್ದರು. ಆ ಬಳಿಕ ರಾಧಾ ಸತೀಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ.
ಈ ವೇಳೆ ಗರ್ಭಿಣಿಯಾಗಿದ್ದ ರಾಧಾ, ಹಾಲಾಡಿ ಬಳಿಯ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಮಗು ಬೇಡವೆಂದು ನಿರ್ಧರಿಸಿದ ಇವರಿಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಮಗುವನ್ನು ಪೊದೆಗೆ ಎಸೆದು ಹೋಗಿದ್ದರು.ಈ ಬಗ್ಗೆ ತನಿಖೆ ನಡೆಸಿದ ಅಮಾಸೆಬೈಲು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.