ನವರಾತ್ರಿಯ ಬಗ್ಗೆ ಧರ್ಮಶಾಸ್ತ್ರವು ಏನು ಹೇಳುತ್ತದೆ ? ನವರಾತ್ರಿ ಆಚರಣೆ ಹುಟ್ಟಿಕೊಂಡದ್ದು ಹೇಗೆ? | Navratri 2022 What Dharmashastra Says About Navratri celebration


ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ.

ನವರಾತ್ರಿಯ ಬಗ್ಗೆ ಧರ್ಮಶಾಸ್ತ್ರವು ಏನು ಹೇಳುತ್ತದೆ ? ನವರಾತ್ರಿ ಆಚರಣೆ ಹುಟ್ಟಿಕೊಂಡದ್ದು ಹೇಗೆ?

ಸಂಗ್ರಹ ಚಿತ್ರ

ಇಂದಿನಿಂದ (ಸೆಂ.26) ನವರಾತ್ರಿ ಆರಂಭವಾಗಿದೆ. ಆದ್ರೆ ನವರಾತ್ರಿಯ ಬಗ್ಗೆ ಧರ್ಮಶಾಸ್ತ್ರ ಹೇಳುವುದೇನು? ಇಲ್ಲಿದೆ ಮಾಹಿತಿ. ‘ರಾತ್ರಿ’ ಎಂದರೆ ಆಗುತ್ತಿರುವ ಬದಲಾವಣೆ. ದೇವಿಯ ಒಂದು ಹೆಸರು ‘ಕಾಲರಾತ್ರಿ’ ಎಂದಾಗಿದೆ. ‘ಕಾಲರಾತ್ರಿ’ ಎಂದರೆ ಕಾಲಪುರುಷನಲ್ಲಿ ಬದಲಾವಣೆ ಮಾಡುವವಳು. ತಿರುಗುವುದು ಪೃಥ್ವಿಯ ಗುಣಧರ್ಮವಾಗಿದೆ. ಪೃಥ್ವಿಯು ತಿರುಗುತ್ತಿರುವುದರಿಂದ ಬದಲಾವಣೆಗಳು ಆಗುತ್ತಿರುತ್ತವೆ, ಅಂದರೆ ರಾತ್ರಿ ಮತ್ತು ಹಗಲು ಆಗುತ್ತವೆ. ಇಂತಹ ಬದಲಾವಣೆಗಳನ್ನು ಸಹಿಸುವ ಶಕ್ತಿಯು ಶರೀರದಲ್ಲಿರಬೇಕೆಂದು ವ್ರತ – ವೈಕಲ್ಯಗಳನ್ನು ಮಾಡುತ್ತಾರೆ.

ನವರಾತ್ರಿಯ ಇತಿಹಾಸ

ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು. ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು.

ನವರಾತ್ರಿಯ ಆಚರಣೆಯ ಮಹತ್ವ

ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ. ಇದು ಆ ದೇವಿಯ ವ್ರತವಾಗಿದೆ. ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ 1000 ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟೂ ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ’ ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

ನವರಾತ್ರಿ ವ್ರತವನ್ನು ಆಚರಿಸುವ ಪದ್ಧತಿ – ‘ಅಖಂಡ ದೀಪಪ್ರಜ್ವಲನೆ ಅಂದರೆ ನವರಾತ್ರಿಯ 9 ದಿನಗಳಲ್ಲಿಯೂ ಸತತವಾಗಿ ದೀಪವನ್ನು ಉರಿಸುವುದು, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತೀ ಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿಸಾಮರ್ಥ್ಯಕ್ಕನುಸಾರವಾಗಿ ನವರಾತ್ರಿ ಮಹೋತ್ಸವವನ್ನು ಆಚರಿಸುತ್ತಾರೆ.

TV9 Kannada


Leave a Reply

Your email address will not be published.