ನವಾಬ್​ ಮಲ್ಲಿಕ್​ ಬೆನ್ನು ಬಿದ್ದ ಸಮೀರ್​ ವಾಂಖೆಡೆ ತಂದೆ; ಎಸ್​ಸಿ/ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲು | Sameer Wankhede father Dhyandev Kachruji Wankhede files police complaint against Nawab Malik


ನವಾಬ್​ ಮಲ್ಲಿಕ್​ ಬೆನ್ನು ಬಿದ್ದ ಸಮೀರ್​ ವಾಂಖೆಡೆ ತಂದೆ; ಎಸ್​ಸಿ/ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲು

ನವಾಬ್​ ಮಲ್ಲಿಕ್​​

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್ ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿ ಬಿದ್ದಾಗಿನಿಂದ ಎನ್​ಸಿಬಿ ವಲಯ ನಿರ್ದೇಶಕ ಸಮೀರ್​ ವಾಂಖೆಡೆ ಸುದ್ದಿಯಲ್ಲಿದ್ದಾರೆ. ಈಗಂತೂ  ಅವರು ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಈ ಮಧ್ಯೆ ಸಮೀರ್​ ವಾಂಖೆಡೆ ಅವರ ಕುಟುಂಬದ ಬಗ್ಗೆ ಹಲವು ಆರೋಪಗಳನ್ನು ಮಾಡಿರುವ  ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್ ವಿರುದ್ಧ ಸಮೀರ್​ ವಾಂಖೆಡೆ ತಂದೆ ಧ್ಯಾನ್​​ದೇವ್​ ಕಚ್ರುಜಿ ವಾಂಖೆಡೆ 1.25 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಆದರೆ ಅಷ್ಟಕ್ಕೇ ಸುಮ್ಮನಾಗದೆ ಈಗ ಮತ್ತೆ ನವಾಬ್​ ಮಲ್ಲಿಕ್​ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ. ಮುಂಬೈನ ಓಶಿವಾರಾ ವಿಭಾಗದ ಎಸಿಪಿಗೇ ನೇರವಾಗಿ ದೂರು ನೀಡಿದ್ದಾರೆ.  

ನಾವು ಪರಿಶಿಷ್ಟ ಜಾತಿಗಳ ಅಡಿಯಲ್ಲಿ ಬರುವ ಮಹಾರ್​ ಸಮುದಾಯಕ್ಕೆ ಸೇರಿದ್ದೇವೆ. ಈ ಸಂಬಂಧ ಸರ್ಕಾರಿ ಅಧಿಕಾರಿಗಳು ನೀಡಿರುವ ಜಾತಿ-ಪ್ರಮಾಣ ಪತ್ರವೂ ನಮ್ಮ ಬಳಿ ಇದೆ.  ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್​ ಅವರು ನಮ್ಮ ಕುಟುಂಬ ಮತ್ತು ಜಾತಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಮಾನಹಾನಿಕರ, ನಿಂದನೀಯ ಮಾತುಗಳನ್ನಾಡಿದ್ದಾರೆ. ಟೀಕೆ ಮಾಡಿದ್ದಾರೆ ಎಂದು ಧ್ಯಾನ್​ದೇವ್​ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.  ನವಾಬ್​ ಮಲ್ಲಿಕ್​ ಸಂಬಂಧಿ ಸಮೀರ್​ ಖಾನ್​ ಡ್ರಗ್ಸ್​ ಕೇಸ್​​ನಲ್ಲಿ ಬಂಧಿತರಾಗಿ ಎಂಟು ತಿಂಗಳು ಜೈಲಿನಲ್ಲಿದ್ದರು. ಇದೇ ಕಾರಣಕ್ಕೆ ಅವರೀಗ ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಧ್ಯಾನ್​ದೇವ್​ ಹೇಳಿದ್ದಾರೆ.  ನವಾಬ್​ ಮಲ್ಲಿಕ್​ ಉದ್ದೇಶಪೂರ್ವಕವಾಗಿಯೇ ನಮ್ಮ ಜಾತಿ, ಕುಟುಂಬವನ್ನು ಕೀಳಾಗಿ ನೋಡುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.   ನವಾಬ್​ ಮಲ್ಲಿಕ್​ ನಮ್ಮ ಕುಟುಂಬದ ವಿರುದ್ಧ ಮಾಡಿದ ಆರೋಪಗಳ ವಿಡಿಯೋ, ಹೇಳಿಕೆಗಳೆಲ್ಲವೂ ನನ್ನ ಬಳಿ ಇದ್ದು, ಸಾಕ್ಷಿಗೆ ಬೇಕಾದರೆ ಕೊಡುತ್ತೇನೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಮೀನುಗಾರನ ಹತ್ಯೆ ಮಾಡಿದ ಪಾಕ್​ ನೌಕಾಪಡೆ ವಿರುದ್ಧ ಭಾರತ ಸರ್ಕಾರ ಕೆಂಡಾಮಂಡಲ; ಹಿರಿಯ ರಾಜತಾಂತ್ರಿಕನಿಗೆ ಖಡಕ್​ ಎಚ್ಚರಿಕೆ​

TV9 Kannada


Leave a Reply

Your email address will not be published. Required fields are marked *