ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಮನೆ ಆರೈಕೆ ವ್ಯವಸ್ಥೆ ಇಲ್ಲದಿದ್ದರೆ, ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗುತ್ತದೆ. ಸ್ಥಳೀಯ ಮಟ್ಟದ ಟಾಸ್ಕ್ ಫೋರ್ಸ್ ಈ ಕಾರ್ಯನಿರ್ವಹಿಸಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಸ್ಥಳೀಯರು, ಸಂಘಟನೆ, ಮುಖಂಡರಿದ್ದು, ಕೋವಿಡ್ ನಿರ್ವಹಣೆ ಮಾಡುತ್ತಾರೆ. ರೋಗಿಗೆ ಮನೆ ಆರೈಕೆ ಸೌಲಭ್ಯಗಳಿಲ್ಲದಿದ್ದರೆ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.

2 ಕೋಟಿ ಕೋವಿಶೀಲ್ಡ್ ಲಸಿಕೆ ಖರೀದಿಸಲು ಸೀರಂ ಸಂಸ್ಥೆಗೆ ಆರ್ಡರ್ ನೀಡಲಾಗಿದೆ. ಈ ಪೈಕಿ 2 ಲಕ್ಷ ಡೋಸ್ ರಾಜ್ಯಕ್ಕೆ ಬಂದಿದೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಹಾಗೂ ಮೊದಲ ಡೋಸ್ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಈವರೆಗೆ 1,11,26,340 ಡೋಸ್ ಲಸಿಕೆ ನೀಡಿದೆ. ರಾಜ್ಯ ಸರ್ಕಾರದಿಂದ ನೇರವಾಗಿ 9.50 ಲಕ್ಷ ಡೋಸ್ ಕೋವಿಶೀಲ್ಡ್, 1,44,170 ಕೋವ್ಯಾಕ್ಸಿನ್ ಖರೀದಿ ಸೇರಿ ಒಟ್ಟು 1,22,20,510 ಡೋಸ್ ಲಸಿಕೆ ರಾಜ್ಯಕ್ಕೆ ದೊರೆತಿದೆ. ಈವರೆಗೆ 1,13,61,234 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಅಕ್ಟೋಬರ್, ನವೆಂಬರ್ ಒಳಗೆ ರಾಜ್ಯದ ಎಲ್ಲರಿಗೂ ಲಸಿಕೆ ನೀಡಲು ಪ್ರಯತ್ನಿಸಲಾಗುತ್ತಿದೆ. ಭಾರತ್ ಬಯೋಟೆಕ್ ಘಟಕ ನಮ್ಮ ರಾಜ್ಯದಲ್ಲೇ ಇದ್ದು, ಅಲ್ಲಿಂದಲೂ ಲಸಿಕೆ ಸಿಗುವ ಭರವಸೆ ದೊರೆತಿದೆ. ಸ್ಪುಟ್ನಿಕ್ ಲಸಿಕೆ ಕೂಡ ನಮ್ಮ ರಾಜ್ಯದಲ್ಲೇ ಉತ್ಪಾದನೆಯಾಗಲಿದ್ದು, ಬೇಗ ಲಸಿಕೆ ಸಿಗುವ ವಿಶ್ವಾಸವಿದೆ ಎಂದರು.

ನಿನ್ನೆ 58,395 ಮಂದಿ ಕೋವಿಡ್ ನಿಂದ ಗುಣಮುಖರಾಗಿರುವುದು ಆಶಾದಾಯಕ. ಈವರೆಗೆ 16,74,487 ಜನರು ಕೋವಿಡ್ ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಯಾವಾಗಲೂ ಸಾವಿನ ಸಂಖ್ಯೆ, ಸೋಂಕಿತರ ಸಂಖ್ಯೆ ನೋಡಿ ಆತಂಕಪಡಬಾರದು. ಗ್ರೀನ್‍ಕೋ 10 ಎಲ್​​​ಪಿಎಂನ 200 ಆಕ್ಸಿಜನ್ ಕಾನ್ಸಂಟ್ರೇಟರ್​​​ಗಳನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದೆ.

ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ 1,050 ವೈಲ್ ಗಳನ್ನು ಕೇಂದ್ರ ಸರ್ಕಾರ ನೀಡಿದೆ. ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದು, ಬೇಗ 500 ವೈಲ್ ನೀಡಲು ಮನವಿ ಮಾಡಲಾಗಿದೆ. ಈ ಸೋಂಕು ತಡೆಯಲು ಟಾಸ್ಕ್ ಫೋರ್ಸ್ ಸಮಿತಿ ರಚಿಸಿ ಕ್ರಮ ವಹಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಆರ್ಥಿಕ ಪರಿಹಾರ ಘೋಷಿಸಿರುವುದು ಕಷ್ಟಕಾಲದಲ್ಲಿರುವ ಜನರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

The post ನವೆಂಬರ್ ಒಳಗೆ ಎಲ್ಲರಿಗೂ ಲಸಿಕೆ ನೀಡುವ ಗುರಿ: ಸುಧಾಕರ್ appeared first on News First Kannada.

Source: newsfirstlive.com

Source link