ಕತ್ತಲಲ್ಲಿ ವಿಶಾಲವಾದ ನದಿ ತಟದ ಮೇಲೆ ತೇಲಾಡುತ್ತಿರುವ ಬೆಳಕಿನ ದೋಣಿಯಂತೆ ಕಾಣುವ ಚಂದ್ರ ಯಾರಿಗೆ ಇಷ್ಟ ಇಲ್ಲ ಹೇಳಿ. ಆ ಚಂದ್ರನ ಬರುವಿಕೆಗೆ ಎಷ್ಟೊ ಜೀವಚರಗಳು ಕಾಯುತ್ತಿರುತ್ತವೆ. ಈ ಚಂದ್ರನ ಸ್ಪೆಷಾಲಿಟಿನೇ ಹೀಗೆ, ಅವನು ಒಂದು ದಿನ ಕಾಣಿಸಿದ ಹಾಗೆ ಇನ್ನೊಂದು ದಿನ ಕಾಣುವುದಿಲ್ಲ. ಮೊದಲ 15 ದಿನ ಕರಗುತ್ತಾ ಒಂದು ದಿನ ಕಣ್ಮರೆಯಾಗುತ್ತಾನೆ. ಮುಂದಿನ 15 ದಿನ ನಿಧಾನವಾಗಿ ಬೆಳೆಯುತ್ತಾ ಕೊನೆ ದಿನ ಪ್ರಕಾಶಮಾನವಾದ ಬೆಳಕಿನ ಚಂಡಿನಂತೆ ಕಂಗೊಳಿಸುತ್ತಾನೆ. ಈ ಚಂದ್ರನ ವಿಚಾರದಲ್ಲೂ ಹಲವು ಬಾರಿ ವಿಸ್ಮಯಗಳು ನಡೀತಾನೇ ಇರುತ್ತೆ. ಈಗ ಬಂದಿರೋದು ಸೂಪರ್ ಮೂನ್.

ಖಗೋಳದ ಕೌತುಕ ನೋಡಿದಷ್ಟು, ತಿಳಿದಷ್ಟು ಸಾಲದು. ಆಕಾಶದಲ್ಲಿ ಪ್ರಜ್ವಲಿಸುವ ಚಂದ್ರನ ನೋಡಲು ಎಲ್ಲರೂ ಇಷ್ಟಪಡುತ್ತಾರೆ. ಮಕ್ಕಳಿಗೆ ಚಂದಮಾಮ, ತಿಳಿದವರಿಗೆ ಅದು ಮತ್ತೊಂದು ಗ್ರಹ. ಇದೀಗ ಸರಾಸರಿ ಪ್ರತಿ 2 ವರ್ಷಕೊಮ್ಮೆ ಕಾಣುವ ಇದೇ ಚಂದಿರ ಅತೀ ದೊಡ್ಡದಾಗಿ, ಪ್ರಕಾಶಮಾನವಾಗಿ ಗೋಚರಿಸುವ ದಿನ ಈ ವರ್ಷ ಬಂದಿದೆ. ಹೌದು ಈ ಬಾರಿ ಹುಣ್ಣಿಮೆ ಚಂದಿರ ಅಥವಾ ಸೂಪರ್‌ಮೂನ್ ಇದೇ ತಿಂಗಳಲ್ಲಿ ಬರ್ತಾ ಇದ್ದಾನೆ. ಹಾಗಾದರೆ ಈ ಸೂಪರ್‌ಮೂನ್ ಯಾವ ದಿನ, ಎಷ್ಟು ಗಂಟೆಗೆ ಗೋಚರಿಸುತ್ತದೆ? ಇಲ್ಲಿದೆ ವಿವರ.

ಒಂದೇ ದಿನ ಸೂಪರ್​ಮೂನ್, ಬ್ಲಡ್​ ರೆಡ್​ ಮೂನ್, ಚಂದ್ರಗ್ರಹಣ
ಮೇ 26ರಂದು ಗೋಚರಿಸುವ ಚಂದಿರ ದೊಡ್ಡದಾಗಿ ಹಾಗೂ ಪ್ರಕಾಶಮಾನವಾಗಿ ಗೋಚರಿಸಲಿದ್ದಾನೆ. ಈ ವರ್ಷದಲ್ಲಿ ಗೋಚರಿಸಲಿರುವ ಅತೀ ದೊಡ್ಡದಾದ ಚಂದ್ರ ಅನ್ನೋದು ಮತ್ತೊಂದು ವಿಶೇಷ. ಭಾರತದಲ್ಲಿ 26ನೇ ತಾರೀಕು ಹುಣ್ಣಿಮೆ. ಅಲ್ಲದೆ ಚಂದ್ರ ಭೂಮಿಗೆ ಅತೀ ಸಮೀಪದಲ್ಲಿ ಅಂದ್ರೆ ಭೂಮಿಗೆ 3,56,907 ಕೀಲೋ ಮೀಟರ್  ಹತ್ತಿರದಲ್ಲಿ ಗೋಚರಿಸಲಿದ್ದಾನೆ.  ಹೀಗಾಗಿ ಈ ಸ್ಪಷಲ್ ಡೇ, ಹುಣ್ಣಿಮೆ ಚಂದ್ರ ಮಾಮೂಲಿ ಕಾಣುವುದಕ್ಕಿಂತ ಸುಮಾರು 15 ಅಂಶ ದೊಡ್ಡದಾಗಿ ಹಾಗೂ 25 ಅಂಶ ಹೆಚ್ಚು ಪ್ರಕಾಶಮಾನವಾಗಿ  ಕಾಣುತ್ತಾನೆ.

ಸೂರ್ಯನ ಸುತ್ತ ಭೂಮಿ ಸುತ್ತಿದರೆ, ಭೂಮಿಯ ಸುತ್ತ ಚಂದ್ರ ಸುತ್ತತಲೇ ಇರ್ತಾನೆ. ಭೂಮಿಯ ಒಂದು ಸಂಪೂರ್ಣ ಸುತ್ತು ಸುತ್ತಲು ಚಂದ್ರನಿಗೆ 27 ದಿನಗಳು ಬೇಕು. ಚಂದ್ರ ಭೂಮಿಯನ್ನು ಸುತ್ತುವ ಆರ್ಬಿಟ್ ವೃತ್ತಾಕಾರದಲ್ಲಿ ಇರೋದಿಲ್ಲ. ಅದು ಓವೆಲ್ ಶೇಪ್​​ನಲ್ಲಿ ಇರೊದ್ರಿಂದ ಯಾವಾಗಲು ಚಂದ್ರ ಹಾಗೂ ಭೂಮಿಯ ನಡುವಿನ ಅಂತರ ಬದಲಾಗುತ್ತಲೆ ಇರುತ್ತದೆ. ಯಾವಾಗ ಚಂದ್ರ ಭೂಮಿಯಿಂದ ದೂರ ತಲುಪುತ್ತಾನೋ ಆ ದಿನವನ್ನು ಅಪೋಜೀ ಎನ್ನಲಾಗುತ್ತದೆ. ಇನ್ನು ಅತಿ ಸಮೀಪಕ್ಕೆ ಬಂದು ತಲುಪುವ ಕ್ಷಣವನ್ನು ಪೆರಿಜೀ ಎಂದು ವಿಜ್ಞಾನ ಪಂಡಿತರು ಹೇಳುತ್ತಾರೆ. ಈ ಎರಡರ ಅಂತರದಲ್ಲಿ ನಾವು ಚಂದ್ರನ ಹಲವು ಮುಖಗಳನ್ನು ನೋಡಿರುತ್ತೇವೆ. ಚಂದ್ರ ಭೂಮಿಗೆ ಅತಿ ಸಮೀಕಕ್ಕೆ ಬಂದ ದಿನವೇ ಸೂಪರ್ ಮೂನ್ ಎಂದು ಹೇಳಲಾಗುತ್ತೆ.

ಇದೇ ಮೇ 26ರಂದು ನಿಜಕ್ಕೂ ಖಗೋಳದಲ್ಲಿ ಕೌತುಕವೊಂದು ಸಂಭವಿಸಲಿದೆ. ಇದು ಈ ವರ್ಷದ ಮೊದಲ ರಕ್ತ ಚಂದ್ರಗ್ರಹಣ. ಅಷ್ಟೆ ಅಲ್ಲ ಈ ಗ್ರಹಣ ವರ್ಷದ ಕೊನೆಯ ಸಂಪೂರ್ಣ ಚಂದ್ರಗ್ರಹಣವೂ ಹೌದು. ವಿಶ್ವದ ಅನೇಕ ಭಾಗಗಳಲ್ಲಿ ಗೋಚರಿಸಲಿರುವ ಈ ಚಂದ್ರಗ್ರಹಣ ಭಾರತದಲ್ಲಿ ಕಾಣುತ್ತಾ ಎನ್ನುವ ಪ್ರಶ್ನೆ ಸಹಜವಾಗೆ ಎಲ್ಲರಲ್ಲೂ ಇದೆ. ಈ ವರ್ಷದ ಸಂಪೂರ್ಣ ಚಂದ್ರಗ್ರಹಣ ಮೂರು ಗಂಟೆ, ಏಳು ನಿಮಿಷಗಳ ಕಾಲ ನಡೆಯುತ್ತದೆ. ಆದರೆ ಭೂಮಿಗೆ ಕಾಣಸಿಗುವುದು ಮಾತ್ರ ಸುಮಾರು 15 ನಿಮಿಷಗಳ ಕಾಲ. ಮಧ್ಯಾಹ್ನ 2:17ಕ್ಕೆ ಗ್ರಹಣ ಪ್ರಾರಂಭವಾಗಿ ಮರುದಿನ ಬೆಳಗ್ಗೆ 7:19ಕ್ಕೆ ಮುಗಿಯುತ್ತದೆ. ಪೂರ್ಣ ಗ್ರಹಣ ಸಂಜೆ 4:41ಕ್ಕೆ ಸಂಭವಿಸಿ, 4: 55ರವರೆಗೂ ಇರುತ್ತದೆ.

ಈ ಚಂದ್ರಗ್ರಹಣ ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕದ ಬಹುಪಾಲು, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಕ್ಟಿಕಾ, ನಾರ್ವೇಯನ್ ಗಳಲ್ಲಿ ಹೆಚ್ಚು ಗೋಚರಿಸುತ್ತದೆ. ಬ್ಲಡ್ ಮೂನ್ ಗೋಚರಿಸುವ ನಿರೀಕ್ಷೆಯಿರುವ ಕೆಲವು ನಗರಗಳಲ್ಲಿ ಹ್ಯೂಸ್ಟನ್, ಲಾಸ್ ಏಂಜಲೀಸ್, ಮನಿಲಾ, ಮೆಲ್ಬೋರ್ನ್, ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಟೋಕಿಯೊ ಸೇರಿವೆ. ಆದರೆ ಭಾರತದಲ್ಲಿ ಪೆನಂಬ್ರಲ್ ಚಂದ್ರಗ್ರಹಣವಾಗಿ ಮಾತ್ರ ಗೋಚರಿಸುತ್ತದೆ ಎಂದು ಹೇಳಲಾಗುತ್ತಿದೆ.

ಪೆನಂಬ್ರಲ್ ಚಂದ್ರಗ್ರಹಣ ಅಂದ್ರೆ  ಭೂಮಿಯ ಹೊರಗೆ ಹರಡಿರುವ ಪೆನಂಬ್ರಾ ಎಂಬ ನೆರಳು ಮಾತ್ರ ಚಂದ್ರನ ಮೇಲ್ಮೈಗೆ ಬೀಳುತ್ತದೆ. ಸಂಪೂರ್ಣ ಚಂದ್ರಗ್ರಹಣ ಅಥವಾ ಭಾಗಶಃ ಗ್ರಹಣಕ್ಕಿಂತ ಪೆನಂಬ್ರಲ್ ಗ್ರಹಣವನ್ನು ಗುರುತಿಸುವುದು ಕಷ್ಟ. ಭಾಗಶಃ ಗ್ರಹಣದಲ್ಲಿ ಚಂದ್ರನ ಮೇಲ್ಮೈ ಗಾಢ ನೆರಳಿನಿಂದ ಆವರಿಸುತ್ತದೆ. ಆದರೆ ಇಲ್ಲಿ ಚಂದ್ರನ ಒಂದು ಭಾಗವು ಮಾತ್ರ ನೆರಳಿನಿಂದ ಆವರಿಸುತ್ತದೆ. ಅರೆನೆರಳಿನ ಚಂದ್ರಗ್ರಹಣವನ್ನು ಸೂಕ್ಷ್ಮವಾಗಿ ಗಮನಿಸುವುದರ ಮೂಲಕ ನೋಡಬಹುದು. ಕಳೆದ ಬಾರಿ ಭಾರತಕ್ಕೆ ಸೂಪರ್ ಮೂನ್ ಗೋಚರಿಸಿತ್ತು. ಆದ್ರೆ ಈ ಬಾರಿ ಭಾರತದ ಪಾಲಿಗೆ ಚಂದ್ರನ ಮೇಲಿನ ಕರಿ ನೆರಳು ಮಾತ್ರ ಕಾಣಿಸಲಿದೆ.

ಸೂಪರ್​ಮೂನ್​​​ ನೋಡಲು ಎಲ್ಲಾ ಸೀಟ್​ಗಳು ಬುಕ್
ಈ ವಿಶೇಷ ದಿನದ ಚಂದ್ರನನ್ನು ಕಣ್ತುಂಬಿಸಿಕೊಳ್ಳಲು ಕ್ವಾಂಟಸ್ ಏರ್ ವೇಯಿಂದ ವಾಚ್ ಸೂಪರ್ ಮೂನ್ ಆನ್ ಸ್ಕೈ ಎನ್ನುವ ಟೂರ್ ರೆಡಿಯಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯನ್ನರಿಗೆ ಜಾಲಿರೈಡ್ ಕರೆದೊಯ್ದಿತ್ತು. ಕ್ವಾಂಟಸ್ ಇಂತಹ ವಿಶೇಷ ಪ್ರವಾಸಗಳನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿದ್ದು, ಕಳೆದ ಬಾರಿ ಕೇವಲ ಹತ್ತು ನಿಮಿಷಗಳಲ್ಲೇ ಎಲ್ಲಾ ಸ್ಲಾಟ್‍ಗಳು ಬ್ಲಾಕ್ ಆಗಿದ್ದರೆ, ಈ ಬಾರಿ ಕೇವಲ ಎರಡುವರೆ ನಿಮಿಷದಲ್ಲಿ ಆಕಾಶದಲ್ಲಿ ಸೂಪರ್ ಮೂನ್ ನೋಡಲು ಎಲ್ಲ ಸೀಟ್ ಗಳು ಖಾಲಿಯಾಗಿದೆ.

ಆಸ್ಟ್ರೇಲಿಯದ ಏರ್‌ಲೈನ್‌ ಕ್ವಾಂಟಸ್ ಆಕಾಶದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಹಾರಾಡುವ ಅವಕಾಶ ವಿಮಾನಪ್ರಿಯರಿಗೆ ನೀಡಿದೆ. ಇದಕ್ಕೆ ಸಂಬಂಧಿಸಿದ ಟಿಕೆಟ್‍ಗಳು ಕೇವಲ 2.5 ನಿಮಿಷಗಳಲ್ಲಿ ಮಾರಾಟವಾಗಿದೆ. ಮೇ 26ರಂದು ಕ್ವಾಂಟಸ್ ಸೂಪರ್ ಮೂನ್ ಮತ್ತು ಚಂದ್ರಗ್ರಹಣವನ್ನು ನೇರವಾಗಿ ನೋಡುವ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಅಂದರೆ ಭೂಮಿಯಿಂದ ಸುಮಾರು 40 ಸಾವಿರ ಅಡಿ ಎತ್ತರದಲ್ಲಿ ಈ ಸುಂದರ ಕ್ಷಣಗಳನ್ನು ವಿಮಾನ ಪ್ರಯಾಣಿಕರು ಪಡೆದುಕೊಳ್ಳಬಹುದು. ಸೂಪರ್ ಮೂನ್ ಪ್ರವಾಸವು ಸಿಡ್ನಿಯಿಂದ ಆರಂಭವಾಗಲಿದ್ದು, ಚಂದ್ರಗ್ರಹಣದ ಸ್ಪಷ್ಟ ನೋಟವನ್ನು ಬೃಹದಾಕಾರದ ಕಿಟಕಿಗಳನ್ನು ಹೊಂದಿರುವ ಬೋಯಿಂಗ್ 787 ಡ್ರೀಮ್‍ಲೈನರ್‌ನಲ್ಲಿ ಫ್ಲೈಟ್ನಲ್ಲಿ ನೀಡಲಿದೆ.

ಇನ್ನು ಈ ಜರ್ನಿಯ ದರ ಎಕಾನಮಿ ಟಿಕೆಟ್ಗೆ, ಆಸ್ಟ್ರೇಲಿಯಾ ಕರೆನ್ಸಿ ಪ್ರಕಾರ 499 ಡಾಲರ್ ಅಂದ್ರೆ 36,572 ರೂಪಾಯಿ. ಬಿಸಿನೆಸ್ ಕ್ಲಾಸ್ ಆಸ್ಟ್ರೇಲಿಯಾ ಕರೆನ್ಸಿಯಲ್ಲಿ 1,499 ಡಾಲರ್ ಅಂದ್ರೆ 1,09,903 ರೂಪಾಯಿ ಆಗಿಲಿದೆ. ಅಲ್ಲದೆ ಏರ್‌ಲೈನ್‌ ಕ್ವಾಂಟಸ್, ಈ ಹಣವನ್ನು ಹಸಿವಿನಿಂದ ಬಳಲುತ್ತಿರುವ ಆಸ್ಟ್ರೇಲಿಯಾ ನಿವಾಸಿಗಳ ನೆರೆವಿಗಾಗಿ ಉಪಯೋಗಿಸುವುದಾಗಿ ಸಹ ಹೇಳಿದೆ. ಇದೆಲ್ಲ ಹೊರತು ಪಡಿಸಿ ರೆಡ್ ಮೂನ್  ನೋಡುವುದೆ ಎಲ್ಲದಿಂಕ್ಕಿಂತ ಅಹ್ಲಾದಕರ.

ಮೇ 26 ರಂದು ಎಲ್ಲರ ಕಣ್ಣಗಳನ್ನು ಆನಂದಮಯವನ್ನಾಗಿಸಲು ರೆಡ್ ಬ್ಲಡ್ ಮೂನ್ ಬರ್ತಾ ಇದ್ದಾನೆ. ಈ 26ರಂದು ಬಿಟ್ಟರೆ ಕೆಂಪು ಚಂದ್ರನನ್ನು ನೋಡ್ಬೇಕಾದ್ರೆ ಮುಂದಿನ ವರ್ಷ ಅಂದ್ರೆ 2022ರ ಮೇ 16ರ ವರೆಗೆ ಕಾಯಲೇಬೇಕು.

 

The post ನಾಡಿದ್ದು ಆಗಸದಲ್ಲಿ ಏಕಕಾಲದಲ್ಲಿ ನಡೆಯಲಿದೆ ವಿಸ್ಮಯ.. ಇಲ್ಲಿದೆ ಡೀಟೇಲ್ಸ್ appeared first on News First Kannada.

Source: newsfirstlive.com

Source link