ನಾನೀಗ ಸಂಪೂರ್ಣವಾಗಿ ಜೆಡಿಎಸ್​ನಿಂದ ದೂರ ಉಳಿದಿದ್ದೇನೆ: ಜಿಟಿ ದೇವೇಗೌಡ ಹೇಳಿಕೆ | GT Deve Gowda on JDS MLC Candidate Karnataka Politics


ನಾನೀಗ ಸಂಪೂರ್ಣವಾಗಿ ಜೆಡಿಎಸ್​ನಿಂದ ದೂರ ಉಳಿದಿದ್ದೇನೆ: ಜಿಟಿ ದೇವೇಗೌಡ ಹೇಳಿಕೆ

ಜಿ.ಟಿ.ದೇವೇಗೌಡ (ಸಂಗ್ರಹ ಚಿತ್ರ)

ಬೆಂಗಳೂರು: ಪರಿಷತ್ ಚುನಾವಣೆಯಲ್ಲಿ ನಮ್ಮ ಕುಟುಂಬಸ್ಥರು ಸ್ಪರ್ಧಿಸಲ್ಲ. ಪ್ರಚಾರಕ್ಕಾಗಿ ನಮ್ಮ ಕುಟುಂಬದ ಹೆಸರು ಪ್ರಸ್ತಾಪಿಸುತ್ತಿದ್ದಾರೆ ಎಂದು ಸಾ.ರಾ. ಮಹೇಶ್ ವಿರುದ್ಧ ಶಾಸಕ ಜಿ.ಟಿ. ದೇವೇಗೌಡ ಇಂದು (ನವೆಂಬರ್ 14) ವಾಗ್ದಾಳಿ ನಡೆಸಿದ್ದಾರೆ. ನಾನು ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರ ಇದ್ದೇನೆ. ಅವರೂ ನಮ್ಮನ್ನು ಯಾವುದೇ ಕಾರ್ಯಕ್ರಮಕ್ಕೆ ಕರೆದಿಲ್ಲ. ನಾನೀಗ ಸಂಪೂರ್ಣವಾಗಿ ಜೆಡಿಎಸ್​ನಿಂದ ದೂರ ಉಳಿದಿದ್ದೇನೆ ಎಂದು ಜಿ.ಟಿ. ದೇವೇಗೌಡ ಹೇಳಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಪಕ್ಷ ಬಿಡಬೇಡಿ ಎಂದಿದ್ದರು. ನಮ್ಮ ಮನೆಗೆ ಬಂದು ಇಲ್ಲೇ ಇರಬೇಕೆಂದು ಹೇಳಿದರು. ಅವರಿಗೂ ನನಗಾದ ಅಪಮಾನ, ನೋವನ್ನ ಹೇಳಿದ್ದೇನೆ. ಹೀಗೆ ಇರುವಾಗ ನಾನು ಹೇಗೆ ಜೆಡಿಎಸ್ ಪಕ್ಷದಲ್ಲಿ ಇರಲು ಸಾಧ್ಯ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕೇಳಿದ್ದಾರೆ. ಈ ಮೂಲಕ, ಮತ್ತೊಮ್ಮೆ ಪಕ್ಷ ತ್ಯಜಿಸುವ ಸುಳಿವು ನೀಡಿದ್ದಾರೆ.

ಜಿಟಿ ದೇವೇಗೌಡ ಕಾಂಗ್ರೆಸ್​​ಗೆ ಬಂದಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಜಿ.ಟಿ. ದೇವೇಗೌಡರಿಗೆ ಕಾಂಗ್ರೆಸ್​ಗೆ ಬರುವುದಕ್ಕೆ ಮನಸ್ಸಿದೆ. ಆದರೆ, ಅವರಿನ್ನೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ. ಅವರನ್ನು ತಮ್ಮ ಪಕ್ಷದಲ್ಲೇ ಉಳಿಸಿಕೊಳ್ಳಲು ದೇವೇಗೌಡರು, ಹೆಚ್​ಡಿ ಕುಮಾರಸ್ವಾಮಿ ಪ್ರಯತ್ನ ಮಾಡುತ್ತಿದ್ದಾರೆ. ಜಿಟಿಡಿ ನನ್ನ ರಾಜಕೀಯ ಎದುರಾಳಿ, ವೈಯಕ್ತಿಕ ದ್ವೇಷಿ ಅಲ್ಲ. ಅವರು ಕಾಂಗ್ರೆಸ್ ತತ್ವ, ಸಿದ್ಧಾಂತಗಳನ್ನು ಒಪ್ಪಿ ನಮ್ಮ ಪಕ್ಷಕ್ಕೆ ಬರುವುದಿದ್ದರೆ ಬರಲಿ. ಯಾರೇ ನಮ್ಮ ಕಾಂಗ್ರೆಸ್​​ ಪಕ್ಷಕ್ಕೆ ಬಂದರೂ ನಾವು ಸ್ವಾಗತಿಸುತ್ತೇವೆ ಎಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಬಳಿಕ ಮತ್ತೆ ನನಗೆ ಈ ಕ್ಷೇತ್ರಕ್ಕೆ ಬರುವುದಕ್ಕೆ ತುಂಬಾ ಬೇಸರ ಆಗಿತ್ತು. ಹಲವು ದಿನಗಳ ಬಳಿಕ ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಿದ್ದೇನೆ. ಚುನಾವಣೆಯಲ್ಲಿ ನಾನು, ಜಿ.ಟಿ. ದೇವೇಗೌಡ ಪರಸ್ಪರ ಎದುರಾಗಿದ್ದೆವು. ಚುನಾವಣೆಯಲ್ಲಿ ನನ್ನನ್ನೇ ಸೋಲಿಸಿದ್ದ ಗಿರಾಕಿ ಅವರು. ಸೋತ ಬಳಿಕ ಇಬ್ಬರೂ ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳುವ ಬಗ್ಗೆ ಸಾಕಷ್ಟು ಕುತೂಹಲ ಇತ್ತು. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತವನು, ಜಿ.ಟಿ. ದೇವೇಗೌಡರು ಗೆದ್ದಿದ್ದಾರೆ. ಜನರು ಕರೆದ ಮೇಲೆ ಒಂದೇ ವೇದಿಕೆಗೆ ಬರಲೇ ಬೇಕು. ಹಾಗಾಗಿ ಒಟ್ಟಿಗೇ ಕೂತಿದ್ದೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಜಿಟಿ ದೇವೇಗೌಡರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ರಣತಂತ್ರ; ಲಲಿತಾ ದೇವೇಗೌಡ ಕಣಕ್ಕಿಳಿಸಲು ಚಿಂತನೆ

ಇದನ್ನೂ ಓದಿ: Siddaramaiah: ಜಿಟಿ ದೇವೇಗೌಡ ನನ್ನನ್ನೇ ಚುನಾವಣೆಯಲ್ಲಿ ಸೋಲಿಸಿದ್ದ ಗಿರಾಕಿ; ಜಿಟಿಡಿ ಬಗ್ಗೆ ಸಿದ್ದರಾಮಯ್ಯ ಗುಣಗಾನ

TV9 Kannada


Leave a Reply

Your email address will not be published. Required fields are marked *