ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಒಬ್ಬ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಕನ್ನಡದ ಆಸ್ತಿ ಎಂದು ಮಾಜಿ ಸಚಿವ ಹಾಗೂ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ.
ಅಪ್ಪು ಜೊತೆಗಿನ ಒಡನಾಟವನ್ನು ನ್ಯೂಸ್ಫಸ್ಟ್ನ ಜೊತೆ ಹಂಚಿಕೊಂಡ ಅವರು, ಒಬ್ಬ ಸೆಲಿಬ್ರಿಟಿ ಇಷ್ಟು ಸರಳತೆಯಿಂದ ಜೀವನ ಮಾಡಬಹುದೇ? ಎಂಬುದನ್ನು ನಾನು ಅವರಲ್ಲಿ ಕಂಡೆ. ನಾನು ಚಾಮರಾಜನಗರ ಜಿಲ್ಲಾ ಉಸ್ತುವಾರಿಯಾಗಿದ್ದ ಸಂದರ್ಭದಲ್ಲಿ ಅಂದಿನ ಡಿಸಿ ಡಾ.ರವಿ, ಪುನೀತ್ ರಾಜ್‍ಕುಮಾರ್ ಅವರನ್ನು ಜಿಲ್ಲೆಯ ರಾಯಭಾರಿಯಾಗಿ ಮಾಡೋಣ ಎಂದಿದ್ದರು. ಈ ವಿಚಾರವಾಗಿ ಮಾತನಾಡಲು ಅವರ ಮನೆಗೆ ಹೋದಾಗ ಅವರು ನಮಗೆ ಸ್ವಾಗತಿಸಿದ ರೀತಿ, ನಾನು ನನ್ನ ಜೀವ ಇರುವವರೆಗೂ ಮರೆಯುವುದಿಲ್ಲ ಎಂದಿದ್ದಾರೆ.
ಒಬ್ಬ ವ್ಯಕ್ತಿ ಇಷ್ಟು ಸರಳತೆಯಿಂದ ಜೀವನ ಮಾಡಬಹುದೇ? ಎಂಬುದನ್ನು ನಾನು ಅಂದು ಅವರಲ್ಲಿ ಕಂಡೆ. ಅವರಿಗೆ ಜಿಲ್ಲೆಯ ರಾಯಭಾರಿ ಆಗಬೇಕೆಂದ ಕೂಡಲೇ ಆಗಲಿ ಎಂದು ಒಂದೇ ಒಂದು ಶಬ್ದದಲ್ಲಿ ಒಪ್ಪಿಕೊಂಡ್ರು. ಆದರೆ ಕೋವಿಡ್-19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಅವರಿಂದ ನಾವು ಜಿಲ್ಲೆಯಲ್ಲಿ ಹೆಚ್ಚಿನ ಕೆಲಸ ಮಾಡಿಸಲು ಸಾಧ್ಯವಾಗಲಿಲ್ಲ ಎಂದರು.
ಇನ್ನು ನಮಗೆ, ಲಸಿಕೆ ನೀಡುವ ಸಂದರ್ಭದಲ್ಲಿ ಒಂದು ಸವಾಲು ಎದುರಾಗಿತ್ತು. ಕೋವಿಡ್-19 ಲಸಿಕೆ ತೆಗೆದುಕೊಳ್ಳುವ ವಿಚಾರದಲ್ಲಿ ಸೋಲಿಗರ ಹಟ್ಟಿಗಳಲ್ಲಿ ವ್ಯಾಕ್ಸಿನ್ ನೀಡಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ನಾನೇ ಪುನೀತ್ ರಾಜ್‍ಕುಮಾರ್ ಅವರ ಬೈಟ್ ತೆಗೆದುಕೊಂಡು, ಆ ಮೂಲಕ ಅರಿವು ಮೂಡಿಸಿ, ಲಸಿಕೆ ಹಾಕುವ ಪ್ರಕ್ರಿಯೆ ಮಾಡೋಣ ಎಂದೆ. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇಂದು ನಾನು ಕೂಡ ಜಿಲ್ಲೆಯ ಉಸ್ತುವಾರಿ ಅಲ್ಲ, ಅಲ್ಲಿ ಪುನೀತ್ ರಾಜ್‍ಕುಮಾರ್ ಅವರು ಕೂಡ ಇಲ್ಲ. ಆದರೆ ಪುನೀತ್ ರಾಜ್‍ಕುಮಾರ್ ಮಾತ್ರ ಎಂದೆಂದಿಗೂ ಜೀವಂತ. ಇಂದು ಅವರು ಮಾಡಿರುವ ಸಮಾಜಮುಖಿ ಕಾರ್ಯಗಳು ನಮ್ಮ ಜೊತೆಗಿರುತ್ತವೆ. ಸಿನಿಮಾ ನಟ, ನಟಿಯರು ಸೇರಿದಂತೆ ಈ ಪರಿ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ನಟನೆಂದರೆ ಅದು ಕೇವಲ ಪುನೀತ್ ರಾಜ್‍ಕುಮಾರ್ ಮಾತ್ರ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.