ನಾನು ಇನ್ಮುಂದೆ ತುಂಬ ಡೇಂಜರಸ್​​ ಮನುಷ್ಯ ಎಂದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್​ | I will be dangerous now says Imran Khan In Pakistan


ನಾನು ಇನ್ಮುಂದೆ ತುಂಬ ಡೇಂಜರಸ್​​ ಮನುಷ್ಯ ಎಂದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್​

ಇಮ್ರಾನ್ ಖಾನ್​

ಪಿಟಿಐ ಪಕ್ಷದ ನಾಯಕ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಹೀಗೆ ಅಧಿಕಾರ ಕಳೆದುಕೊಂಡ ಬಳಿಕ ಮೊದಲ ರ್ಯಾಲಿಯನ್ನು ಪೇಶಾವರದಲ್ಲಿ ನಡೆಸಿದ ಅವರು, ನಾನು ಪ್ರಧಾನಿಯಲ್ಲಿ ಹುದ್ದೆಯಲ್ಲಿ ಇದ್ದಾದ ಅಪಾಯಕಾರಿ ಆಗಿರಲಿಲ್ಲ. ಆಗ ನಾನು ಸರ್ಕಾರದ ಭಾಗವಾಗಿದ್ದೆ. ಆದರೆ ಈಗ ಅಧಿಕಾರ ಕಳೆದುಕೊಂಡ ಮೇಲೆ ಹಗುರವಾಗಿ ಪರಿಣಮಿಸಬೇಡಿ, ನಾನು ತುಂಬ ಅಪಾಯಕಾರಿ ಮನುಷ್ಯ ಎಂದು ಹೇಳಿದ್ದಾರೆ.  ಪಾಕಿಸ್ತಾನದಲ್ಲಿ ನಡೆದ ರಾಜಕೀಯ ಹೈಡ್ರಾಮಾ ಗೊತ್ತೇ ಇದೆ.  ಅಲ್ಲಿ ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು. ಬಳಿಕ ಅದನ್ನು ಉಪ ಸಭಾಪತಿ ಖಾಸಿಂ ಸೂರಿ ವಜಾಗೊಳಿಸಿದ್ದರು. ಆದರೆ ಸುಪ್ರೀಂಕೋರ್ಟ್ ತೀರ್ಪು ನೀಡಿ, ಖಾಸಿಂ ಸೂರಿ ತೆಗೆದುಕೊಂಡ ನಿರ್ಣಯ ತಪ್ಪು ಎಂದು ಹೇಳಿ, ಕೂಡಲೇ ಇಮ್ರಾನ್ ಖಾನ್ ಬಹುಮತ ಸಾಬೀತುಪಡಿಸಬೇಕು ಎಂದು ಹೇಳಿದ್ದರು. ಅದರಂತೆ ಇಮ್ರಾನ್ ಖಾನ್​ ರಾಷ್ಟ್ರೀಯ ಸಂಸತ್ತಿನಲ್ಲಿ ಬಹುಮತ ಸಾಬೀತು ಪಡಿಸಲು ಮುಂದಾದರೂ ಕೂಡ ಅದು ಸಾಧ್ಯವಾಗಲಿಲ್ಲ. ಅಲ್ಲೀಗ ಪಾಕಿಸ್ತಾನ ಮುಸ್ಲಿಂ ಲೀಗ್​ ನಾಯಕ ಶಹಬಾಜ್ ಷರೀಫ್​ ಪ್ರಧಾನಿಯಾಗಿದ್ದಾರೆ.

ತಾನು ಅಧಿಕಾರ ಕಳೆದುಕೊಳ್ಳಲು ವಿದೇಶಿ ಕುತಂತ್ರ ಕಾರಣ ಎಂದೇ ಆರೋಪಿಸುತ್ತಿರುವ ಇಮ್ರಾನ್ ಖಾನ್​, ಈಗಿನ ಸರ್ಕಾರ ಆಮದು ಮಾಡಿಕೊಂಡಿದ್ದಷ್ಟೇ ಎಂದು ಹೇಳಿದ್ದಾರೆ. ಹೀಗೆ ಆಮದು ಮಾಡಿಕೊಂಡ ಸರ್ಕಾರವನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಜನರೂ ವಿರೋಧಿಸುತ್ತಿದ್ದಾರೆ ಎಂದು ರ್ಯಾಲಿಯ ವೇಳೆ ಹೇಳಿದರು. ಇಷ್ಟು ವರ್ಷ ಪಾಕಿಸ್ತಾನದಲ್ಲಿ ಯಾವುದೇ ನಾಯಕ ಹುದ್ದೆಯಿಂದ ಕೆಳಗಿಳಿದಾಗ, ಅವರು ದೇಶವನ್ನು ಬಿಟ್ಟು ಓಡಿಹೋದಾಗ ಜನರು ಸಂಭ್ರಮ ಪಡುತ್ತಿದ್ದರು. ಆದರೆ ನಾನು ಅಧಿಕಾರದಿಂದ ಕೆಳಗೆ ಇಳಿದ ಬಳಿಕ ಸಾಮೂಹಿಕ ಪ್ರತಿಭಟನೆಗಳು ಶುರುವಾಗಿದೆ. ಇದು ನನಗಿರುವ ಜನ ಬೆಂಬಲ ತಿಳಿಸುತ್ತದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಇತಿಹಾಸದಲ್ಲಿಯೇ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಹುದ್ದೆಯಿಂದ ವಜಾಗೊಂಡ ಮೊದಲ ಪ್ರಧಾನಮಂತ್ರಿ ಈ ಇಮ್ರಾನ್ ಖಾನ್​. ಪೇಶಾವರದ ರ್ಯಾಲಿಯಲ್ಲಿ ಮಾತನಾಡಿದ ಅವರು, ನಿಜಕ್ಕೂ ಪಾಕಿಸ್ತಾನದ ಸುಪ್ರೀಂಕೋರ್ಟ್​ ಸ್ವತಂತ್ರ್ಯವಾಗಿ ತೀರ್ಪು ನೀಡಿತೇ ಎಂಬುದು ಪ್ರಶ್ನೆ.ನಾನು ಯಾವುದೇ ಕಾನೂನನ್ನೂ ಮೀರಿಲ್ಲ. ಇಡೀ ನನ್ನ ರಾಜಕೀಯ ವೃತ್ತಿ ಜೀವನದಲ್ಲಿ ಜನರನ್ನು ಎಂದಿಗೂ ಸಂಸ್ಥೆಯ, ಸರ್ಕಾರದ ವಿರುದ್ಧ ಎತ್ತಿಕಟ್ಟಿಲ್ಲ ಎಂದು ಹೇಳಿದ್ದಾರೆ.

TV9 Kannada


Leave a Reply

Your email address will not be published.