ಬೆಂಗಳೂರು: ಸವಿತಾ ಸಮಾಜ ಸಮುದಾಯಕ್ಕೆ ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಕ್ಷಮೆ ಕೇಳಿದ್ದಾರೆ.

ಜೂನ್ 9ರಂದು, ಚಾಮರಾಜಪೇಟೆಯಲ್ಲಿ ಸರ್ವಧರ್ಮ ಸಮ್ಮಿಲನ ಕಾರ್ಯಕ್ರಮದಲ್ಲಿ, ವಿವಿಧ ಸಮುದಾಯಗಳಿಗೆ ಪರಿಹಾರ ಘೋಷಣೆ ಕುರಿತು ಸರ್ಕಾರಕ್ಕೆ ಸಲಹೆ ನೀಡುವ ವೇಳೆ, ಬಾಯ್ತಪ್ಪಿನಿಂದ ಸವಿತಾ ಸಮಾಜದ ಬಗ್ಗೆಯ ನಿಷೇಧಿತ ಪದವನ್ನು ಬಳಕೆ ಮಾಡಿದ್ದರು. ಶಾಸಕರ ಈ ಹೇಳಿಕೆಯನ್ನು ರಾಜ್ಯ ಸವಿತಾ ಸಮಾಜ ತೀವ್ರವಾಗಿ ಖಂಡಿಸಿ, ನಿಷೇಧಿತ ಪದವನ್ನ ವಾಪಸ್ ಪಡೆದು, ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸವಿತಾ ಸಮಾಜ ಸಮುದಾಯದ ಆಕ್ರೋಶಕ್ಕೆ ಮಣಿದ, ಶಾಸಕ ಜಮೀರ್, ಬಾಯ್ತಪ್ಪಿನಿಂದ ಆ ಪದ ಬಳಕೆಯಾಗಿದೆ. ಬೇಕು ಎಂದು ಆ ಪದ ಬಳಕೆ ಮಾಡಿಲ್ಲ. ಆ ಪದ ಬಳಕೆಯಿಂದ ನನಗೂ ನೋವಾಗಿದೆ. ನಿಮ್ಮ ಮನಸ್ಸಿಗೆ ನೋವಾಗಿದ್ದರೆ, ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ಜಮೀರ್ ಹೇಳಿಕೆ ವೈಯಕ್ತಿಕ:
‘ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಮಾಜಿ ಸಚಿವ ಜಮೀರ್ ಅಹ್ಮದ್ ಅವರು ನೀಡಿರುವ ಹೇಳಿಕೆ ವೈಯಕ್ತಿಕವಾದದ್ದು. ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

‘ಪಕ್ಷದ ಶಾಸಕರಾಗಲಿ, ನಾಯಕರಾಗಲಿ ಅಥವಾ ಕಾರ್ಯಕರ್ತರಾಗಲಿ ಮತ್ತೊಬ್ಬರ ವಿರುದ್ಧ ಟೀಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ವೈಯಕ್ತಿಕ ವಿಚಾರಗಳಿಗೆ ಹೋಗಬಾರದು. ಜಾತಿ, ಧರ್ಮ ಸೇರಿದಂತೆ ಯಾವುದೇ ಭಾವನೆಗಳಿಗೆ ಧಕ್ಕೆ ತರಬಾರದು. ಟೀಕಿಸುವ ಭರದಲ್ಲಿ ಗೌರವದ ಎಲ್ಲೆ ಮೀರಬಾರದು ಎಂದು ಡಿಕೆ ಶಿವಕುಮಾರ್‍ರವರು ತಿಳಿಸಿದ್ದಾರೆ.

ಜಮೀರ್ ಅಹಮದ್ ಅವರು ಮುಂದಿನ ದಿನಗಳಲ್ಲಿ ಇಂತಹ ಟೀಕೆ, ಹೇಳಿಕೆ ನೀಡುವ ಮುನ್ನ ತಾವು ಒಂದು ಪಕ್ಷದ ಪ್ರತಿನಿಧಿ ಎಂಬುದನ್ನು ಮರೆಯಬಾರದು. ಇದು ಪುನಾರವರ್ತನೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಶಿವಕುಮಾರ್‍ರವರು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಜಮೀರ್ ಅಹ್ಮದ್ ವಿರುದ್ಧ ಸವಿತಾ ಸಮಾಜ ಆಕ್ರೋಶ

The post ನಾನು ಉದ್ದೇಶ ಪೂರ್ವಕವಾಗಿ ಹೇಳಿಲ್ಲ, ಕ್ಷಮೆ ಕೇಳ್ತೇನೆ: ಜಮೀರ್ ಅಹ್ಮದ್ appeared first on Public TV.

Source: publictv.in

Source link