ನಾನು ರಾಜಕೀಯಕ್ಕೆ ಬರಲು ಮಾಜಿ ಸಚಿವ, ದಿವಂಗತ ಜಾರ್ಜ್​ ಫರ್ನಾಂಡಿಸ್ ಸ್ಫೂರ್ತಿ: ಸಿದ್ದರಾಮಯ್ಯ | Siddaramaiah participated in George Fernandes biography book release program


ನಾನು ರಾಜಕೀಯಕ್ಕೆ ಬರಲು ಕೇಂದ್ರದ ಮಾಜಿ ಸಚಿವ, ದಿವಂಗತ ಜಾರ್ಜ್​ ಫರ್ನಾಂಡಿಸ್ ಸ್ಫೂರ್ತಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಹೇಳಿದ್ದಾರೆ.

ನಾನು ರಾಜಕೀಯಕ್ಕೆ ಬರಲು ಮಾಜಿ ಸಚಿವ, ದಿವಂಗತ ಜಾರ್ಜ್​ ಫರ್ನಾಂಡಿಸ್ ಸ್ಫೂರ್ತಿ: ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ನಾನು ರಾಜಕೀಯಕ್ಕೆ ಬರಲು ಕೇಂದ್ರದ ಮಾಜಿ ಸಚಿವ, ದಿವಂಗತ ಜಾರ್ಜ್​ ಫರ್ನಾಂಡಿಸ್ (George fernandes) ಸ್ಫೂರ್ತಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಬೆಂಗಳೂರಿನಲ್ಲಿ ಹೇಳಿದ್ದಾರೆ. ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಜೀವನ ಚರಿತ್ರೆ ಕುರಿತಾದ ‘ದಿ ಲೈಫ್ ಆ್ಯಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡಿಸ್‘ ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ಜೆಡಿಯು (JDU) ಪಕ್ಷ ಸ್ಥಾಪನೆಯಾದಗ ನಾನು ಫರ್ನಾಂಡಿಸ್ ಜೊತೆ ಹೋಗಲಿಲ್ಲ. ಏಕಂದರೆ ಜೆಡಿಯು ಬಿಜೆಪಿಗೆ ಬೆಂಬಲ ಕೊಡುವ ಕಾರಣ ನಾನು ಬರಲ್ಲ ಅಂದಿದ್ದೆ. ಆದರೆ ವೈಯಕ್ತಿಕವಾಗಿ ನಾವು ಚೆನ್ನಾಗಿದ್ವಿ. 1999ರಲ್ಲಿ ಜನತಾದಳ ಇಬ್ಭಾಗವಾದಾಗ ತುಂಬಾ ಹತ್ತಿರವಾಗಿದ್ದೆ. ಏರ್​​ಪೋರ್ಟ್​ನಿಂದ ಕರೆತರೋದು ಬಿಡೋದು ಮಾಡುತ್ತಿದ್ದೆ ಎಂದು ಮೆಲಕು ಹಾಕಿದರು.

ಜಾರ್ಜ್​ ಫರ್ನಾಂಡಿಸ್​ ಒಬ್ಬ ಮಾನವತಾವಾದಿಯಾಗಿದ್ದರು. ತುರ್ತು ಪರಿಸ್ಥಿತಿ ವೇಳೆ ಜಾರ್ಜ್​ ಫರ್ನಾಂಡಿಸ್​ರನ್ನು ಬಂಧಿಸಿದ್ದರು. ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನದುದ್ದಕ್ಕೂ ಹೋರಾಟ ಮಾಡಿದ್ದಾರೆ. ನನಗೆ 1989ರಲ್ಲಿ ಲೋಕಸಭೆಗೆ ಸ್ಪರ್ಧಿಸಲು 1 ಲಕ್ಷ ರೂ. ಕೊಟ್ಟರು. ನನ್ನ ಬಳಿ ದುಡ್ಡು ಇರಲಿಲ್ಲ, ಚುನಾವಣೆಯಲ್ಲಿ ಹೀನಾಯವಾಗಿ ಸೋತೆ ಎಂದು ಹೇಳಿದರು.

1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಪರ ಪ್ರಚಾರ ಮಾಡಿದ್ದರು. 10 ಸಾವಿರ ಹಣ ಕೊಟ್ಟು ನನ್ನ ಪರವಾಗಿ ಪ್ರಚಾರ ಮಾಡಿದ್ದರು. ನಾನು ರಾಜಕೀಯವಾಗಿ ಬೆಳೆಯಲು ಜಾರ್ಜ್ ಫರ್ನಾಂಡಿಸ್​ ಕಾರಣ. ಆಗ ಅವರ ಸಹೋದರ ಲಾರೆನ್ಸ್ ಫರ್ನಾಂಡೀಸ್​ಗೆ ತುಂಬಾನೇ ಕಿರುಕುಳ ಕೊಟ್ಟಿದ್ದರು. ಲೋಕದಳ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರಲಿಲ್ಲ. ಆದರೆ ನಾನು ಜಾರ್ಜ್​​ಗಾಗಿ ಲೋಕದಳಕ್ಕೆ ಹೋದೆ ಎಂದು ತಿಳಿಸಿದರು.

ಜಾರ್ಜ್ ಫರ್ನಾಂಡಿಸ್ ದೊಡ್ಡ ವಾಗ್ಮಿಯಾಗಿದ್ದು, ಎಂಟತ್ತು ಭಾಷೆಗಳಲ್ಲಿ ಭಾಷಣ ಮಾಡುತ್ತಿದದ್ದರು. ಆದರೆ ಕೊನೆಯಲ್ಲಿ ಮಾತು ಕಳೆದುಕೊಂಡುಬಿಟ್ಟರು. ಕರ್ನಾಟಕದಿಂದ ಹೋಗಿ ಉತ್ತರ ಭಾರತ, ಇಡೀ ದೇಶದಲ್ಲಿ ರಾಜಕಾರಣ ಮಾಡಿದರು. ಅವರ ಬದುಕು ಪ್ರವಾಸದಲ್ಲಿ ಹೆಚ್ಚು ಕಾಲ ಕಳೆಯಿತು. ಇವತ್ತಿನ ಪ್ರಸ್ತುತ ರಾಜಕಾರಣದಲ್ಲಿ ಅವರು ಇರಬೇಕಿತ್ತು, ಇಂದು ಧಮನವಾಗುತ್ತಿರುವ ಮಾನವ ಹಕ್ಕುಗಳು, ಧಾರ್ಮಿಕ ಸ್ವಾತಂತ್ರ್ಯ, ಅಭಿವ್ಯಕ್ತ ಸ್ವಾತಂತ್ರ್ಯ ವಿರುದ್ಧ ಹೋರಾಟ ಮಾಡುತ್ತಿದ್ದರು. ಅವರಿಲ್ಲದೇ ದೇಶ ಬಡವಾಗಿದೆ ಎಂದರು.

ಕಾರ್ಮಿಕ ಕ್ಷೇತ್ರ, ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ಕೂಲಿ ಕಾರ್ಮಿಕರು ಅವರಿಲ್ಲದೇ ಬಡವರಾಗಿದ್ದಾರೆ. ಅವರು ಇಂಥಹ ಸಂದರ್ಭದಲ್ಲಿ ಬದುಕಿರಬೇಕಿತ್ತು ಅನಿಸುತ್ತಿದೆ. ಜಾರ್ಜ್​ ಫರ್ನಾಂಡಿಸ್ ಕಂಪನಿ ವಿರುದ್ಧ ಹೋರಾಟಕ್ಕೆ ಕರೆ ಕೊಟ್ಟಿದ್ದರು. ಕೋಕಾಕೋಲಾ ಕುಡಿಯಬಾರದೆಂದು ಎಂದು ಕರೆ ನೀಡಿದ್ದರು. ಅಂದಿನಿಂದ ನಾನು ಕೋಕಾಕೋಲಾ ಕುಡಿದಿಲ್ಲ. ಮುಂದೆಯು ಕೋಕಾಕೋಲಾ ಕುಡಿಯುವುದಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯ ಬಿಜೆಜಿ ನಾಯಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

‘ಲಿಂಗಾಯತ ವಿರೋಧಿ ಕಾಂಗ್ರೆಸ್’ ಎಂದು ಬಿಜೆಪಿ ಅಭಿಯಾನ ಮಾಡುತ್ತಿರುವ ಕುರಿತು ಮಾತನಾಡಿದ ಅವರು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಜಾತಿ ಬಣ್ಣ ಕಟ್ಟಿದ್ದಾರೆ. ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್​ ಸರ್ಕಾರ ಅಂತಾ ಪ್ರಧಾನಿ ಮೋದಿ ಆರೋಪ ಮಾಡಿದರು. ನಾನು ಕುರುಬ ಸಮಾಜ ಅಂತ ಮೋದಿ ಆರೋಪ ಮಾಡಿದರಾ? ಏನು ದಾಖಲೆಗಳಿಲ್ಲದೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದರು. ಕಾಂಗ್ರೆಸ್​​ನಲ್ಲಿ ಲಿಂಗಾಯತ ನಾಯಕರು ಇಲ್ವಾ ?ನನ್ನ ವಿರುದ್ಧವೂ ಬಿಜೆಪಿಯವರು ಸುಳ್ಳು ಪುಸ್ತಕ ಪ್ರಕಟಿಸಿದ್ದಾರೆ. ಕುರುಬರು ಅಂತ ಹೀಗೆ ಮಾಡುತ್ತಿದ್ದಾರೆ ಅಂತಾ ಹೇಳಬಹುದಾ? ಬಿಜೆಪಿಯವರು ಬಿ.ವೈ.ವಿಜಯೇಂದ್ರಗೆ ಮಂತ್ರಿ ಯಾಕೆ ಮಾಡಿಲ್ಲ ? ವಿಜಯೇಂದ್ರ ಲಿಂಗಾಯತ ಅಲ್ವಾ ? ಎಂದು ಪ್ರಶ್ನಿಸಿದರು.

ರಾಜ್ಯದ ಹಲವು ಜಿಲ್ಲೆಗಳಲ್ಲಿ ‘108 ಌಂಬುಲೆನ್ಸ್’ ಸೇವೆ ಸ್ಥಗಿತ ವಿಚಾರವಾಗಿ ಮಾತನಾಡಿದ ಅವರು ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಸರ್ಕಾರ ತನ್ನ ಕ್ರಿಯಾಶೀಲತೆಯನ್ನ ಸಂಪೂರ್ಣ ಕಳೆದುಕೊಂಡಿದೆ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ

TV9 Kannada


Leave a Reply

Your email address will not be published.