‘ನಾನು ಸಿನಿಮಾಗೆ ಬೆಂಬಲ ನೀಡಿಲ್ಲ ಅಂದ್ರೂ ಸುದ್ದಿಯಲ್ಲಿ ಇರ್ತೀನಿ’; ಸುದೀಪ್ ಹೀಗೆ ಹೇಳಿದ್ದು ಏಕೆ? | If I am not support Movie people will talk about me says Kichcha Sudeep


‘ನಾನು ಸಿನಿಮಾಗೆ ಬೆಂಬಲ ನೀಡಿಲ್ಲ ಅಂದ್ರೂ ಸುದ್ದಿಯಲ್ಲಿ ಇರ್ತೀನಿ’; ಸುದೀಪ್ ಹೀಗೆ ಹೇಳಿದ್ದು ಏಕೆ?

ಕಿಚ್ಚ ಸುದೀಪ್

‘ಕೆಜಿಎಫ್: ಚಾಪ್ಟರ್​ 2’ ಸಿನಿಮಾ (KGF:Chapter 2) ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಬಾಲಿವುಡ್ (Bollywood)​ ಮಂದಿಯಿಂದಲೂ ಮೆಚ್ಚುಗೆ ಹರಿದು ಬಂದಿದೆ. ಹಿಂದಿಯಲ್ಲಿ ಅತಿ ವೇಗದಲ್ಲಿ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಕೆಜಿಎಫ್ 2’ ಚಿತ್ರ ಭಾಜನವಾಗಿದೆ. ಈ ಚಿತ್ರದ ಗೆಲುವನ್ನು ಸ್ಯಾಂಡಲ್​ವುಡ್​ನ ಅನೇಕರು ಸಂಭ್ರಮಿಸಿಲ್ಲ, ಬದಲಿಗೆ ಈ ಬಗ್ಗೆ ಮೌನ ತಾಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಈ ವಿಚಾರದ ಬಗ್ಗೆ ಸುದೀಪ್ (Kichcha Sudeep) ಪರೊಕ್ಷವಾಗಿ ಮಾತನಾಡಿದ್ದಾರೆ.

ಜಗ್ಗೇಶ್ ಹಾಗೂ ವಿಜಯ್ ಪ್ರಸಾದ್ ಕಾಂಬಿನೇಷನ್​ನ ‘ತೋತಾಪುರಿ’ ಸಿನಿಮಾ ಹಾಡಿನ ಮೂಲಕ ಸಾಕಷ್ಟು ಕುತೂಹಲ ಹುಟ್ಟುಹಾಕಿತ್ತು. ಈಗ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ಟ್ರೇಲರ್ ರಿಲೀಸ್ ಮಾಡಿದರು. ಈ ಕಾರ್ಯಕ್ರಮದ ವೇದಿಕೆ ಏರಿದ್ದರು ಸುದೀಪ್. ಈ ವೇಳೆ ಆ್ಯಂಕರ್ ಹೇಳಿದ ಒಂದು ವಿಚಾರಕ್ಕೆ ಸುದೀಪ್ ಉತ್ತರ ನೀಡಿದರು.

‘ಸುದೀಪ್ ಕನ್ನಡ ಸಿನಿಮಾಗೆ ಸಾಕಷ್ಟು ಬೆಂಬಲ ನೀಡುತ್ತಾರೆ. ಇಡೀ ಚಿತ್ರರಂಗವನ್ನು ಅವರು ಫ್ಯಾಮಿಲಿ ರೀತಿ ನೋಡುತ್ತಾರೆ’ ಎಂದರು ಆ್ಯಂಕರ್. ಇದಕ್ಕೆ ಸುದೀಪ್ ತಕ್ಷಣಕ್ಕೆ ಉತ್ತರಿಸಿದರು. ‘ಸಿನಿಮಾಗೆ ಸಪೋರ್ಟ್ ಮಾಡಿಲ್ಲ ಅಂದ್ರೂ ನಾನು ಸುದ್ದಿಯಲ್ಲಿ ಇರ್ತೀನಿ’ ಎಂದರು. ‘ಕೆಜಿಎಫ್ 2’ ಬಗ್ಗೆ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ‘ಕನ್ನಡದ ಚಿತ್ರ ಇಷ್ಟು ದೊಡ್ಡ ಯಶಸ್ಸು ಕಂಡರೂ ಸುದೀಪ್ ಮೌನ ವಹಿಸಿದ್ದು ಸರಿ ಅಲ್ಲ’ ಎಂದು ಅನೇಕರು ಮಾತನಾಡಿಕೊಂಡಿದ್ದಿದೆ. ಕೆಲ ಮಾಧ್ಯಮಗಳು ಈ ಬಗ್ಗೆ ವರದಿ ಕೂಡ ಮಾಡಿವೆ. ಇನ್ನು, ‘ಕೆಜಿಎಫ್’ ವಿಚಾರದಲ್ಲಿ ಅವರು ಮಾತನಾಡಿದ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ವಿಚಾರವಾಗಿಯೇ ಸುದೀಪ್ ಹೀಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.

‘ತೋತಾಪುರಿ’ ಮಾವಿನಕಾಯಿ ವಿಚಾರ ಇಟ್ಟುಕೊಂಡು ಸುದೀಪ್​ಗೆ ಪ್ರಶ್ನೆ ಮಾಡಲಾಯಿತು, ‘ಉಪ್ಪು, ಖಾರ, ಸಿಹಿ, ತೋತಾಪುರಿಯ ಹುಳಿ. ಈ ನಾಲ್ಕು ಗುಣದಲ್ಲಿ ಸುದೀಪ್​ ಯಾರಾಗಿರ್ತಾರೆ’ ಎಂದು ಕೇಳಲಾಯಿತು. ಇದಕ್ಕೆ ಸುದೀಪ್ ಖಡಕ್ ಉತ್ತರ ನೀಡಿದರು. ‘ಎಲ್ಲರಿಗೂ ಒಂದೊಂದು ರೀತಿ ಕಾಣುತ್ತೇನೆ. ಜಗ್ಗೇಶ್​ ಅವರಿಗೆ ಒಂದು ರೀತಿ ಕಾಣುವ ನಾನು, ಉಳಿದವರಿಗೆ ಮತ್ತೊಂದು ರೀತಿ ಕಾಣಬಹುದು. ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾಲಿಗೆ ನಿಮ್ಮದು’ ಎಂದರು ಸುದೀಪ್.

TV9 Kannada


Leave a Reply

Your email address will not be published. Required fields are marked *