ನಾನೇ ಸಿಎಂ ಅಭ್ಯರ್ಥಿ ಎಂದ ಇಂದಿರಾ ಮೊಮ್ಮಗಳು.. ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಮೇನಿಯ


ಸದ್ಯ ದೇಶದ ಜನತೆಯ ಸಂಪೂರ್ಣ ಚಿತ್ತ ಉತ್ತರ ಪ್ರದೇಶ ಚುನಾವಣೆ ಮೇಲೆ ನೆಟ್ಟಿದೆ. ಎಲೆಕ್ಷನ್ ಡೇಟ್ ಹತ್ತಿರವಾಗ್ತಿದ್ದಂತೆ ಉತ್ತರ ಪ್ರದೇಶದಲ್ಲೂ ಯಾರೂ ಊಹಿಸಲಿಕ್ಕೂ ಸಾಧ್ಯವಾಗದೇ ಇರೋವಂತಹ ಬೆಳವಣಿಗೆಗಳಾಗ್ತಿವೆ. ಅಂದಹಾಗೇ, ಚುನಾವಣಾ ರಣಭೂಮಿಯಲ್ಲಿ ಇವತ್ತು ನಡೆದಿರೋ ಡೆವಲಪ್​ಮೆಂಟ್​ನ ಹಲವರು ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ ಅನ್ಸುತ್ತೆ, ಯಾಕಂದ್ರೆ, ಇಷ್ಟೂ ದಿನ ಪಕ್ಷವನ್ನು ಸದೃಢಗೊಳಿಸಲು ಬಿಜೆಪಿಯ ಭದ್ರಕೋಟೆಯಲ್ಲಿ ಶ್ರಮಿಸುತ್ತಿದ್ದ ಕೈಪಾಳಯದ ನಾರಿಶಕ್ತಿಯೊಂದು ಈಗ ಅಲ್ಲಿನ ಗದ್ದುಗೆಯ ಮೇಲೆಯೇ ಕಣ್ಣಿಟ್ಟಿದೆ..

ಚುನಾವಣಾ ಬಿಸಿಯಿಂದ ಕಾದ ಕಾವಲಿಯಂತಾಗಿರುವ ಉತ್ತರ ಪ್ರದೇಶ ಅಖಾಡದ ತಾಪವನ್ನು ಪ್ರಿಯಾಂಕಾ ಗಾಂಧಿ ಮತ್ತಷ್ಟು ಹೆಚ್ಚಿಸಿದ್ದಾರೆ. ಪ್ರಿಯಾಂಕಾ ಗಾಂಧಿಯವರು ಇವತ್ತಾಡಿದ ಮಾತುಗಳಿಂದ ಯುಪಿ ಎಲೆಕ್ಷನ್​ನಲ್ಲಿ ಪೈಪೋಟಿ ಹೆಚ್ಚಾಗಲಿದೆ. ಯಾಕಂದ್ರೆ, ಕಾಂಗ್ರೆಸ್​ ಪಕ್ಷದಿಂದ ಉತ್ತರ ಪ್ರದೇಶ ಚುನಾವಣೆಯ ನೇತೃತ್ವ ವಹಿಸಿರುವ ಪ್ರಿಯಾಂಕಾ ಗಾಂಧಿ ಇವತ್ತು ಕೊಟ್ಟಿರುವ ಸುಳಿವು ಅಂತಿದ್ದಲ್ಲ.. ಬೇರೆ ಪಕ್ಷಗಳ ಘಟಾನುಘಟಿ ನಾಯಕರೂ ಎದ್ದುನಿಂತು ನೋಡುವಂತಹ ಸುಳಿವು.. ಹೌದು, ಉತ್ತರ ಪ್ರದೇಶ ಚುನಾವಣೆ ಇಂದಿನಿಂದ ಇನ್ನಷ್ಟು ರಣರೋಚಕವಾಗಲಿದೆ.

ಚುನಾವಣಾ ರಾಜಕೀಯಕ್ಕೆ ಪ್ರಿಯಾಂಕಾ ಅಧಿಕೃತ ಎಂಟ್ರಿ!
ಕಾಂಗ್ರೆಸ್​​ನಿಂದ ನಾನೇ ಸಿಎಂ ಫೇಸ್​ ಎಂದ ‘ಕೈ’ ನಾಯಕಿ!

ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಉತ್ತರ ಪ್ರದೇಶದಲ್ಲಿ ಚುನಾವಣಾ ನೇತೃತ್ವ ವಹಿಸಿರುವ ಪ್ರಿಯಾಂಕಾ ಗಾಂಧಿ ಚುನಾವಣಾ ರಾಜಕೀಯಕ್ಕೆ ಅಧಿಕೃತ ಎಂಟ್ರಿ ಕೊಡುವ ಸುಳಿವು ನೀಡಿದ್ದಾರೆ. ಬಿಜೆಪಿ ಭದ್ರಕೋಟೆಯಿಂದಲೇ ನಾರಿಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಇಂದಿರಾ ಮೊಮ್ಮಗಳು ಎಲ್ಲಾ ರಾಜಕೀಯ ಪಕ್ಷಗಳಿಗೂ ಠಕ್ಕರ್ ಕೊಡಲು ಮತ್ತೊಂದು ಮಹತ್ವದ ಹೆಜ್ಜೆ ಇಡುವ ಎಲ್ಲಾ ಸಾಧ್ಯತೆಗಳಿದ್ದು, ಯುಪಿ ಅಖಾಡದಲ್ಲಿ ತಾನೇ ಸಿಎಂ ಫೇಸ್​ ಅಂತಾ ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಉತ್ತರ ಪ್ರದೇಶದ ಯುವ ಸಮುದಾಯಕ್ಕೆ ಆದ್ಯತೆ ನೀಡುವ ಕುರಿತಾದ ಪ್ರಣಾಳಿಕೆ ಬಿಡುಗಡೆ ಮಾಡಿದ ಅವರು ಇವತ್ತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ರು, ಈ ವೇಳೆ, ಬಿಜೆಪಿ ಯೋಗಿ ಆದಿತ್ಯನಾಥ್ ಹಾಗೂ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮುಂದಿಟ್ಟಿದೆ. ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಯನ್ನು ಪತ್ರಕರ್ತರು ಪ್ರಿಯಾಂಕಾ ಗಾಂಧಿ ಮುಂದಿಟ್ಟರು. ಈ ವೇಳೆ ಸಂಚಲನ ಸೃಷ್ಟಿಸುವ ಉತ್ತರ ಕೊಟ್ಟ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಪಕ್ಷದಿಂದ ಬೇರೆಯವರ ಮುಖವೇನಾದರೂ ಕಾಣಿಸುತ್ತಿದೆಯೇ, ಎಲ್ಲಾ ಜಾಗಗಳಲ್ಲೂ ನನ್ನದೇ ಮುಖ ಕಾಣಿಸುತ್ತಿದೆ ಅಲ್ವಾ ಅಂತಾ ಹೇಳುವ ಮೂಲಕ ತಾವೇ ಸಿಎಂ ಅಭ್ಯರ್ಥಿ ಎಂಬ ಸುಳಿವು ನೀಡಿದ್ರು..

ಹೀಗಂತಾ ಹೇಳುವ ಮೂಲಕ ಪ್ರಿಯಾಂಕ ಗಾಂಧಿ ಉತ್ತರದಲ್ಲಿ ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ. ಯುಪಿಯಲ್ಲಿ ಈ ಮೊದಲು ಬಿಜೆಪಿಯಿಂದ ಯೋಗಿ ಆದಿತ್ಯನಾಥ್ ಅಥವಾ ಎಸ್ಪಿಯಿಂದ ಅಖಿಲೇಶ್ ಯಾದವ್ ಎಲ್ಲಿಂದ ಸ್ಪರ್ಧೆ ಮಾಡ್ತಾರೆ ಅನ್ನೋದೇ ದೊಡ್ಡ ಗೊಂದಲವಾಗಿತ್ತು. ಆದ್ರೆ, ಮೊನ್ನೆ ಮೊನ್ನೆಯಷ್ಟೇ ಯೋಗಿ ಆದಿತ್ಯನಾಥ್ ಗೋರಖ್​ಪುರ್​ದಿಂದ ಹಾಗೂ ಅಖಿಲೇಶ್ ಯಾದವ್ ಕರ್ಹಾಲ್ ಎಂಬಲ್ಲಿಂದ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಅನ್ನೋದು ಕನ್ಫರ್ಮ್ ಆಗಿತ್ತು. ಇನ್ನು, ಮುಖ್ಯಮಂತ್ರಿಯಾಗಲು ಪ್ರಿಯಾಂಕ ಗಾಂಧಿ ಚುನಾವಣೆಗೆ ನಿಲ್ಬೇಕು ಅನ್ನೋದೇನೂ ಇಲ್ಲ. ಆದ್ರೆ, ಪ್ರಿಯಾಂಕ ನಿಂತರೂ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋದೇ ಮತ್ತೊಂದು ಬಹುದೊಡ್ಡ ಪ್ರಶ್ನೆಯಾಗಿದೆ..

ಯುಪಿಯಲ್ಲಿ ಈಗಾಗಲೇ ಪ್ರಿಯಾಂಕಾ ‘ಮಹಿಳಾ’ ಅಸ್ತ್ರ!
ಯಾವುದೇ ಪಕ್ಷಗಳ ಜೊತೆಗೆ ಮೈತ್ರಿಗೆ ಮುಂದಾಗದ ಕಾಂಗ್ರೆಸ್

ಉತ್ತರ ಪ್ರದೇಶ ಹೇಳಿ ಕೇಳಿ ದೇಶದ ಅತೀ ದೊಡ್ಡ ರಾಜ್ಯ.. ದೇಶದಲ್ಲಿ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳು ಉತ್ತರ ಪ್ರದೇಶದಲ್ಲಿವೆ. ಹಾಗಾಗಿಯೇ, ಇಲ್ಲಿ ಸ್ಪರ್ಧೆ ಹಾಗೂ ಜಯಗಳಿಸೋದು ಎಲ್ಲಾ ಪಕ್ಷಗಳಿಗೂ ಒಂದು ರೀತಿಯ ಪ್ರತಿಷ್ಠೆಯೇ ಹೌದು… ಈಗಾಗಲೇ, ಯುಪಿಯಲ್ಲಿ ಮತ್ತೊಮ್ಮೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಅನ್ನೋದನ್ನ ಹಲವು ಸಮೀಕ್ಷೆಗಳು ಹೇಳ್ತಿವೆ. ಆದ್ರೆ, ಬಿಜೆಪಿಗೆ ನೇರ ಎದುರಾಳಿಯಾಗಿರೋ ಅಖಿಲೇಶ್ ನೇತೃತ್ವದ ಎಸ್​ಪಿ ಕಮಲಕ್ಕೆ ಸೆಡ್ಡು ಹೊಡೆಯಲು ಇನ್ನಿಲ್ಲದ ರಣತಂತ್ರ ರೂಪಿಸುತ್ತಿದೆ. ಆ ದಾರಿಯಲ್ಲಿ ಕಾಂಗ್ರೆಸ್ ಕೂಡ ಸಾಗುತ್ತಿದ್ದು ದಿನೇ ದಿನೇ ವೆರೈಟಿ ಸ್ಟ್ರ್ಯಾಟಜಿಗಳ ಪ್ರಯೋಗಕ್ಕೆ ಮುಂದಾಗಿದೆ ಅದರಲ್ಲಿ ಪ್ರಮುಖವಾದ್ದದ್ದು ಕಾಂಗ್ರೆಸ್​ನ ಮಹಿಳಾ ಅಸ್ತ್ರ..

‘ನಾನು ಹೆಣ್ಣು, ನಾನೂ ಹೋರಾಡಬಲ್ಲೆ’ ಅಂತಿರೋ ಕಾಂಗ್ರೆಸ್!
ನಾರಿಶಕ್ತಿ ಮುಂದಿಟ್ಟುಕೊಂಡೇ ಚುನಾವಣೆ ಗೆಲ್ಲುವ ಪ್ಲಾನ್​!

ಹೌದು..ಯುಪಿಯಲ್ಲಿ ಯಾವುದೇ ಪಕ್ಷಗಳ ಜೊತೆಗೆ ಮೈತ್ರಿಗೆ ಮುಂದಾಗದ ಕಾಂಗ್ರೆಸ್ ಎಲ್ಲಾ 403 ಕ್ಷೇತ್ರಗಳಲ್ಲೂ ಏಕಾಂಗಿಯಾಗಿ ಸ್ಪರ್ಧೆಗಿಳಿದಿದೆ ಎಂಬ ಘೋಷಣೆಯನ್ನ ಖುದ್ದು ಪ್ರಿಯಾಂಕ ಗಾಂಧಿಯೇ ಮಾಡಿದ್ದಾರೆ. ಇನ್ನು, ಯುಪಿ ಚುನಾವಣೆಗೆ ಬೇಕಾದ ಪ್ರತಿಯೊಂದು ಪ್ರಚಾರದ ಸಾರಥ್ಯವನ್ನು ಸೋನಿಯಾ ಪುತ್ರಿಯೇ ವಹಿಸಿದ್ದು, ಈಗಗಾಲೇ ಮಹಿಳಾ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಬಹುಮುಖ್ಯವಾಗಿ ಸ್ತ್ರೀಯರ ಸೆಳೆಯಲು ಮುಂದಾಗಿರುವ ಪ್ರಿಯಾಂಕಾ ಗಾಂಧಿ, ಲಡ್ಕೀ ಹೂ, ಲಡ್​ ಸಕ್ತಿ ಹೂ ಅಂದ್ರೆ, ನಾನು ಹೆಣ್ಣು, ನಾನೂ ಹೋರಾಡಬಲ್ಲೆ ಎಂಬ ಟ್ಯಾಗ್​ಲೈನ್ ಮೂಲಕ ಕ್ಯಾಂಪೇನ್​ ಮಾಡ್ತಿದ್ದಾರೆ. ಅಲ್ಲದೇ, ಉತ್ತರ ಪ್ರದೇಶದ ಶೇಕಡಾ 40ರಷ್ಟು ಸ್ಥಾನಗಳನನ್ನು ಮಹಿಳೆಯರಿಗಾಗಿಯೇ ಮೀಸಲಿಡುವ ನಿರ್ಧಾರವನ್ನು ಖುದ್ದು ಪ್ರಿಯಾಂಕಗಾಂಧಿಯೇ ಘೋಷಣೆ ಮಾಡಿದ್ದು, ಈಗ ಬಿಡುಗಡೆ ಮಾಡಿರೋ ಎರಡೂ ಲಿಸ್ಟ್​ನಲ್ಲೂ ಕೊಟ್ಟ ಮಾತನ್ನು ಅವರು ಉಳಿಸಿಕೊಂಡಿದ್ದಾರೆ. ಇದು ಉತ್ತರ ಪ್ರದೇಶ ಎಲೆಕ್ಷನ್ ಅಖಾಡದಲ್ಲಿ ಕಾಂಗ್ರೆಸ್ ಮೂವ್ ಮಾಡಿರೋ ಬ್ರಹ್ಮಾಸ್ತ್ರ ಅಂತ ಹೇಳಿದ್ರೆ ತಪ್ಪಾಗಲ್ಲ.

ಸ್ತ್ರೀಯರ ಜೊತೆಗೆ ಯುಪಿ ಯುವ ಮತದಾರರೂ ಟಾರ್ಗೆಟ್
ಯುಪಿ ಯುವಸಮುದಾಯಕ್ಕೆ 20 ಲಕ್ಷ ಉದ್ಯೋಗದ ಭರವಸೆ​!

ಇನ್ನು, ಸ್ತ್ರೀಯರ ಜೊತೆಗೆ ಯುಪಿಯ ಯುವ ಮತದಾರರನ್ನೂ ಕಾಂಗ್ರೆಸ್ ಟಾರ್ಗೆಟ್ ಮಾಡಿದೆ. ಉತ್ತರ ಪ್ರದೇಶದಲ್ಲಿ ತಾಂಡವವಾಡ್ತಿರೋ ನಿರುದ್ಯೋಗದ ಲಾಭ ಪಡೆಯಲು ಕೈ ಪಾಳಯ ಮುಂದಾಗಿದೆ. ಅದಕ್ಕಾಗಿಯೇ, ಯುಪಿಯ ಯುವಸಮುದಾಯಕ್ಕೆ ಅಂತಲೇ ಪ್ರತ್ಯೇಕವಾದ ಪ್ರಣಾಳಿಕೆಯನ್ನ ಇವತ್ತು ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿ ರಿಲೀಸ್ ಮಾಡಿದ್ರು, ಅದರಲ್ಲಿ ರಾಜ್ಯದ 20 ಲಕ್ಷ ಜನರಿಗೆ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಲಾಗಿದ್ದು, ಯುವ ಮತದಾರರನ್ನೂ ಆಕರ್ಷಿಸಲು ಕಾಂಗ್ರೆಸ್ ಕಸರತ್ತು ಮಾಡ್ತಿದೆ.

ಹಿಂದೂಗಳ ಮತಬೇಟೆಗೂ ಪ್ರಿಯಾಂಕಾ ಮಾಸ್ಟರ್​​ ಪ್ಲಾನ್
ಪ್ರಧಾನಿ ಮೋದಿ ಕೋಟೆಯಿಂದಲೇ ಮೊಳಗಿತ್ತು ರಣಕಹಳೆ

ಉತ್ತರ ಪ್ರದೇಶ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ, ಎಲೆಕ್ಷನ್ ಘೋಷಣೆಯಾಗುವ ಮುನ್ನವೇ ಪ್ರಿಯಾಂಕಾ ಗಾಂಧಿ ಪ್ರಚಾರದ ಅಖಾಡಕ್ಕಿಳಿದುಬಿಟ್ಟಿದ್ದರು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರ ವಾರಣಸಿಯಿಂದಲೇ ರಣಕಹಳೆ ಮೊಳಗಿಸಿದ್ದರು. ತಾಯಿ ಕೂಷ್ಮಾಂಡ ಮತ್ತು ಕಾಶಿ ವಿಶ್ವನಾಥ ದರ್ಶನ ಪಡೆದು ಗಂಗೆಯಲ್ಲಿ ಮಿಂದೆದ್ದಿದ್ದ ಪ್ರಿಯಾಂಕ ಹಿಂದೂಗಳ ಮತಬೇಟೆಗೆ ಅಲ್ಲಿಂದಲೇ ಗೇಮ್ ಪ್ಲಾನ್ ಮಾಡಿದ್ದರು. ಮೋದಿಯ ಭದ್ರಕೋಟೆಯಲ್ಲಿ ಕಿಸಾನ್ ನ್ಯಾಯ್ ಱಲಿ ಆಯೋಜಿಸಿ ಶಕ್ತಿ ಪ್ರದರ್ಶಿಸುವ ಮೂಲಕ ದೇಶ ಮತ್ತು ರಾಜ್ಯಕ್ಕೆ ತಾನು ದುರ್ಬಲ ಪಕ್ಷವಲ್ಲ ಎಂಬ ಸಂದೇಶ ನೀಡಲು ಮುಂದಾಗಿದ್ದರು.

ಪ್ರಿಯಾಂಕಾ ಸ್ಪರ್ಧಿಸಿದ್ರೆ ಯುಪಿಯಲ್ಲಿ ‘ಬ್ಯಾಟಲ್ ಆಫ್​ ಟೈಟಾನ್ಸ್’
2019ರಲ್ಲಿ ವಾರಾಣಸಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಪ್ರಿಯಾಂಕಾ

ಇನ್ನು, ಪ್ರಿಯಾಂಕಾ ಗಾಂಧಿ ಇವತ್ತು ಕೊಟ್ಟ ಹೇಳಿಕೆಯಿಂದ ಉತ್ತರ ಪ್ರದೇಶ ಚುನಾವಣೆ ಲೆಕ್ಕಾಚಾರಗಳು ಮತ್ತಷ್ಟು ಬದಲಾಗುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಒಂದು ವೇಳೆ ಕಾಂಗ್ರೆಸ್ ಪ್ರಿಯಾಂಕರನ್ನ ಯುಪಿಯ ಸಿಎಂ ಅಭ್ಯರ್ಥಿ ಅಂತಾ ಘೋಷಣೆ ಮಾಡಿದ್ರೆ, ಯುಪಿಯಲ್ಲಿ ಘಟಾನುಘಟಿಗಳ ಹಣಾಹಣಿಯೇ ಈ ಬಾರಿ ನಡೆಯಲಿದೆ. ಅಲ್ಲದೇ, ಗಾಂಧಿ ಮನೆತನದ ಸದಸ್ಯರೊಬ್ಬರು, ಇದೇ ಮೊಟ್ಟ ಮೊದಲ ಬಾರಿಗೆ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಂತಾಗುತ್ತದೆ. 2019ರ ಲೋಕಸಭಾ ಚುನಾವಣೆಯಲ್ಲಿ, ವಾರಣಸಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲು ಮುಂದಾಗಿದ್ದರು. ಆದ್ರೆ, ಕೊನೆಕ್ಷಣದಲ್ಲಿ ತಮ್ಮ ನಿರ್ಧಾರದಿಂದ ಅವರು ಹಿಂದೆ ಸರಿದಿದ್ದರು. ಅದಾದ ಬಳಿಕ ಅದೇ 2019ರಲ್ಲಿ ಉತ್ತರ ಪ್ರದೇಶದ ಪಶ್ಚಿಮ ಭಾಗಕ್ಕೆ ಪ್ರಿಯಾಂಕ ಗಾಂಧಿಯನ್ನ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಅಂದಿನಿಂದ ಯುಪಿ ಅಖಾಡದಲ್ಲಿ ಸಕ್ರಿಯವಾಗಿದ್ದ ಪ್ರಿಯಾಂಕ ಗಾಂಧಿಯನ್ನು ಇಡೀ ರಾಜ್ಯಕ್ಕೆ ಉಸ್ತುವಾರಿಯನ್ನಾಗಿ ನೇಮಿಸಲಾಯ್ತು. ಇದಾದ ಬಳಿಕ ಪ್ರಿಯಾಂಕ ಯುಪಿಯಲ್ಲಿ ಪಕ್ಷವನ್ನು ಪ್ರಬಲಗೊಳಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ ಅಂದ್ರೆ ತಪ್ಪಾಗಲ್ಲ. ಒಟ್ಟಾರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಹಾಗೂ ಎಸ್​ಪಿ ಜೊತೆಗೆ ಅಧಿಕಾರಕ್ಕೆ ಬರಲೇಬೇಕು ಅಂತಾ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಮಹಿಳಾ ಅಸ್ತ್ರದ ಜೊತೆಗೆ ಮಹಿಳೆಯನ್ನೇ ಗದ್ದುಗೆಗೆ ಕೂರಿಸಲು ಬಿಗ್ ಪ್ಲಾನ್ ಮಾಡಿರುವ ತಂತ್ರದ ಸುಳಿವು ಹೊಸ ಸಂಚಲನಕ್ಕೆ ಕಾರಣವಾಗಿದೆ.

ಪ್ರಿಯಾಂಕಾ ಮಾತಿನ ಅರ್ಥ ಏನೇ ಇರಬಹುದು.. ಆದ್ರೆ, ಆಕೆಯೇನಾದ್ರೂ ಈ ಬಾರಿ ಸ್ಪರ್ಧೆಗಿಳಿದ್ರೆ ಯುಪಿ ರಣಭೂಮಿಯಲ್ಲಿ ಸಮರ ಹೈವೋಲ್ಟೇಜ್ ಆಗೋದ್ರಲ್ಲಿ ಸಂದೇಹವಿಲ್ಲ. ಅಷ್ಟಕ್ಕೂ, ಪ್ರಿಯಾಂಕಾ ಗಾಂಧಿ ಚುನಾವಣಾ ರಾಜಕಾರಣಕ್ಕೆ ಬಂದ್ರೆ ಕಾಂಗ್ರೆಸ್​ನಲ್ಲಿ ಆಗೋ ಬದಲಾವಣೆಗಳೇನು ಈ ರಿಪೋರ್ಟ್ ನೋಡಿ.

News First Live Kannada


Leave a Reply

Your email address will not be published. Required fields are marked *