ನಾಪತ್ತೆಯಾಗಿರುವ ನಿಮ್ಮ ದೇಶದ ಹುಡುಗ ಇನ್ನೊಂದು ವಾರದಲ್ಲಿ ಮರಳಿ ಬರುತ್ತಾನೆ; ಭಾರತೀಯ ಸೇನೆಗೆ ಮಾಹಿತಿ ನೀಡಿದ ಚೀನಾ ಸೇನೆ | 17 years old boy will return in 3 days China says to Indian Army


ನಾಪತ್ತೆಯಾಗಿರುವ ನಿಮ್ಮ ದೇಶದ ಹುಡುಗ ಇನ್ನೊಂದು ವಾರದಲ್ಲಿ ಮರಳಿ ಬರುತ್ತಾನೆ; ಭಾರತೀಯ ಸೇನೆಗೆ ಮಾಹಿತಿ ನೀಡಿದ ಚೀನಾ ಸೇನೆ

ನಾಪತ್ತೆಯಾಗಿರುವ ಅರುಣಾಚಲ ಪ್ರದೇಶದ ಹುಡುಗ

ಕಳೆದ ಮೂರು ದಿನಗಳ ಹಿಂದೆ ಅರುಣಾಚಲ ಪ್ರದೇಶದಿಂದ ನಾಪತ್ತೆಯಾದ ಹುಡುಗ  ಇಲ್ಲೇ ಇದ್ದಾನೆ. ಅವನನ್ನು ಬಿಡುಗಡೆ ಮಾಡುವ ಮತ್ತು ಹಿಂದಿರುಗಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಭಾನುವಾರ ಭಾರತೀಯ ಸೇನೆಗೆ ತಿಳಿಸಿದೆ. ಈ ಬಗ್ಗೆ ತೇಜ್​ಪುರ್ ಡಿಫೆನ್ಸ್​ ಪಿಆರ್​ಒ ಲೆಫ್ಟಿನೆಂಟ್ ಕರ್ನಲ್​ ಹರ್ಷವರ್ಧನ್​ ಪಾಂಡೆ ಪ್ರತಿಕ್ರಿಯೆ ನೀಡಿದ್ದು, ನಾಪತ್ತೆಯಾಗಿದ್ದ 17 ವರ್ಷದ ಹುಡುಗನನ್ನು ಇನ್ನು ಒಂದು ವಾರದಲ್ಲಿ ಭಾರತಕ್ಕೆ ಕಳಿಸಲಾಗುವುದು ಎಂದು  ಚೀನಾ ಸೇನೆ ತಿಳಿಸಿದೆ ಎಂದು ಹೇಳಿದ್ದಾರೆ.  ಹುಡುಗನ ಹೆಸರು ಮಿರಾಮ್ ಟ್ಯಾರನ್ ಎಂದಾಗಿದ್ದು ಕಳೆದ ಮುರು ದಿನಗಳ ಹಿಂದೆ ನಾಪತ್ತೆಯಾಗಿದ್ದ. ಈತನನ್ನು ಚೀನಾ ಸೇನೆಯೇ ಅಪಹರಣ ಮಾಡಿರಬಹುದು ಅಥವಾ ದಾರಿ ತಪ್ಪಿಸಿಕೊಂಡ ಇವನನ್ನು ಚೀನಾ ಆರ್ಮಿ ವಶಕ್ಕೆ ಪಡೆದಿರಬಹುದು ಎಂದು ಭಾವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ, ಹುಡುಗನ ಬಗ್ಗೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಸಿಬ್ಬಂದಿಯನ್ನು ಕೇಳಿತ್ತು. ಅದಕ್ಕಿಂದು ಉತ್ತರಿಸಿದ ಚೀನಾ ಸೇನಾ ಸಿಬ್ಬಂದಿ, ಹುಡುಗ ಸಿಕ್ಕಿದ್ದಾನೆ ಎಂದು ಹೇಳಿದೆ. 

ಯಾರೀತ ಮಿರಾಮ್​​?
ಮಿರಾಮ್ ಟ್ಯಾರನ್​ 17 ವರ್ಷದ ಹುಡುಗನಾಗಿದ್ದು ಅರುಣಾಚಲ ಪ್ರದೇಶದ ​ಮೇಲಿನ ಸಿಯಾಂಗ್ ಜಿಲ್ಲೆಯ ಜಿಡೋ ಗ್ರಾಮದವನಾಗಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಟ್ಯಾರನ್​ ಮತ್ತು ಇನ್ನೂ ಕೆಲವರು ಭಾರತ-ಚೀನಾ ಗಡಿ ಭಾಗದ ಪ್ರದೇಶಗಳಲ್ಲಿ ಬೇಟೆಯಾಡುತ್ತಿದ್ದಾಗ ಟ್ಯಾರನ್​ ನಾಪತ್ತೆಯಾಗಿದ್ದ. ಅವನ ಜತೆಗಿದ್ದವರೆಲ್ಲ ವಾಪಸ್​ ಬಂದಿದ್ದರೂ ಟ್ಯಾರನ್ ಬಂದಿರಲಿಲ್ಲ. ಹೀಗಾಗಿ ಆತನನ್ನು ಚೀನಾ ಸೇನೆಯೇ ಅಪಹರಣ ಮಾಡಿದೆ ಎಂದು ಹೇಳಲಾಗಿತ್ತು. ಬಾಲಕ ನಾಪತ್ತೆಯಾದ ವಿಷಯ ಭಾರತೀಯ ಸೇನೆಗೆ ತಿಳಿಯುತ್ತಿದ್ದಂತೆ ಅದು ಚೀನಿ ಸೇನೆಯನ್ನು ಸಂಪರ್ಕಿಸಿ, ಈತನ ಬಗ್ಗೆ ವಿಚಾರಿಸಿತ್ತು. 2020ರ ಸೆಪ್ಟೆಂಬರ್​​ನಲ್ಲಿ ಕೂಡ ಇಂಥದ್ದೇ ಒಂದು ಘಟನೆ ನಡೆದಿತ್ತು. ಅರುಣಾಚಲ ಪ್ರದೇಶದ ಅಪ್ಪರ್​ ಸುಬಾನ್ಸಿರಿ ಜಿಲ್ಲೆಯ ಐವರು ಯುವಕರನ್ನು ಚೀನಾ ಸೇನೆ ಅಪಹರಿಸಿತ್ತು. ಒಂದು ವಾರದ ಬಳಿಕ ಬಿಡುಗಡೆ ಮಾಡಿತ್ತು.

ಸದ್ಯ ಭಾರತ ಮತ್ತು ಚೀನಾ ಮಿಲಿಟರಿ ಸಂಬಂಧ ಉತ್ತಮವಾಗಿಲ್ಲ. ಲಡಾಖ್​, ಅರುಣಾಚಲ ಪ್ರದೇಶದ ಗಡಿಗಳಲ್ಲಿ ಚೀನಾ ಸೇನೆ ಆಗಾಗ ಉಪಟಳ ನೀಡುತ್ತಿದೆ. ಭಾರತ ಮತ್ತು ಚೀನಾ ದೇಶಗಳು ಲಡಾಖ್​ನಿಂದ ಅರುಣಾಚಲ ಪ್ರದೇಶದವರೆಗೆ ಸುಮಾರು 3400 ಕಿಮೀ ಉದ್ದದ ವಾಸ್ತವ ನಿಯಂತ್ರಣ ಗಡಿರೇಖೆ (LAC)ಯನ್ನು ಹೊಂದಿವೆ. ಎರಡೂ ಸೇನೆಗಳ ನಡುವೆ ಗಡಿಯಲ್ಲಿ ಆಗಾಗ ಉಂಟಾಗುತ್ತಿರುವ ಸಂಘರ್ಷದ ನಿವಾರಣೆ ಸಂಬಂಧ ಎರಡೂ ದೇಶಗಳ ನಡುವೆ ಈಗಾಗಲೇ 14 ಸುತ್ತುಗಳ ಮಿಲಿಟರಿ ಹಂತದ ಮಾತುಕತೆಗಳು ನಡೆದಿವೆ.

TV9 Kannada


Leave a Reply

Your email address will not be published. Required fields are marked *