ಶಿವಮೊಗ್ಗ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಪಕ್ಷದ ಒಳಗೆ ಎಲ್ಲಿಯೂ ಕೇಳಿ ಬಂದಿಲ್ಲ. ಆದರೆ ಈ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಊಹಾ ಪೋಹಗಳು ಕೇಳಿ ಬರುತ್ತಿವೆ ಎಂದು ಸಂಸದ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ತಿಳಿಸಿದರು.

ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಲವು ಮಾಧ್ಯಮಗಳಲ್ಲಿ ಗಮನಿಸಿದೆ. ಯಡಿಯೂರಪ್ಪ ಅವರ ಮಕ್ಕಳಿಗೋಸ್ಕರ ಹೈಕಮಾಂಡ್ ಗೆ ಕಂಡಿಷನ್ ಹಾಕಿದ್ದಾರೆ ಎಂದು ತೋರಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ತಮ್ಮ 50 ವರ್ಷಗಳ ರಾಜಕೀಯ ಜೀವನದಲ್ಲಿ ಲಕ್ಷಗಟ್ಟಲೆ ಕಾರ್ಯಕರ್ತರನ್ನು ಸಂಘಟನೆಗೆ ಕೊಡುಗೆಯಾಗಿ ನೀಡಿದ್ದಾರೆ. ಅನೇಕ ನಾಯಕರನ್ನು ಬೆಳೆಸಿದ್ದಾರೆ. ಸಂಘಟನೆಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರು ಎಲ್ಲಿಯೂ ಸೀಮಿತವಾಗಿ ಅವರ ಮಕ್ಕಳಿಗಾಗಿ, ಕುಟುಂಬಕ್ಕಾಗಿ ಚಿಂತನೆ ಮಾಡುವ ಸಂಕುಚಿತ ನಾಯಕರಲ್ಲ ಎಂದರು. ಇದನ್ನೂ ಓದಿ: ಜು.26 ರಂದು ಸಿಎಂ ನಿರ್ಗಮನ – ಷರತ್ತು ವಿಧಿಸಿದ ಹೈಕಮಾಂಡ್

ಯಡಿಯೂರಪ್ಪ ಅವರು ಆರ್‍ಎಸ್‍ಎಸ್ ಪ್ರಚಾರಕರಾಗಿ ಶಿಕಾರಿಪುರಕ್ಕೆ ಆಗಮಿಸಿ, ಅಲ್ಲಿಯೇ ನೆಲೆಸಿ ಸಂಘಟನೆ ಮಾಡಿದ್ದಾರೆ. ಅಂದಿನ ಸರ್ಕಾರದ ಜನ ವಿರೋಧಿ ಕೆಲಸಗಳ ವಿರುದ್ಧ ಧ್ವನಿ ಎತ್ತಿ ಹೋರಾಟಗಾರರಾಗಿ ಆ ಮೂಲಕ ರಾಜಕೀಯ ಜೀವನಕ್ಕೆ ಧುಮುಕಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬರುವ ದಿಕ್ಕಿನಲ್ಲಿ ಶ್ರಮಿಸಿದ್ದಾರೆ. ರಾಜ್ಯದಲ್ಲಿ ಅವರ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು.

ವಿಜಯೇಂದ್ರರನ್ನು ಮಂತ್ರಿ ಮಾಡಲು, ರಾಘವೇಂದ್ರನಿಗೆ ಸ್ಥಾನ ಕೊಡಿಸಲು ಡಿಮ್ಯಾಂಡ್ ಮಾಡಿದ್ದಾರೆ ಎಂಬುದು ಸುಳ್ಳು. ಪಕ್ಷದಲ್ಲಿ ಇಂತಹ ಯಾವುದೇ ಚರ್ಚೆ ಸಹ ನಡೆದಿಲ್ಲ. ಮುಂದಿನ ದಿನಗಳಲ್ಲಿಯೂ ಒಳ್ಳೆಯ ರೀತಿಯ ಆಡಳಿತ ನೀಡಲಿದ್ದಾರೆ. ಯಡಿಯೂರಪ್ಪ ಅವರು ಸ್ವಾಮೀಜಿಗಳ ಆಶೀರ್ವಾದ, ಸಂಘಟನೆಯ ಆಶೀರ್ವಾದದಿಂದ ಬೆಳೆದಿದ್ದಾರೆ. ಹೀಗಾಗಿ ಅಭಿವೃದ್ಧಿ ಬಗ್ಗೆ ಚರ್ಚಿಸಲು ಯಡಿಯೂರಪ್ಪ ಅವರ ಮನೆಗೆ ಮಠಾಧೀಶರು ಭೇಟಿ ನೀಡುತ್ತಾರೆ ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ತಿಳಿಸಿದರು.

The post ನಾಯಕತ್ವ ಬದಲಾವಣೆ ಊಹಾಪೋಹ: ಬಿ.ವೈ.ರಾಘವೇಂದ್ರ appeared first on Public TV.

Source: publictv.in

Source link