ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

ಸೌಂಥಾಂಪ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಕ್ಯಾಪ್ಟನ್‍ಶಿಪ್ ನಿರ್ವಹಿಸುವ ಮೂಲಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತನಗೆ ನಾಯಕತ್ವದ ಪಾಠ ಹೇಳಿಕೊಟ್ಟ ಗುರುವಿನ ದಾಖಲೆ ಮುರಿದಿದ್ದಾರೆ.

ವಿರಾಟ್ ಕೊಹ್ಲಿ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಟಾಸ್ ಆದ ಬೆನ್ನಲ್ಲೇ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ದಾಖಲೆಯನ್ನು ಮುರಿದಿದ್ದಾರೆ. ಧೋನಿ ಇವರೆಗೆ ಒಟ್ಟು 60 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರೆ, ವಿರಾಟ್ ಕೊಹ್ಲಿ 61ನೇ ಪಂದ್ಯದಲ್ಲಿ ನಾಯಕತ್ವ ವಹಿಸುವ ಮೂಲಕ ತನ್ನ ನಾಯಕತ್ವದ ಗುರುವಿನ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇದನ್ನೂ ಓದಿ: ದಾಖಲೆ ಬರೆದ ವಿರಾಟ್ ಕೊಹ್ಲಿ

ಧೋನಿ ಒಟ್ಟು 60 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿ 27 ಪಂದ್ಯದಲ್ಲಿ ಜಯ, 18 ಪಂದ್ಯ ಸೋಲು ಮತ್ತು 15 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ವಿರಾಟ್ ಒಟ್ಟು 61 ಪಂದ್ಯ 36 ಪಂದ್ಯ ಜಯ, 14 ಪಂದ್ಯ ಸೋಲು, 10 ಪಂದ್ಯ ಡ್ರಾ ಮಾಡಿಕೊಂಡಿದ್ದಾರೆ. 2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದ ಚುಕ್ಕಾನಿ ಹಿಡಿದಿದ್ದರು. ಬಳಿಕ ತಂಡವನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ನಂ 1 ಸ್ಥಾನಕ್ಕೇರಿಸಿ, ಇದೀಗ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ಗೆ ಏರಿಸಿದ ಕೀರ್ತಿ ವಿರಾಟ್‍ಗೆ ಸಲ್ಲುತ್ತದೆ. ಇದನ್ನೂ ಓದಿ: WTC ಫೈನಲ್ ಭಾರತ, ನ್ಯೂಜಿಲೆಂಡ್ ತಂಡದ ವೇಗಿಗಳ ಬಲಾಬಲ

ಕೊಹ್ಲಿ ನಾಯಕತ್ವ ಮಾತ್ರವಲ್ಲದೆ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ವೈಯಕ್ತಿಕವಾಗಿ ಟೆಸ್ಟ್ ಕ್ರಿಕೆಟ್‍ನಲ್ಲಿ ವೇಗವಾಗಿ 7500ಕ್ಕೂ ಅಧಿಕ ರನ್ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಈ ಮೊದಲು ಸಚಿನ್ ತೆಂಡೂಲ್ಕರ್ 144 ಟೆಸ್ಟ್ ಪಂದ್ಯಗಳಿಂದ 7500ರನ್ ಸಿಡಿಸಿದರೆ, ಬಳಿಕ ಸುನಿಲ್ ಗಾವಸ್ಕರ್ 154 ಟೆಸ್ಟ್ ಪಂದ್ಯಗಳಿಂದ 7500ರನ್ ಸಿಡಿಸಿದ್ದರು. ಇದೀಗ ಕೊಹ್ಲಿ 92 ಟೆಸ್ಟ್ ಪಂದ್ಯದಿಂದ 7500 ರನ್ ಸಿಡಿಸಿ ಮಿಂಚಿದ್ದಾರೆ.

The post ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ appeared first on Public TV.

Source: publictv.in

Source link