
ಪ್ರಶಾಂತ್ ನೀಲ್
Prashanth Neel: ರಾಕಿ ಭಾಯ್ ನಿಧನದ ನಂತರ ಸಲಾರ್ನ ಆಶ್ರಯದಲ್ಲಿ ಶಾಂತಿ ಬೆಳೆಯುತ್ತಾಳೆ. ಆಕೆಯ ಆಯಾಮದಿಂದಲೂ ಪ್ರಶಾಂತ್ ನೀಲ್ ಒಂದು ದೊಡ್ಡ ಕಥೆಯನ್ನು ಹೇಳಬಹುದು.
‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಎಲ್ಲೆಲ್ಲೂ ಪ್ರಶಾಂತ್ ನೀಲ್ (Prashanth Neel) ಅವರ ಗುಣಗಾನ ಮಾಡಲಾಗುತ್ತಿದೆ. ಈ ಕನ್ನಡದ ನಿರ್ದೇಶಕನ ಪ್ರತಿಭೆ ವಿಶ್ವವ್ಯಾಪಿ ಹರಡಿದೆ. ಬೃಹತ್ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದ ಪ್ರಶಾಂತ್ ಅವರು ಸಾಕಷ್ಟು ನಿರ್ದೇಶಕರಿಗೆ ಮಾದರಿ ಆಗಿದ್ದಾರೆ. ಅವರಿಗೆ ಕೋಟ್ಯಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾಗಳ (Prashanth Neel Next Movie) ಬಗ್ಗೆ ಭಾರೀ ಕೌತುಕ ಸೃಷ್ಟಿ ಆಗಿದೆ. ಈ ನಡುವೆ ಅನೇಕ ಬಗೆಯ ಅಂತೆ-ಕಂತೆಗಳು ಕೂಡ ಕೇಳಿಬರುತ್ತಿವೆ. ಪ್ರಶಾಂತ್ ನೀಲ್ ಅವರು ಒಂದು ಸ್ತ್ರೀ ಪ್ರಧಾನ ಕಥೆಯುಳ್ಳ ಸಿನಿಮಾ ಮಾಡುತ್ತಾರೆ ಎಂಬ ಗಾಸಿಪ್ ಕೂಡ ಹಬ್ಬಿದೆ. ಆದರೆ ಆ ಕುರಿತು ಯಾರಿಂದಲೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅಷ್ಟಕ್ಕೂ ಈ ರೀತಿ ಗಾಸಿಪ್ ಹಬ್ಬಲು ಕಾರಣ ಏನು? ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾ ಕಥೆ! ಹೌದು, ಈ ಚಿತ್ರದ ಕಥೆಯಲ್ಲಿ ಬರುವ ಒಂದು ಚಿಕ್ಕ ಘಟನೆಯನ್ನು ಇಟ್ಟುಕೊಂಡು ಇನ್ನೊಂದು ಸಿನಿಮಾ ಮಾಡಲಾಗುತ್ತದೆ ಎಂಬ ಗಾಸಿಪ್ ಹರಡಿದೆ.
ಗರುಡನ ಆಳ್ವಿಕೆಯಲ್ಲಿ ನರಾಚಿ ಎಂಬುದು ಅಕ್ಷರಶಃ ನರಕ ಆಗಿರುತ್ತದೆ. ನಂತರ ಆ ಜಾಗವನ್ನು ರಾಕಿ ಭಾಯ್ ವಶ ಮಾಡಿಕೊಳ್ಳುತ್ತಾನೆ. ಗರುಡನ ನಿಧನದ ನಂತರ ರಾಕಿ ಭಾಯ್ ಆಡಳಿತದಲ್ಲಿ ನಾರಾಚಿಯ ಸ್ವರೂಪ ಬದಲಾಗುತ್ತದೆ. ಅಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಮನೆ, ಊಟ, ಆಶ್ರಯ ಸಿಗುವ ರೀತಿಯಲ್ಲಿ ರಾಕಿ ಭಾಯ್ ನೋಡಿಕೊಳ್ಳುತ್ತಾನೆ. ಅಲ್ಲಿ ಜನಿಸುವ ಒಂದು ಹೆಣ್ಣು ಮುಗುವಿಗೆ ಶಾಂತಿ ಎಂದು ಹೆಸರು ಇಡುತ್ತಾನೆ. ಆ ಮಗುವಿನ ಪಾತ್ರದ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ.