ಜಪಾನ್ ಅಂದ್ರೆ ವಿಶ್ವವೇ ಕಣ್ಣರಳಿಸಿ ನೋಡುವಂಥ ದೇಶ. ಅಷ್ಟೊಂದು ಬೇಗ ಮುಂದುವರೆದ ರಾಷ್ಟ್ರವಾಗಿ ಬೆಳೆದು ನಿಂತಿದ್ದು ಜಪಾನ್. ದ್ವೀಪ ರಾಷ್ಟ್ರವಾಗಿ ಪದೇ ಪದೇ ಪ್ರಾಕೃತಿಕ ಮುನಿಸಿಗೆ ತುತ್ತಾಗುತ್ತಲೇ ಇರುವ ಜಪಾನ್ ಸವಾಲುಗಳನ್ನೆಲ್ಲ ಮೆಟ್ಟಿ ನಿಂತು ಮುಂಚೂಣಿ ರಾಷ್ಟ್ರಗಳ ಪಟ್ಟಿಗೆ ಸೇರಿದೆ. ಆದ್ರೆ ಕೊರೊನಾ ತಡೆಯುವಲ್ಲಿ ಮಾತ್ರ ಜಪಾನ್ ಕೂಡ ಹಿನ್ನಡೆ ಅನುಭವಿಸ್ತಾ ಇದೆ.

ಜಪಾನ್ ಅಂದ್ರೆ ಕಡಿಮೆನಾ. ವಿಶ್ವವೇ ತನ್ನತ್ತ ನೋಡುವಂತೆ ಮಾಡಿಕೊಂಡಿರುವ ದ್ವೀಪ ರಾಷ್ಟ್ರ. ಯಾವುದೇ ಕ್ಷೇತ್ರ ಇರಲಿ, ಯಾವುದೇ ತಂತ್ರಜ್ಞಾನ ಇರಲಿ ಜಪಾನ್ ಅಂದ್ರೆ ಅದಕ್ಕೆ ಮೊದಲ ಆದ್ಯತೆ. ಅಷ್ಟರ ಮಟ್ಟಿಗೆ ಆಧುನಿಕ ಜಗತ್ತಿನಲ್ಲಿ ಬೆಳೆದು ನಿಂತಿದೆ ಜಪಾನ್. ಇಲ್ಲಿನ ಒಂದೊಂದು ನಗರ, ಇಲ್ಲಿನ ಒಂದೊಂದು ಪ್ರದೇಶ, ಇಲ್ಲಿನ ಒಂದೊಂದು ಅಭಿವೃದ್ಧಿ ಕೆಲಸ ಎಲ್ಲವೂ ಒಮ್ಮೆಯಾದರೂ ನೋಡಿಕೊಂಡು ಬರಬೇಕು ಅನ್ನುವಷ್ಟರ ಮಟ್ಟಿಗೆ ಮಂದುವರೆದಿದೆ.

ಹಿರೋಷಿಮಾ, ನಾಗಾಸಾಕಿ ಮೇಲಿನ ಬಾಂಬ್ ದಾಳಿಯ ಬಳಿಕ ಇನ್ನೂ ಜಪಾನ್ ಚೇತರಿಸಿಕೊಳ್ಳೋದೇ ಇಲ್ಲ ಅಂದುಕೊಂಡವರೇ ಹೆಚ್ಚು. ಆದ್ರೆ ಜಪಾನ್ ,ಕೆಲವೇ ಕೆಲವು ದಶಕಗಳಲ್ಲಿಯೇ ಅತ್ಯಂತ ಮುಂದುವರೆದ ಪ್ರಗತಿ ಶೀಲ ರಾಷ್ಟ್ರವಾಗಿದ್ದು ಒಂದು ಕುತೂಹಲಕಾರಿ ಇತಿಹಾಸ. ಇಂತಹ ಜಪಾನ್ ಇಷ್ಟೆಲ್ಲಾ ಮುಂದುವರೆದಿದ್ದರೂ ಕೊರೊನಾಗೆ ಬ್ರೇಕ್ ಹಾಕುವಲ್ಲಿ ಅಷ್ಟರಮಟ್ಟಿಗೆ ಸಕ್ಸಸ್ ಆಗ್ತಾ ಇಲ್ಲ. ಅಷ್ಟೇ ಅಲ್ಲ ಜಪಾನ್ ನಲ್ಲೇ ಬೆಡ್ ಸಿಗ್ತಾ ಇಲ್ವಂತೆ ಅನ್ನೋ ಸುದ್ದಿ ಇನ್ನಷ್ಟು ಗಮನ ಸೆಳೆದಿದೆ.

ಜಪಾನ್ ಕಳೆದ ವರ್ಷವೇ ಒಲಿಂಪಿಕ್ಸ್ ಗೆ ಸಜ್ಜಾಗಿತ್ತು. ಆದ್ರೆ ಕೊರೊನಾ ಕಾರಣದಿಂದ ಮುಂದೂಡಲಾಗಿತ್ತು. ಈ ವರ್ಷ ಮಾತ್ರ ಒಲಿಂಪಿಕ್ಸ್ ನಡೆಸಿಯೇ ನಡೆಸುತ್ತೇವೆ ಅಂತ ಜಪಾನ್ ನಿರ್ಧಾರ ಮಾಡಿ ಬಿಟ್ಟಿದೆ. ಹೀಗಾಗಿ ಹೇಗಾದರೂ ಮಾಡಿ ದೇಶವನ್ನು ಕೊರೊನಾ ಮುಕ್ತವಾಗಿಸಿ ಅತಿಥಿಗಳನ್ನು ಸತ್ಕರಿಸಬೇಕೆಂಬುದು ಜಪಾನಿನ ಆಶಯ .ಆದ್ರೆ ಜಪಾನಿನ ತೀರ್ಮಾನಗಳೆಲ್ಲ ಉಲ್ಟಾ ಹೊಡೀತಿವೆ. ಕಾರಣ ಕೊರೊನಾ.

ಜಪಾನ್ ನಲ್ಲಿ ಮುಂದುವರೆದ ಕೋವಿಡ್ ಅಬ್ಬರ
ದಿನ ದಿನಕ್ಕೆ ಏರಿಕೆ ಆಗುತ್ತಿದೆ ಹೊಸ ಕೋವಿಡ್ ಕೇಸ್

ಜಪಾನ್ ದೇಶದ ಜನಸಂಖ್ಯೆ 12 ಕೋಟಿ. ಆದರೆ ಈ ದ್ವಿಪದಲ್ಲಿ ತೊಂದರೆಗಳೇ ಹೆಚ್ಚು. ಪದೇ ಪದೇ ಕಾಡುವ ಭೂಕಂಪ, ಸುನಾಮಿ ಎಲ್ಲವನ್ನು ಅನುಭವಿಸುತ್ತಲೇ ಮೃತ್ಯುವಿನ ಕತ್ತಿಯ ಮೇಲೆ ನಡೆದು ಬಂದವರು ಜಪಾನಿಯರು. ವಿಶ್ವಕ್ಕೆ ಕೊರೊನಾ ಅಪ್ಪಳಿಸಿದಾಗ ಜಪಾನಿಯರು ಎದೆ ಗುಂದಿರಲಿಲ್ಲ. ಮೊದಲ ಬಾರಿ ಕೋವಿಡ್ ಪಾಸಿಟಿವ್ ಕೇಸ್ ಜಪಾನ್​ನಲ್ಲಿ ಕಾಣಿಸಿಕೊಂಡಾಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಮೊದಲ ಅಲೆಯನ್ನು ಹೇಗೋ ಎದುರಿಸಿದ್ದರು. ಹಾಗೆ ದಿನ ಕಳೆದಂತೆ ಕೇಸ್ ಗಳ ಸಂಖ್ಯೆ ಏರುಗತಿ ಕಾಣಿಸುತ್ತಲೇ ಇತ್ತು. 2021ರ ಜನವರಿ ಹೊತ್ತಿಗಾಗಲೇ ದಿನಕ್ಕೆ 7 ಸಾವಿರ ಹೊಸ ಪ್ರಕರಣಗಳನ್ನು ಮೂರನೇ ಅಲೆಯಾಗಿ ಜಪಾನ್​ನಲ್ಲಿ ಕಾಣಿಸಿಕೊಂಡಿತ್ತು. ಆದರೆ ಜಪಾನಿಯರ ಮುನ್ನೆಚ್ಚರಿಕೆಯಿಂದಾಗಿ ಹೇಗೋ ಮೂರನೇ ಅಲೆಯನ್ನು ಜಯಿಸಿದ್ದರು. ಆದರೆ ಈಗ ಜಪಾನ್ ದೇಶವನ್ನು ಅಪ್ಪಳಿಸಿರುವುದು ಮ್ಯೂಟಂಟ್ ವೈರಸ್.

ಜಪಾನ್​ನಲ್ಲಿ ಆಗಲೇ ಕೋವಿಡ್ ನಾಲ್ಕನೆ ಅಲೆ ಪ್ರಾರಂಭ
ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ಮನೆಯಲ್ಲೆ ಚಿಕಿತ್ಸೆ ಎಂದ ಸರ್ಕಾರ

ಹೌದು, ಜಪಾನ್ ನಲ್ಲಿ ಕೋವಿಡ್ ನಾಲ್ಕನೆ ಅಲೆ ಪ್ರಾರಂಭವಾಗಿದೆ. ಫೆಬ್ರವರಿಯಲ್ಲಿ ಹೊಸ ಪ್ರಕರಣಗಳ ಇಳಿಕೆ ಕಂಡಿದ್ದ ಜಪಾನ್ ಈಗ ನಿಧಾನವಾಗಿ ಏರಿಕೆಯ ಹಾದಿ ಹಿಡಿದಿದೆ. ಅದುವೇ ಈ ಭಾರಿ ಆಟ ಕೊರೊನಾ ಮ್ಯೂಟೆಂಟ್ ವೈರಸ್​ದು. ಕೊರೊನಾ ವೈರಸ್ ತನ್ನ ರೂಪಾಂತರಿ ತಳಿಯನ್ನು ಜಪಾನ್ ದೇಶದಲ್ಲಿ ಹರಿ ಬಿಟ್ಟಿದೆ. ಇದರಿಂದ ಮತ್ತೆ ಏರುಗತಿಯಲ್ಲಿ ಕೊರೊನಾ ಕೇಸ್ ಗಳು ಕಾಣಿಸಿಕೊಳ್ಳಲು ಶುರು ಮಾಡಿದೆ. ಇನ್ನು ಇದರ ಜೊತೆಗೆ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಗಳ್ಳಿಲ್ಲ ಎನ್ನುವ ಕೂಗು ಸಹ ಕೇಳಿ ಬರ್ತಾ ಇದೆ. ಆದ್ದರಿಂದ ಅಲ್ಲಿನ ಸರ್ಕಾರ ಸೋಂಕಿತರು ಮನೆಯಲ್ಲೆ ಇದ್ದು ಚಿಕಿತ್ಸೆ ಪಡೆದುಕೊಳ್ಳಿ. ಮನೆ ಮನೆಗೆ ವೈದ್ಯರು ಬಂದು ಸಲಹೆ ನೀಡುತ್ತಾರೆ ಎಂದು ಆದೇಶ ಹೊರಡಿಸಿದೆ.

ವೈರಸ್ ಗೆಲ್ಲಲು ಜಪಾನಿಯರಿಗೂ ಸಾಕಷ್ಟು ತೊಂದರೆ
ವ್ಯಾಕ್ಸಿನೇಷನ್ ಡ್ರೈವ್ ನಲ್ಲೂ ಸಕ್ಸಸ್ ಆಗದ ಜಪಾನ್

ಕಳೆದ ಮೂರು ಅಲೆಯನ್ನು ಎಚ್ಚರಿಕೆ ಇಂದ ಗೆದ್ದ ಜಪಾನ್ ಗೆ ನಾಲ್ಕನೆ ಅಲೆ ದೊಡ್ಡ ಸವಾಲಾಗಿದೆ. ಈ ಅಲೆಯನ್ನು ಗೆಲ್ಲಲು ಸಿದ್ದತೆಗಳಿದ್ದರೂ ಫಲಕಾರಿಯಾಗದೆ ಸೋಲುತ್ತಿದ್ದಾರೆ. ಈಗಾಗಲೆ ಬೆಡ್ ಸಮಸ್ಯೆ ಎದುರಿಸುತ್ತಿರುವವರಿಗೆ, ಮುಂದೆ ವೈದ್ಯರು ಸಿಗದೆ ಇರಬಹುದು ಎನ್ನುವ ಮಾತನ್ನು ತಜ್ಞರು ಹೇಳುತ್ತಿದ್ದಾರೆ. ಇನ್ನು ವ್ಯಾಕ್ಸಿನೆಷನ್ ಡ್ರೈವ್ ನಿಧಾನ ಗತಿಯಿಂದ ಸಾಗುತ್ತಿದ್ದು, ಹಲವೆಡೆ ವ್ಯಾಕ್ಸಿನೇಷನ್ ಸಿಗದೆ ಇರುವುದು ಜಪಾನಿಯರಿಗೆ ಗೊಂದಲ ಉಂಟು ಮಾಡಿದೆ. ಅಲ್ಲದೆ ಲಸಿಕೆ ಹಾಕಿಸಿಕೊಳ್ಳಲು ಮುಂಗಡವಾಗಿ ಕಾಯ್ದಿರಿಸಲು ಇದ್ದ ಲಸಿಕೆ ವೆಬ್ ಸೈಟ್ ಕ್ರಾಶ್ ಆಗಿ ಎಲ್ಲ ರಿಸರ್ವೆಷನ್ ಗಳು ರದ್ದಾಗಿದೆ. ಇದಕ್ಕಾಗಿ ರಿಸರ್ವೆಷನ್ ಇಲ್ಲದೆ ಲಸಿಕೆ ಹಾಕಲು ಮುಂದಾಗಿದೆ ದೇಶ. ಹೀಗೆ ಸಾಲು ಸಾಲು ತೊಂದರೆಗಳನ್ನು ಎದುರಿಸುತ್ತಿರುವ ದೇಶಕ್ಕೆ ಇನ್ನೊಂದು ಸವಾಲ್ ಎಂದರೆ ಟೋಕಿಯೊ ಒಲಂಪಿಕ್ಸ್.

ದೇಶ- ವಿದೇಶಗಳಲ್ಲಿ ಒಲಂಪಿಕ್ಸ್ ಗೆ ಕ್ರೀಡಾ ಪಟುಗಳ ಸಿದ್ಧತೆ
ಆದರೆ, ಜಪಾನ್ ನಲ್ಲಿನ ಕೊರೊನಾದಿಂದ ನಿರಾಸೆ ಸಾಧ್ಯತೆ

339 ಚಿನ್ನದ ಪದಕಗಳಿಗೆ ಸುಮಾರು 200 ದೇಶಗಳಿಂದ 11 ಸಾವಿರಕ್ಕಿಂತ ಹೆಚ್ಚು ಕ್ರೀಡಾಪಟುಗಳು ಸೇರುವ ಆಟವೇ ಇಂಟರ್​ನ್ಯಾಷನಲ್ ಒಲಂಪಿಕ್ಸ್. ಈ ಆಟಗಾರರು ಗೆಲ್ಲಬೇಕಿದ್ದ ಪದಕಗಳಿಗೆ ಬೆನ್ನಾಗಿ ಇಡಿ ವಿಶ್ವದ ಸಪೋರ್ಟ್ ಯಾವಾಗಲೂ ಇರುತ್ತಿತ್ತು. 2020 ಕೋವಿಡ್ ಕಾರಣದಿಂದ ಒಲಂಪಿಕ್ಸ್ ರದ್ದಾಯಿತು. ಇದರಿಂದ ವಯೋಮಿತಿಯಿಂದಾಗಿ ಕೊನೆ ಬಾರಿ ಆಡಬೇಕಿದ್ದ ಆಟಗಾರರಿಗೆ ನಿರಾಶೆ ಉಂಟಾಯಿತು. ಆದರೆ ಕೋವಿಡ್ ಪರಿಸ್ಥಿತಿ ಇದ್ದರಿಂದ ಎಲ್ಲವನ್ನು ಸ್ವೀಕರಿಸುವಂತಾಯಿತು. ಆದರೆ ಈ ಬಾರಿಯ ಒಲಂಪಿಕ್ಸ್ ಕೈಬಿಡ ಬಾರದೆಂದು ಕಮಿಟಿ ನಿರ್ಧಾರ ಮಾಡಿ 2021 ನೇ ಸಾಲಿನ ಒಲಂಪಿಕ್ಸ್ ದಿನಾಂಕವನ್ನು ಘೋಷಿಸಿತ್ತು. ಒಲಂಪಿಕ್ಸ್ ಘೋಷಣೆಯಾದ ಕ್ಷಣವೇ ಎಲ್ಲ ಆಟಗಾರರು ತಮ್ಮ ಸಿದ್ಧತೆಯನ್ನು ಶುರು ಮಾಡಿಕೊಂಡರು. ಆದರೆ ಈ ಬಾರಿಯೂ ಒಲಂಪಿಕ್ಸ್ ನಡೆಯಬಾರದು ಎನ್ನುವುದರ ಬಗ್ಗೆ ಹಲವು ಕೂಗು ಕೇಳಿ ಬರುತ್ತಿದೆ.

ಜುಲೈ 23ಕ್ಕೆ ನಡೆಯಬೇಕಿದ್ದ ಟೋಕಿಯೊ ಒಲಂಪಿಕ್ಸ್
ಒಲಂಪಿಕ್ಸ್ ರದ್ದುಗೊಳಿಸಲು ಆನ್ ಲೈನ್ ಅಭಿಯಾನ

ಕಳೆದ ವರ್ಷ ಇಂಟರ್ ನ್ಯಾಷನಲ್ ಒಲಂಪಿಕ್ಸ್ ಟೋಕಿಯೋದಲ್ಲಿ ನಡೆಯ ಬೇಕಾಗಿತ್ತು. ಆದರೆ ಕೋವಿಡ್ ಕಾರಣದಿಂದ ರದ್ದುಗೊಳಿಸಿದ್ದರು. ಒಲಂಪಿಕ್ ಆಟಗಳನ್ನು ಒಂದು ವರ್ಷಕ್ಕೆ ಮುಂದೂಡಲಾಗಿತ್ತು. ಈ ಸಾಲಿನ ಒಲಂಪಿಕ್ಸ್ ಜುಲೈ 23 ರಂದು ನಡೆಸಲು ಸಕಲ ಸಿದ್ದತೆಗಳನ್ನು ಇಂಟರ್​ನ್ಯಾಷನಲ್ ಒಲಂಪಿಕ್ ಕಮಿಟಿ ಹಾಗೂ ಭಾಗವಹಿಸಬೇಕಾದ ಎಲ್ಲ ಆಟಗಾರರು ರೆಡಿ ಇದ್ದರು. ಆದರೆ ಕೋವಿಡ್-19 ರ ವೇಗ ಈಗಲೂ ಕೂಡ ನಿಂತಿಲ್ಲ ಮತ್ತು ಅದು ಜನರ ಜೀವನವನ್ನು ಶೋಚನೀಯಗೊಳಸುತ್ತಿರುವುದು ಕಾಣಿಸುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ, ಒಲಂಪಿಕ್ಸ್ ಮೇಲೆ ಮತ್ತೊಮ್ಮೆ ಜಪಾನ್‌ನಲ್ಲಿ ಬಿಕ್ಕಟ್ಟು ಕಂಡುಬರುತ್ತಿದೆ. ಜಪಾನ್‌ನಲ್ಲಿ ಈ ಆಟಗಳನ್ನು ಆಯೋಜಿಸುವುದರ ವಿರುದ್ಧ ಆನ್‌ಲೈನ್ ಅಭಿಯಾನ ನಡೆಯುತ್ತಿದ್ದು, ಕಳೆದ ಕೆಲವು ದಿನಗಳಲ್ಲಿ ಒಲಂಪಿಕ್ಸ್ ರದ್ಧಿಗಾಗಿ ಜನರು ಅರ್ಜಿಗೆ ಸಹಿ ಹಾಕಿದ್ದಾರೆ.

ಎರಡು ದಿನಗಳಲ್ಲಿ ಲಕ್ಷಾಂತರ ಜನರಿಂದ ಬೆಂಬಲ
2 ಲಕ್ಷ ಜನಗಳಿಂದ ಒಲಂಪಿಕ್ ರದ್ದಿಗೆ ಒತ್ತಾಯ

2021ನೆ ಸಾಲಿನ ಇಂಟರ್​ನ್ಯಾಷನಲ್ ಒಲಂಪಿಕ್ ದಿನಾಂಕವನ್ನು ಘೋಷಿಸಿದ ದಿನದಿಂದ ಇದರ ಬಗ್ಗೆ ಚರ್ಚೆ ನಡೆಯುತ್ತಲೆ ಇತ್ತು. ಜಪಾನ್ ನ ಟೋಕಿಯೊದಲ್ಲಿ ನಡೆಯಬೇಕಿದ್ದ ಕ್ರೀಡಕೂಟಕ್ಕೆ ಜಪಾನಿಯರೆ “ಬಿಗ್ ನೊ” ಎನ್ನುತ್ತಿದ್ದಾರೆ. ಜಪಾನ್ ನಲ್ಲಿ ನಡೆಯುತ್ತಿರುವ ನಾಲ್ಕನೆ ಅಲೆಗೆ ಹೆದರಿ ಅಲ್ಲಿನ ಜನತೆ ಒಲಂಪಿಕ್ಸ್ ಬ್ಯಾನ್ ಗೆ ಕರೆ ನೀಡಿದ್ದಾರೆ. ಈ ಒಲಿಂಪಿಕ್ ವಿರೋಧಿ ಅಭಿಯಾನ ಪ್ರಾರಂಭಿಸಿ ಕೇವಲ ಎರಡು ದಿನಗಳು ಕಳೆದಿವೆ ಆದರೆ ವಿರೋಧವಾಗಿ 2,00,000 ಸಹಿ ಗುರಿಯನ್ನು ದಾಟಿ 2,10,000 ರ ಸಂಖ್ಯೆಯನ್ನು ಮುಟ್ಟಿದೆ. ಸಾಂಕ್ರಾಮಿಕ ರೋಗದ ನಾಲ್ಕನೇ ಅಲೆ ಮತ್ತು ವ್ಯಾಕಿನ್ ನಿಧಾನಗತಿಯ ಕಾರಣದಿಂದಾಗಿ, ಟೋಕಿಯೊದಲ್ಲಿ ವಾಸಿಸುವ ಅನೇಕ ಜನರು ಈ ವರ್ಷ ಒಲಿಂಪಿಕ್ ಕ್ರೀಡಾಕೂಟವನ್ನು ನಡೆಸಬಾರದು ಎಂದು ಒತ್ತಾಯಿಸುತ್ತಿದ್ದಾರೆ.

ಅಭಿಯಾನಕ್ಕೆ ತಲೆ ಕೆಡಿಸಿಕೊಳ್ಳದ ಕ್ರೀಡಾ ಸಮಿತಿ
ಕ್ರೀಡಾಕೂಟ ಆಯೋಜಿಸಲು ಅಂತಿಮ ನಿರ್ಧಾರ

ಇಷ್ಟೆಲ್ಲ ಬೆಳವಣಿಗೆಯ ನಡುವೆಯೂ ಆಟಗಳನ್ನು ಆಯೋಜಿಸಲಾಗುವುದು ಎಂದು ಕ್ರೀಡಾಕೂಟದ ಸಂಘಟಕರು ಸತತವಾಗಿ ಹೇಳುತ್ತಲೇ ಇದ್ದಾರೆ. ಇಂಟರ್​ನ್ಯಾಷನಲ್ ಒಲಂಪಿಕ್ ಕಮಿಟಿ ಕಡೆಯಿಂದ ಆಟಗಾರರು ಹಾಗೂ ಅಧಿಕಾರಿಗಳಿಗಾಗಿ ವಿಶೇಷವಾದ ಕೊವಿಡ್ -19 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಸಿದ್ಧತೆಯಲ್ಲಿರುವ ಆಟಗಾರರಿಗೆ ಯಾವುದೇ ತಪ್ಪು ಸೂಚನೆಗಳಿಗೆ ಕಿವಿ ಕೊಡಬೇಡಿ ಎಂದು ತಿಳಿಸಿದ್ದಾರೆ. ಅಲ್ಲದೆ ಕಮಿಟಿಯ ಪರವಾಗಿ ನಿಂತ ಫೈಜರ್ ಮತ್ತು ಅದರ ಜರ್ಮನ್ ಪಾಲುದಾರಿಕೆ ಕಂಪನಿ ಬಯೋಟೆಕ್ ಗುರುವಾರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಆಟಗಾರರಿಗೆ ತಮ್ಮ ಲಸಿಕೆ ನೀಡಲು ಸಿದ್ಧವಾಗಿದೆ ಎಂದು ಹೇಳುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಕ್ರೀಡಕೂಟದಲ್ಲಿ ಭಾಗವಹಿಸ ಬೇಕಾದ ಆಟಗಾರಗಿಗೆ ಲಸಿಕೆ ನೀಡಲು ಹಾಗೂ ಆಟಗಾರರು ಕ್ರೀಡಾಂಗಣಕ್ಕೆ ಬಂದ ಮೇಲೆ ಬಯೋ ಬಬಲ್ ಸೃಷ್ಟಿ ಮಾಡಿ ಆಟಕ್ಕೆ ಪ್ರವೇಶ ಕಲ್ಪಿಸಲು ಕಮಿಟಿ ತೀರ್ಮಾನ ಮಾಡಿದೆ.

ಜಪಾನ್ ದೇಶ ಕೋವಿಡ್ ನಾಲ್ಕನೆ ಅಲೆಯನ್ನು ಅನುಭವಿಸುತ್ತಿರುವಾಗ ಕ್ರೀಡಕೂಟ ಬೇಡ ಎನ್ನುವುದು ಜಪಾನಿಯರ ಕೂಗಾದರೆ, ಕೂಟವನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಸಬಾರದು ಎನ್ನುವುದು ಕಮಿಟಿಯ ಹಠ. ಎಲ್ಲ ಮುನ್ನೆಚ್ಚರಿಕೆ ಇದ್ದರೂ ಕೊರೊನಾ ತನ್ನ ಪ್ರಸರಣವನ್ನು ಹಬ್ಬಿರುವ ಹಲವು ಉದಾಹರಣೆಗಳನ್ನು ಮುಂದಿಟ್ಟುಕೊಂಡು ಜಪಾನ್ ಸರ್ಕಾರ ಹಾಗೂ ಒಲಂಪಿಕ್ ಕಮಿಟಿ ನಿರ್ಧಾರ ಕೈಗೆತ್ತಿಕೊಳ್ಳ ಬೇಕಿದೆ.

ಕೋವಿಡ್ ನಾಲ್ಕನೇ ಅಲೆಯಲ್ಲಿ ಜಪಾನ್ ಉಸಿರಾಡುತ್ತಿರುವಾಗ ಒಲಂಪಿಕ್ ದೊಡ್ಡ ಗೊಂದಲವಾಗಿ ಉಳಿದಿದೆ. ಇನ್ನೊಂದೆಡೆ ಒಲಂಪಿಕ್ ಕ್ರೀಡಕೂಟ ನಡೆಯುತ್ತೋ ಇಲ್ಲವೋ ಎನ್ನುವ ಗೊಂದಲದಲ್ಲೇ ಕ್ರೀಡಾ ಪಟುಗಳು ತಯಾರಿಯನ್ನು ನಡೆಸುತ್ತಿದ್ದಾರೆ.

The post ನಾಲ್ಕನೇ ಅಲೆಗೆ ಜಪಾನ್ ತತ್ತರ; ಬೆಡ್​ ಸಿಗದೇ ಮನೆಯಲ್ಲೇ ಹಲವರ ಸಾವು.. ಏನಾಯ್ತು ಅಲ್ಲಿ? appeared first on News First Kannada.

Source: newsfirstlive.com

Source link