ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೀದರ್​ ಯುವಕ ಶನಿವಾರ ಮಾಂಜ್ರಾ ನದಿಯಲ್ಲಿ ಶವವಾಗಿ ಪತ್ತೆಯಾದ!! | Bidar’s missing youth found dead in Manjra River at Koutha near Aurad ARB


ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೀದರ್​ ಯುವಕ ಶನಿವಾರ ಮಾಂಜ್ರಾ ನದಿಯಲ್ಲಿ ಶವವಾಗಿ ಪತ್ತೆಯಾದ!!

ಸಾಂದರ್ಭಿಕ ಚಿತ್ರ

ನಾಲ್ಕು ದಿನಗಳ ಹಿಂದೆ ಬೀದರ್ (Bidar) ಜಿಲ್ಲೆ ‌ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದಿಂದ ನಾಪತ್ತೆಯಾಗಿದ್ದ ಯುವಕನೊಬ್ಬ ಶನಿವಾರದಂದು ಇದೇ ಜಿಲ್ಲೆಯ ಔರಾದ್ (Aurad) ತಾಲೂಕಿನ ಕೌಠಾದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. 24-ವರ್ಷ ವಯಸ್ಸಿನ ಸುನಿಲ್ ಪೌಲ್ (Sunil Paul) ದೇಹ ಕೌಠಾದ ಮೂಲಕ ಹರಿಯುವ ಮಾಂಜ್ರಾ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುದ್ದಿ ಗೊತ್ತಾದ ಮೇಲೆ ಸ್ಥಳಕ್ಕೆ ಧಾವಿಸಿದ ಮೃತನ ಕುಟುಂಬದ ಸದಸ್ಯರು ರೋದಿಸುತ್ತಿದ್ದ ದೃಶ್ಯ ಸ್ಥಳದಲ್ಲಿ ನೆರೆದಿದ್ದ ಜನರ ಕಣ್ಣಲ್ಲೂ ನೀರು ತರಿಸಿತ್ತು. ಸುನೀಲ್ ಈಜಲು ಹೋಗಿ ನೀರು ಪಾಲಾದನೋ ಅಥವಾ ಯಾರಾದರೂ ಕೊಲೆಮಾಡಿ ದೇಹವನ್ನು ನದಿಯಲ್ಲಿ ಬಿಸಾಡಿದರೋ ಅನ್ನುವುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಜನವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮನೆ ಮತ್ತು ಕಚೇರಿಗಳನ್ನು ಪೇಂಟ್ ಮಾಡುವಾಗ ಅಪಾಯಕಾರಿ ಅವಗಢಗಳು ಸಂಭವಿಸುವುದು ಆಗಾಗ ವರದಿಯಾಗುತ್ತಿರುತ್ತವೆ. ಇಂಥದೊಂದು ದಾರುಣ ಘಟನೆ ಶಿವಮೊಗ್ಗದಿಂದ ನಮಗೆ ಲಭ್ಯವಾಗಿದೆ. ಜಿಲ್ಲೆಯ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಹೆಸರಿನ ಗ್ರಾಮದಲ್ಲಿ 39 ವರ್ಷ ವಯಸ್ಸಿನ ಮಾಲತೇಶ್ ಎಂಬ ಪೇಂಟರ್ ತನ್ನ ಕೆಲಸದಲ್ಲಿ ನಿರತನಾಗಿದ್ದಾಗ ವಿದ್ಯುತ್ ಪ್ರವಹಿಸಿ ಮರಣವನ್ನಿಪ್ಪಿದ್ದಾನೆ. ತಿಪ್ಪೇಸ್ವಾಮಿ ಹೆಸರಿನ ವ್ಯಕ್ತಿಗೆ ಸೇರಿದ ಬಾರ್ ಮತ್ತು ರೆಸ್ಟುರಾಂಟ್ನಲ್ಲಿ ಬಣ್ಣ ಬಳಿಯುವಾಗ 11 ಕೆವಿ ವಿದ್ಯುತ್ ಕೇಬಲ್ ತಗುಲಿ ಮಾಲತೇಶ್ ಎಲೆಕ್ಟ್ರೋಕ್ಯೂಟ್ ಆಗಿದ್ದಾನೆ. ಪೇಂಟರ್ ಸಾವಿಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಪ್ರವಹಿಸಿ ಮತ್ತೊಬ್ಬ ವ್ಯಕ್ತಿ ಸತ್ತಿರುವ ದುರ್ಘಟನೆ ಕಲಬುರಗಿಯಿಂದ ವರದಿಯಾಗಿದೆ. ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಮುಕರಂಬಾ ಗ್ರಾಮದಲ್ಲಿ ಯುವ ರೈತನೊಬ್ಬ ಹೊಲದಲ್ಲಿ ಕೆಲಸ ಮಾಡುವಾಗ ತುಂಡಾಗಿ ಜೋತಾಡುತ್ತಿದ್ದ ತಂತಿಯ ಸಂಪರ್ಕಕ್ಕೆ ಬಂದು ಸಾವಿಗೀಡಾಗಿದ್ದಾನೆ. ಮೃತ ರೈತನನ್ನು 24 ವರ್ಷ ವಯಸ್ಸಿನ ಶಿವಕುಮಾರ ಎಂದು ಗುರುತಿಸಲಾಗಿದೆ.

ಶಿವಕುಮಾರ ಹೊಲದ ಮೇಲಿಂದ ಹಾದು ಹೋಗಿದ್ದ ವಿದ್ಯುತ್ ತಂತಿ ಕಡಿದು ಜೋತಾಡುತ್ತಿದ್ದ ಬಗ್ಗೆ ಜೆಸ್ಕಾಂ ಸಿಬ್ಬಂದಿಯ ಗಮನಕ್ಕೆ ತಂದರೂ ಅವರು ನಿರ್ಲಕ್ಷ್ಯ ವಹಿಸಿ ಸರಿಪಡಿಸದ ಕಾರಣ ದುರಂತ ಸಂಭವಿಸಿದೆ ಎಂದು ಮುಕ್ರಂಬಾ ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *