ಚಿಕ್ಕಮಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 600 ಪ್ರಕರಣಗಳು ಪತ್ತೆಯಾಗುತ್ತಿದ್ದು, ಜಿಲ್ಲಾಡಳಿತ ಮತ್ತಷ್ಟು ಟಫ್ ರೂಲ್ಸ್ ಜಾರಿಗೆ ತರುವ ಮೂಲಕ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಮುಂದಾಗಿದೆ. ಐದು ದಿನಗಳ ಕಾಲ ಇಡೀ ಚಿಕ್ಕಮಗಳೂರು ಜಿಲ್ಲೆಯನ್ನ ಸ್ತಬ್ಧವಾಗಿಸುವಂತೆ ಜಿಲ್ಲಾಧಿಕಾರಿ ರಮೇಶ್ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಸ್‍ಪಿ, ಡಿಸಿ ಹಾಗೂ ಸಿಇಒ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮೇ 20ರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆಯವರೆಗೆ ಇಡೀ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿರಲಿದೆ. ಜನ ಸರ್ಕಾರದ ಜೊತೆ ಸಹಕಾರ ನೀಡಬೇಕು ಎಂದು ಜಿಲ್ಲಾಡಳಿತ ಸಾರ್ವಜನಿಕರಿಗೆ ಮನವಿ ಮಾಡಿದೆ.

ಜಿಲ್ಲೆಯಲ್ಲಿ ಹಾಲು, ಮೆಡಿಕಲ್ ಸ್ಟೋರ್ ಬಿಟ್ಟು ಉಳಿದೆಲ್ಲ ಅಂಗಡಿ-ಮುಂಗಟ್ಟುಗಳನ್ನು ಐದು ದಿನಗಳ ಕಾಲ ಸಂಪೂರ್ಣ ಬಂದ್ ಮಾಡಿ ಆದೇಶಿಸಲಾಗಿದೆ. ಹಾಲು, ಮೆಡಿಕಲ್ ಸ್ಟೋರ್ ಗಳಿಗೆ ಬೈಕ್ ಅಥವಾ ಕಾರಿನಲ್ಲಿ ಬರುವಂತಿಲ್ಲ ನಡೆದೇ ಬರಬೇಕು. ಒಂದು ವೇಳೆ ಬಂದರೆ ಗಾಡಿಯನ್ನು ಸೀಜ್ ಮಾಡುವುದಾಗಿ ಎಚ್ಚರಿಸಿದ್ದಾರೆ. ಈಗಾಗಲೇ ಜಿಲ್ಲಾದ್ಯಂತ ಮೇ 20 ರಿಂದ 24ರ ಅವಧಿಗೆ ಸುಮಾರು 200 ವಿವಾಹಗಳಿಗೆ ಅನುಮತಿ ನೀಡಿದ್ದು, ಮೇ 24ರ ನಂತರ ಮೇ 31ರವರೆಗೆ ಯಾವುದೇ ವಿವಾಹಗಳಿಗೆ ಅನುಮತಿ ನೀಡುವುದಿಲ್ಲ. ಮದುವೆಯನ್ನು ಮುಂದೂಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದು, ಅನುಮತಿ ಪಡೆದಿರೋ ಮದುವೆಗಳಿಗೂ ಕೂಡ ಕೇವಲ 10 ಜನರಷ್ಟೆ ಇರುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಮೃತರ ಅಂತ್ಯಸಂಸ್ಕಾರಕ್ಕೆ ಐದು ಜನ ಮಾತ್ರ ಇರಬೇಕೆಂದು ಸೂಚಿಸಿದ್ದಾರೆ. ಹೊರ ಜಿಲ್ಲೆಯಿಂದ ಬಂದವರು ಜಿಲ್ಲಾ ಗಡಿಯ ಚೆಕ್‍ಪೋಸ್ಟ್ ನಲ್ಲಿ ಸಂಪೂರ್ಣ ಮಾಹಿತಿ ನೀಡಿ, ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ಇರಬೇಕು. ಇಲ್ಲವಾದರೆ ಕೇಸ್ ದಾಖಲಿಸಲಾಗುವುದು. ಆಸ್ಪತ್ರೆಗಳಿಗೆ ಹೋಗುವವರು ಆಸ್ಪತ್ರೆಯ ದಾಖಲೆಗಳನ್ನ ತೋರಿಸಿ ಹೋಗಬೇಕು. ಕೊರೊನಾ ನಿಯಂತ್ರಣಕ್ಕಾಗಿ ಮೇ 20ರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆಯವರೆಗೆ ಕಾಫಿನಾಡು ಸಂಪೂರ್ಣ ಸ್ತಬ್ಧವಾಗಿರಲಿದೆ ಎಂದರು.

ಈಗಾಗಲೇ ಜಿಲ್ಲೆಯ ಹಳ್ಳಿಗಳಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಜಿಲ್ಲೆಯ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ 50ಕ್ಕೂ ಹೆಚ್ಚು ಕೇಸ್ ಪತ್ತೆಯಾಗಿವೆ. ಒಂದೊಂದು ಹಳ್ಳಿಗಳಲ್ಲಿ 75, 91, 123 ಕೇಸ್‍ಗಳು ಬಂದಿದ್ದು, ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಜೋರಾಗಿದೆ. ಆದ್ದರಿಂದ ಜಿಲ್ಲಾಡಳಿತ ಹಾಲಿ ಇದ್ದ ಟಫ್ ರೂಲ್ಸ್ ಜೊತೆ ಮತ್ತಷ್ಟು ಕಠಿಣ ಕಾನೂನುಗಳ ಮೂಲಕ ಕೊರೊನಾ ಕಟ್ಟಿಹಾಕಲು ಮುಂದಾಗಿದೆ.

The post ನಾಲ್ಕು ದಿನ ಚಿಕ್ಕಮಗಳೂರು ಸಂಪೂರ್ಣ ಸ್ತಬ್ಧ- ಜಿಲ್ಲಾಧಿಕಾರಿ ಆದೇಶ appeared first on Public TV.

Source: publictv.in

Source link