ಐತಿಹಾಸಿಕ ಝರಣಿ ಗುಹಾ ದೇವಾಲಯದ ಉಗ್ರನರಸಿಂಹ ಸ್ವಾಮಿ
ಬೀದರ್: ಜಿಲ್ಲೆಯ ಐತಿಹಾಸಿಕ ಝರಣಿ ಗುಹಾ ದೇವಾಲಯದ ಉಗ್ರನರಸಿಂಹ ಸ್ವಾಮಿಯ(ugra narasimha) ದರ್ಶನಕ್ಕೆ ಇಂದಿನಿಂದ (ಫೆಬ್ರವರಿ 15) ಅವಕಾಶ ನೀಡಲಾಗಿದೆ. ನಾಲ್ಕು ವರ್ಷದ ಬಳಿಕ ಉಗ್ರನರಸಿಂಹನ ದರ್ಶನಕ್ಕೆ ಭಕ್ತರಿಗೆ(Devotees) ಅವಕಾಶ ನೀಡಲಾಗುತ್ತಿದೆ. ಎದೆ ಎತ್ತರದ ನೀರಿನಲ್ಲಿ 200 ಮೀಟರ್ ಸಾಗಿ ದೇವರ ದರ್ಶನ ಪಡೆಯಲಿಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗುಹೆಯಲ್ಲಿ ನೀರಿನ ಸಮಸ್ಯೆ, ಆಕ್ಸಿಜನ್(Oxygen) ಸಮಸ್ಯೆಯಿಂದ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ಸದ್ಯ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೆಳಗ್ಗೆ ಏಳು ಗಂಟೆಯಿಂದ ಮುಂಜಾನೆ 10 ಗಂಟೆವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ತೆಲಂಗಾಣ, ಮಹಾರಾಷ್ಟ್ರದಿಂದ ಅತಿ ಹೆಚ್ಚು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ಮುಖ್ಯವಾಗಿ ಶನಿವಾರ, ರವಿವಾರದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ.
ಆರು ನೂರು ವರ್ಷದಷ್ಟು ಪುರಾತನ ದೇವಸ್ಥಾನ ಇದಾಗಿದೆ. ಮಳೆಗಾಲದ ಕೊರತೆಯಿಂದ ಗುಹೆ ಒಳಗಡೆ ನೀರು ಕಡಿಮೆಯಾಗಿತ್ತು. ಆಕ್ಸಿಜನ್ ಪೈಪ್ ಕೂಡಾ ಕೆಟ್ಟು ಹೋಗಿತ್ತು ಅದನ್ನು ರೀಪೇರಿ ಮಾಡಿ ದರ್ಶನಕ್ಕೆ ಅವಕಾಶ ಕೊಡಬೇಕು ಅನ್ನುವಷ್ಟರಲ್ಲಿ ಕೊವಿಡ್ ಬಂತು. ಹೀಗಾಗಿ ನಾಲ್ಕು ವರ್ಷದ ಬಳಿಕ ದೇವಸ್ಥಾನ ಆರಂಭಿಸಿದ್ದೇವೆ. ನಮಗೂ ಖುಷಿಯಾಗಿದೆ, ಭಕ್ತರಿಗೂ ಕೂಡಾ ಖುಷಿಯಾಗಿದೆ ಎಂದು ದೇವಾಲಯದ ಅರ್ಚಕರಾದ ನರೇಶ್ ಪಾಠಕ್ ತಿಳಿಸಿದ್ದಾರೆ.
ಈ ದೇವಸ್ಥಾನಕ್ಕೆ ಎರಡು ಸಲ ಬಂದಿದ್ದೆ ದೇವರ ದರ್ಶನ ಸಿಗದೆ ನೀರಾಸೆಯಿಂದ ಹೋಗಬೇಕಾಗಿತ್ತು. ಆದರೆ ಈ ಸಲ ಬಂದಿದ್ದಕ್ಕೆ ಸಾರ್ಥಕವಾಯಿತು. ನೀರಿನಲ್ಲಿ ಹೋಗಿ ದೇವರ ದರ್ಶನ ಪಡೆದುಕೊಂಡೆ ನನ್ನ ಜನ್ಮ ಸಾರ್ಥಕವಾಯಿತು ಎಂದು ಬೆಂಗಳೂರಿನಿಂದ ಬಂದಿದ್ದ ಭಕ್ತರಾದ ಪ್ರವೀಣ್ ಕುಮಾರ್ ಹೇಳಿದ್ದಾರೆ.