ನವದೆಹಲಿ: ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಕೇಂದ್ರ ಸರ್ಕಾರದ ಸಂಪುಟ ವಿಸ್ತರಣೆ ನಾಳೆಯೇ ನಡೆಯಲಿದ್ದು 20ಕ್ಕೂ ಹೆಚ್ಚು ನಾಯಕರು ಸಂಪುಟ ಸೇರುವ ನಿರೀಕ್ಷೆಗಳಿವೆ. ಈ ಹಿನ್ನೆಲೆ ಇಂದು ಸಂಜೆ 5 ಗಂಟೆಗೆ ಮಹತ್ವದ ಸಭೆ ನಡೆಯಲಿದ್ದು ಕೇಂದ್ರ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್, ಗೃಹಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸೇರಿದಂತೆ ಹಲವು ಪ್ರಮುಖ ಸಚಿವರು ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ.

ಕನಿಷ್ಠ 22 ಸಚಿವರನ್ನ ಈ ಬಾರಿ ಸಂಪುಟಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆ ಇದ್ದು ಮುಂದಿನ ವರ್ಷದ ಅಂದ್ರೆ 2022ರ ಚುನಾವಣೆಗಳನ್ನ ಗಮನದಲ್ಲಿಟ್ಟುಕೊಂಡು ಈ ಬಾರಿಯ ಸಂಪುಟ ವಿಸ್ತರಣೆ ನಡೆಯಲಿದೆ ಎನ್ನಲಾಗಿದೆ. ಇನ್ನು ನಿನ್ನೆಯಷ್ಟೇ ಮೋದಿ, ಅಮಿತ್ ಶಾ, ಬಿಜೆಪಿ ಜನರಲ್ ಸೆಕ್ರೆಟರಿ ಬಿ.ಎಲ್. ಸಂತೋಷ್ ಇದೇ ವಿಚಾರವಾಗಿ ಒಂದು ಹಂತದ ಸಭೆ ನಡೆಸಿದ್ದಾರೆ.

ಯಾರಿಗೆ ಒಲಿಯಲಿದೆ ಕೇಂದ್ರ ಸಚಿವ ಸ್ಥಾನ..?
ಬಿಜೆಪಿ ನಾಯಕರಾದ ಸರ್ಬಾನಂದ್ ಸೊನೊವಾಲ, ಜ್ಯೋತಿರಾದಿತ್ಯ ಸಿಂಧಿಯಾ, ಸುಶೀಲ್ ಮೋದಿ ಕ್ಯಾಬಿನೆಟ್​ನಲ್ಲಿ ಸ್ಥಾನ ಪಡೆಯುವ ಪ್ರಮುಖರು ಎನ್ನಲಾಗ್ತಿದೆ. ಇದಲ್ಲದೇ ಇತ್ತೀಚೆಗೆ ಮೋದಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನ ಭೇಟಿಯಾಗಿ ಜೆಡಿಯುನಿಂದ ಇಬ್ಬರು ನಾಯಕರನ್ನ ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದ್ದು.. ಇದಕ್ಕೆ ಜೆಡಿಯು ನಕಾರ ಎತ್ತಿದೆಯಂತೆ. ಹೀಗಾಗಿ ಜೆಡಿಯುನಿಂದ ಇಬ್ಬರಿಗೂ ಹೆಚ್ಚು ನಾಯಕರನ್ನ ಕ್ಯಾಬಿನೆಟ್​ನಲ್ಲಿ ಕೂರಿಸುವಲ್ಲಿ ಜೆಡಿಯು ಯಶಸ್ವಿಯಾಗಬಹುದು ಎಂದು ಅಂದಾಜಿಸಲಾಗಿದೆ.

ಉತ್ತರ ಪ್ರದೇಶಕ್ಕೆ ಬಂಪರ್..?
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಾಗಲಿದೆ. ಅಲ್ಲದೇ ಕೊರೊನಾ ನಿಯಂತ್ರಣದ ವಿಚಾರದಲ್ಲಿ ರಾಜ್ಯದಿಂದ ಅಷ್ಟೇನೂ ಉತ್ತಮ ಫಲಿತಾಂಶ ಹೊರಬಿದ್ದಿಲ್ಲ ಅನ್ನೋ ಆರೋಪವಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ರಾಜ್ಯಕ್ಕೆ ಕೇಂದ್ರ ಬಂಪರ್ ನೀಡುವ ನಿರೀಕ್ಷೆ ಇದೆ. ಸದ್ಯ ಕ್ಯಾಬಿನೆಟ್​​ನಲ್ಲಿ ಪ್ರಧಾನಿ ಮೋದಿಯೂ ಸೇರಿದಂತೆ 53 ಮಂದಿ ಇದ್ದು 79 ರವರೆಗೆ ಈ ಸಂಖ್ಯೆಯನ್ನ ವಿಸ್ತರಣೆ ಮಾಡಲು ಅವಕಾಶವಿದೆ.

ಶಿವಸೇನಾ ನಾಯಕರಿಗೂ ಇದೆಯಾ ಅವಕಾಶ..?
ಹರ್​ದೀಪ್​ ಪುರಿ, ಪಿಯೂಷ್​ ಗೋಯಲ್​ರಂಥ ಕೆಲವು ಸಚಿವರು ಹೆಚ್ಚುವರಿ ಜವಾಬ್ದಾರಿಗಳನ್ನ ಹೊಂದಿದ್ದು ಈ ಜವಾಬ್ದಾರಿಗಳಲ್ಲಿ ಕೆಲವು ಕಡಿತವಾಗುವ ಸಾಧ್ಯತೆ ಇದೆ. ಶಿವಸೇನೆ ಪಕ್ಷದಿಂದ ಯಾವುದೇ ನಾಯಕರನ್ನ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗ್ತಿದೆ.

The post ನಾಳೆಯೇ ಕೇಂದ್ರ ಸಂಪುಟ ವಿಸ್ತರಣೆ: ಯಾರಿಗೆಲ್ಲ ಒಲಿಯಲಿದೆ ಸಚಿವ ಸ್ಥಾನ..? appeared first on News First Kannada.

Source: newsfirstlive.com

Source link