ನಾಳೆ ವೀರಪುತ್ರ ಬಿಪಿನ್ ರಾವತ್ ಅಂತ್ಯಕ್ರಿಯೆ -ಇಂದು ಏನೆಲ್ಲಾ ನಡೆಯುತ್ತೆ..?


ನವದೆಹಲಿ: ಇಡೀ ದೇಶವೇ ದುಃಖದಲ್ಲಿದೆ.. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನಿಧನದ ಸುದ್ದಿಯಿಂದ 130 ಕೋಟಿ ಭಾರತೀಯರು ಶಾಕ್​ಗೊಳಗಾಗಿದ್ದಾರೆ. ತಮಿಳುನಾಡಿನ ದಟ್ಟಾರಣ್ಯದಲ್ಲಿ ನಡೆದ ಹೆಲಿಕಾಪ್ಟರ್ ದುರಂತ ಸೇನೆ ಮುಖ್ಯಸ್ಥನನ್ನೇ ಆಹುತಿ ಪಡೆದಿದೆ. ಪತ್ನಿ ಜೊತೆಗೆ ತೆರಳ್ತಿದ್ದ ಬಿಪಿನ್ ರಾವತ್ ಬಾರದ ಲೋಕಕ್ಕೆ ತೆರಳಿದ್ದಾರೆ.

ಬಿಪಿನ್ ರಾವತ್, ಪತ್ನಿ ಮೃತದೇಹ ಇಂದು ದೆಹಲಿಗೆ ಶಿಫ್ಟ್
ಸಂಜೆ ರಾಷ್ಟ್ರರಾಜಧಾನಿಯಲ್ಲಿ ರಾವತ್​ಗೆ ಅಂತಿಮ ನಮನ

ನಿನ್ನೆ ತಮಿಳುನಾಡಿನ ಕೂನೂರು ಅರಣ್ಯ ಪ್ರದೇಶದಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸಿಡಿಎಸ್ ಬಿಪಿನ್ ರಾವತ್ ಮೃತದೇಹ ದೆಹಲಿಗೆ ಶಿಫ್ಟ್ ಆಗಲಿದೆ. ಇಂದು ಬೆಳಗ್ಗೆ ತಮಿಳುನಾಡಿನ ವೆಲ್ಲಿಂಗ್ಟನ್​ನಲ್ಲಿ ಪುಷ್ಪನಮನದ ಬಳಿಕ ಪಾರ್ಥಿವ ಶರೀರವನ್ನು ದೆಹಲಿಗೆ ರವಾನಿಸಲಾಗುತ್ತೆ. ವೆಲ್ಲಿಂಗ್ಟನ್​ನ ಮದ್ರಾಸ್ ರೆಜಿಮೆಂಟ್​ ಸೆಂಟರ್​​ನಲ್ಲಿ ಅಂತಿಮ ನಮನ ಸಲ್ಲಿಸಿದ ಬಳಿಕ ಸೇನಾ ವಿಮಾನದ ಮೂಲಕ ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ರಾವತ್ ಪಾರ್ಥಿವ ಶರೀರಗಳನ್ನು ಶಿಫ್ಟ್ ಮಾಡಲಾಗುತ್ತೆ.

ದೆಹಲಿಯಲ್ಲಿ ಅಂತಿಮ ನಮನ
ಇಂದು ಸೇನೆಯ ವಿಶೇಷ ವಿಮಾನದ ಮೂಲಕ ತಮಿಳುನಾಡಿನಿಂದ ದೆಹಲಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತೆ. ಸಂಜೆ ವೇಳೆಗೆ ರಾವತ್ ಮೃತದೇಹ ದೆಹಲಿ ತಲುಪಲಿದೆ. ನಾಳೆ ಬೆಳಗ್ಗೆ ಬಿಪಿನ್ ರಾವತ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಬಹುದು. ಬಳಿಕ ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ರಾವತ್ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಗುತ್ತೆ. ದೆಹಲಿಯ ಕಾಮ್​ರಾಜ್ ಮಾರ್ಗ್​ನಿಂದ ಬ್ರಾರ್ ಸ್ಕ್ವೇರ್​ನಲ್ಲಿರೋ ಚಿತಾಗಾರದವರೆಗೆ ಮೆರವಣಿಗೆ ಮಾಡಲಾಗುತ್ತೆ. ದೆಹಲಿಯ ಕಂಟೋನ್​ಮೆಂಟ್ ಪ್ರದೇಶದಲ್ಲಿರೋ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ರಾವತ್ ದಂಪತಿಗೆ ವಿದಾಯ ಹೇಳಲಾಗುತ್ತೆ.

ಉಭಯ ಸದನಕ್ಕೆ ಮಾಹಿತಿ ನೀಡಲಿದ್ದಾರೆ ರಾಜನಾಥ್ ಸಿಂಗ್
ಸಿಡಿಎಸ್ ಬಿಪಿನ್ ರಾವತ್ ನಿಧನದ ಬಗ್ಗೆ ರಕ್ಷಣಾ ಸಚಿವ ರಾಜನಾತ್ ಸಿಂಗ್ ಲೋಕಸಭೆಯ ಉಭಯ ಸದನಗಳಿಗೆ ಮಾಹಿತಿ ನೀಡಲಿದ್ದಾರೆ. ಸಿಡಿಎಸ್ ಬಿಪಿನ್ ರಾವತ್ ಹಾಗೂ ಮಧುಲಿಕಾ ರಾವತ್ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ರಾವತ್ ದಂಪತಿ ಪುತ್ರಿಯರಾದ ಕೃತಿಕಾ ರಾವತ್ ಹಾಗೂ ತಾರಿಣಿ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಒಟ್ನಲ್ಲಿ ಭಾರತೀಯ ಸೇನೆ ಮಾತ್ರವಲ್ಲ ದೇಶದ ಜನತೆಗೆ ಆಘಾತವನ್ನುಂಟು ಮಾಡಿರೋ ಘನಗೋರ ಹೆಲಿಕಾಪ್ಟರ್ ದುರಂತ ಸೇನಾ ಮುಖ್ಯಸ್ಥರನ್ನು ಬಲಿ ಪಡೆದಿದೆ.

The post ನಾಳೆ ವೀರಪುತ್ರ ಬಿಪಿನ್ ರಾವತ್ ಅಂತ್ಯಕ್ರಿಯೆ -ಇಂದು ಏನೆಲ್ಲಾ ನಡೆಯುತ್ತೆ..? appeared first on News First Kannada.

News First Live Kannada


Leave a Reply

Your email address will not be published. Required fields are marked *