ಹಾಸನ: ಕಳೆದ ಬಾರಿ ಎಂಎಲ್‌ಸಿ ಚುನಾವಣೆಯಲ್ಲಿ ಹಣ ಹಂಚಿದ್ದರ ಬಗ್ಗೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
ನಗರದಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಶಾಸಕರು, ಮುಖಂಡರು ಮತ್ತು ಸಂಸದರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು.. ಇಂದಿನ ಸಭೆ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಾನು ದೇವೇಗೌಡರ ಸಮ್ಮುಖದಲ್ಲಿ ಸಭೆ ಅಂದ್ಕೊಂಡಿದ್ದೆ. ಆದರೆ ಹೀಗೆ ಸಭೆ ಅಂದಿದ್ರೆ ನಾನು ಬರ್ತಾನೆ ಇರ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಶಿವಲಿಂಗೇಗೌಡರ ಕಾರಣದಿಂದ ಪಟೇಲ್ ಶಿವರಾಂ ಸೋತರು, ಕಾಂಗ್ರೆಸ್‌ನ ಗೋಪಾಲಸ್ವಾಮಿ ಜಯಗಳಿಸಿದ್ರು ಅಂತ ನನ್ನ ಮೇಲೆ ಆರೋಪಗಳು ಕೇಳಿ ಬಂದವು. ಆದರೆ ನನ್ನ ಹೆತ್ತತಾಯಿ ಮೇಲಾಣೆ. ನಾನು ಮೋಸಗಾರ ಅಲ್ಲ. ನಾವು 20 ಸಾವಿರ ಕೊಟ್ಟರೆ ಅವರು 40, 50 ಸಾವಿರದವರೆಗೆ ಕೊಟ್ಟು ಗೆದ್ದರು ಎಂದು ಹೇಳುವ ಮೂಲಕ ಪರೋಕ್ಷವಾಗಿ ಹಣ ಹಂಚಿರುವ ಕುರಿತು ಸುಳಿವು ನೀಡಿದರು.
ದೊಡ್ಡ ಗೌಡರ ಹೆಸರು ಹೇಳಿದ್ರೆ ವೋಟು ಬರಲ್ಲ
ನೀವು ಏನಾದ್ರು ಅಂದುಕೊಳ್ಳಿ ನಾನು ನೇರವಾಗೇ ಹೇಳ್ತೀನಿ ಎಂದು ಮಾತಿಗಿಳಿದ ಶಾಸಕರು, ದೇವೇಗೌಡರ ಹಾಗು ಕುಮಾರಸ್ವಾಮಿ ಹೆಸರು ಹೇಳಿದಂತೆ ಓಡಿ ಬಂದು ಮತ ಹಾಕೋರು ಯಾರೂ ಇಲ್ಲ. ದೇವೇಗೌಡರ ಕುಮಾರಸ್ವಾಮಿ ಹೆಸರು ಹೇಳಿದ ಕೂಡಲೇ ಮತ ಬರಲ್ಲ ಎಂದು ಗರಂ ಆಗಿದ್ದಾರೆ.
ಸಭೆಯ ಬಗ್ಗೆ ಸರಿಯಾಗಿ ಮಾಹಿತಿ ನೀಡಿದೇ ಇರುವ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಮೇಲೆ ಗರಂ ಆದ ಶಾಸಕರು ‘ಕುಮಾರಸ್ವಾಮಿ ಸುಮ್ಮನಿರಿ.. ನಂಗೆ ಯಾಕೆ ಸಭೆಗೆ ಹೇಳಿಲ್ಲ, ನಮ್ಮ ಕ್ಷೇತ್ರದಲ್ಲಿ 410 ಸದಸ್ಯರನ್ನು ಓಪನ್ ಆಗೇ ಓಟ್ ಹಾಕಿಸ್ಬೇಕಾ ಹೇಳಿ ಹಾಕಿಸ್ತೇನೆ. ನೀವು ಯಾರಿಗೆ ಹೇಳ್ತೀರೋ ಅವರಿಗೆ ಮತ ಹಾಕೋಕೆ ನಾವ್ ರೆಡಿ ಎಂದಿದ್ದಾರೆ.