ಬೆಂಗಳೂರು: ಕಳೆದ ನಾಲ್ಕೈದು ದಿನದಿಂದ ಸುರಿಯುತ್ತಿದ್ದ ಜಿಟಿ ಜಿಟಿ ಮಳೆ, ಮೈ ಕೊರೆಯೋ ಚಳಿಗೆ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿ ಹೋಗಿದ್ರು. ಇದ್ರ ನಡುವೆ ನಿನ್ನೆ ಸಂಜೆ ಸುರಿದ ಭಾರೀ ಮಳೆ ರಾಜಧಾನಿಯಲ್ಲಿ ಅವಾಂತರಗಳನ್ನೇ ಸೃಷ್ಟಿಸಿತ್ತು. ರಸ್ತೆಗಳೆಲ್ಲಾ ಕೆರೆಗಳಂತಾಗಿದ್ವು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಯ್ತು. ಇನ್ನೂ 2 ರಿಂದ 3 ದಿನ ಕೂಡ ಇದೇ ಪರಿಸ್ಥಿತಿ ಇರಲಿದ್ದು, ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ನಿನ್ನೆ ಸಂಜೆ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಸಂಜೆ ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಶಿವಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಹೆಬ್ಬಾಳ, ಕೋರಮಂಗಲ ಸೇರಿದಂತೆ ಬೆಂಗಳೂರಿನಾದ್ಯಂತ ಭಾರೀ ಮಳೆಯಾಗಿದೆ.
ಭಾರೀ ಮಳೆ.. ಅವಾಂತರ.. ತತ್ತರಿಸಿದ ರಾಜಧಾನಿ
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ನಗರದ ಹಲವೆಡೆ ರಸ್ತೆಗಳಲ್ಲಿ ಸುಮಾರು 3-4 ಅಡಿ ನೀರು ನಿಂತಿತ್ತು. ಕೆಲವು ರಸ್ತೆಗಳು ಕೆರೆಗಳಂತಾಗಿದ್ದವು. ಚಾಲುಕ್ಯ ಸರ್ಕಲ್, ಶಿವಾನಂದ ಸರ್ಕಲ್, ಓಕಳಿಪುರಂ, ಕೆ.ಆರ್ ಮಾರ್ಕೆಟ್, ಸೇರಿ ನಗರದ ಬಹುತೇಕ ಕಡೆಗಳಲ್ಲಿ ಅಂಡರ್ ಪಾಸ್ ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಹಲವೆಡೆ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದ್ರು.. ಕಾವಲ್ ಬೈಸಂದ್ರ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಜಾಗರಣೆ ಮಾಡುವಂತಾಗಿತ್ತು.
ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಕೂಡ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಗೆ ಮುಂದಿನ 2 ದಿನ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. 5 ದಿನ ಸಾಧಾರಣ ಮಳೆಯಾಗಲಿದೆ. ಹೀಗಾಗಿ ಬೆಂಗಳೂರಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ತಜ್ಞ ಸದಾನಂದ ಅಡಿಗ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕಳೆದ 4-5 ದಿನದಿಂದ ಜಿಟಿ ಜಿಟಿ ಮಳೆಯಿಂದ ಬೇಸತ್ತಿದ್ದ ಸಿಲಿಕಾನ್ ಸಿಟಿ ಮಂದಿಗೆ ಒಮ್ಮೆಲೇ ಸುರಿದ ಭಾರೀ ಮಳೆ ಅವಾಂತರಗಳನ್ನ ತಂದೊಡ್ಡಿದೆ. ಒಂದು ಕಡೆ ಮೈ ಕೊರೆಯೋ ಚಳಿ, ಮತ್ತೊಂದೆಡೆ ಜಿಟಿ ಜಿಟಿ ಮಳೆ ವೇಗ ಪಡೆದುಕೊಂಡು ಆರ್ಭಟಿಸಿ ಅವಾಂತರ ಸೃಷ್ಟಿಸಿ ಆಘಾತ ನೀಡಿದೆ. ಇದೆಲ್ಲದ್ರಿಂದ ಬೇಸತ್ತಿರುವ ರಾಜಧಾನಿ ಮಂದಿ ಈ ಮಳೆಯಿಂದ ಮುಕ್ತಿ ಯಾವಾಗಪ್ಪ ಅಂತಿದ್ದಾರೆ.