ನಿಮ್ಮನ್ನು ನೀವು ಬದಲಿಸಿಕೊಳ್ಳಿ, ಇಲ್ಲದಿದ್ದರೆ ಒಂದಷ್ಟು ಬದಲಾವಣೆ ಅದಾಗೇ ಆಗುತ್ತದೆ: ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಖಡಕ್​ ಎಚ್ಚರಿಕೆ | PM Narendra Modi Warns BJP MPs over Parliament Attendance


ನಿಮ್ಮನ್ನು ನೀವು ಬದಲಿಸಿಕೊಳ್ಳಿ, ಇಲ್ಲದಿದ್ದರೆ ಒಂದಷ್ಟು ಬದಲಾವಣೆ ಅದಾಗೇ ಆಗುತ್ತದೆ: ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಖಡಕ್​ ಎಚ್ಚರಿಕೆ

ಪ್ರಧಾನಿ ನರೇಂದ್ರ ಮೋದಿ

ದೆಹಲಿ: ಸದ್ಯ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಒಂದು ಖಡಕ್​ ಎಚ್ಚರಿಕೆ ನೀಡಿದ್ದಾಗಿ ಮೂಲಗಳು ತಿಳಿಸಿವೆ. ಇಂದು ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಸಿದ ಅವರು, ‘ನಿಮ್ಮನ್ನು ನೀವು ಬದಲಿಸಿಕೊಳ್ಳದೆ ಇದ್ದರೆ, ಒಂದಷ್ಟು ಬದಲಾವಣೆಗಳು ಆಗುತ್ತವೆ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.  ಸಂಸತ್ತು ಮತ್ತು ಪಕ್ಷದ ಸಭೆಗಳಲ್ಲಿ ಸಂಸದರ, ಪ್ರಮುಖ ನಾಯಕರ ಗೈರು ಹೆಚ್ಚಾಗುತ್ತಿರುವುದರಿಂದ ಈ ಖಡಕ್​ ವಾರ್ನ್​ ಮಾಡಿದ್ದಾರೆ ಎಂದು ಹೇಳಲಾಗಿದೆ. ಇಂದಿನ ಸಭೆಯಲ್ಲಿ ಕೇಂದ್ರ ಸಚಿವರಾದ ಅಮಿತ್​ ಶಾ, ಎಸ್​.ಜೈಶಂಕರ್​, ಪಿಯೂಷ್​ ಗೋಯಲ್​, ಪ್ರಲ್ಹಾದ ಜೋಶಿ, ಜಿತೇಂದ್ರ ಸಿಂಗ್​ ಮತ್ತು ಅರ್ಜುನ್​ ರಾಮ್ ಮೇಘ್ವಾಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ​ ಕೂಡ ಇದ್ದರು. 

ಸಂಸತ್ತು ಮತ್ತು ಪಕ್ಷದ ಸಭೆಗಳಲ್ಲಿ ನಿಯಮಿತವಾಗಿ ಹಾಜರಾಗಿ. ಈ ವಿಚಾರದಲ್ಲಿ ನಿಮಗೆ ಪದೇಪದೆ ಹೇಳಿ, ಒತ್ತಡ ಹಾಕುತ್ತಿರಲು ಸಾಧ್ಯವಿಲ್ಲ. ಮಕ್ಕಳಂತೆ ವರ್ತಿಸುವುದನ್ನು ಬಿಡಬೇಕು. ನಿಮ್ಮನ್ನು ನೀವು ಇಂಥ ವಿಷಯಗಳಲ್ಲಿ ಬದಲಿಸಿಕೊಳ್ಳದೆ ಇದ್ದರೆ, ಮುಂದಿನ ದಿನಗಳಲ್ಲಿ ಕೆಲವು ಬದಲಾವಣೆಗಳು ತನ್ನಿಂದ ತಾನಾಗಿ ಆಗುತ್ತವೆ (ನಾವು ಮಾಡಬೇಕಾಗುತ್ತದೆ) ಎಂದು ನರೇಂದ್ರ ಮೋದಿಯವರು ಬಿಜೆಪಿ ಸಂಸದರು, ಮುಖಂಡರಿಗೆ ನೇರವಾಗಿಯೇ ತಿಳಿಸಿದ್ದಾರೆ. ಸಂಸತ್ತಿನ ಅಧಿವೇಶನಗಳು ನಡೆಯುವಾಗ, ಪಕ್ಷದ ಪ್ರಮುಖ ಸಭೆಗಳಲ್ಲಿ ಬಿಜೆಪಿ ಸಂಸದರು, ಮುಖಂಡರು ಗೈರಾಗುವ ಬಗ್ಗೆ ಈ ಹಿಂದೆಯೂ ಕೂಡ ಹಲವು ಬಾರಿ ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದರು.

ನಾಗಾಲ್ಯಾಂಡ್​​ನ ಮೋನ್​ ಜಿಲ್ಲೆಯಲ್ಲಿ ನಡೆದ ದುರಂತ ಸೇರಿ, ಹಲವು ವಿಷಯಗಳನ್ನು ಇಟ್ಟುಕೊಂಡು ಪ್ರತಿಪಕ್ಷಗಳು ಸಂಸತ್ತಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿವೆ. ಆದರೆ ಬಿಜೆಪಿ ಸಂಸದರು ಎಲ್ಲರೂ ಸರಿಯಾಗಿ ಅಧಿವೇಶನಕ್ಕೆ ಹಾಜರಾಗುತ್ತಿಲ್ಲ. ಹೀಗಾಗಿ ಪ್ರಧಾನಿ ಮೋದಿ ಇಂದು ಬೆಳಗ್ಗೆ ಸಭೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.

TV9 Kannada


Leave a Reply

Your email address will not be published. Required fields are marked *