ನಿಮ್ಮ ಕೈ ಕತ್ತರಿಸಿ, ಕಣ್ಣು ಕೀಳುತ್ತೇನೆ; ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸಂಸದ ಬೆದರಿಕೆ | Will Gouge your Eyes Cut Arms BJP MP Arvind Sharma Warns After Party Leader Surrounded


ನಿಮ್ಮ ಕೈ ಕತ್ತರಿಸಿ, ಕಣ್ಣು ಕೀಳುತ್ತೇನೆ; ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸಂಸದ ಬೆದರಿಕೆ

ಅರವಿಂದ್ ಶರ್ಮಾ

ನವದೆಹಲಿ: ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಲಖೀಂಪುರ ಖೇರಿಯಲ್ಲಿ ಈ ಹಿಂದೆ ಕೇಂದ್ರದ ಕೃಷಿ ಕಾಯಿದೆ ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರಿಗೆ ಬೆದರಿಕೆ ಹಾಕಿದ್ದರು. ಅದಾದ ಬಳಿಕ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಕಾರ್ ಹರಿಸಿ ಹತ್ಯೆ ಮಾಡಲಾಗಿತ್ತು. ಈಗ ಬಿಜೆಪಿಯ ಮತ್ತೊಬ್ಬ ಸಂಸದ ರೈತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಕಣ್ಣುಗಳನ್ನು ಕಿತ್ತು ಹಾಕುವ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ, ಕೈಗಳನ್ನು ಕತ್ತರಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ರೈತರ ವಿರುದ್ಧ ಮಾತನಾಡಿದ ಬಿಜೆಪಿ ನಾಯಕರನ್ನು ಸಮರ್ಥಿಸಿಕೊಳ್ಳುತ್ತಾ, ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿಯ ಹಾಲಿ ಸಂಸದ ಬೆದರಿಕೆ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ.

ಹರಿಯಾಣದ ಬಿಜೆಪಿ ಸಂಸದ ಅರವಿಂದ್ ಶರ್ಮಾ ಇಂದು ಕಾಂಗ್ರೆಸ್‌ಗೆ ಕೆಟ್ಟ ಬೆದರಿಕೆ ಹಾಕಿದ್ದಾರೆ. ಪಕ್ಷದ ಸಹೋದ್ಯೋಗಿ ಮನೀಷ್ ಗ್ರೋವರ್ ಅವರನ್ನು ವಿರೋಧಿಸಿದರೆ “ಕಣ್ಣುಗಳನ್ನು ಕಿತ್ತು ಹಾಕುತ್ತೇವೆ, ಕೈಗಳನ್ನು ಕತ್ತರಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಾ, ಅರವಿಂದ್ ಶರ್ಮಾ ಅವರ ಈ ಭಯಾನಕ ಬೆದರಿಕೆಯನ್ನು ಬಿಜೆಪಿ ಕಾರ್ಯಕರ್ತರು ಜನರು ಹರ್ಷೋದ್ಗಾರ ಮತ್ತು ಚಪ್ಪಾಳೆಗಳೊಂದಿಗೆ ಸ್ವಾಗತಿಸಿದರು. 2019ರ ಚುನಾವಣೆಯ ನಂತರ ದುಷ್ಯಂತ್ ಚೌಟಾಲಾ ಅವರ ಜೆಜೆಪಿಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡ ನಂತರ ಕಾಂಗ್ರೆಸ್ “25 ವರ್ಷಗಳ ಕಾಲ ಸರ್ಕಲ್​ನಲ್ಲಿ ಸುತ್ತಬೇಕಾಗುತ್ತದೆ” ಎಂದು ಹೇಳಿದರು.

ರೋಹ್ಟಕ್ ಜಿಲ್ಲೆಯ ಕಿಲೋಯ್ ಗ್ರಾಮದ ದೇವಸ್ಥಾನದೊಳಗೆ ನಿನ್ನೆ ಕೋಪಗೊಂಡ ರೈತರಿಂದ ಘೇರಾವ್ ಗೊಳಗಾದ ಬಿಜೆಪಿ ನಾಯಕ ಮನೀಶ್ ಗ್ರೋವರ್ ರನ್ನು ಅರವಿಂದ್ ಶರ್ಮಾ ಬೆಂಬಲಿಸಿದ್ದಾರೆ. ಅರವಿಂದ್ ಶರ್ಮಾ ಅವರು ಹರಿಯಾಣದ ರೋಹ್ಟಕ್‌ನ ಬಿಜೆಪಿ ಸಂಸದರಾಗಿದ್ದಾರೆ.

ಮನೀಶ್ ಗ್ರೋವರ್ ಅವರ ಹೇಳಿಕೆಗಳಿಂದ ರೈತರು ಆಕ್ರೋಶಗೊಂಡಿದ್ದರು. ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ಪ್ರತಿಭಟಿಸುವವರನ್ನು “ಉದ್ಯೋಗವಿಲ್ಲದ ಮದ್ಯವ್ಯಸನಿಗಳು” ಮತ್ತು “ಕೆಟ್ಟ ವ್ಯಕ್ತಿಗಳು” ಎಂದು ಮನೀಶ್ ಗ್ರೋವರ್ ಕರೆದಿದ್ದರು. ಪ್ರತಿಭಟನೆಗಳನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಮನೀಶ್ ಗ್ರೋವರ್ ಟೀಕಿಸಿದ್ದರು.

ಇದರಿಂದ ರೊಚ್ಚಿಗೆದ್ದ ರೈತರು, ಬಿಜೆಪಿ ನಾಯಕ ಮನೀಶ್ ಗ್ರೋವರ್ ಮತ್ತು ಇತರರಿಗೆ ನಿನ್ನೆ ಸುಮಾರು 8 ಗಂಟೆಗಳ ಕಾಲ ದೇವಾಲಯದೊಳಗೆ ದಿಗ್ಭಂಧನ ವಿಧಿಸಿದ್ದರು. ನಂತರ ಗ್ರೋವರ್ ಕೈ ಮುಗಿದು ಹೊರಗೆ ಬಂದಿದ್ದರು. ಇದಾದ ನಂತರವೇ ದಿಗ್ಭಂಧನದಲ್ಲಿದ್ದ ಬಿಜೆಪಿ ಕಾರ್ಯಕರ್ತರು, ನಾಯಕರಿಗೆ ಹೊರಹೋಗಲು ಅವಕಾಶ ನೀಡಲಾಯಿತು.

ದೇವಾಲಯದಲ್ಲಿ ದಿಗ್ಭಂಧನದ ಪರಿಸ್ಥಿತಿಯಿಂದ ತಪ್ಪಿಸಿಕೊಂಡ ನಂತರ ಗ್ರೋವರ್ ಕ್ಷಮೆ ಯಾಚನೆ ಮಾಡುವುದಿಲ್ಲ ಎಂದಿದ್ದಾರೆ. “ಎಲ್ಲರತ್ತ ಕೈ ಬೀಸುವಂತೆ” ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ. ‘ನಾವು ಕ್ಷಮೆ ಕೇಳಿಲ್ಲ. ಈ ದೇವಸ್ಥಾನಕ್ಕೆ ಯಾವಾಗ ಬೇಕಾದರೂ ಬರುತ್ತೇನೆ’ ಎಂದು ಮನೀಷ್ ಗ್ರೋವರ್ ಹೇಳಿದರು.

ದೇವಸ್ಥಾನದೊಳಗೆ ಸಚಿವ ರವೀಂದ್ರರಾಜು, ರೋಹ್ಟಕ್‌ನ ಮೇಯರ್ ಆಗಿರುವ ಮನಮೋಹನ್ ಗೋಯಲ್ ಮತ್ತು ಪಕ್ಷದ ನಾಯಕ ಸತೀಶ್ ನಂದಲ್ ಸೇರಿದಂತೆ ಅನೇಕರಿಗೆ ದಿಗ್ಭಂಧನ ವಿಧಿಸಲಾಗಿತ್ತು. ಎಲ್ಲಾ ಕಡೆಯಿಂದ ದೇವಸ್ಥಾನವನ್ನು ಸುತ್ತುವರಿಯುವಂತೆ ರೈತರು ಜನರನ್ನು ಕೇಳಿಕೊಂಡರು. ರೈತರು, ವಿಶೇಷವಾಗಿ ಹರಿಯಾಣ ಮತ್ತು ಪಂಜಾಬ್‌ ರಾಜ್ಯದವರು. ಒಂದು ವರ್ಷದಿಂದ ಕೃಷಿ ಕಾನೂನುಗಳನ್ನು ಪ್ರತಿಭಟಿಸುತ್ತಿದ್ದಾರೆ, ಸಾವಿರಾರು ಜನರು ದೆಹಲಿಯ ಗಡಿಯಲ್ಲಿ ಬೀಡುಬಿಟ್ಟಿದ್ದಾರೆ.

ರೈತರು MSP (ಕನಿಷ್ಠ ಬೆಂಬಲ ಬೆಲೆಗಳು) ಕಿತ್ತುಕೊಳ್ಳುವ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ಪರವಾಗಿರುವ ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸುತ್ತಿದ್ದಾರೆ. ಕಾನೂನುಗಳನ್ನು ಹಿಂಪಡೆಯುವುದನ್ನು ತಳ್ಳಿಹಾಕಿರುವ ಸರ್ಕಾರ, ಹೊಸ ಶಾಸನಗಳಿಂದ ರೈತರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದೆ. ತಿದ್ದುಪಡಿಗಳಿಗೆ ಮುಕ್ತವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಎರಡು ಕಡೆಯ ಮಾತುಕತೆಯು ಈಗಾಗಲೇ ಮುರಿದು ಬಿದ್ದಿದೆ.

ಇದನ್ನೂ ಓದಿ: ರೋಮ್​​ನಲ್ಲಿ ಜಿ20 ನಾಯಕರ ಸಮಾಗಮ; ಶೃಂಗಸಭೆಯ ಪ್ರಾರಂಭದ ಫೋಟೋ ಹಂಚಿಕೊಂಡ ಪ್ರಧಾನಿ ಮೋದಿ

ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದಲ್ಲಿ ಕೇರಳಕ್ಕೆ ಮತ್ತೆ ನಂಬರ್ 1 ಸ್ಥಾನ; 7ನೇ ಸ್ಥಾನಕ್ಕೆ ಕುಸಿದ ಕರ್ನಾಟಕ

TV9 Kannada


Leave a Reply

Your email address will not be published. Required fields are marked *