ನಿಮ್ಮ ಟೈಮ್​ಲೈನ್ : ಸಂಡಿಗೆಯ ಕಾಲದ ಅಮ್ಮನ ನೆನಪು ಹಸಿ ಹಸಿ | Nimma timeline summer memories by bu geetha skvd


ನಿಮ್ಮ ಟೈಮ್​ಲೈನ್ : ಸಂಡಿಗೆಯ ಕಾಲದ ಅಮ್ಮನ ನೆನಪು ಹಸಿ ಹಸಿ

ಲೇಖಕಿ ಗೀತಾ ಬಿ.ಯು.

Summer Memories : ಬೈಸಿಕೊಂಡು ತಿನ್ನುತ್ತಿದ್ದ ಸಂಡಿಗೆಯ ಹಿಟ್ಟು ಹೆಚ್ಚು ರುಚಿಯಾಗಿರುತ್ತಿತ್ತು. ಈಗ ಕಪ್ ಭರ್ತಿ ಹಿಟ್ಟು ಇಟ್ಟುಕೊಂಡು ತಿಂದರೂ ಕೇಳುವವರಿಲ್ಲ. ಅಮ್ಮ ಯಾವುದೇ ಸಂಡಿಗೆ ಇಟ್ಟರೂ ನಾನು ಅವರ ಹಿಂದೆ. ಅರಳು ಸಂಡಿಗೆ ಇಟ್ಟಾಗ ಕಣ್ಣರಳಿಸಿ ನೋಡುತ್ತಾ ಕುಳಿತಿರುತ್ತಿದ್ದೆ. ಸಬ್ಬಕ್ಕಿ ಸಂಡಿಗೆ ಇಡುವಾಗ ಒಂದು ಕಪ್ ಹಿಟ್ಟು ನನಗೆ. ಅಮ್ಮ ಸೌಟಿನಲ್ಲಿ ಹಿಟ್ಟು ತೆಗೆದುಕೊಂಡು, ಒಮ್ಮೆ ತೆಗೆದುಕೊಂಡಿದ್ದರಲ್ಲಿ ಎಂಟೋ ಹತ್ತೊ ಸಂಡಿಗೆ ಇಡುತ್ತಿದ್ದರು. ನಾನು ಚಮಚದಲ್ಲಿ ಒಂದೊಂದೇ ಇಡುತ್ತಾ, ನಂತರ ತಿನ್ನಲು ಹಿಟ್ಟು ಉಳಿಸಿಕೊಳ್ಳಲು ನೋಡುತ್ತಿದ್ದೆ. ಅಮ್ಮ ಫೇಣಿ ಸಂಡಿಗೆ ಇಡುವಾಗ ಅಂಗೈ ಮೇಲೆ ಬಿಸಿ ಬಿಸಿ ಫೇಣಿ ಹಿಂಡಿಸಿಕೊಂಡು ಹ್ಹ ಹ್ಹಾ ಅನ್ನುತ್ತಾ ತಿನ್ನುತ್ತಾ ಅವರ ಸುತ್ತಾ ಓಡಾಡುವುದರಲ್ಲಿ ಮಜಾ ಇತ್ತು. ನಂತರ ಎರಡುಗಂಟೆಯ ಮೇಲೆ ಹೋಗಿ ಅರೆಬರೆ ಒಣಗಿದ ಸಂಡಿಗೆ ತಿಂದು ಬರಬೇಕಿತ್ತು. ಅಮ್ಮನಿಗೆ ಗೊತ್ತಾಗಬಾರದೆಂದು ಮಧ್ಯದಲ್ಲಿ ಇರುವುದನ್ನು ತಿನ್ನುತ್ತಿದ್ದದು. (ಅಮ್ಮನಿಗೆ ಗೊತ್ತಾಗಿ ಬೈಸಿಕೊಳ್ಳುತ್ತಿದ್ದದು ಬೇರೆ ವಿಚಾರ ) ಸಂಜೆ ಮೇಲೆ ಶೀಟುಗಳನ್ನು ಕೆಳಗೆ ತರಬೇಕಿತ್ತು. ಸಂಡಿಗೆಗಳನ್ನು ಶೀಟಿನಿಂದ ತೆಗೆದು ಮೊರಕ್ಕೆ ಹಾಕುವುದು ಕೂಡ ಇಷ್ಟವಾದ ಕೆಲಸ.
ಗೀತಾ ಬಿ. ಯು., ಲೇಖಕಿ (Geetha B.U) 

ಮಾರನೇ ದಿನ ತಿರುಗಿ ಬಿಸಿಲಿಗೆ ಇಡಬೇಕು. ಮೊದಮೊದಲು ಬಿಳಿಯ ಬೆಡ್ಶೀಟ್ ಮೇಲೆ ಸಂಡಿಗೆ ಇಡುತ್ತಿದ್ದರು ಅಮ್ಮ. ಆಗ ಬೆಡ್ಶಿಟಿನ ಹಿಂದೆ ಒದ್ದೆ ಮಾಡಿ ಸಬ್ಬಕ್ಕಿ ಸಂಡಿಗೆ ಕೀಳಬೇಕ್ಕಿತ್ತು. ಬೇಸಿಗೆಯ ರಜೆಯ ಹದಿನೈದು ಇಪ್ಪತ್ತು ದಿನಗಳು ಹೀಗೇ ಕಳೆದುಹೋಗುತ್ತಿತ್ತು. ನಾನು ಎಂಟನೇ ಕ್ಲಾಸಿರಬೇಕು. ಆಗ ಇದ್ದದ್ದು ಚಿಂತಾಮಣಿಯಲ್ಲಿ.
ಪಕ್ಕದ ಮನೆಯಲ್ಲಿ ಅಜ್ಜಿ ಒಬ್ಬರಿದ್ದರು. ಜೊತೆಯಲ್ಲಿ ಮಗನೋ ಮೊಮ್ಮಗನೋ ಇದ್ದರೆನ್ನಿಸುತ್ತದೆ.
ಅವರ ಮನೆಯಲ್ಲಿ ಬೇರೆ ಹೆಂಗಸರ್ಯಾರೂ ಇರಲಿಲ್ಲ. ನಮ್ಮಮ್ಮ ನಾನು ಕೆೈಗೆ ಫೇಣಿ ಸಂಡಿಗೆ ಹಿಂಡಿಸಿಕೊಳ್ಳುವುದನ್ನು ಆಕೆಗೆ ಹೇಳಿದ್ದಾರೆ. ಒಂದು ಬೆಳಗ್ಗೆ ಆರೂವರೆಗೆ ಅಜ್ಜಿ ಬೆಲ್ ಮಾಡಿ, ಫೇಣಿ ಸಂಡಿಗೆ ಇಡ್ತಾ ಇದ್ದೇನೆ, ಗೀತಾನ ಕಳಿಸಿ ಅನ್ನೊದೇ.

ಅಮ್ಮ ಎಬ್ಬಿಸಿದರೆ, ಬೆಳಗಿನ ಸವಿ ನಿದ್ದೆ ಬಿಟ್ಟು ಪಕ್ಕದ ಮನೆಗೆ ಹೋಗಲು ನಾನು ಸಿದ್ಧವಿರಲಿಲ್ಲ. ವಿಪರ್ಯಾಸವೆಂದರೆ ಅವರು ಮಾಡಿದಾಗ ತಿನ್ನಲು ಕೇಳಿದರೆ ಬೈಯುತ್ತಿದ್ದ ಅಮ್ಮ ಪಕ್ಕದ ಮನೆ ಅಜ್ಜಿ ಕರೆದಾಗ ನನ್ನ ಬೈದು ಎಬ್ಬಿಸಿ ಕಳಿಸಿದ್ದು. ಮನೆಗೆ ಬಂದ ತಕ್ಷಣ ‘ಹೇಗಿತ್ತು ?’ ಎಂದು ಅಮ್ಮ ಕೇಳಿದ್ದು, ‘ನೀನು ಮಾಡುವಷ್ಟು ಚೆನ್ನಾಗಿರಲಿಲ್ಲ, ‘ ಎಂದು ನಾನು ಹೇಳಿದಾಗ, ‘ಹಾಗೆ ಹೇಳಬಾರದು ‘ ಎಂದು ಬಾಯಲ್ಲಿ ಹೇಳಿದರೂ ಅಮ್ಮನ ಕಂಗಳು ಮಿನುಗಿದ್ದು ಮರೆಯಲಾರೆ. ಸಂಡಿಗೆಯ ಕಾಲದ ಅಮ್ಮನ ನೆನಪು ಹಸಿ ಹಸಿ. ಅಮ್ಮನ ನೆನಪು ಸದಾ.

ಪ್ರತಿಕ್ರಿಯೆಗಾಗಿ : [email protected]

ಗಮನಿಸಿ: ‘ನಿಮ್ಮ ಟೈಮ್​ಲೈನ್’ ಈ ಅಂಕಣದಲ್ಲಿ ನಿಮ್ಮ ಫೇಸ್​ಬುಕ್​ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್​ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. [email protected]

TV9 Kannada


Leave a Reply

Your email address will not be published. Required fields are marked *