ಬೆಂಗಳೂರು: ಪತಿ ರಾಮು ಅವರು ಕೊರೊನಾಗೆ ಬಲಿಯಾದ ಬಳಿಕ ಮಾಲಾಶ್ರೀ ನಿಮ್ಮೆಲ್ಲರ ಪ್ರೀತಿ, ಕಾಳಜಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದು ಟ್ಟಿಟ್ಟರ್‍ ನಲ್ಲಿ ಹೇಳಿದ್ದಾರೆ.

ನೀವೆಲ್ಲರೂ ಕೂಡ ನಿಮ್ಮ ಪ್ರೀತಿಪಾತ್ರರಾದವರೊಂದಿಗೆ ಈ ಕಷ್ಟ ಕಾಲದಲ್ಲಿ ಜೊತೆಯಾಗಿರಿ. ಮನೆಯಲ್ಲೇ ಇರಿ ಸುರಕ್ಷಿತವಾಗಿರಿ ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಕಳೆದ 12 ದಿನಗಳಿಂದ ನಾನು ತುಂಬಾ ನೋವನ್ನು ಅನುಭವಿಸುತ್ತಿದ್ದೇನೆ. ನಮ್ಮ ಕುಟುಂಬದವರೆಲ್ಲರೂ ಕೂಡ ರಾಮು ಅವರ ಮರಣದಿಂದ ನೊಂದಿದ್ದಾರೆ. ರಾಮು ಅವರು ನಮಗೆ ಯಾವತ್ತು ಬೆನ್ನಲುಬಾಗಿದ್ದರು. ಸದಾ ನಮಗೆ ಪ್ರೋತ್ಸಾಹಕರಾಗಿದ್ದರು.

ರಾಮು ಅವರ ಮರಣದ ಸಂದರ್ಭ ಸಿನಿಮಾ ಇಂಡಸ್ಟ್ರಿಯವರು ಸಂತಾಪ ಸೂಚಿಸಿ ನಮಗೆ ಧೈರ್ಯ ತುಂಬಿದ್ದರು. ನಮ್ಮ ಕಷ್ಟಕಾಲದಲ್ಲಿ ನಮಗೆ ಧೈರ್ಯ ತುಂಬಿದ ಸಿನಿಮಾ ಕಲಾವಿದರು, ಮಾಧ್ಯಮ ಮಿತ್ರರು, ನಿರ್ಮಾಪಕರು, ಟೆಕ್ನಿಷಿಯನ್ ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದಗಳು.

ಸ್ಯಾಂಡಲ್‍ವುಡ್‍ನ ನಿರ್ಮಾಪಕರಾಗಿ ಹೆಸರುವಾಸಿಯಾಗಿದ್ದ ರಾಮು ಅವರು ಉಸಿರಾಟದ ತೊಂದರೆಯಿಂದಾಗಿ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಎಪ್ರಿಲ್ 26ರಂದು ಮರಣ ಹೊಂದಿದ್ದರು. ಕನ್ನಡದಲ್ಲಿ ಎಕೆ 47, ಲಾಕಪ್ ಡೆತ್, ಕಲಾಸಿಪಾಳ್ಯ, ಸಿಬಿಐ ದುರ್ಗಾದಂತಹ ಹೆಸರಾಂತ ಸಿನಿಮಾಗಳನ್ನು ನಿರ್ಮಿಸಿದ್ದರು. ವಿಶೇಷವಾಗಿ ಸಾಹಸ ದೃಶ್ಯಗಳಿಗೆ ದುಬಾರಿ ಹಣವನ್ನು ಖರ್ಚು ಮಾಡುತ್ತಿದ್ದರು. ದುಬಾರಿ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದ್ದ ಕಾರಣ ಸ್ಯಾಂಡಲ್‍ವುಡ್‍ನಲ್ಲಿ ‘ಕೋಟಿ ರಾಮು’ ಎಂದೇ ಹೆಸರುವಾಸಿಯಾಗಿದ್ದರು.

The post ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದ – ಮಾಲಾಶ್ರೀ appeared first on Public TV.

Source: publictv.in

Source link