ನಿಮ್ಮ ರೊಮ್ಯಾಂಟಿಕ್  ಚಾಟ್, ಸೆಕ್ಸಿ ಫೋಟೋ ಎಷ್ಟು ಸೇಫ್? ಅಷ್ಟಕ್ಕೂ ಏನಿದು ಪೆಗಸಸ್?

ನಿಮ್ಮ ರೊಮ್ಯಾಂಟಿಕ್  ಚಾಟ್, ಸೆಕ್ಸಿ ಫೋಟೋ ಎಷ್ಟು ಸೇಫ್? ಅಷ್ಟಕ್ಕೂ ಏನಿದು ಪೆಗಸಸ್?

ತಂತ್ರಜ್ಞಾನ ಬೆಳೆದ ಹಾಗೆ ಅದರ ದುರುಪಯೋಗ ಮಾಡುವ ಮಾರ್ಗಗಳೂ ಮತ್ತಷ್ಟು ಆಧುನಿಕಗೊಳ್ಳುತ್ತಲೇ ಇರುತ್ತವೆ. ಸ್ಮಾರ್ಟ್​​ ಫೋನ್​​​ನ ಈ ಯುಗದಲ್ಲಿ ಪ್ರೈವೆಸಿ ಅನ್ನೋದು ಬಹುತೇಕ ನೆರಳಿಗೆ ಬೇಡಿ ತೊಡಿಸಿದಂತೆ ಆಗಿದ್ದು.. ಎಲ್ಲಾ ಅಯೋಮಯವೆನ್ನುವಂತಾಗಿದೆ. ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ ಬಯಲಿಗೆ ಬಂದಿರೋ ಪ್ರಕರಣವೊಂದು ಇಡೀ ವಿಶ್ವವನ್ನೇ ನಡುಗಿಸಿದೆ. ಭಾರತದಲ್ಲೂ ದೊಡ್ಡ ಸದ್ದು ಮಾಡ್ತಿದೆ.

ರೈಟ್​ ಟು ಪ್ರವೆಸಿ ಅಂದ್ರೆ ಖಾಸಗಿ ತನದ ಹಕ್ಕು ಅನ್ನೋದೇ ಇಂದು ಜೋಕ್ ಆಗ್ತಿದೆಯಾ? ಅನ್ನೋವಂಥ ಪ್ರಶ್ನೆ ಇಂದು ಪದೇಪದೆ ಮೂಡ್ತಿದೆ.. ನೀವು ಯಾವುದೋ ಒಂದು ವಸ್ತುವಿನ ಬಗ್ಗೆ.. ಅಂದ್ರೆ ಉದಾಹರಣೆಗೆ ನೋಡೋದಾದ್ರೆ ಐ ಫೋನ್ ಬಗ್ಗೆಯೋ.. ಬ್ಯಾಗ್ ಬಗ್ಗೆಯೋ.. ವಾಚ್​ಗಳ ಬಗ್ಗೆಯೋ ನಿಮ್ಮ ಸ್ನೇಹಿತರೊಂದಿಗೆ ಮಾತನಾಡ್ತಿದ್ದೀರಿ ಎಂದು ಕೊಳ್ಳಿ.. ಕೆಲ ಹೊತ್ತಿನಲ್ಲಿಯೇ ನಿಮ್ಮ ಇಂಟರ್​ನೆಟ್​​ನಲ್ಲಿ ಅದರದ್ದೇ ಜಾಹಿರಾತುಗಳು ಬರೋಕೆ ಆರಂಭವಾಗೋದನ್ನ ಬಹುತೇಕರು ಗಮನಿಸಿರ್ತೀರಿ.. ಅದು ಬಿಡಿ ನಿಮ್ಮ ಖಾಸಗೀ ಚಾಟ್​​ನಲ್ಲಿ ನೀವು ಯಾವುದೋ ಪ್ರಾಡಕ್ಟ್ ಬಗ್ಗೆ ಮಾತನಾಡಿರ್ತೀರಿ ಅಂದು ಕೊಳ್ಳಿ.. ಕೆಲ ಹೊತ್ತಿನಲ್ಲಿ ಅದರ ಜಾಹಿರಾತುಗಳೂ ಬರೋಕೆ ಆರಂಭವಾಗಿ ಬಿಡುತ್ತೆ.. ಇದು ಹೇಗೆ ಸಾಧ್ಯ? ಅಂತಾ ಸೋಶಿಯಲ್​ ಮೀಡಿಯಾ ಬಳಕೆದಾರರು ಸಾಕಷ್ಟು ಬಾರಿ ಪ್ರಶ್ನೆ ಮಾಡಿಕೊಂಡಿರ್ತಾರೆ.. ಹಾಗಂತ ಇದು ಹ್ಯಾಕಿಂಗ್ ಅಲ್ಲ ಬದಲಿಗೆ.. ಆರ್ಟಿಫಿಷಿಯಲ್​ ಇಂಟೆಲಿಜೆನ್ಸ್ ಕರಾಮತ್ತು.. ಹಾಗಿದ್ದರೂ ಪ್ರೈವೆಸಿ ಎಲ್ಲಿ? ಅನ್ನೋ ಪ್ರಶ್ನೆಗೆ ಉತ್ತರ ಸಿಗಲ್ಲ.. ಇದು ಒಂದು ಕತೆ ಆಯ್ತು.. ಆದ್ರೆ.. ಇಂದು ಮತ್ತೊಂದು ದೊಡ್ಡ ಹಗರಣ ಬೆಳಕಿಗೆ ಬಂದಿದೆ. ಪೆಗಸಸ್ ಫುಲ್ ಸೌಂಡ್ ಮಾಡ್ತಿದೆ.

ಭಾರತಕ್ಕೆ ಅಪ್ಪಳಿಸಿದ ಪೆಗಸಸ್ ಹ್ಯಾಕಿಂಗ್ ಕೇಸ್
ಅಷ್ಟಕ್ಕೂ ಏನಿದು ಪೆಗಸಸ್ ಹ್ಯಾಕಿಂಗ್​​ ಸಾಫ್ಟ್​​ವೇರ್?
ವಿಶ್ವಾದ್ಯಂತ ದೊಡ್ಡ ಸುದ್ದಿಯಾಗ್ತಿರೋದ್ಯಾಕೆ ಪೆಗಸಸ್?

 ಪೆಗಸಸ್ ಅನ್ನೋದು ಗ್ರೀಕ್​​ ಮೈಥಾಲಜಿಯಲ್ಲಿ ಬರೋ ಒಂದು ಕುದುರೆ ಹೆಸರು. ಶುಭ್ರ ಬಿಳಿ ಬಣ್ಣದ ಹಾಲಿನಂಥ ಆ ಕುದುರೆಗೆ ದೊಡ್ಡ ರೆಕೆಕಗಳು ಕೂಡ ಇದ್ದವು. ಕ್ಷಣಾರ್ಧದಲ್ಲಿ ಎಲ್ಲಿಗೆ ಬೇಕಾದಲ್ಲಿಗೆ ಹೋಗಬಲ್ಲ ಗುಣ ಅದಕ್ಕಿತ್ತು.. ಅದರ ಹೆಸರನ್ನೇ ಇಂದು ಈ ಸಾಫ್ಟ್​​ವೇರ್​​ಗೆ ಇಡಲಾಗಿದ್ದು.. ಇದು ಕೂಡ ಯಾವ ಡಿವೈಸ್​​ನ ಕೂಡ ಪ್ರವೇಶ ಮಾಡಬಲ್ಲದು ಅನ್ನೋದನ್ನ ಸೂಚ್ಯವಾಗಿ ತಿಳಿಸುತ್ತೆ ಎನ್ನಲಾಗುತ್ತೆ.

ಹಾಗೆ ನೋಡಿದ್ರೆ ಪೆಗಸಸ್ ಅನ್ನೋದು ಇಸ್ರೇಲ್​​ನ ಎನ್​ಎಸ್​ಒ ಅನ್ನೋ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಒಂದು ಹ್ಯಾಕಿಂಗ್ ಸಾಫ್ಟ್​ವೇರ್ ಹೆಸರು.. ಈ ಸಾಫ್ಟ್​ವೇರ್ ಸ್ಪಿಯರ್ ಫಿಶಿಂಗ್ ಟೆಕ್ನಾಲಜಿ ಬಳಸಿ ಹ್ಯಾಕಿಂಗ್ ಮಾಡುತ್ತೆ ಎನ್ನಲಾಗುತ್ತೆ. ಸ್ಪಿಯರ್ ಫಿಶಿಂಗ್ ಟೆಕ್ನಾಲಜಿ ಅಂದ್ರೆ ಅದು ನಿಮ್ಮ ಮೊಬೈಲ್, ಲ್ಯಾಪ್​ಟಾಪ್ ಮುಂತಾದ ವಸ್ತುಗಳನ್ನು ಪ್ರವೇಶಿಸಿ.. ಒಳಗೆ ಇದ್ದೇ ಸಂಪೂರ್ಣ ಮಾಹಿತಿಯನ್ನ ಪಡೆದುಕೊಳ್ಳುತ್ತೆ.. ನಿಮ್ಮ ಮೊಬೈಲ್​​ನ ಪ್ರತಿಯೊಂದು ಕ್ರಿಯೆಯನ್ನೂ ಅದು ಕದಿಯುತ್ತಾ ದಾಖಲಿಸುತ್ತಾ ಹೋಗುತ್ತೆ..

ಈ ಪೆಗಸಸ್ ವಿವಾದದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಯುವುದಕ್ಕಿಂತ ಮುನ್ನ ಒಂದು ವಿಷವನ್ನು ತಿಳಿಯೋಣ.. ಅದು ಏನಂದ್ರೆ ಸುಮ್ಮನೆ ಊಹೆ ಮಾಡಿಕೊಳ್ಳಿ ನಿಮ್ಮ ತಲೆ ಪಕ್ಕ ಇನ್ನೊಂದು ತಲೆ ಬಂದು ಸತಾ ಕುಳಿತಿರುತ್ತೆ. ನೀವು ನಿಮ್ಮ ಮೊಬೈಲ್ ಮುಟ್ಟಿದ ತಕ್ಷಣ.. ಕಣ್ಣು ಬಿಡುತ್ತೆ.. ಮತ್ತು ನೀವು ಆ ಫೋನ್​ನಲ್ಲಿ ಮಾಡೋ ಪ್ರತಿ ಕ್ರಿಯೆಯನ್ನೂ ಗಮನಿಸುತ್ತಾ ಹೋಗುತ್ತೆ.. ನೀವು ಯಾರಿಗೆ ಮೆಸೇಜ್ ಮಾಡಿದ್ರಿ.. ನೀವು ಯಾರಿಗೆ ಕಾಲ್​ ಮಾಡಿದ್ರಿ..? ವಾಟ್ಸ್​ ಅಪ್ ಮಾಡಿದ್ರಾ? ಮೆಸೆಂಜರ್ ಮೂಲಕ ಮೆಸೇಜ್ ಕಳಿಸಿದ್ರಾ? ವಿಡಿಯೋ ಕಾಲ್ ಮಾಡಿದ್ರಾ? ಬ್ಯಾಂಕಿಂಗ್ ವ್ಯವಹಾರ ಮಾಡುತ್ತಿದ್ದೀರಾ? ನಿಮ್ಮ ಪ್ರತಿಯೊಂದು ಮೆಸೇಜ್​ಗಳನ್ನ.. ಪಾಸ್​ವರ್ಡ್​ಗಳನ್ನ.. ನಿಮ್ಮ ಮಾತುಗಳನ್ನ ಅದು ನೋಡುತ್ತೆ.. ಕೇಳುತ್ತಾ ಹೋಗುತ್ತೆ.. ಅಷ್ಟೇ ಅಲ್ಲ.. ಆ ಮಾಹಿತಿಯನ್ನ ಅದು ಇನ್ಯಾರಿಗೋ ಪಿನ್​ ಟು ಪಿನ್ ರವಾನಿಸುತ್ತಾ ಹೋಗುತ್ತೆ..!

ಆ ಮಾಹಿತಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಇರಬಹುದು.. ಆಫೀಸಿಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಇರಬಹುದು.. ರೊಮ್ಯಾಂಟಿಕ್ ಮಾತು ಇರಬಹುದು.. ನಿಮ್ಮ ಬಾಯ್​ಫ್ರೆಂಡ್​ ಅಥವಾ ಗರ್ಲ್​ ಫ್ರೆಂಡ್​ಗೆ ಕಳಿಸಿದ ನಿಮ್ಮ ಖಾಸಗೀ ಫೋಟೋ, ವಿಡಿಯೋಗಳಿರಬಹುದು.. ವಿಡಿಯೋ ಕಾಲ್​ ಮಾಡಿರೋದು ಇರಬಹುದು.. ಹೀಗೆ ಪ್ರತಿಯೊಂದೂ ಇನ್ನೊಬ್ಬರಿಗೆ as-it-is ಕಾಣುತ್ತಾ ಹೋಗುತ್ತೆ.. ಆಗ ನೀವು ಏನು ಮಾಡ್ತೀರಿ? ಈ ವಿಷಯ ನಿಮಗೆ ತಿಳಿದಾಗ ನಿಮ್ಮ ಪ್ರತಿಕ್ರಿಯೆ ಏನಾಗಿರುತ್ತೆ? ಅಂಥದ್ದೇ ಒಂದು ಸನ್ನಿವೇಶ ಇಂದು ನಿರ್ಮಾಣವಾಗಿದೆ.. ಎಸ್ ಇದು ಪೆಗಸಸ್​​ನ ಹಾವಳಿಗೆ ತುತ್ತಾಗಿರೋರ ನಿದ್ದೆ ಗೆಡಿಸಿದೆ.. ಇದೇ ವಿವಾದಕ್ಕೆ ಕಾರಣವಾಗಿದೆ..! ಹಾಗಿದ್ದರೆ ಈ ಸಾಫ್ಟ್​ವೇರ್ ನಿಮ್ಮ ಮೊಬೈಲ್ ಹೇಗೆ ಪ್ರವೇಶಿಸುತ್ತೆ ಗೊತ್ತಾ?

ನಿಮಗೇ ತಿಳಿಯದಂತೆ ಇದು ನಿಮ್ಮ ಮೊಬೈಲ್, ವಿಂಡೋಸ್, ಮ್ಯಾಕ್​ ಬುಕ್, ಆ್ಯಂಡ್ರಾಯ್ಡ್​, ಐ ಫೋನ್​ಗಳನ್ನು ಪ್ರವೇಶಿಸುತ್ತೆ.. SMS, e-Mail, ಸೋಷಿಯಲ್ ಮೀಡಿಯಾ ಮೆಸೇಜ್.. ಕಾಲ್, ಮಿಸ್​ ಕಾಲ್, ವಾಟ್ಸ್​​ ಆ್ಯಪ್ ಕಾಲ್.. ಹೀಗೆ ಹಲವು ವಿಧ ಬಳಸಿ ನಿಮ್ಮ ಮೊಬೈಲ್​ಗೆ ಇದನ್ನು ಅಳವಡಿಸಬಹುದಾಗಿದೆ. ಸರಳವಾಗಿ ಹೇಳೋದಾದ್ರೆ.. ಯಾರಾದ್ರೂ ನಿಮ್ಮ ಮೊಬೈಲ್​ಗೆ ಪಗಸಸ್ ಸೇರಿಸಬೇಕು ಅಂತ ನಿರ್ಧರಿಸಿದ್ರೆ.. ಅವರು ಸೇರಿಸ್ತಾರೆ.. ಅದು ನಿಮಗೆ ಗೊತ್ತೇ ಆಗಲ್ಲ.. ಬಳಿಕ ನಿಮ್ಮ ಮಾಹಿತಿಯಂತೂ ಟ್ಯಾಪ್ ಆನ್ ಮಾಡಿ ಇಟ್ಟ ಟ್ಯಾಂಕ್​ನಂತೆ ಆಗಿ ಬಿಡುತ್ತೆ ಅಷ್ಟೇ..!

ಈಗ್ಯಾಕೆ ಸದ್ದು ಮಾಡ್ತಿದೆ ಪೆಗಸಸ್ ಸಾಫ್ಟ್​ವೇರ್?
ಈ ವಿವಾದಕ್ಕೆ ಕಾರಣವಾಗಿರೋದಾದ್ರೂ ಏನು?

ಇಸ್ರೇಲ್​ ಮೂಲದ ಎನ್​ಎಸ್​ಒ ಗ್ರೂಪ್​​ ಸಂಸ್ಥೆ ಈ ಸಾಫ್ಟ್​ವೇರ್ ಅನ್ನ ಅಭಿವೃದ್ಧಿ ಪಡಿಸಿದ್ದು ಮಾರಾಟ ಮಾಡ್ತಿದೆ. ಪ್ರಮುಖವಾಗಿ ಭಯೋತ್ಪಾದನೆ ನಿಗ್ರಹ ಮಾಡಲು, ಸಮಾಜ ಘಾತುಕ ಶಕ್ತಿಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಈ ಸಾಫ್ಟ್​ವೇರ್ ಅಭಿವೃದ್ಧಿ ಪಡಿಸಿದ್ದೇವೆ ಅಂತಾ ಆ ಸಂಸ್ಥೆ ಹೇಳಿಕೊಳ್ಳುತ್ತೆ. ಇದೇ ಕಾರಣದಿಂದಾಗಿ ಈ ಸಂಸ್ಥೆಯ ಸಾಫ್ಟ್​​ವೇರ್​ ಅನ್ನು ಸದ್ಯ, ಭಾರತವೂ ಸೇರಿ, ಅಜರ್​​ಬೈಜಾನ್, ಬಹ್ರೇನ್, ಹಂಗೇರಿ, ಕಝಕಿಸ್ತಾನ್, ಮೆಕ್ಸಿಕೋ, ಮೊರಾಕ್ಕೋ, ರವಾಂಡಾ, ಯುಎಇ ಸೌದಿ ಅರೇಬಿಯಾ ದೇಶಗಳು ಬಳಕೆ ಮಾಡಿಕೊಳ್ತಿವೆ ಎನ್ನಲಾಗ್ತಿದೆ.. ಇಂಥ ಸಂಸ್ಥೆಯೇ ಇಂದು ವಿವಾದದ ಕೇಂದ್ರ ಬಿಂದುವಾಗಿದೆ.

ಹೌದು.. ಅಷ್ಟಕ್ಕೂ ಆಗಿದ್ದು ಏನಂದ್ರೆ, ಪೆಗಸಸ್​ನಿಂದ ಪ್ಯಾರಿಸ್​ ಮೂಲದ ಎನ್​ಜಿಒ ಫಾರ್​ಬಿಡನ್ ಸ್ಟೋರೀಸ್ ಮತ್ತು ಅಮ್ನೆಸ್ಟಿ ಇಂಟರ್​ನ್ಯಾಷನಲ್​ನಿಂದಲೂ ಮಾಹಿತಿ ಸಂಗ್ರಹ ಮಾಡಿಕೊಂಡಿದ್ವಂತೆ. ಈ ಸಂಸ್ಥೆಗಳು ಬಳಿಕ ಭಾರತದ ದಿ ವೈರ್ ಪತ್ರಿಕೆ ಮತ್ತು ಗಾರ್ಡಿಯನ್​ ಸಂಸ್ಥೆ ವಾಷಿಂಗ್​ಟನ್ ಪೋಸ್ಟ್ ಸೇರಿದಂತೆ ಒಟ್ಟು 17 ಮಾಧ್ಯಮ ಸಂಸ್ಥೆಗಳಿಗೆ ನೀಡಿದ್ದವಂತೆ.. ಅದೇ ಇಂದು ವಿವಾದಕ್ಕೆ ಮೂಲ ಕಾರಣವಾಗಿವೆ.

ಇದು ಸಾಮಾನ್ಯ ಪ್ರಕರಣವಲ್ಲ. ಯಾಕಂದ್ರೆ ಆ 17 ಮಾಧ್ಯಮಗಳು ನೀಡಿದ ಮಾಹಿತಿಯಂತೆ ವಿಶ್ವಾದ್ಯಂತ ಬರೋಬ್ಬರಿ 50 ಸಾವಿರ ನಂಬರ್​ಗಳ ಮೇಲೆ ಬೇಹುಗಾರಿಕೆ ನಡೆಸಲಾಗಿತ್ತಂತೆ. ಅದ್ರಲ್ಲೂ ಬರೋಬ್ಬರಿ 300 ಭಾರತೀಯರ ಹೆಸರೂ ಈ ಲಿಸ್ಟ್​ನಲ್ಲಿ ಇವೆಯಂತೆ. ಅದೂ ಸಾಮಾನ್ಯ ಭಾರತೀಯರಲ್ಲ ಬದಲಿಗೆ ವಿಪಕ್ಷ ನಾಯಕರು, ಕೇಂದ್ರದ ಇಬ್ಬರು ಸಚಿವರು, ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿಗಳು, ವೈರಾಲಜಿಸ್ಟ್​ಗಳು, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಪತ್ರಕರ್ತರೂ ಇದ್ದಾರೆ ಎನ್ನಲಾಗಿದೆ. ಅದ್ರಲ್ಲಿ ಕೆಲವರ ಹೆಸರು ಕೇಳಿದ್ರೆ ನಿಮಗೂ ದಿಗ್ಭ್ರಮೆಯಾಗದೇ ಇರಲ್ಲ.. ಅವಱರು ಗೊತ್ತಾ?!

 ಪೆಗಾಸಸ್‌ 2016ರಿಂದ ವಿಶ್ವದಲ್ಲಿ 50 ಸಾವಿರ ಮಂದಿ ಮೇಲೆ ಗೂಢಚರ್ಯೆ ನಡೆಸಿದೆ ಎನ್ನಲಾಗಿದೆ. ಭಾರತದಲ್ಲಿಯೂ 300 ಫೋನ್‌ಗಳನ್ನು ಹ್ಯಾಕ್‌ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಫೋನ್‌ಗಳನ್ನು ಹ್ಯಾಕ್‌ ಮಾಡಿರುವುದು ಹೌದೋ ಅಲ್ವೋ ಅನ್ನುವುದರ ಬಗ್ಗೆ ಖಚಿತಪಡಿಸಿಕೊಳ್ಳಲು ಫೋನ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ ನೀಡಲಾಗುತ್ತಿದೆ. ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ನೀಡಿದ 37 ಫೋನ್‌ನಲ್ಲಿ ಭಾರತದ 10 ಫೋನ್‌ಗಳು ಹ್ಯಾಕ್‌ ಆಗಿರುವುದು ಸಾಬೀತು ಕೂಡ ಆಗಿದೆ ಎನ್ನಲಾಗಿರೋ ವಿಷಯಗಳೇ ಇಂದು ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಾಗಿದೆ.

ಹೌದು.. ಕೇಂದ್ರ ಸಚಿವರಾಗಿರೋ.. ಅಶ್ವಿನಿ ವೈಷ್ಣವ್‌ ಮತ್ತು ಪ್ರಹ್ಲಾದ್‌ ಪಟೇಲ್‌, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸಂಸದ ರಾಹುಲ್‌ ಗಾಂಧಿ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಸಂಸದ ಅಭಿಷೇಕ್‌ ಬ್ಯಾನರ್ಜಿ..ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಮೇಲೆ, 40 ಪತ್ರಕರ್ತರ ಮೇಲೆ, ನಿವೃತ್ತ ನ್ಯಾಯಮೂರ್ತಿಗಳ ಮೇಲೆ, ನಿವೃತ್ತ ಚುನಾವಣಾ ಆಯೋಗದ ಅಧ್ಯಕ್ಷರ ಮೇಲೆ ಕೂಡ ಬೇಹುಗಾರಿ ನಡೆಸಲಾಗಿದೆ ಅನ್ನೋ ಆರೋಪ ಸದ್ಯ ದೊಡ್ಡ ಮಟ್ಟದಲ್ಲಿ ಕೇಳಿ ಬಂದಿದ್ದು.. ವಿಶ್ವಾದ್ಯಂತ ಚರ್ಚೆಗೆ ಕಾರಣವಾಗಿದೆ.


ಒಂದೆಡೆ ವಿವಾದ ಭುಗಿಲೆದ್ದ ಬೆನ್ನಲ್ಲೇ ಎನ್​ಎಸ್​ಒ ಸಂಸ್ಥೆ ಕೂಡ ಇಂದು ಕಟಕಟೆಯಲ್ಲಿ ನಿಲ್ಲುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ಈ ರೀತಿಯಾಗಿ ಮತ್ತೊಬ್ಬರ ವೈಯಕ್ತಿಕ ಮಾಹಿತಿ ಕದಿಯಲು ಸಹಾಯ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧವಾಗುತ್ತೆ.. ಆದ್ರೆ ಆರೋಪ ಕೇಳಿ ಬಂದ ಮಾತ್ರಕ್ಕೆ ಅಪರಾಧಿಯಾಗಲ್ಲವಾದ್ರೂ.. ಇಂಥ ಗಂಭೀರ ಆರೋಪಗಳು ಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕಿಬಿಡುತ್ತವೆ. ಇದೇ ಕಾರಣದಿಂದ ಎನ್​ಎಸ್​ಒ ಸಂಸ್ಥೆ ಕೂಡ ಸ್ಪಷ್ಟನೆ ನೀಡಿದೆ.

ತನ್ನ ಪರವಾಗಿ ವಾದ ಮಂಡಿಸಿರೋ ಪೆಗಸಸ್, ಯಾಱರಿಗೆ ತನ್ನ ಸಾಫ್ಟ್​ವೇರ್​ನ ಮಾರಿದೆ, ಅದಕ್ಕಿರುವ ನಿಯಮಗಳು ಮತ್ತು ತಾನು ಯಾರಿಗೆಲ್ಲ ಪೆಗಸಸ್​ನ ಮಾರಾಟ ಮಾಡುತ್ತೆ ಅನ್ನೋ ಬಗ್ಗೆ ಸ್ಪಷ್ಟನೆಯನ್ನ ಕೂಡ ನೀಡಿದೆ. ನಾವು ಯಾವುದೇ ತಪ್ಪನ್ನು ಮಾಡಿಲ್ಲ.. ನಮ್ಮ ಗ್ರಾಹಕರ ಮಾಹಿತಿಯನ್ನೂ ನಾವು ಸಂಗ್ರಹಿಸಿ ಇಡಲ್ಲ. ಕೇಲವ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕಾಗಿ ಸರ್ಕಾರಗಳಿಗೆ ನಾವು ಈ ಸಾಫ್ಟ್​ವೇರ್ ನೀಡುತ್ತೇವೆ.. ಈಗ ಬಿಡುಗಡೆಯಾಗಿರುವ ಮಾಹಿತಿ ಕೂಡ ನಮ್ಮದು ಅಂತಾ ಹೇಳಲು ಸಾಧ್ಯವಿಲ್ಲ ಅಂತ ಹೇಳಿದೆ. ಆದರೂ

ಒಂದೆಡೆ ಪೆಗಸಸ್​ನ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹಾಗೆ ನೋಡಿದ್ರೆ ತಮ್ಮನ್ನು ತಾವು ಅತ್ಯಂತ ಸೇಫ್​ ಎಂದು ಹೇಳಿಕೊಳ್ಳುವ ಆ್ಯಪಲ್​ ಸಂಸ್ಥೆ ಕೂಡ ಈಗ ಆತಂಕಕ್ಕೆ ಕಾರಣವಾಗಿದೆ. ವಾಟ್ಸ್​​ ಆ್ಯಪ್, ಟೆಲಿಗ್ರಾಮ್ ಮುಂತಾದ ಸಂಸ್ಥೆಗಳೂ ಇಂದು ಅಭದ್ರತೆಗೆ ಒಳಗಾಗಿವೆ.

ಸಾಮಾನ್ಯವಾಗಿ ಒಂದು ಅಂಶವನ್ನು ಎಲ್ಲರೂ ಗಮನಿಸಿರಬಹುದು. ನೀವು ವಾಟ್ಸ್​ ಆಪ್ ಬಳಸುವಾಗ ಈ ಮೆಸೇಜ್​​ ಇನ್​ಸ್ಕ್ರಿಪ್ಟೆಡ್​ ಆಗಿದೆ ಅನ್ನೋ ಮಾಹಿತಿ ಬಂದಿರುತ್ತೆ. ಅದರ ಅರ್ಥ ಇಷ್ಟೇ.. ನಿಮ್ಮ ವಾಟ್ಸ್​ ಆ್ಯಪ್ ಯಾರಾದ್ರೂ ಹ್ಯಾಕ್​ ಮಾಡಿದ್ರೂ ಅವರಿಗೆ ಮೆಸೇಜ್​ಗಳು ಕಾಣಿಸೋದಿಲ್ಲ. ಬದಲಿಗೆ, ಬರೀ ಕೋಡ್​ಗಳು ಮಾತ್ರ ಕಾಣಿಸುತ್ತೆ. ಹಾಗಾದ್ರೆ ಈ ಸಾಫ್ಟ್​ವೇರ್​ನಿಂದ ವಾಟ್ಸ್​ ಆ್ಯಪ್ ಸೇಫ್ ಆಗಿರುತ್ತಾ? ಅಂದ್ರೆ ಖಂಡಿತ ಇಲ್ಲ ಅನ್ನಬಹುದು. ಯಾಕಂದ್ರೆ ನಿಮ್ಮ ಮನೆಗೆ ಎಷ್ಟೇ ದೊಡ್ಡ ಬೀಗ ಹಾಕಿದ್ರೂ.. ಮನೆಯೊಳಗೇ ಕಳ್ಳನಿದ್ರೆ ಏನು ಮಾಡಬಹುದು? ಅದೇ ರೀತಿ ಇದು. ಅಷ್ಟೇ ಅಲ್ಲ ಇದು ಎಷ್ಟು ಆಧುನಿಕ ಹ್ಯಾಕಿಂಗ್ ಸಾಫ್ಟ್​ವೇರ್ ಅಂದ್ರೆ.. ಇದರಿಂದ ಆ್ಯಪಲ್​ ಫೋನ್, ಮ್ಯಾಕ್​ಬುಕ್​ ಕೂಡ ಸೇಫ್ ಅಲ್ಲ..!

ಹೌದು.. ಇದೇ ಮೊದಲ ಬಾರಿಗೆ ಆ್ಯಪಲ್​ ಸಂಸ್ಥೆ ಕೂಡ ಪೆಗಸಸ್​ನಿಂದ ತಾವು ಸೇಫ್​ ಅಲ್ಲ ಅಂತ ಹೇಳಿಕೊಂಡಿದೆ. ಕೊಟ್ಯಂತರ ರೂಪಾಯಿ ಹಣ ವ್ಯಯಿಸಿ ತಯಾರಿಸಲಾಗಿರುವ ಈ ಸಾಫ್ಟ್​ವೇರ್​ಗಳು ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಹೊಂದಿರುತ್ತವೆ. ಇವುಗಳಿಂದ ಐಫೋನ್​​ಗಳಿಗೂ ರಿಸ್ಕ್​ ಇದೆ ಅಂತ ಸ್ವತಃ ಆ್ಯಪಲ್ ಸಂಸ್ಥೆಯೇ ಹೇಳಿದೆ. ಅದ್ರಲ್ಲೂ ಝೀರೋ ಕ್ಲಿಕ್ ಇಮೇಜಸ್​ ಆಪ್ಶನ್ ಹೊಂದಿರೋ ಐಒಎಸ್​​ 14.6 ಅನ್ನು ಇದು ಸುಲಭವಾಗಿ ಭೇದಿಸಬಲ್ಲದು ಎನ್ನಲಾಗ್ತಿದೆ. ಹೀಗಾಗಿ ಜಗತ್ತಿನ ಅತ್ಯಂತ ಸೇಫ್​ ಫೋನ್​ ಬಳಸ್ತಿದ್ದೀವಿ ಅಂತ ಐಫೋನ್​ ಬಳಕೆದಾರರು ಇಷ್ಟು ದಿನ ಎಂದುಕೊಳ್ಳುತ್ತಿದ್ದರಾದ್ರೂ.. ಈ ಸಾಫ್ಟ್​ವೇರ್ ಆ ನೆಮ್ಮದಿಯನ್ನೂ ಕಸಿಯುತ್ತಿದೆ.

ವಾಟ್ಸ್​​​ಆ್ಯಪ್​ನಿಂದಲೂ ಎನ್​ಎಸ್​ಒ ವಿರುದ್ಧ ಕ್ರಮಕ್ಕೆ ಆಗ್ರಹ
ಸರ್ಕಾರಗಳು, ಸಂಸ್ಥೆಗಳು ಎನ್​ಎಸ್​ಒ ವಿರುದ್ಧ ಕ್ರಮ ಕೈಗೊಳ್ಳಬೇಕು
ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ ವಾಟ್ಸ್​​ಆ್ಯಪ್ ಸಂಸ್ಥೆ

ಇದೇ ಕಾರಣದಿಂದಾಗಿ ವಾಟ್ಸ್​ ಅಪ್ ಕೂಡ ಈ ವಿವಾದಕ್ಕೆ ಮಧ್ಯಪ್ರವೇಶಿಸಿದೆ. ಜೊತೆಗೆ, ವಿಶ್ವದ ಎಲ್ಲ ದೇಶಗಳ ಸರ್ಕಾರಗಳು ಮತ್ತು ಸಂಸ್ಥೆಗಳು ಇಂಥ ಸಾಫ್ಟ್​ವೇರ್ ಉತ್ಪಾದಕರ ವಿರುದ್ಧ ಸಮರ ಸಾರಬೇಕು. ಅವರನ್ನು ಕಟಕಟೆಯಲ್ಲಿ ನಿಲ್ಲಿಸಬೇಕು ಅಂತಾ ಕರೆ ನೀಡಿದೆ. ಅಲ್ಲದೇ 2019ರಲ್ಲಿ ಎನ್​ಎಸ್​​ಓ ದಿಂದ ಆದ ದಾಳಿಯನ್ನು ನಾವು ಗುರ್ತಿಸಿ ಅದರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೆವು ಅಂತಾ ಕೂಡ ಅದು ಹೇಳಿದೆ.

ಹಾಗೆ ನೋಡಿದ್ರೆ, ಭಾರತದ ಐಟಿ ಆ್ಯಕ್ಟ್ 2000ರ ಅನ್ವಯ ಮತ್ತೊಬ್ಬರ ಖಾಸಗೀ ಮಾಹಿತಿ ಸಂಗ್ರಹಿಸುವುದು, ಹ್ಯಾಕ್​ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಹಾಗಿದ್ದೂ ಬೆಲಿಯೇ ಎದ್ದು ಹೊಲ ಮೇಯ್ದಿದೆಯಾ? ಅನ್ನೋ ಪ್ರಶ್ನೆ ಕೂಡ ಇಂದು ಮೂಡುತ್ತಿದೆ. ಇನ್ನೂ ಒಂದು ಪ್ರಮುಖ ವಿಚಾರ ಅಂದ್ರೆ ಇಷ್ಟೆಲ್ಲ ಸದ್ದು ಆಗ್ತಿರೋದು ಕೂಡ ಎನ್​ಎಸ್​ಒ ಸಂಸ್ಥೆ ಹೇಳಿದ ಮಾತಿನಿಂದಾಗಿ. ನಾವು ಕೇವಲ ಸರ್ಕಾರಗಳಿಗೆ ಮಾತ್ರ ಈ ಸಾಫ್ಟ್​ವೇರ್ ಮಾರ್ತೀವಿ ಅಂತಾ ಅದು ಹೇಳಿದ್ದಕ್ಕಾಗಿ. ಆದ್ರೆ, ಅದು ನಿಜಕ್ಕೂ ಸತ್ಯ ಹೇಳುತ್ತಿದೆಯಾ? ಲಾಭಕ್ಕಾಗಿ ಬೇರೆ ಬೇರೆ ಸಂಸ್ಥೆಗಳಿಗೆ, ಉದ್ಯಮಿಗಳಿಗೆ, ವೈರಿ ರಾಷ್ಟ್ರಗಳೀಗೆ ಮಾರಿರುವ ಸಾಧ್ಯತೆ ಇಲ್ಲವಾ? ಅನ್ನೋ ಪ್ರಶ್ನೆ ಕೂಡ ಸದ್ಯ ಜೋರಾಗಿ ಕೇಳಿ ಬರ್ತಿದೆ. ಇದಕ್ಕೂ ಉತ್ತರ ಇನ್ನಷ್ಟೇ ದೊರೆಯಬೇಕಿದೆ.

ಒಟ್ಟಿನಲ್ಲಿ ಬೆಂಕಿಗೆ ಗಂಟೆ ಕಟ್ಟೋರು ಯಾರು? ಅನ್ನೋ ಮಾತಿನಂತೆ ಇಂದು ಪೆಗರಸ್​ ಹಾವಳಿಯಾಗಿದೆ. ಇದ್ರಲ್ಲಿ ಕೇಂದ್ರ ಸರ್ಕಾರದ ಪಾತ್ರವಿದೆಯಾ? ಅಥವಾ ಯಾವುದಾದ್ರೂ ಖಾಸಗೀ ಸಂಸ್ಥೆಗಳ ಹಾವಳಿ ಇದೆಯಾ? ಭಾರತದ ವೈರಿ ರಾಷ್ಟ್ರಗಳ ಕೈವಾಡ ಇದೆಯಾ? ಅನ್ನೋ ಪ್ರಶ್ನೆಗೆ ಸೂಕ್ತ ತನಿಖೆಯಷ್ಟೇ ಉತ್ತರ ನೀಡಲಿದೆ.

ವಿಶೇಷ ಬರಹ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ನಿಮ್ಮ ರೊಮ್ಯಾಂಟಿಕ್ ಚಾಟ್, ಸೆಕ್ಸಿ ಫೋಟೋ ಎಷ್ಟು ಸೇಫ್? ಅಷ್ಟಕ್ಕೂ ಏನಿದು ಪೆಗಸಸ್? appeared first on News First Kannada.

Source: newsfirstlive.com

Source link