ನಿರಂತರ ಮಳೆಯಿಂದ ಹಾಳಾದ ರಸ್ತೆಗಳು, ರಸ್ತೆಗಳ ದುರಸ್ಥಿಗೆ ಬೇಕಿದೆ 133 ಕೋಟಿ ರೂಪಾಯಿ | Rs 133 crore for repair of roads damaged due to rain in kolar


ನಿರಂತರ ಮಳೆಯಿಂದ ಹಾಳಾದ ರಸ್ತೆಗಳು, ರಸ್ತೆಗಳ ದುರಸ್ಥಿಗೆ ಬೇಕಿದೆ 133 ಕೋಟಿ ರೂಪಾಯಿ

ನಿರಂತರ ಮಳೆಯಿಂದ ಹಾಳಾದ ರಸ್ತೆಗಳು

ಕೋಲಾರ: ಕಳೆದ ಕೆಲವು ದಿನಗಳಿಂದು ಸುರಿದ ನಿರಂತರ ಮಳೆಗೆ ಕೇವಲ ರೈತರ ಬೆಳೆಗಳು ಹಾನಿಯಾಗಿರುವುದಷ್ಟೇ ಅಲ್ಲ ಜನರು ಓಡಾಡುವ ರಸ್ತೆಗಳೂ ಕೂಡಾ ಹಾನಿಯಾಗಿದ್ದು ಸದ್ಯ ಜನರು ರಸ್ತೆಗಳಲ್ಲಿ ಓಡಾಡುವುದೇ ದುಸ್ಥರ ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಹಾಳಾಗಿರುವ ರಸ್ತೆಗಳ ನಿರ್ವಹಣೆಗೆ ನೂರಾರು ಕೋಟಿ ರೂಪಾಯಿ ಹಣ ಬೇಕಾಗಿದ್ದ ಲೋಕೋಪಯೋಗಿ ಇಲಾಖೆ ಸರ್ಕಾರದಿಂದ ಅನುದಾನಕ್ಕಾಗಿ ಮನವಿ ಮಾಡಿದ್ದಾರೆ.

ಕೋಲಾರ ಜಿಲ್ಲೆಯಾದ್ಯಂತ ಕಳೆದೊಂದು ತಿಂಗಳಿಂದ ಸುರಿದ ಭಾರಿ ಮಳೆಗೆ ಮೊದಲೇ ಹದಗೆಟ್ಟಿದ್ದ ರಸ್ತೆಗಳು ಮತ್ತಷ್ಟು ಹಾಳಾಗಿದ್ದು ಹಾಳಾಗಿರುವ ರಸ್ತೆಗಳಲ್ಲಿ ಜನರು ತಮ್ಮ ಜೀವವನ್ನು ಅಂಗೈಲಿಡಿದುಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ಕೋಟ್ಯಂತರ ಮೌಲ್ಯದ ರೈತರು ಬೆಳೆದ ಬೆಳೆ ನಷ್ಟವಾಗಿದೆ. ಮತ್ತೊಂದೆಡೆ ಜಿಲ್ಲೆಯಲ್ಲಿನ ರಸ್ತೆಗಳು ಹಾಗೂ ಸೇತುವೆಗಳಿಗೆ ತೀವ್ರ ಹಾನಿಯಾಗಿರುವುದು ಕಂಡುಬಂದಿದೆ. ಕೋಲಾರ ಜಿಲ್ಲಾ ಕೇಂದ್ರ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿನ ಪ್ರಮುಖ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರ ತ್ರಾಸದಾಯಕವಾಗಿದೆ. ಇದೀಗ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಗುಂಡಿ ಸಮಸ್ಯೆಗಳು ಹೆಚ್ಚಾಗಿದ್ದು ವಾಹನ ಸವಾರರಿಗೆ ಆತಂಕ ಮೂಡಿಸಿದೆ. ಪ್ರತಿ ಬಾರಿಯೂ ಈ ರೀತಿ ರಸ್ತೆಗಳ ಗುಂಡಿ ಸಮಸ್ಯೆ ಸೃಷ್ಟಿಯಾಗಿ ಜನರಿಂದ ಇಲಾಖೆ ವಿರುದ್ದ ತೀವ್ರ ಟೀಕೆ ಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಗುಂಡಿಗಳಿಗೆ ಅಧಿಕಾರಿಗಳು ಜಲ್ಲಿ ಹಾಗೂ ಮಣ್ಣು ತುಂಬಿ ಬರುತ್ತಿದ್ದು, ಕೆಲ ದಿನಗಳ ಬಳಿಕ ಮತ್ತೆ ಸಮಸ್ಯೆ ಮರುಕಳಿಸುತ್ತಿದೆ. ಸರಕಾರದಿಂದ ಸಮರ್ಪಕವಾಗಿ ಅನುದಾನ ಲಭ್ಯವಾಗದೆ ಪರಿಹಾರ ಸಿಗದಂತಾಗಿದೆ.

kolar rain

ನಿರಂತರ ಮಳೆಯಿಂದ ಹಾಳಾದ ರಸ್ತೆಗಳು

ಎಲ್ಲೆಲ್ಲಿ ಎಷ್ಟೆಷ್ಟು ರಸ್ತೆಗಳು ಹಾಳಾಗಿವೆ, ದುರಸ್ಥಿಗೆ ಎಷ್ಟು ಹಣ ಬೇಕಿದೆ?
ಜಿಲ್ಲೆಯಲ್ಲಿ 305 ಕಿ.ಮೀ.ಉದ್ದದ ರಾಜ್ಯ ಹೆದ್ದಾರಿ ಹಾಗೂ 1,223.75 ಕಿ.ಮೀ. ಉದ್ದದ ಜಿಲ್ಲಾ ಮುಖ್ಯರಸ್ತೆಗಳಿದ್ದು, ಭಾರಿ ಮಳೆಯಿಂದಾಗಿ ನಗರ, ಗ್ರಾಮೀಣ ಭಾಗಗಳಲ್ಲಿ 437.3 ಕಿ.ಮೀ. ಉದ್ದದ ರಾಜ್ಯ ಹಾಗೂ ಜಿಲ್ಲಾ ಮುಖ್ಯರಸ್ತೆಗಳಿಗೆ ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ. ಈ ನಿಟ್ಟಿನಲ್ಲಿ ಸದ್ಯ ಈ ಎಲ್ಲಾ ರಸ್ತೆಗಳ ದುರಸ್ಥಿತಿಗೆ 133.98 ಕೋಟಿ ರೂ. ಬೇಕು ಎಂದು ಲೋಕೋಪಯೋಗಿ ಇಲಾಖೆಯವರು ಅಂದಾಜು ಮಾಡಿದ್ದಾರೆ. ಮಳೆಯಿಂದಾಗಿ ಜಿಲ್ಲೆಯಾದ್ಯಂತ ರಸ್ತೆಗಳು, ಸೇತುವೆಗಳು ಹಾಗೂ ಸರಕಾರಿ ಕಟ್ಟಡಗಳ ಶಾಶ್ವತ ದುರಸ್ತಿಗೆ 133.98 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಅದರಂತೆ ಸರಕಾರಕ್ಕೆ ವರದಿ ಸಲ್ಲಿಸಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈಗ ತಕ್ಷಣಕ್ಕೆ ರಸ್ತೆಗಳ ತಾತ್ಕಾಲಿಕ ದುರಸ್ತಿಗೆ 13.75 ಕೋಟಿ ರೂ.ಬೇಕಾಗುತ್ತದೆ ಎಂದು ಅಂದಾಜಿಸಿದ್ದಾರೆ.

ಜಿಲ್ಲೆಯ ಆರು ತಾಲೂಕುಗಳಿಗೆ ಹೋಲಿಸಿದರೆ ಬಂಗಾರಪೇಟೆಯಲ್ಲಿ ಹೆಚ್ಚು ಮಳೆಯಾದ ಪರಿಣಾಮ ರೈಲ್ವೆ ಕೆಳ ಸೇತುವೆಗಳು ನೀರಿನಿಂದ ಭರ್ತಿಯಾದರೆ, 147.18 ಕಿ.ಮೀ. ಉದ್ದದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ರಸ್ತೆಗಳಿಗೆ ಹಾನಿಯಾಗಿರುವುದು ಕಂಡುಬಂದಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 93.28 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ 344.04 ಕಿ.ಮೀ. ಉದ್ದ ಜಿಲ್ಲಾ ಮುಖ್ಯ ರಸ್ತೆಗಳು ಮಳೆಯಿಂದಾಗಿ ಹಾಳಾಗಿವೆ.

ಜಿಲ್ಲೆಯಲ್ಲಿ ಯಾವ ಯಾವ ತಾಲ್ಲೂಕಿನಲ್ಲಿ ಎಷ್ಟು ಹಾನಿಯಾಗಿದೆ
ಕೋಲಾರ ತಾಲೂಕಿನಲ್ಲಿ ಕೋಲಾರ-ಟೇಕಲ್ ರಸ್ತೆಯಲ್ಲಿ ಸಹ್ಯಾದ್ರಿ ಕಾಲೇಜು ಬಳಿ, ಮುದುವತ್ತಿ, ಮುದುವಾಡಿ ಕೆರೆ ಕೋಡಿ ಪ್ರದೇಶದಲ್ಲಿ ಹೆಚ್ಚು ಹಾನಿಯಾಗಿದ್ದು, ಮಣಿಘಟ್ಟ-ಗಂಗರಸನಹಳ್ಳಿ, ತೊಟ್ಲಿ-ಮುದುವಾಡಿ ರಸ್ತೆ, ಬಂಗಾರಪೇಟೆಯಲ್ಲಿ ಬಲಮಂದೆ-ಕನುಮನಹಳ್ಳಿ ರಸ್ತೆ ತಮಿಳುನಾಡಿನ ಗಡಿಭಾಗ ಕೃಷ್ಣಗಿರಿಯವರೆಗೆ, ಬೂದಿಕೋಟೆ-ಬಲಮುಂದೆ, ಮರಾಠಹೊಸಹಳ್ಳಿ-ಪಾತರಾಮನಗುಳ್ಳ ರಸ್ತೆ, ಮುಳಬಾಗಿಲಿನಿಂದ ಸುವರ್ಣಹಳ್ಳಿ, ಮುಳಬಾಗಿಲು-ಕೆ. ಬೈಪಲ್ಲಿ, ಹರಪನಾಯಕನಹಳ್ಳಿ- ಕೊಲದೇವಿ-ಮಂಡಿಕಲ್ ರಸ್ತೆಗಳು ಹಾನಿಯಾಗಿವೆ. ಶ್ರೀನಿವಾಸಪುರ-ಕೋಲಾರ ಮುಖ್ಯ ರಸ್ತೆಯೂ ಅಲ್ಲಲ್ಲಿ ಹಳ ಬಿದ್ದಿದ್ದು, ಮಾಲೂರು-ಹೊಸೂರು ರಸ್ತೆ, ಚಿಕ್ಕತಿರುಪತಿ ರಸ್ತೆ, ಲಕ್ಕೂರು -ಚಿಕ್ಕತಿರುಪತಿ ಮಾರ್ಗ, ಮಾಲೂರು- ಡಿ.ಎನ್. ದೊಡ್ಡಿ, ಮಾಲೂರು-ಮಾಸ್ತಿ ಹೀಗೆ ಪಿಡಬ್ಲ್ಯಡಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳಿಗೆ ಹಾನಿಯಾಗಿದೆ. ಜತೆಗೆ ಭಾರೀ ವಾಹನಗಳು ಮಿತಿ ಮಿರಿದ ಭಾರ ಸಾಗಾಣಿಕೆ ಮಾಡುವುದು ಸಹ ರಸ್ತೆ ಹದಗೆಡಲು ಕಾರಣವಾಗಿದೆ.

kolar rain

ನಿರಂತರ ಮಳೆಯಿಂದ ಹಾಳಾದ ರಸ್ತೆಗಳು

ರಸ್ತೆಗಳಷ್ಟೇ ಅಲ್ಲಾ ಸರ್ಕಾರಿ ಕಟ್ಟಡಗಳಿಗೂ ಹಾನಿಯಾಗಿದೆ
ಮಳೆಯಿಂದಾಗಿ 14 ಸರ್ಕಾರಿ ಕಟ್ಟಡಗಳು ಹಾಗೂ 8 ಸೇತುವೆಗೆ ಹಾನಿಯಾಗಿದೆ. ಈ ಪೈಕಿ ಕೋಲಾರದಲ್ಲಿ 2, ಬಂಗಾರಪೇಟೆ 5, ಕೆಜಿಎಫ್ 1 ಕಟ್ಟಡ ಹಾನಿಗೀಡಾಗಿದ್ದು, ಶ್ರೀನಿವಾಸಪುರದಲ್ಲಿ 2 ರಾಜ್ಯ ಹೆದ್ದಾರಿ ಸೇತುವೆ, 3 ಜಿಲ್ಲಾ ಮುಖ್ಯ ರಸ್ತೆ ಸೇತುವೆ, ಮುಳಬಾಗಿಲಿನಲ್ಲಿ 1 ಸೇತುವೆ ಹಾನಿಗೀಡಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಇಲಾಖೆಯ ರಸ್ತೆಗಳು, ಸೇತುವೆಗಳು ಹಾಗೂ ಸರಕಾರಿ ಕಟ್ಟಡಗಳಿಗೆ ಹೆಚ್ಚಿನ ಹಾನಿಯಾಗಿದ್ದು ದುರಸ್ತಿಗೆ ಅನುದಾನ ಕೋರಿ ಸರಕಾರಕ್ಕೆ ಅಂದಾಜುಪಟ್ಟಿ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ದುರಸ್ತಿ ಕಾಮಗಾರಿ ಆರಂಭಿಸಲಾಗುವುದು ಎಂದು ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ್ ತಿಳಿಸಿದ್ದಾರೆ.

ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ

TV9 Kannada


Leave a Reply

Your email address will not be published. Required fields are marked *