ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಮತ್ತೊಮ್ಮೆ ಕರ್ನಾಟಕದಿಂದ ಸ್ಪರ್ಧಿಸಲಿ, ಆ್ಯಸಿಡ್ ನಾಗನಿಗೆ ಅತ್ಯಾಚಾರದ ಆರೋಪಿಗೆ ನೀಡುವ ಶಿಕ್ಷೆ ವಿಧಿಸಿ: ಶೋಭಾ ಕರಂದ್ಲಾಜೆ | Let Nirmala Sitharaman remind the Rajya Sabha again


ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಮತ್ತೊಮ್ಮೆ ಕರ್ನಾಟಕದಿಂದ ಸ್ಪರ್ಧಿಸಲಿ, ಆ್ಯಸಿಡ್ ನಾಗನಿಗೆ ಅತ್ಯಾಚಾರದ ಆರೋಪಿಗೆ ನೀಡುವ ಶಿಕ್ಷೆ ವಿಧಿಸಿ: ಶೋಭಾ ಕರಂದ್ಲಾಜೆ

ನಿರ್ಮಲಾ ಸೀತಾರಾಮನ್ ಮತ್ತು ಶೋಭಾ ಕರಂದ್ಲಾಜೆ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಗೆ ಮತ್ತೊಮ್ಮೆ ಕರ್ನಾಟಕದಿಂದ ಸ್ಪರ್ಧಿಸಲಿ ಎಂಬುದು ನಮ್ಮ ಆಶಯ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಜೊತೆಗೆ ಆ್ಯಸಿಡ್ ನಾಗೇಶ್​ನಿಗೆ ಅತ್ಯಾಚಾರದ ಆರೋಪಿಗಳಿಗೆ ನೀಡುವ ಶಿಕ್ಷೆ ವಿಧಿಸಬೇಕು ಎಂದರು.

ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala sitharaman) ಅವರು ಮತ್ತೊಮ್ಮೆ ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸಲಿ ಎಂಬುದು ನಮ್ಮ ಆಶಯ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ(Shobha karandlaje) ಹೇಳಿದರು. ನಿರ್ಮಲಾ ಸೀತಾರಾಮನ್ ರಾಜ್ಯಸಭೆ(Rajya sabha)ಗೆ ಕರ್ನಾಟಕದಿಂದ ಪ್ರವೇಶ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯದಿಂದ ದೆಹಲಿಗೆ ಪ್ರವೇಶಿಸಿದ ಅನೇಕರು ಮಹಾನ್ ಸಾಧನೆಗಳನ್ನು ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ದೇಶದ ಆರ್ಥಿಕ ಮತ್ತು ರಕ್ಷಣಾ ಸಚಿವೆಯಾಗಿರುವುದು ಸಣ್ಣವಿಚಾರ ಅಲ್ಲ. ಕೊರೋನಾದಂತಹಾ ಸವಾಲಿನ ಸಮಯದಲ್ಲಿ ಉತ್ತಮ ರೀತಿಯಲ್ಲಿ ದೇಶವನ್ನು ನಿರ್ವಹಣೆ ಮಾಡಿದ್ದಾರೆ ಎಂದು ಹೊಗಳಿಕೆಯ ಮಾತುಗಳನ್ನಾಡಿದರು.

ಮೂಲತಃ ತಮಿಳುನಾಡಿನವರಾದ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರು ಈಗಾಗಲೇ ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸಿ ಆಯ್ಕೆಯಾಗಿ ಕಳೆದ 6 ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದಾರೆ. ಇದೀಗ ಅವರ ಸೇವಾವಧಿ ಮುಕ್ತಾಯವಾದ ಹಿನ್ನೆಲೆ ಮತ್ತೊಮ್ಮೆ ರಾಜ್ಯಸಭೆಗೆ ಸ್ಪರ್ಧಿಸುತ್ತಾರೆಯೇ ಎಂಬ ಚರ್ಚೆಗಳು ಪಕ್ಷದೊಳಗೆ ಮತ್ತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಪ್ರಿಯಾಂಕಾ ಗಾಂಧಿ ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧೆ?

ಪ್ರಿಯಾಂಕಾ ಗಾಂಧಿ(Priyanka gandhi) ಕರ್ನಾಟಕದಿಂದಲೇ ರಾಜ್ಯಸಭೆಗೆ ಸ್ಪರ್ಧೆ ವಿಚಾರ ಸಂಬಂಧ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಚಿವೆ ಶೋಭಾ ಕರಂದ್ಲಾಜೆ, ಖಂಡಿತವಾಗಿ ಯಾರು ಬೇಕಾದರೂ ಕರ್ನಾಟಕಕ್ಕೆ ಬಂದು ಸ್ಪರ್ಧಿಸಲಿ. ತನ್ನ ಕೆಟ್ಟ ಸಮಯದಲ್ಲಿ ಇಂದಿರಾಗಾಂಧಿ ಮತ್ತು ಸೋನಿಯಾಗಾಂಧಿ ಕೂಡಾ ಕರ್ನಾಟಕದಿಂದ ಸ್ಪರ್ಧೆ ಮಾಡಿದ್ದರು. ಪ್ರಿಯಂಕಾ ಗಾಂಧಿಯವರ ಅಜ್ಜಿ, ಅಮ್ಮನನ್ನು ಸ್ವಾಗತಿಸಿದ್ದೇವೆ. ಅದೇ ರೀತಿಯಲ್ಲಿ ಅವರಿಗೂ ಸ್ವಾಗತಿಸುತ್ತೇವೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷವು ನೆಲಕಚ್ಚುತ್ತಾ ಇದೆ. ಕಾಂಗ್ರೆಸ್ ಪಕ್ಷವನ್ನು ಮೇಲೆತ್ತಲು ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶಕ್ಕೂ ಹೋಗಿದ್ದರು. ಅದೇ ರೀತಿ ಕರ್ನಾಟಕಕ್ಕೆ ಬರುತ್ತಾ ಇರಬಹುದು. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ ಅಲ್ವಾ. ಇದು ಒಳ್ಳೆಯ ಬೆಳವಣಿಗೆ, ಖಂಡಿತಾ ಬರಲಿ ಎಂದು ಹೇಳಿದರು.

ಈ ಸೌಹಾರ್ಧತೆ ಯಾರಿಗೆ?

ಉಡುಪಿಯಲ್ಲಿ ಸೌಹಾರ್ಧ ಸಮಾವೇಶ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಬಹುಸಂಖ್ಯಾತ ಜನರು ಶಾಂತಿಪ್ರಿಯರು ಇದ್ದೇವೆ. ಆದರೆ, ಈ ಸೌಹಾರ್ಧತೆ ಯಾರಿಗೆ ಎಂದು ಪ್ರಶ್ನಿಸಿದರು. ಮುಂದುವರೆದು ಮಾತನಾಡಿದ ಅವರು, ಬಹುಸಂಖ್ಯಾತ ಜನ ಸಂವಿಧಾನ, ಕೋರ್ಟ್ ಅನ್ನು ಗೌರವಿಸ್ತೇವೆ. ಹೀಗಾಗಿ ಬಹುಸಂಖ್ಯಾತರಿಗೆ ಸೌಹಾರ್ಧತೆಯ ನೀತಿ ಪಾಠ ಹೇಳುವ ಅಗತ್ಯ ಇಲ್ಲ. ಸಂವಿಧಾನ, ಕೋರ್ಟ್ ಆದೇಶ ಉಲ್ಲಂಘನೆ ಮಾಡುವವರಿಗೆ ಸೌಹಾರ್ಧತೆಯ ಪಾಠ ಮಾಡಲಿ ಎಂದು ಚಾಟಿ ಬೀಸಿದರು.

ಆ್ಯಸಿಡ್ ನಾಗನಿಗೆ ಅತ್ಯಾಚಾರ ಪ್ರಕರಣದ ಶಿಕ್ಷೆ

ಬೆಂಗಳೂರಿನಲ್ಲಿ ಯುವತಿ ಮೇಲಿನ ಆ್ಯಸಿಡ್​​ ದಾಳಿ ಪ್ರಕರಣ ಸಂಬಂಧ ಪ್ರತಿಕ್ರಿಸಿದ ಕೇಂದ್ರಸಚಿವೆ, ಆ್ಯಸಿಡ್ ದಾಳಿಗೊಳಗಾದ ಯುವತಿ ಬದುಕಿದ್ದೂ ಸತ್ತಂತೆ. ಹೀಗಾಗಿ ಅತ್ಯಾಚಾರ ಆರೋಪಿಗೆ ನೀಡುವ ಶಿಕ್ಷೆ ನಾಗೇಶ್​ಗೆ ವಿಧಿಸಬೇಕು. ಮತ್ತೆ ಇಂಥ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

TV9 Kannada


Leave a Reply

Your email address will not be published. Required fields are marked *