ನಾಳೆಯೇ ಪಂಜಾಬ್ ಚುನಾವಣೆಗೆ ಮತದಾನ. ಇಂತಹ ಸಂದರ್ಭದಲ್ಲಿ ಆಪ್ ಪಕ್ಷದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಇದನ್ನ ಕೇಂದ್ರ ಗೃಹ ಸಚಿವಾಲಯ ಕೂಡ ಗಂಭೀರವಾಗಿ ಪರಿಗಣಿಸಿದ್ದು, ಕೇಂಜ್ರಿವಾಲ್ ವಿರುದ್ಧ ಎಫ್ಐಆರ್ ದಾಖಲಾಗೋ ಎಲ್ಲಾ ಸಾಧ್ಯತೆಗಳಿವೆ. ಕೇಜ್ರಿವಾಲ್ ವಿರುದ್ಧ ಇರೋ ಆರೋಪ ಏನು? ಆ ಆರೋಪ ಮಾಡಿದ್ಯಾರು? ಇಲ್ಲಿದೆ ಡಿಟೇಲ್ ರಿಪೋರ್ಟ್..
ಪಂಜಾಬ್ ವಿಧಾನಸಭಾ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದ್ದು, ನಾಳೆಯೇ ಮತದಾನ. ಈ ಮಧ್ಯೆ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಕೇಜ್ರಿವಾಲ್ ನಿದ್ದೆಗೆಡಿಸಿದ್ದಾರೆ. ಕೈ-ಕಮಲ ವೋಟ್ ಬ್ಯಾಂಕ್ಗೆ ಕೇಜ್ರಿವಾಲ್ ಕೈ ಹಾಕಿದ್ದು, ರಾಷ್ಟ್ರೀಯ ಪಕ್ಷಗಳಿಗೆ ನಡುಕ ಶುರುವಾಗಿದೆ.
ನಿಷೇಧಿತ ಸಂಘಟನೆ ಜೊತೆ ಕೇಜ್ರಿವಾಲ್ಗಿದ್ಯಾ ನಂಟು?
ಮತದಾನಕ್ಕೆ ಕೌಂಟ್ಡೌನ್ ಶುರುವಾಗಿರೋ ಬೆನ್ನಲ್ಲೇ ಕೇಜ್ರಿವಾಲ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪತ್ರ ವಿನಿಮಯವೂ ನಡೆದಿದೆ. ಹೌದು.. ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ ಹಾಗೂ ಆಮ್ ಆದ್ಮಿ ಪಾರ್ಟಿ ನಡುವೆ ನಂಟು ಇರುವ ಬಗ್ಗೆ ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ತನಿಖೆಗೆ ಆಗ್ರಹಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಚನ್ನಿ ಪತ್ರದಲ್ಲಿ ಏನಿದೆ?
- ಆಪ್- ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ ಸಂಪರ್ಕದಲ್ಲಿದೆ
- ಸಿಖ್ಸ್ ಫಾರ್ ಜಸ್ಟೀಸ್ ಒಂದು ಪ್ರತ್ಯೇಕತಾವಾದಿ ಸಂಘಟನೆ
- ಪಂಜಾಬ್ನಲ್ಲಿ ಆಪ್ಗೆ ನಿಷೇಧಿತ ಸಂಘಟನೆ ಬೆಂಬಲ ನೀಡುತ್ತಿದೆ
- ಕೇಜ್ರಿವಾಲ್ ಆ ಸಂಘಟನೆಯ ನೆರವು ಪಡೆಯುತ್ತಿದ್ದಾರೆ
- ಇದು ದೇಶದ ಭದ್ರತೆ ದೃಷ್ಟಿಯಿಂದ ಅಪಾಯಕಾರಿ
- ಆಪ್ ಅಧಿಕಾರದ ದುರಾಸೆ ದೇಶದ ಭದ್ರತೆ ಬೆದರಿಕೆಯೊಡ್ಡಿದೆ
- 2017ರ ಚುನಾವಣೆಯಲ್ಲಿ ಆಪ್ಗೆ ಸಿಖ್ಸ್ ಫಾರ್ ಜಸ್ಟೀಸ್ ಬೆಂಬಲ ನೀಡಿತ್ತು
- 2022ರ ಚುನಾವಣೆಯಲ್ಲೂ ಆಪ್ಗೆ ನಿಷೇಧಿತ ಸಂಘಟನೆ ಬೆಂಬಲ ನೀಡಿದೆ
- ಆಪ್ಗೆ ಮತ ಹಾಕುವಂತೆ ನಿಷೇಧಿತ ಸಂಘಟನೆ ಪ್ರೇರೇಪಿಸುತ್ತಿದೆ
- ಆಪ್-ಸಿಖ್ಸ್ ಫಾರ್ ಜಸ್ಟೀಸ್ ಸಂಪರ್ಕದ ಬಗ್ಗೆ ತನಿಖೆ ನಡೆಸಿ
ಕಾಂಗ್ರೆಸ್ ಸಿಎಂಗೆ ಅಮಿತ್ ಶಾ ಭರವಸೆ!
ಕಾಂಗ್ರೆಸ್ ಸಿಎಂ ಮಾಡಿರೋ ಆರೋಪವನ್ನ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾನು ಈ ಬಗ್ಗೆ ಮುತುವರ್ಜಿವಹಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತೇನೆ. ನಿಮ್ಮ ಆರೋಪ ಗಂಭೀರವಾಗಿ ಪರಿಗಣಿಸಿದ್ದು, ಖಂಡಿತಾ ತನಿಖೆ ನಡೆಸುತ್ತೇವೆ ಎಂದು ಪತ್ರ ಬರೆದು ಚನ್ನಿಗೆ ಭರವಸೆ ನೀಡಿದ್ದಾರೆ.
ಎಫ್ಐಆರ್ ಸ್ವಾಗತಿಸುತ್ತೇನೆ ಎಂದ ಕೇಜ್ರಿವಾಲ್
ಕಾಂಗ್ರೆಸ್ ಮಾಡಿರೋ ಆರೋಪ ಹಾಗೂ ಅಮಿತ್ ಶಾ ಭರವಸೆ ಬಗ್ಗೆ ಪ್ರತಿಕ್ರಿಯಿಸಿರೋ ದೆಹಲಿ ಸಿಎಂ ಕೇಜ್ರಿವಾಲ್, ಇನ್ನೆರಡು ದಿನಗಳಲ್ಲಿ ನನ್ನ ವಿರುದ್ಧ ಎನ್ಐಎ ಎಫ್ಐಆರ್ ದಾಖಲಿಸಬಹುದು. ನಾನು ಎಲ್ಲಾ ಎಫ್ಐಆರ್ ಸ್ವಾಗತಿಸುತ್ತೇನೆ ಎಂದಿದ್ದಾರೆ. ಒಂದು ಬಾರಿ ನನಗೆ ಅವಕಾಶ ಕೊಡಿ ಸಾಕು ಅಂತ ಪಂಜಾಬ್ ಜನತೆಗೆ ಮನವಿ ಮಾಡಿದ್ದಾರೆ.
ಎಲ್ಲಾ ಭ್ರಷ್ಟಾಚಾರಿಗಳು ಒಗ್ಗೂಡಿದ್ದಾರೆ. ನನಗೆ ಹೆದರಿ ಒಂದಾಗಿದ್ದಾರೆ. ಹಾಗಾಗಿ, ಅವರ ಪಾಲಿಗೆ ನಾನು ಭಯೋತ್ಪಾದಕನೇ ಹೌದು. ನನ್ನಿಂದಾಗಿ ಅವರಿಗೆ ನೆಮ್ಮದಿಯ ನಿದ್ದೆ ಬರುತ್ತಿಲ್ಲ. 100 ವರ್ಷಗಳ ಹಿಂದೆ ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ಕರೆದರು. ಇಂದು ಭಗತ್ ಸಿಂಗ್ ಅವರ ಶಿಷ್ಯನಾದ ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ.
-ಅರವಿಂದ ಕೇಜ್ರಿವಾಲ್, ದೆಹಲಿ ಸಿಎಂ
ಒಟ್ಟಿನಲ್ಲಿ ಮತದಾನಕ್ಕೆ ಒಂದು ದಿನ ಇರುವಂತೆಯೇ ಕೇಳಿಬಂದಿರುವ ಗಂಭೀರ ಆರೋಪದಿಂದ ಕೇಜ್ರಿವಾಲ್ ವಿಚಿಲಿತರಾದಂತೆ ಕಾಣುತ್ತಿಲ್ಲ. ಆದ್ರೆ, ಸಮಗ್ರ ಹಾಗೂ ಸೂಕ್ತ ತನಿಖೆಯಿಂದ ಮಾತ್ರ ಇದೊಂದು ಪೂರ್ವ ನಿಯೋಜಿತ ಪಿತೂರಿನಾ ಅಥವಾ ನಿಜವಾಗ್ಲೂ ನಿಷೇಧಿತ ಸಂಘಟನೆ ಜೊತೆ ಕೇಜ್ರಿವಾಲ್ಗೆ ನಂಟಿದ್ಯಾ ಅನ್ನೋ ಸತ್ಯ ಹೊರಬರಲು ಸಾಧ್ಯ.