ನೀರಿನಂತೆ ದುಡ್ಡು ಖರ್ಚು ಮಾಡಿ 10 ನಟಿಯರನ್ನು ಕರೆಸಿಕೊಂಡ ‘ಡೇಂಜಸರ್​ ವಿಜ್ಞಾನಿ’ ಸರವಣನ್​ | Saravanan Arul starrer The Legend movie trailer launch event attended by 10 heroines


ನೀರಿನಂತೆ ದುಡ್ಡು ಖರ್ಚು ಮಾಡಿ 10 ನಟಿಯರನ್ನು ಕರೆಸಿಕೊಂಡ ‘ಡೇಂಜಸರ್​ ವಿಜ್ಞಾನಿ’ ಸರವಣನ್​

‘ದಿ ಲೆಜೆಂಡ್’​ ಸಿನಿಮಾದ ಟ್ರೇಲರ್​ ಲಾಂಚ್​ ಕಾರ್ಯಕ್ರಮಕ್ಕೆ ಬಂದ 10 ಹೀರೋಯಿನ್​ಗಳು

The Legend Movie: ಸ್ಟಾರ್​ ನಟರೂ ಕೂಡ ಮಾಡದ ರೀತಿಯಲ್ಲಿ ಸರವಣನ್​ ಅವರು ಪ್ರಚಾರ ಮಾಡುತ್ತಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್​ ಮಾಡಬಹುದು ಎಂಬ ಕೌತುಕ ಮೂಡಿದೆ.

ಚಿತ್ರರಂಗ ಎಂಬುದು ಮಾಯಾ ಲೋಕ. ಇಲ್ಲಿ ಏನು ಬೇಕಾದರೂ ಆಗಬಹುದು. ಅಂಥದ್ದೆಲ್ಲ ಆಗಬೇಕು ಎಂದರೆ ಹಣವನ್ನು ನೀರಿನಂತೆ ಖರ್ಚು ಮಾಡಬೇಕು. ಈ ಕಾರಣಕ್ಕಾಗಿ ಉದ್ಯಮಿ ಕಮ್​ ನಟ ಸರವಣನ್​ ಅರುಲ್ (Saravanan Arul)​ ಅವರು ಸುದ್ದಿ ಆಗುತ್ತಿದ್ದಾರೆ. ಅವರು ನಟಿಸಿರುವ ‘ದಿ ಲೆಜೆಂಡ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿಕ್ಕಾಪಟ್ಟೆ ಅದ್ದೂರಿಯಾಗಿ ಈ ಚಿತ್ರದ ಆಡಿಯೋ ಮತ್ತು ಟ್ರೇಲರ್​ ರಿಲೀಸ್​ ಮಾಡಲಾಗಿದೆ. ಸರಣವನ್​ ಅವರು ಸೌಂಡು ಮಾಡುತ್ತಿರುವುದು ನೋಡಿ ಕಾಲಿವುಡ್​ (Kollywood) ಮಂದಿ ದಂಗಾಗಿದ್ದಾರೆ. ಹೌದು, ತುಂಬ ಅದ್ದೂರಿಯಾಗಿ ಈ ಸಿನಿಮಾದ ಪ್ರಚಾರ ಮಾಡಲಾಗುತ್ತಿದೆ. ‘ದಿ ಲೆಜೆಂಡ್​’ (The Legend Movie) ಸಿನಿಮಾದಲ್ಲಿ ಸರವಣನ್​​ ಅವರು ವಿಜ್ಞಾನಿ ಮತ್ತು ಗ್ಯಾಂಗ್​ಸ್ಟರ್​ ಪಾತ್ರ ಮಾಡಿದ್ದಾರೆ. ಆ ಪಾತ್ರವನ್ನು ಮೋಸ್ಟ್​ ಡೇಂಜರಸ್​ ವಿಜ್ಞಾನಿ ಎಂದು ಟ್ರೇಲರ್​ನಲ್ಲಿ ಬಣ್ಣಿಸಲಾಗಿದೆ. ಟ್ರೇಲರ್​ ಲಾಂಚ್​ ಸಲುವಾಗಿ ಅವರು ಬರೋಬ್ಬರಿ 10 ಟಾಪ್​ ನಾಯಕಿಯರನ್ನು ವೇದಿಕೆಗೆ ಆಹ್ವಾನಿಸಿರುವುದು ಸುದ್ದಿ ಆಗಿದೆ. ಇದಕ್ಕಾಗಿ ಅವರು ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಂಥ ಹಲವು ಕಾರಣಗಳಿಂದಾಗಿ ಈ ಸಿನಿಮಾ ಗಮನ ಸೆಳೆಯುತ್ತಿದೆ.

ಯಾವುದೇ ಸಿನಿಮಾಗೆ ಪ್ರಚಾರ ಎಂಬುದು ತುಂಬ ಮುಖ್ಯ. ಕೆಲವೊಮ್ಮೆ ತಾವೇ ನಟಿಸಿದ ಸಿನಿಮಾ ಪ್ರಚಾರಕ್ಕೆ ನಟಿಯರು ಬರುವುದಿಲ್ಲ. ಆದರೆ ‘ದಿ ಲೆಜೆಂಡ್​’ ಸಿನಿಮಾ ವಿಚಾರದಲ್ಲಿ ಬೇರೆಯದೇ ಆಗಿದೆ. ಚಿತ್ರಕ್ಕೆ ಸಂಬಂಧವೇ ಇಲ್ಲದ ಹಲವು ನಟಿಯರು ಆಗಮಿಸಿ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಇದಕ್ಕಾಗಿ ಅವರೆಲ್ಲರಿಗೂ ದುಬಾರಿ ಸಂಭಾವನೆ ನೀಡಲಾಗಿದೆ. ಖಾಸಗಿ ವಿಮಾನ ಕಳಿಸಿಕೊಟ್ಟು ಎಲ್ಲರನ್ನೂ ಕರೆಸಿಕೊಳ್ಳಲಾಗಿದೆ ಎಂದು ಸುದ್ದಿ ಆಗಿದೆ.

ಚೆನ್ನೈನ ಜವಾಹರಲಾಲ್​ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ‘ದಿ ಲೆಜೆಂಡ್​’ ಸಿನಿಮಾದ ಟ್ರೇಲರ್​ ಲಾಂಚ್​ ಮಾಡಲಾಗಿದೆ. ನಟಿಯರಾದ ಶ್ರದ್ಧಾ ಶ್ರೀನಾಥ್​, ಪೂಜಾ ಹೆಗ್ಡೆ, ಶ್ರೀಲೀಲಾ, ತಮನ್ನಾ ಭಾಟಿಯಾ, ಊರ್ವಶಿ ರೌಟೇಲಾ, ಹನ್ಸಿಕಾ ಮೋಟ್ವಾನಿ, ಲಕ್ಷ್ಮೀ ರೈ, ಡಿಂಪಲ್​ ಹಯಾತಿ, ಯಶಿಕಾ ಆನಂದ್​, ನೂಪುರ್​ ಸನನ್​ ಅವರು ಈ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿದ್ದಾರೆ. ಸ್ಟಾರ್​ ನಟರೂ ಕೂಡ ಮಾಡದ ರೀತಿಯಲ್ಲಿ ಸರವಣನ್​ ಅವರು ಪ್ರಚಾರ ಮಾಡುತ್ತಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್​ ಮಾಡಬಹುದು ಎಂಬ ಕೌತುಕ ಮೂಡಿದೆ.

‘ದಿ ಲೆಜೆಂಡ್​’ ಸಿನಿಮಾಗೆ ಜೆ.ಡಿ. ಜೆರ್ರಿ ಅವರು ನಿರ್ದೇಶನ ಮಾಡಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಸಿನಿಮಾದ ಟ್ರೇಲರ್​ 30 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಹೀರೋ ಆಗಿ ನಟಿಸಿರುವ ಸರವಣನ್​ ಅವರೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಊರ್ವಶಿ ರೌಟೇಲಾ ಅವರು ನಾಯಕಿಯಾಗಿ ನಟಿಸಿದ್ದು, ಈ ಮೂಲಕ ಇದೇ ಮೊದಲ ಬಾರಿಗೆ ಅವರು ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ನಾಸರ್​, ಯೋಗಿ ಬಾಬು, ಗೀತಿಕಾ ಮುಂತಾದವರು ಕೂಡ ಅಭಿನಯಿಸಿದ್ದಾರೆ. ಟ್ರೇಲರ್​ನಲ್ಲಿ ಆ್ಯಕ್ಷನ್​ ದೃಶ್ಯಗಳು ಹೈಲೈಟ್​ ಆಗಿವೆ. ಶೀಘ್ರದಲ್ಲೇ ಈ ಸಿನಿಮಾ ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *