ನೀರಿನ ಪಾತ್ರೆ ಮುಟ್ಟಿದ್ದಕ್ಕೆ ಶಾಲಾ ಶಿಕ್ಷಕನಿಂದ ಥಳಿತಕ್ಕೊಳಗಾದ ದಲಿತ ಬಾಲಕ ಸಾವು; ರಾಜಸ್ಥಾನ ಸರ್ಕಾರದ ವಿರುದ್ಧ ಬಿಜೆಪಿ, ಬಿಎಸ್​​ಪಿ ಕಿಡಿ | Dalit boy’s death in Rajasthan’s Jalore BJP, BSP criticise Congress govt


ದಲಿತ ಬಾಲಕನ ಸಾವು ಪ್ರಕರಣ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು , ಬಿಎಸ್ ಪಿ ಮತ್ತು ಬಿಜೆಪಿ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದೆ

ನೀರಿನ ಪಾತ್ರೆ ಮುಟ್ಟಿದ್ದಕ್ಕೆ ಶಾಲಾ ಶಿಕ್ಷಕನಿಂದ ಥಳಿತಕ್ಕೊಳಗಾದ ದಲಿತ ಬಾಲಕ ಸಾವು; ರಾಜಸ್ಥಾನ ಸರ್ಕಾರದ ವಿರುದ್ಧ ಬಿಜೆಪಿ, ಬಿಎಸ್​​ಪಿ ಕಿಡಿ

ರಾಜಸ್ಥಾನ ಪೊಲೀಸ್

ರಾಜಸ್ಥಾನದ (Rajasthan) ಜಲೋರ್ ಎಂಬಲ್ಲಿ ಮೇಲ್ಜಾತಿಯವರಿಗಾಗಿ ಇರಿಸಿದ್ದ ನೀರಿನ ಪಾತ್ರೆಯನ್ನು ಮುಟ್ಟಿದ್ದ 9ರ ಹರೆಯದ ದಲಿತ ಬಾಲಕನಿಗೆ (Dalit Boy) ಶಿಕ್ಷಕರೊಬ್ಬರು ಥಳಿಸಿದ್ದು, ಬಾಲಕ ಸಾವಿಗೀಡಾಗಿದ್ದಾನೆ. ಈ ಪ್ರಕರಣ ತನಿಖೆಗಾಗಿ ಪರಿಶಿಷ್ಟ ಜಾತಿಗಾಗಿರುವ ರಾಷ್ಟ್ರೀಯ ಆಯೋಗ ಮಂಗಳವಾರ ಜಲೋರ್​​ಗೆ ಹೋಗಲಿದೆ. ದಲಿತ ಬಾಲಕನ ಸಾವು ಪ್ರಕರಣ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು , ಬಿಎಸ್ ಪಿ ಮತ್ತು ಬಿಜೆಪಿ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದೆ. ಜಲೋರ್ ನ ಸರಸ್ವತಿ ವಿದ್ಯಾ ಮಂದಿರದಲ್ಲಿ ಕಲಿಯುತ್ತಿದ್ದ ಮೂರನೇ ತರಗತಿ ವಿದ್ಯಾರ್ಥಿ ಇಂದ್ರ ಕುಮಾರ್ ಮೇಲೆ ಚೈಲ್ ಸಿಂಗ್ ಎಂಬ ಶಿಕ್ಷಕ ಜುಲೈ 20ರಂದು ಹಲ್ಲೆ ನಡೆಸಿದ್ದರು. ಸಿಂಗ್ ಅವರನ್ನು ಹತ್ಯೆ ಮತ್ತು ಎಸ್​​ಸಿ/ ಎಸ್​​ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಜಲೋರ್​​ನ ಆಸ್ಪತ್ರೆಯಲ್ಲಿ ಮೊದಲು ಚಿಕಿತ್ಸೆ ಪಡೆದ ಕುಮಾರ್ ಆಮೇಲೆ ಭಿನ್ಮಾಲ್ ಮತ್ತು ಉದಯ ಪುರದಲ್ಲಿ ಚಿಕಿತ್ಸೆ ಪಡೆದಿದ್ದು ಅಲ್ಲಿಂದ ಅಹಮದಾಬಾದ್​​ಗೆ ಕರೆದೊಯ್ಯಲಾಗಿತ್ತು. ಅಲ್ಲಿ ಕುಮಾರ್ ಕೊನೆಯುಸಿರೆಳೆದಿದ್ದಾನೆ. ಹಲ್ಲೆಗೊಳಗಾಗಿ ಬರೋಬ್ಬರಿ 24 ದಿನಗಳ ನಂತರ ಬಾಲಕ ಸಾವಿಗೀಡಾಗಿದ್ದಾನೆ.

ಮಾಯಾವತಿ ಖಂಡನೆ
ಇದು ಹೃದಯ ವಿದ್ರಾವಕ ಸಂಗತಿ. ಇದೊಂದೇ ಅಲ್ಲ. ಜಾತಿ ತಾರತಮ್ಯ ರಾಜಸ್ಥಾನದಲ್ಲಿ ಸಾಮಾನ್ಯವಾಗಿದ್ದು ಪ್ರತಿ ದಿನವೂ ನಡೆಯುತ್ತದೆ. ರಾಜಸ್ಥಾನದಲ್ಲಿನ ಸರ್ಕಾರ ದಲಿತರ, ಬುಡಕಟ್ಟು ಜನಾಂಗ ಮತ್ತು ಇತರ ಹಿಂದುಳಿದ ಜನರ ಬದುಕು ಮತ್ತು ಘನತೆಯನ್ನು ಕಾಪಾಡಲು ವಿಫಲವಾಗಿದೆ ಎಂಬುದು ಸ್ಪಷ್ಟ. ಹಾಗಾಗಿ ಸರ್ಕಾರವನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ತರಬೇಕು ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಟ್ವೀಟ್ ಮಾಡಿದ್ದಾರೆ.

ಶೀಘ್ರದಲ್ಲೇ ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ಟ್ವೀಟ್ ಮಾಡಿದ್ದಾರೆ. ಸಿಎಂ ಪರಿಹಾರ ನಿಧಿಯಿಂದ ಸಂತ್ರಸ್ತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ಧನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಘಟನೆಯ ಸಂಪೂರ್ಣ ವರದಿಯನ್ನು ನೀಡುವಂತೆ ರಾಜಸ್ಥಾನದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ನೋಟಿಸ್ ಕಳುಹಿಸುತ್ತೇವೆ. ಈ ಕುರಿತು ತನಿಖೆ ನಡೆಸಲು ಮಂಗಳವಾರ ತಂಡವನ್ನು ಸ್ಥಳಕ್ಕೆ ಕಳುಹಿಸುತ್ತಿದ್ದೇವೆ. ಆಯೋಗವು ಜೈಪುರದಲ್ಲಿ ಆಗಸ್ಟ್ 24-25 ರಂದು ರಾಜ್ಯ ಪರಿಶೀಲನಾ ಸಭೆಯನ್ನು ನಡೆಸುತ್ತಿದೆ. ನಾವು ಈ ವಿಷಯವನ್ನು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಎಸ್ ಸಿ ಆಯೋಗದ ಅಧ್ಯಕ್ಷ ವಿಜಯ್ ಸಂಪ್ಲ ಅವರು ಭಾನುವಾರ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಆಯೋಗದ ಸದಸ್ಯ ಸುಭಾಷ್ ಪಾರ್ಧಿ ನೇತೃತ್ವದ ತಂಡ ರಾಜಸ್ಥಾನಕ್ಕೆ ಭೇಟಿ ನೀಡಲಿದ್ದು, ಅಲ್ಲಿಗೆ ಹೋಗಿ ಬಂದ ನಂತರ ವರದಿ ಸಲ್ಲಿಸಲಿದೆ. ಖಾಸಗಿ ಶಾಲೆಯಲ್ಲಿ ಮೇಲ್ಜಾತಿಯವರಿಗೆ ಮತ್ತು ಕೆಳಜಾತಿಯವರಿಗೆ ಅಂತ ಎರಡು ನೀರಿನ ಪಾತ್ರೆಗಳನ್ನು ಇಡಲಾಗಿದೆ. ಇದು ಸ್ವೀಕಾರಾರ್ಹವಲ್ಲ. ಇದರ ಬಗ್ಗೆ ಕೇಳಬೇಕಿದೆ ಎಂದು ಸಂಪ್ಲ ಹೇಳಿದ್ದಾರೆ.

ಗುಜರಾತ್ ಕಾಂಗ್ರೆಸ್ ಶಾಸಕ ಮತ್ತು ರಾಷ್ಟ್ರೀಯ ದಲಿತ್ ಅಧಿಕಾರ್ ಮಂಚ್ ಕನ್ವೀನರ್ ಜಿಗ್ನೇಶ್ ಮೇವಾನಿ ಆ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ್ದು ಈ ಸುದ್ದಿ ಭಯಾನಕ ಎಂದಿದ್ದಾರೆ. ಹುಟ್ಟಿನಿಂದಲೇ ತಾವು ಶೇಷ್ಠ ಮತ್ತು ಇನ್ನೊಬ್ಬರು ಕೆಳಸ್ತರದವರು ಎಂದು ಮಾಡುವುದು ಯಾವುದು ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಮಾಹಿತಿ ಪ್ರಕಾರ 19 ಪ್ರಮುಖ ನಗರಗಳಲ್ಲಿ 2017 ರಲ್ಲಿ 30 ಕೊಲೆಗಳು ಸೇರಿದಂತೆ ಎಸ್ ಸಿ ವಿರುದ್ಧ 961 ಅಪರಾಧಗಳು ದಾಖಲಾಗಿವೆ ಎಂದು ತೋರಿಸುತ್ತದೆ. 2019 ರಲ್ಲಿ, ಪರಿಶಿಷ್ಟ ಜಾತಿಯವರಳ ಮೇಲಿನ ದೌರ್ಜನ್ಯಗಳು 1,398 ಕ್ಕೆ ಏರಿದೆ. 2020 ರಲ್ಲಿ, 40 ಕೊಲೆಗಳು ಸೇರಿದಂತೆ 1,346 ಅಂತಹ ಅಪರಾಧಗಳು ನಡೆದಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *