ನೀವು ಬಳಸುತ್ತಿರುವ ನಂದಿನಿ ತುಪ್ಪ ನಕಲಿ ಅಗಿರಬಹುದು, ಖರೀದಿಸುವ ಮುನ್ನ ಒಮ್ಮೆ ಖಚಿತಪಡಿಸಿಕೊಳ್ಳಿ | KMF vigilance team and police bust adulterated Nandini ghee manufacturing unit Nelamangala ARB


ನೀವು ಬೆಂಗಳೂರು ನಗರ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ವಾಸಿಸುತ್ತಿದ್ದರೆ ಮತ್ತು ನಂದಿನಿ ತುಪ್ಪದ (Nandini Ghee) ಅಭಿಮಾನಿಯಾಗಿ ಅದನ್ನು ನಿಯಮಿತವಾಗಿ ಬಳಸುತ್ತಿದ್ದರೆ ಕಲಬೆರಕೆ ಅಥವಾ ನಕಲಿ ತುಪ್ಪವನ್ನು ತಿನ್ನುತ್ತಿರುವ ಸಾಧ್ಯತೆಯಿದೆ. ಇದನ್ನು ನಾವು ಯಾಕೆ ಹೇಳುತ್ತಿದ್ದೇವೆ ಅಂತ ನಿಮಗೆ ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಗುರುವಾರ ನೆಲಮಂಗಲನಲ್ಲಿ (Nelamangala) ನಕಲಿ ತುಪ್ಪ ತಯಾರಿಸುವ ಅಡ್ಡೆಯೊಂದರ ಮೇಲೆ ದಾಳಿ ನಡೆಸಿ ನಂದಿನಿ ತುಪ್ಪದ ನಕಲಿ ಪ್ಯಾಕೆಟ್​ಗಳ ಜೊತೆ ರೂ. 15 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನೆಲಮಂಗಲನಲ್ಲಿ ನಕಲಿ ನಂದಿನಿ ತಯಾರಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಬಳಿಕ ಕೆ ಎಮ್ ಎಫ್ (KMF) ಜಾಗೃತ ದಳದ ಅಧಿಕಾರಿಗಳು ಅಶೋಕ್, ಜಯರಾಮ್ ಮತ್ತು ಸುರೇಶ್ ಅವರನ್ನೊಳಗೊಂಡ ತಂಡವೊಂದು ನೆಲಮಂಗಲ ಉಪ-ವಿಭಾಗದ ಡಿವೈಎಸ್ ಪಿ ಗೌತಮ್, ಮಾದನಾಯಕನಹಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ ಆವರ ನೆರವಿನೊಂದಿಗೆ ಅಡ್ಡೆಯ ಮೇಲೆ ದಾಳಿ ನಡೆಸಿದಾಗ 40 ವರ್ಷ ವಯಸ್ಸಿನ ರಾಜಸ್ತಾನ ವ್ಯಕ್ತಿಯೊಬ್ಬ ನಕಲಿ ತುಪ್ಪ ತಯಾರು ಮಾಡುತ್ತಿರುವುದು ಪತ್ತೆಯಾಗಿದೆ.

ಆರೋಪಿಯ ಹೆಸರು ಬಾಬುಲಾಲ್ ಆಗಿದ್ದು ಮೊದಲು ಇವನು ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದನಂತೆ. ಆದರೆ ಕೋವಿಡ್-19 ಪಿಡುಗಿನಿಂದಾಗಿ ವ್ಯಾಪಾರದಲ್ಲಿ ಭಾರಿ ಪ್ರಮಾಣದ ನಷ್ಟ ಉಂಟಾದ ಮೇಲೆ ಕಲಬೆರಕೆ ತುಪ್ಪ ತಯಾರಿಸಲಾರಂಭಿಸಿದ್ದಾನೆ.

ಈ ದಂಧೆಯಲ್ಲಿ ಬಾಬುಲಾಲ್ ಅಲ್ಲದೆ ಬೇರೆಯವರು ಸಹ ಭಾಗಿಯಾಗಿರುವ ಸಾಧ್ಯತೆ ಇದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಮಾದನಾಯಕನಹಳ್ಳಿ ಪೊಲೀಸರು ತನಿಖೆ ಮುದುವರಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *