ನೀವು ಹಣ ಕೊಡ್ತೀರಿ ಗಂಡಸರು ಕುಡಿದು ಹಾಳು ಮಾಡ್ತಾರೆ, ಜಮೀನು ಕೊಡಿಸಿ ಸ್ವಾಮಿ: ಬೆಳಗಾವಿ ಡಿಸಿಗೆ ಮಹಿಳೆಯರ ಆಗ್ರಹ | Women in Belagavi Demands Land Over Money as Compensation


ನೀವು ಹಣ ಕೊಡ್ತೀರಿ ಗಂಡಸರು ಕುಡಿದು ಹಾಳು ಮಾಡ್ತಾರೆ, ಜಮೀನು ಕೊಡಿಸಿ ಸ್ವಾಮಿ: ಬೆಳಗಾವಿ ಡಿಸಿಗೆ ಮಹಿಳೆಯರ ಆಗ್ರಹ

ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಹಿರೇಮಠ ರೈತರ ಸಭೆ ನಡೆಸಿದರು.

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ 4ರ ಬೈಪಾಸ್ ನಿರ್ಮಾಣ ಕಾಮಗಾರಿ ಸಂಬಂಧ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ರೈತರೊಂದಿಗೆ ಗುರುವಾರ ಸಭೆ ನಡೆಸಿ ಚರ್ಚಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಮಹಿಳೆಯರು ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ನಮಗೆ ನಿಮ್ಮ ಹೆಚ್ಚಿನ ಪರಿಹಾರ ಬೇಡ ಸರ್ ಎಂದು ನೇರವಾಗಿ ಹೇಳಿದರು. ‘ನೀವು ಪರಿಹಾರ ಅಂತ ದುಡ್ಡು ಕೊಡ್ತೀರಿ, ನಮ್ಮ ಗಂಡಂದಿರು ಕುಡಿದು ಹಾಳು ಮಾಡ್ತಾರೆ. ಆಮೇಲೆ ನಾವು ಮಕ್ಕಳನ್ನು ಕರೆದುಕೊಂಡು ರಸ್ತೆ ಮೇಲೆ ಕೂರಬೇಕಾಗುತ್ತೆ. ಅದರ ಬದಲು ಜಮೀನು ಕೊಡಿಸಿ. ನೀವು ಓದಿದವರಿದ್ದೀರಿ, ನಾವು ಎನೂ ಓದಿಲ್ಲ’ ಎಂದು ರೈತ ಮಹಿಳೆ ರೇಣುಕಾ ಜಿಲ್ಲಾಧಿಕಾರಿಗೆ ಹೇಳಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ, ಆಯುಕ್ತರು ಮತ್ತು ರೈತ ಮುಖಂಡರು ಪಾಲ್ಗೊಂಡಿದ್ದರು. ರೈತರು ಮತ್ತು ಜಿಲ್ಲಾಧಿಕಾರಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಮಗೆ ಪರಿಹಾರ ಬೇಡ, ನ್ಯಾಯಾಲಯದ ಮೊರೆ ಹೋಗುತ್ತೇವೆ. ಇನ್ನೇರಡು ದಿನ ಕಾಮಗಾರಿ ನಡೆಸಬೇಡಿ ಎಂದು ರೈತರು ಮನವಿ ಮಾಡಿದರು. ಇದಕ್ಕೆ ಒಪ್ಪದ ಜಿಲ್ಲಾಧಿಕಾರಿ ನಾವು ಕಾಮಗಾರಿ ನಿಲ್ಲಿಸುವುದಿಲ್ಲ ನೀವು ಬೇಕಾದರೆ ಕೋರ್ಟ್‌ಗೆ ಹೋಗಬಹುದು ಎಂದು ಪ್ರತಿಕ್ರಿಯಿಸಿದರು. ಕಡಿಮೆ ಜಮೀನು ಇದ್ದವರು ವಿನಂತಿಸಿದರೆ ಹೆಚ್ಚು ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಎಷ್ಟು ರೈತರಿಗೆ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಇಂದು ಬೆಳಿಗ್ಗೆ ಕಾಮಗಾರಿ ವಿರೋಧಿಸಿ ಮಚ್ಚೆ ಗ್ರಾಮದ ಬಳಿ ರೈತರು ಪ್ರತಿಭಟಿಸಿದ್ದರು. ಪ್ರತಿಭಟನಾನಿರತ 22 ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ರೈತ ಆಕಾಶ್​ ಆತ್ಮಾಹುತಿಗೆ ಯತ್ನಿಸಿದ್ದ ಕಾರಣ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಜಿಲ್ಲಾಧಿಕಾರಿ ಹಿರೇಮಠ ಆದೇಶಿಸಿದ್ದರು.

ರೈತರ ಮೇಲೆ ಪೊಲೀಸರಿಂದ ದೌರ್ಜನ್ಯವಾಗಿದೆ ಎಂಬ ವರದಿಗಳನ್ನು ಡಿಸಿಪಿ ವಿಕ್ರಂ ಅಮಟೆ ತಳ್ಳಿಹಾಕಿದರು. ಕಾಮಗಾರಿ ನಡೆಯುವ ಸ್ಥಳದಲ್ಲಿ ಬಂದೋಬಸ್ತ್​ ಮಾಡಿದ್ದೆವು. ಕಾಮಗಾರಿ ವಿರೋಧಿಸಿ ಪ್ರತಿಭಟಿಸುತ್ತಿದ್ದ 25ಕ್ಕೂ ಹೆಚ್ಚು ರೈತರಿಗೆ ಪರಿಸ್ಥಿತಿ ವಿವರಿಸಿದೆವು. ಆದರೆ ರೈತರು ನಮ್ಮ ಮಾತು ಕೇಳದಿದ್ದ ಕಾರಣ ಮುಂಜಾಗ್ರತಾ ಕ್ರಮವಾಗಿ ಬಂಧಿಸಬೇಕಾಯಿತು. ಆತ್ಮಾಹುತಿಗೆ ಯತ್ನಿಸಿದ್ದ ರೈತ ಆಕಾಶ್ ಅನಗೋಳಕರ್​ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರತಿಭಟನಾನಿರತರ ಜತೆ ಪೊಲೀಸರು ಅನುಚಿತವಾಗಿ ವರ್ತಿಸಿಲ್ಲ. ರೈತರ ಜತೆ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿಲ್ಲ. ಮಹಿಳೆಯರನ್ನು ಮಹಿಳಾ ಕಾನ್ಸ್​ಟೇಬಲ್​ಗಳು ವಶಕ್ಕೆ ಪಡೆದು ಅಮಾನವೀಯವಾಗಿ ನಡೆದುಕೊಂಡಿದ್ದರೆ ವಿಚಾರಣೆ ಮಾಡುತ್ತೇವೆ ಎಂದು ಹೇಳಿದರು.

ಸಭೆ ಮೊಟಕು
ಬೈಪಾಸ್ ರಸ್ತೆಗೆ ರೈತರ ವಿರೋಧದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನೇತೃತ್ವದಲ್ಲಿ ಸಭೆ ಮೊಟಕುಗೊಂಡಿದೆ. ಸರ್ಕಾರ, ಜಿಲ್ಲಾಡಳಿತಕ್ಕೆ ಧಿಕ್ಕಾರ ಕೂಗಿದ ರೈತರು, ಕಾಮಗಾರಿ ವರ್ಕ್​ ಆರ್ಡರ್​ ತೋರಿಸಿ ಎಂದು ಪಟ್ಟುಹಿಡಿದರು. ಸಭೆ ಮುಗಿಸಿ ಧನ್ಯವಾದ ಹೇಳಿ ಹಿರೇಮಠ ನಿರ್ಗಮಿಸಿದರು. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ರೈತ ಮಹಿಳೆ ಜಯಶ್ರೀ ಹೇಳಿದರು.

ಗೃಹ ಸಚಿವರ ಪ್ರತಿಕ್ರಿಯೆ
ಬೆಳಗಾವಿ ತಾಲ್ಲೂಕು ಮಚ್ಚೆ ಗ್ರಾಮದ ಬೆಳವಣಿಗೆಗಳ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಧರಣಿ ನಿರತ ರೈತರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿಲ್ಲ. ಕಾಮಗಾರಿಗೆ ಅಡ್ಡಿಪಡಿಸಿದ 22 ರೈತರನ್ನು ವಶಕ್ಕೆ ಪಡೆದಿದ್ದಾರೆ. ಪರಿಹಾರ ನೀಡುವಲ್ಲಿ ವ್ಯತ್ಯಾಸವಾಗಿದೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಗೆ ಜಮೀನು ನೀಡುವುದಿಲ್ಲವೆಂದು ರೈತರು ಹೇಳಿಲ್ಲ. ವಶಕ್ಕೆ ಪಡೆದ 22 ರೈತರ ವಿರುದ್ಧ ಯಾವುದೇ ಕೇಸ್​ ಹಾಕಿಲ್ಲ. ರೈತರ ಜತೆ ಸಂಯಮದಿಂದ ವರ್ತಿಸುವಂತೆ ಪೊಲೀಸರಿಗೆ ಸೂಚಿಸಿದ್ದೇವೆ. ನಮ್ಮದು ರೈತಪರ ಸರ್ಕಾರ ಎಂದು ಹೇಳಿದರು.

ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ; ಬೆಳಗಾವಿಯಲ್ಲಿ ಶುರುವಾಯಿತು ಟಿಕೆಟ್ ಲಾಬಿ
ಇದನ್ನೂ ಓದಿ: ಬೆಳಗಾವಿ: ಆನ್​ಲೈನ್​ ವಂಚಕರಿಗೆ ಶಾಕ್; ಗೋಲ್ಡ್ ಅವರ್ ಅಸ್ತ್ರ ಪ್ರಯೋಗಿಸಿದ ಪೊಲೀಸರು

TV9 Kannada


Leave a Reply

Your email address will not be published. Required fields are marked *