ನೀವೆಲ್ಲರೂ ಸಾಯುತ್ತೀರಿ: ದ್ವೇಷ ಭಾಷಣ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುತ್ತಿದ್ದಂತೆ ಪೊಲೀಸರ ವಿರುದ್ಧ ಗುಡುಗಿದ ಯತಿ ನರಸಿಂಹಾನಂದ | Uttarakhand Police made the first arrest in the Dharma Sansad hate speech case You Will All Die Yati Narsinghanand Tells Police


ನೀವೆಲ್ಲರೂ ಸಾಯುತ್ತೀರಿ: ದ್ವೇಷ ಭಾಷಣ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುತ್ತಿದ್ದಂತೆ ಪೊಲೀಸರ ವಿರುದ್ಧ ಗುಡುಗಿದ ಯತಿ ನರಸಿಂಹಾನಂದ

ದ್ವೇಷ ಭಾಷಣ ಪ್ರಕರಣದಲ್ಲಿ ಜಿತೇಂದ್ರ ನಾರಾಯಣ್ ತ್ಯಾಗಿ ಬಂಧನ

ದೆಹಲಿ: ಧರ್ಮ ಸಂಸದ್ ದ್ವೇಷ ಭಾಷಣ (HateSpeech) ಪ್ರಕರಣದಲ್ಲಿ ಉತ್ತರಾಖಂಡ ಪೊಲೀಸರು ಗುರುವಾರ ಮೊದಲ ಬಂಧನವನ್ನು ಮಾಡಿದ್ದಾರೆ. ಹರಿದ್ವಾರ (Haridwar) ಜಿಲ್ಲೆಯ ರೂರ್ಕಿಯಿಂದ ಜಿತೇಂದ್ರ ನಾರಾಯಣ ತ್ಯಾಗಿ ಎಂದು ಕರೆಯಲ್ಪಡುವ ವಸೀಮ್ ರಿಜ್ವಿಯನ್ನು ಪೊಲೀಸರು ಬಂಧಿಸಿದ್ದು ಇನ್ನಿಬ್ಬರು ಪ್ರಮುಖ ಆರೋಪಿಗಳಾದ ಯತಿ ನರಸಿಂಹಾನಂದ ಸರಸ್ವತಿ ಮತ್ತು ಸಾಧ್ವಿ ಅನ್ನಪೂರ್ಣ ಅವರು ಪೊಲೀಸರ ಮುಂದೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ಗಳಲ್ಲಿ ಮೂವರನ್ನೂ ಇತರರೊಂದಿಗೆ ಹೆಸರಿಸಲಾಗಿದೆ. ತ್ಯಾಗಿ ಅವರನ್ನು ಬಂಧಿಸಲಾಗಿದ್ದು, ಸಿಆರ್‌ಪಿಸಿಯ ಸೆಕ್ಷನ್ 41 ಎ ಅಡಿಯಲ್ಲಿ ಹಾಜರಾಗುವಂತೆ ಯತಿ ನರಸಿಂಹಾನಂದ ಮತ್ತು ಸಾಧ್ವಿ ಅನ್ನಪೂರ್ಣ ಅವರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.ತ್ಯಾಗಿಯ ಬಂಧನದ ವಿಡಿಯೊದಲ್ಲಿ, ನರಸಿಂಹಾನಂದರು ಪೊಲೀಸರಿಗೆ ಬೆದರಿಕೆ ಹಾಕುವುದನ್ನು ಮತ್ತು ತ್ಯಾಗಿಯನ್ನು ಏಕೆ ಬಂಧಿಸಲಾಗುತ್ತಿದೆ ಎಂದು ಕೇಳುವುದನ್ನು ಕಾಣಬಹುದು. ಎನ್​​ಡಿಟಿವಿ ಪ್ರಕಾರ, “ತುಮ್ ಸಬ್ ಮರೋಗೆ (ನೀವೆಲ್ಲರೂ ಸಾಯುತ್ತೀರಿ)” ಎಂದು ಅವರು ಹೇಳುತ್ತಿದ್ದಾರೆ.

“ಮೂರೂ ಪ್ರಕರಣಗಳಲ್ಲಿ ನಾನು ಅವರೊಂದಿಗಿದ್ದೇನೆ. ಅವನು ಒಬ್ಬನೇ ಮಾಡಿದ್ದಾನಾ?” ಎಂದು ಯತಿ ಕೇಳಿದ್ದಾರೆ.  “ತ್ಯಾಗಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ” ಎಂದು ಅಧಿಕಾರಿಗಳು ಹೇಳುತ್ತಿದ್ದಂತೆ, ನರಸಿಂಹಾನಂದ, “ಆದರೆ ನಾನು ಅಲ್ಲ. ನಮ್ಮ ಬೆಂಬಲದ ಮೇಲೆ ಅವರು ಹಿಂದೂ ಆದರು ಎಂದಿದ್ದಾರೆ.
ನರಸಿಂಹಾನಂದ ಅವರು ಹರಿದ್ವಾರದಲ್ಲಿ ಧರ್ಮ ಸಂಸದ್ ಆಯೋಜಿಸಿದ್ದ ಗಾಜಿಯಾಬಾದ್‌ನ ದಾಸ್ನಾ ದೇವಸ್ಥಾನದ ವಿವಾದಿತ ಅರ್ಚಕರಾಗಿದ್ದರೆ, ಸಾಧ್ವಿ ಅನ್ನಪೂರ್ಣ ಅವರು ಮುಸ್ಲಿಮರ ವಿರುದ್ಧ ಹೆಚ್ಚು ಪ್ರಚೋದನಕಾರಿ ಭಾಷಣ ಮಾಡಿದ ಕಾರ್ಯಕ್ರಮದಲ್ಲಿ ಭಾಷಣಕಾರರಲ್ಲಿ ಒಬ್ಬರು.

ರೂರ್ಕಿಯ ನರ್ಸನ್ ಗಡಿಯಲ್ಲಿ ತ್ಯಾಗಿಯನ್ನು ಬಂಧಿಸಲಾಗಿದೆ ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಯೋಗೇಂದ್ರ ರಾವತ್ ಪಿಟಿಐಗೆ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ಗಳಲ್ಲಿ 10ಕ್ಕೂ ಹೆಚ್ಚು ಜನರ ಹೆಸರಿದೆ. ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ಮೊದಲು ಮತ್ತು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವ ಮುನ್ನ ತ್ಯಾಗಿ ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥರಾಗಿದ್ದರು.

ಪ್ರಕರಣದಲ್ಲಿ ಇದು ಮೊದಲ ಬಂಧನವಾಗಿದೆ. ಹೆಚ್ಚಿನ ಬಂಧನಗಳು ನಡೆಯಲಿದೆಯೇ ಎಂದು ಕೇಳಿದಾಗ, ತನಿಖೆ ಹೇಗೆ ಮುಂದುವರಿಯುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಎಸ್‌ಎಸ್‌ಪಿ ಹೇಳಿದರು. ಸಮಾರಂಭದಲ್ಲಿ ಭಾಷಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರಾಖಂಡ ಸರ್ಕಾರಕ್ಕೆ ವಿವಿಧ ವಲಯಗಳಿಂದ ಭಾರಿ ಒತ್ತಡ ಬಂದಿದೆ. ಘಟನೆ ನಡೆದು ಹಲವು ದಿನಗಳು ಕಳೆದರೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದ ರಾಜ್ಯ ಸರಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿತ್ತು.

TV9 Kannada


Leave a Reply

Your email address will not be published. Required fields are marked *