ಇಲ್ಲಿ ಬಾಂಬಿನ ಸೌಂಡಿಲ್ಲ.. ಗುಂಡಿನ ಮೊರೆತವಿಲ್ಲ..ನೇರವಾಗಿ ರಕ್ತ ಹರಿಯೋದು ಕಾಣೋದಿಲ್ಲ.. ಆದ್ರೆ E-ಭಯೋತ್ಪಾದನೆ ಇವೆಲ್ಲಕ್ಕಿಂತ ಡೇಂಜರ್.. ಇಲ್ಲಿ ರಕ್ತ ಹರಿದ್ರೆ ಅಂಕೆಗೆ ಸಿಗಲ್ಲ.. ಇಲ್ಲಿಯಾಗೋ ನಾಶ ಬಹುಶಃ ಅಣ್ವಸ್ತ್ರ ದಾಳಿಗೆ ಸಮ.. ಕಟ್ಟಿರೋ ಕಟ್ಟಡ ಬೀಳಲ್ಲ ಆದ್ರೆ.. ಅದರೊಳಗೆ ಕೆಲಸ ಮಾಡೋವಂಥದ್ದೇನಿರಲ್ಲ.. ಹಾಗಿದ್ರೆ ಇದೆಂಥ ಭಯೋತ್ಪಾದನೆ? ಈ ಭಯೋತ್ಪಾದನೆ ಮಾಡ್ತಿರೋದು ಯಾರು? ಇಲ್ಲಿದೆ ಡಿಟೇಲ್ಸ್..

ಭಯೋತ್ಪಾದನೆ.. ಈ ಹೆಸರು ಕಿವಿಗೆ ಬಿದ್ದರೆ ಸಾಕು.. ಸಾವಿರಾರು ಜನರ ಆಕ್ರಂದನ.. ಗಾಯಗೊಂಡವರ ಆರ್ತನದ.. ಚಿಲ್ಲಾಪಿಲ್ಲಿಯಾಗಿ ಬಿದ್ದಿರೋ ದೇಹದ ಭಯಾನಕ ದೃಶ್ಯ.. ಆ್ಯಂಬುಲೆನ್ಸ್​ಗಳ ಸೌಂಡ್.. ವಿಭಿನ್ನ ಏಜನ್ಸಿಗಳ ತಜ್ಞರ ಓಡಾಟ.. ಟಿವಿಗಳಲ್ಲಿ ದೊಡ್ಡ ದೊಡ್ಡ ಬ್ರೇಕಿಂಗ್ ನ್ಯೂಸ್.. ಸೋಶಿಯಲ್​ ಮೀಡಿಯಾದಲ್ಲಿ ಆಕ್ರೋಶ ಭರಿತ ಪ್ರತಿಕ್ರಿಯೆ.. ಕಣ್ಣ ಮುಂದೆ ಹಾದು ಹೋಗುತ್ತೆ.. ಆದ್ರೆ ಇನ್ನೂ ಒಂದು ಭಯೋತ್ಪಾದನೆ ಇದೆ.. ಅಲ್ಲಿ ಇದ್ಯಾವುದೂ ಇರಲ್ಲ.. ಆದ್ರೆ ಆ ಭಯೋತ್ಪಾದನೆ ಎಷ್ಟು ಡೇಂಜರ್ ಅಂದ್ರೆ.. ಊಹೆ ಮಾಡೋದೂ ಕಷ್ಟ ಆಗುತ್ತೆ.. ಅಂಥದ್ದೊಂದು ಭಯೋತ್ಪಾದನೆಗೆ ನಮ್ಮ ನೆರೆಯ ರಾಷ್ಟ್ರವೊಂದು ಇಳಿದಿದೆ ಅನ್ನೋ ಆಘಾತಕಾರಿ ಮಾಹಿತಿಗಳು ಹೊರ ಬರಲು ಪ್ರಾರಂಭವಾಗಿದೆ..

ಭಯೋತ್ಪಾದನೆ ಅಂದ್ರೆ ನಮ್ಮ ಮುಂದೆ ನಮ್ಮ ಇನ್ನೊಂದು ನೆರೆಯ ರಾಷ್ಟ್ರ ಪಾಕಿಸ್ತಾನ ಕಂಡು ಬರುತ್ತೆ.. ತಾನೂ ಉದ್ಧಾರ ಆಗಲ್ಲ.. ಇನ್ನೊಬ್ಬರನ್ನೂ ಉದ್ಧಾರ ಆಗೋಕೆ ಬಿಡಲ್ಲ ಅನ್ನೋ ಸ್ವನಾಶಕ ಪಾಕಿಸ್ತಾನ ಭಯೋತ್ಪಾದಕರನ್ನು ಹುಟ್ಟಿಸೋ ಕಾರ್ಖಾನೆಯಾಗಿ ಇಂದು ಕುಖ್ಯಾತಿಯ ಉತ್ತುಂಗದಲ್ಲಿದೆ. ಸಿಂಪಲ್ ಆಗಿ ಹೇಳೋದಾದ್ರೆ ರಕ್ತ ಹರಿಸೋ ಭಯೋತ್ಪಾದನೆ ಪಾಕಿಸ್ತಾನದ್ದಾದರೆ, ಅದರ ಆಪ್ತ ಸ್ನೇಹಿತ ಚೀನಾದ್ದು ರಕ್ತವೂ ಬಾರದಂಥ ವಿನಾಶ ಮಾಡೋ ಸೈಬರ್ ಭಯೋತ್ಪಾದನೆ..!

ಅಷ್ಟಕ್ಕೂ ಏನಿದು ಸೈಬರ್ ಭಯೋತ್ಪಾದನೆ?
ಇದ್ರಿಂದ ನಮಗೇನು ನಷ್ಟ?

ಭಯವನ್ನು ಯಾವುದು ಉತ್ಪಾದನೆ ಮಾಡುತ್ತೋ ಅದನ್ನ ಭಯೋತ್ಪಾದನೆ ಅಂತಾ ಹೇಳಲಾಗುತ್ತೆ.. ಯಾರು ಭಯವನ್ನ ಹುಟ್ಟಿಸುತ್ತಾರೋ ಅಂಥವರು ಭಯೋತ್ಪಾದಕರು.. ಈ ಭಯೋತ್ಪಾದಕರು ವಿಭಿನ್ನ ರೂಪದಲ್ಲಿ ಬರ್ತಾ ಇರ್ತಾರೆ.. ಪಾಕಿಸ್ತಾನದ ಭಯೋತ್ಪಾದಕರು ಬಾಂಬು-ಗುಂಡು ಹಿಡಿದುಕೊಂಡು ಬಂದ್ರೆ.. ಚೀನಾದ ಭಯೋತ್ಪಾದಕರು ತಂಪಾದ ಎಸಿ ರೂಮಿನಲ್ಲಿ ಕುಳಿತು ಸಾಫ್ಟವೇರ್​​​​ ಪರಿಣಿತರಾಗಿ ಬರ್ತಾರೆ.. ಹೌದು.. ಅವರು ತಮ್ಮ ದೇಶದಲ್ಲಿ ಕುಳಿತೇ ನಮ್ಮ ಬೆಡ್​ ರೂಮಿಗೂ ಬರ್ತಾರೆ..!


ವೈಯಕ್ತಿವಾಗಿ ನಿಮ್ಮನ್ನೇ ಉದಾಹರಣೆ ಇಟ್ಟುಕೊಂಡು ಹೇಳೋದಾದ್ರೆ ನೀವೆಲ್ಲ ಸ್ಮಾರ್ಟ್​ ಫೋನ್ ಬಳಸ್ತೀರಲ್ವಾ? ನಿಮ್ಮ ಸ್ಮಾರ್ಟ್​​ ಫೋನ್​ನಲ್ಲಿ ನೀವು ಯಾರಿಗೆ ಕಾಲ್​ ಮಾಡ್ತೀರಿ? ಯಾರಿಗೆ ಮೆಸೇಜ್ ಮಾಡ್ತೀರಿ? ನಿಮ್ಮ ಬಾಯ್​​ ಫ್ರೆಂಡ್, ಗರ್ಲ್​ಫ್ರೆಂಡ್​ಗೆ ಏನೆಲ್ಲ ಹಾಟ್ ಪಿಕ್ ಕಳಿಸ್ತೀರಿ.. ನಿಮ್ಮ ಬ್ಯಾಂಕ್ ಟ್ರಾನ್ಸಾಕ್ಷನ್ ಏನು? ನಿಮ್ಮ ಬ್ಯಾಂಕ್​ ಅಲ್ಲಿ ಎಷ್ಟು ಹಣ ಇದೆ? ಅದನ್ನ ನೀವು ಹೇಗೆ ಬಳಸ್ತೀರಿ? ಹೀಗೆ ಪ್ರತಿಯೊಂದನ್ನೂ ಯಾವುದೋ ವ್ಯಕ್ತಿ ತಿಳಿದುಕೊಳ್ತಿದ್ದಾನೆ ಮತ್ತು ನಿಮಗೇ ಗೊತ್ತಾಗದಂತೆ ನಿಮ್ಮ ಪರ್ಸನಲ್​ ಡಿಟೇಲ್ಸ್​ನ, ಪರ್ಸನಲ್ ಫೋಟೋಗಳನ್ನ ಬಳಸಿಕೊಳ್ತಿದ್ದಾನೆ ಅಂದ್ರೆ? ನಿಮಗೆ ಭಯ ಆಗಲ್ವಾ? ಅಷ್ಟೇ ಅಲ್ಲ ನಿಮ್ಮ ಅಕೌಂಟ್​ನಲ್ಲಿರೋ ಹಣವನ್ನ ನಿಮಗೇ ಗೊತ್ತಾಗದ ಹಾಗೆ ಈತ ಬಳಸಿದ್ರೆ? ನಿಮ್ಮ ಅರಿವಿಗೇ ಬಾರದಂತೆ ನಿಮ್ಮ ಮೊಬೈಲ್ ಅನ್ನ ಆತನೇ ಆಪರೇಟ್ ಮಾಡಿದ್ರೆ? ಕೊನೆಗೆ ನಿಮ್ಮ ಫೋನ್ ಇದ್ದಕ್ಕಿದ್ದಂತೆ ಹಾಳಾಗುವಂತೆ ಮಾಡಿದ್ರೆ? ನಿಮ್ಮ ಚಿತ್ರಗಳನ್ನಸ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿ ಬಿಟ್ರೆ? ನಿಮ್ಮನ್ನ ಜನ ಕೆಟ್ಟ ದೃಷ್ಟಿಯಲ್ಲಿ ನೋಡೋವಂಥ ಮೆಸೇಜ್ ಹಾಕಿದ್ರೆ? ಎಸ್ ಇದಕ್ಕೇನಂತೀರಿ? ಇದೂ ಒಂದೂ ರೀತಿಯ ಭಯೋತ್ಪಾದನೆಯೇ ತಾನೆ? ಇದು ಒಂದು ರೂಪ ಅಷ್ಟೇ..

ದೊಡ್ಡದಾಗಿ ಒಂದು ದೇಶ ಅಂತ ನೋಡಿದಾಗ ಇದರ ಪರಿಣಾಮ ಇನ್ನೂ ಭೀಕರವಾಗಿರುತ್ತೆ.. ಅದು ಊಹೆಗೂ ನಿಲುಕಲ್ಲ.. ಅದರ ಪರಿಣಾಮ ಅಂಕೆಗೂ ಸಿಗಲ್ಲ..

 ಹಂತದ್ದೊಂದು ಭಯೋತ್ಪಾದನೆಯಿಂದ ಏನಾಗಬಹುದು?
1. ದೇಶದ ಡಿಜಿಟಲ್ ವ್ಯವಸ್ಥೆಗೆ ಗುನ್ನ
2. ಮಿಲಿಟರಿ ಬಗೆಗಿನ ಗುಪ್ತ ಮಾಹಿತಿ ಲೀಕ್
3. ಏರೊನಾಟಿಕ್ಸ್ ಸಂಸ್ಥೆಗಳ ಮಾಹಿತಿ ಸೋರಿಕೆ
4. ವಿದ್ಯುತ್ ಸರಬರಾಜು ಆಫ್
5. ಟ್ರಾಫಿಕ್ ವ್ಯವಸ್ಥೆ ಹದಗೆಡಿಸಬಹುದು
6. ದೇಶದ ಭದ್ರತೆಗೆ ನೇರ ಸವಾಲು
7. ರೆಡಾರ್, ಸ್ಯಾಟಲೈಟ್ ಕ್ಷಮತೆಗೆ ಧಕ್ಕೆ
8. ಫೈಟರ್ ಜೆಟ್, ಮಿಸೈಲ್ ಸಿಸ್ಟಂಗಳಿಗೂ ಧಕ್ಕೆ 

ಸೈಬರ್ ಭಯೋತ್ಪಾದಕರ ದಾಳಿಯಿಂದ ಎವರಿಥಿಂಗ್ ಅಂಡ್ ಎನಿಥಿಂಗ್ ಅನ್ನೋಹಾಗಿನ ದುಷ್ಪರಿಣಾಮ ಒಂದು ದೇಶದ ಮೇಲೆ ಆಗಬಹುದು. ಆ ದೇಶದ ಡಿಜಿಟಲ್ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಬಹುದು. ಇದರಿಂದಾಗಿ ಬ್ಯಾಂಕಿಂಗ್, ಸಾರಿಗೆ, ಉದ್ಯೋಗ ಹೀಗೆ ಹಲವು ಕ್ಷೇತ್ರಗಳಿಗೆ ಧಕ್ಕೆಯಾಗುತ್ತೆ. ಮಿಲಿಟರಿ ಇನ್ಸಾಲೇಷನ್​​ಗಳ ಬಗೆಗಿನ ಗುಪ್ತ ಮಾಹಿತಿ ಕೂಡ ವೈರಿ ಪಡೆಗಳಿಗೆ ಲಭ್ಯವಾಗಬಹುದು. ಆಯಾ ದೇಶದ ಏರೋನಾಟಿಕ್ಸ್​ ಸಂಸ್ಥೆಗಳೇ ಕಾರ್ಯ ನಿರ್ವಹಿಸದಂತೆ ಮಾಡಬಹುದು. ಜೊತೆಗೆ ವಿಮಾನಯಾನವನ್ನ ಸಂಪೂರ್ಣ ಅಸ್ತವ್ಯಸ್ಥಗೊಳಿಸಬಹುದು. ಜೊತೆಗೆ ಇಡೀ ನಗರಕ್ಕೇ ಸರಬರಾಜು ಆಗುವ ವಿದ್ಯುತ್ ಗ್ರಿಡ್​ಗಳನ್ನೇ ನಷ್ಟ ಮಾಡಬಹುದು. ಉದಾಹರಣೆಗೆ ಕಳೆದ ವರ್ಷ ಕತ್ತಲಾಗಿದ್ದ ಮುಂಬೈ.. ಅಷ್ಟೇ ಅಲ್ಲ ಒಂದಕ್ಕೊಂದು ಲಿಂಕ್ ಆಗಿರೋ ಟ್ರಾಫಿಕ್​ ವ್ಯವಸ್ಥೆಯನ್ನೇ ಬುಡಮೇಲು ಮಾಡಬಹುದು. ದೇಶದ ಭದ್ರತೆಗೇ ನೇರ ಸವಾಲು ಹಾಕಿ.. ವೈರಿ ಪಡೆಗಳಿಗೆ ನೆರವಾಗುವಂಥದ್ದು, ಜೊತೆಗೆ ರೆಡಾರ್, ಸ್ಯಾಟಲೈಟ್ ಕ್ಷಮತೆಗೆ ಧಕ್ಕೆ ತಂದು.. ವೈರಿಗಳಿಗೆ ದೇಶದ ಒಳ ಪ್ರವೇಶಿಸಲು.. ತಮ್ಮ ಮನಸ್ಸಿಗೆ ಬಂದಂತೆ ಮಿಲಿಟರಿ ಕಾರ್ಯಾಚರಣೆ ನಡೆಸಲು ದಾರಿ ಮಾಡಿಕೊಡುವಂಥದ್ದು.. ಅಲ್ಲದೇ ಫೈಟರ್ ಜೆಟ್, ಮಿಸೈಲ್ ಸಿಸ್ಟಂಗಳ ಕೋಡಿಂಗ್​ ಅನ್ನ ಅದಲು ಬದಲು ಮಾಡಿ ಎಂಥ ಅತ್ಯಾಧುನಿಕ ಮಷೀನ್​​ಗಳೂ ಕೆಲಸ ಮಾಡದಂತೆ ಮಾಡಬಹುದು.. ಇದಿಷ್ಟೇ ಅಲ್ಲ ಈ ಲಿಸ್ಟ್​​ಗೆ ಅಂತ್ಯ ಅನ್ನೋದೇ ಇಲ್ಲ ಅನ್ನೋವಷ್ಟರ ಮಟ್ಟಿಗೆ ಹಾವಳಿ ಮಾಡಬಹುದು..

ಸೈಬರ್ ಭಯೋತ್ಪಾದನೆಯಲ್ಲಿ ಚೀನಾದ ಹೆಸರು ತಳುಕಿಹಾಕಿಕೊಂಡಿದ್ದು ಯಾಕೆ?
ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗೂ, ಇದಕ್ಕೂ ಇದೆಯಾ ನಂಟು?

ಸೈಬರ್ ಭಯೋತ್ಪಾದನೆಯಲ್ಲಿ ಚೀನಾದ ಹೆಸರು ತಳುಕಿಹಾಕಿಕೊಂಡಿದ್ದು ಯಾಕೆ? ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.. ಆದ್ರೆ ಇದಕ್ಕೆ ಬೇಕಾದ ಸಾಕ್ಷ್ಯಾಧಾರ ಸಿಕ್ಕಿದೆಯಾ? ಅಂದ್ರೆ ಅದಕ್ಕೆ ಉತ್ತರ ಇನ್ನೂ ಟೈಂ ಬೇಕು ಅನ್ನೋದೇ ಆಗಿರುತ್ತೆ..

ಹೌದು.. ಇದ್ರಲ್ಲಿ ಚೀನಾದ ಹೆಸರು ತಳುಕು ಹಾಕಿಕೊಂಡಿದ್ದು ಯಾಕೆ ಅಂತ ನೋಡೋದಾದ್ರೆ.. ಮೊದಲನೆಯಾದಾಗಿ ಭಾರತದ ಕಂಪ್ಯೂಟರ್ ರೆಸ್ಪಾನ್ಸ್​​ ಟೀಂ (CERT) ನೀಡಿರುವ ವರದಿ ಪ್ರಕಾರ 2016 ರಲ್ಲಿ 33,147, 2017 ರಲ್ಲಿ 30,067, 2018 ರಲ್ಲಿ 17,560 ಹಾಗೂ 2019 ಅಕ್ಟೋಬರ್‌ವರೆಗೆ ಬರೋಬ್ಬರಿ 21,467 ವೆಬ್​ಸೈಟ್​ಗಳು ಭಾರತದಲ್ಲಿ ಹ್ಯಾಕ್​ ಆಗಿವೆಯಂತೆ. ಇದ್ರಲ್ಲಿ ಚೀನಾ, ಪಾಕಿಸ್ತಾನ ಹ್ಯಾಕರ್ಸ್​​ಗಳ ಪಾತ್ರ ಗಣನೀಯವಾಗಿ ಇತ್ತು ಅಂಥ ಕೇಂದ್ರ ಸಚಿವರೇ ತಿಳಿಸಿದ್ರು..

ಇನ್ನು ಸಫಿರ್ಮಾ ಡಾರ್ಕ್‌ ಸಂಸ್ಥೆ ಪ್ರಕಾರ, ಕಳೆದ ವರ್ಷ ಜೂನ್​​​ 10 ನೇ ತಾರೀಕಿನ ಸುಮಾರಿಗೆ ಮ್ಯಾಂಡರಿನ್ ಮತ್ತು ಕ್ಯಾಂಟೋನೀಸ್‌ನ ಚೀನೀ ಹ್ಯಾಕರ್ ಫೋರಂಗಳು ಭಾರತಕ್ಕೆ ಪಾಠ ಕಲಿಸುವ ಬಗ್ಗೆ ಮಾತನಾಡಿದ್ದ ವಿವರ ಲಭ್ಯವಾಗಿತ್ತು.. ಅದರಲ್ಲೂ ಚೀನಾದ ಸೇನೆಯ ಪುಂಡಾಟವನ್ನು ಟೀಕಿಸಿದ್ದ ಮಾಧ್ಯಮ ಸಂಸ್ಥೆಗಳೇ ಈ ಹ್ಯಾಕರ್ಸ್‌ಗಳ ಮೊದಲ ಟಾರ್ಗೆಟ್ ಆಗಿತ್ತಂತೆ.

ಅಷ್ಟೇ ಅಲ್ಲ ಕಳೆದ ವರ್ಷ ಅಕ್ಟೋಬರ್​​ನಲ್ಲಿ ಮುಂಬೈ ಕಗ್ಗತ್ತಲಾಗಿದ್ದಕ್ಕೆ ಕೂಡ ಚೀನಾದ ಸೈಬರ್ ದಾಳಿಯೇ ಕಾರಣವಾಗಿರುವ ಸಾರ್ಧಯತೆ ಬಗ್ಗೆ ಅಮೆರಿಕಾದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಈ ದಾಳಿಯಿಂದಾಗಿ ಮುಂಬೈ ನಗರದಲ್ಲಿ ಇದ್ದಕ್ಕಿದ್ದಂತೆ  ವಿದ್ಯುತ್ ಪೂರೈಕೆ ನಿಂತು ರೈಲುಗಳು ಸ್ಥಗಿತಗೊಂಡವು. ಷೇರು ಮಾರುಕಟ್ಟೆ ಮುಚ್ಚಲ್ಪಟ್ಟಿತ್ತು. ಕೊರೊನಾ ಸೋಂಕು ವ್ಯಾಪಕವಾಗಿದ್ದ ಆ ಸಮಯದಲ್ಲಿ ಆಸ್ಪತ್ರೆಗಳು ವೆಂಟಿಲೇಟರ್‌ಗಳನ್ನ ಆನ್​ನಲ್ಲಿ ಇಡಲು ಜನರೇಟರ್‌ಗಳನ್ನ ಬಳಸಬೇಕಾಯ್ತು. ಇನ್ನು ಚೀನಾದ ರೆಡ್ ಎಕೋ ಹೆಸರಿನ ರಾಜ್ಯ ಪ್ರಾಯೋಜಿತ ಗುಂಪು ಇಂಥದ್ದೊಂದು ದಾಳಿ ನಡೆಸಿರಬಹುದು ಅನ್ನೋ ಮಾಹಿತಿಯನ್ನ ಕೂಡ ಈ ಪತ್ರಿಕೆ ನಿಡಿತ್ತು.

ಇದೆಲ್ಲ ಹಳೆದಾಯ್ತು.. ಈಗ ಲೇಟೆಸ್ಟ್​​ ಏನಾದ್ರೂ ಮಾಹಿತಿ ಬಂದಿದೆಯಾ? ಈಗ್ಯಾಕೆ ಈ ವಿಷಯ ಇಷ್ಟು ಮುಖ್ಯವಾಹಿನಿಗೆ ಬಂದಿದೆ ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತೆ.. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕಿಂತ ಮುನ್ನ ಜೂನ್ 10, 2021 ರಂದು ನಡೆದ ಒಂದು ಸಂಗತಿಯನ್ನ ತಿಳಿಯಬೇಕು..

ಸ್ಥಳ: ಪಶ್ಚಿಮ ಬಂಗಾಳ
ಬಂಧಿತ: ಚೀನಿ ಪ್ರಜೆ
ಆರೋಪ: ಗೂಢಚಾರ

YESsss.. ಈ ಘಟನೆಗೂ ಚೀನಾದ ಸೈಬರ್ ಭಯೋತ್ಪಾದನೆಗೆ ಸಂಬಂಧಿಸಿದ ಸ್ಟೋರಿಗೂ ನೇರ ಸಂಪರ್ಕ ಕಂಡು ಬರ್ತಿದೆ.. ಯಾಕಂದ್ರೆ.. ಜೂನ್ 10, 2021ರಂದು ಪಶ್ಚಿಮ ಬಂಗಾಳದಲ್ಲಿ ಪತ್ತೆಯಾದ ಚೀನಿ ಪ್ರಜೆ ಸಾಮಾನ್ಯ ಪ್ರಜೆಯಲ್ಲ.. ಬದಲಿಗೆ ಚೀನಾದ ಮಿಲಿಟರಿ ಟ್ರೇನಿಂಗ್ ಪಡೆದ ಗೂಢಚಾರ ಅನ್ನೋದು ಈಗ ಬಹುತೇಕ ಖಚಿತವಾಗ್ತಿದೆ..

ಹಾನ್​ ಜುನ್​ವೇಯ್, ಬಂಧಿತ ಆರೋಪಿ

ಈತನ ಬಳಿ ಒಂದು ನೇಪಾಳ ಹಾಗೂ ಇನ್ನೊಂದು ಬಂಗ್ಲಾದೇಶದ ವೀಸಾ ಇರೋ ಎರಡು ವಿಭಿನ್ನ ಪಾಸ್​ಪೋರ್ಟ್​ಗಳು ಸಿಕ್ಕಿದ್ವು. ಹೌದು.. ಬಾಂಗ್ಲಾದೇಶಕ್ಕೆ ವೀಸಾ ಪಡೆದು ಬಂದಿದ್ದ ಈತ ಕಳ್ಳ ಮಾರ್ಗದಿಂದ ಭಾರತದ ಗಡಿ ಪ್ರವೇಶಿಸಿ ಸಿಕ್ಕಿ ಹಾಕಿಕೊಂಡಿದ್ದ.. ಈತನ ಬಳಿಯಲ್ಲಿ, ಒಂದು ಲ್ಯಾಪ್​ಟಾಪ್, ಮೂರು ಸಿಮ್​ಕಾರ್ಡ್​​ಗಳು, ಭಾರತ-ನೇಪಾಳ-ಬಾಂಗ್ಲಾದೇಶದ ಕರೆನ್ಸಿ, ಚೀನಾದ ಹಣ ಹಾಗೂ ಅಮೆರಿಕಾದ ಡಾಲರ್​ ಕೂಡ ಪತ್ತೆಯಾಗಿತ್ತು.. ಹಾನ್​ ಜುನ್​ವೇಯ್​ ಹೆಸರಿನ ಈತ.. ಸ್ಪಷ್ಟವಾಗಿ ಇಂಗ್ಲಿಷ್ ಮಾತನಾಡಬಲ್ಲವನಾಗಿದ್ದು.. ವಿಚಾರಣೆಯಲ್ಲಿ ದಾರಿ ತಪ್ಪಿಸುವ ಚಾಕಚಕ್ಯತೆ ಕೂಡ ಹೊಂದಿದ್ದ ಎನ್ನಲಾಗಿದೆ.. ಈ ವಿಚಾರಣೆ ವೇಳೆ ಈತ ಸುಮಾರು ಸಾವಿರದಷ್ಟು ಭಾರತದ ಸಿಮ್​ಕಾರ್ಡ್​ಗಳನ್ನ ಚೀನಾಕ್ಕೆ ಸಾಗಿಸಿದ್ದೂ ತಿಳಿದು ಬಂದಿತ್ತು. ಅಷ್ಟೇ ಅಲ್ಲ ಈತನ ಹಾವಭಾವ-ಮಾತಿನ ವೈಖರಿ ಮತ್ತು ಕಟ್ಟು ಮಸ್ತು ದೇಹ ಗಮನಿಸಿದಾಗ ಈತ ಚೀನಿ ಸೈನಿಕ ಇರೋದರ ಬಗ್ಗೆಯೂ ಮಾಹಿತಿ ಸಂಗ್ರಹಿಸಲು ಕಾರಣವಾಗಿತ್ತು.. ಜೊತೆಗೆ ಭಾರತದ ಪ್ರಮುಖ ಮೂರು ಕ್ಷೇತ್ರಗಳ ಮೇಲೆ ಸೈಬರ್ ದಾಳಿ ನಡೆಸಲು ಯತ್ನಿಸಿರೋದಾಗಿಯೂ ತಿಳಿಸಿದ್ದ.. ಇದೇ ಲಿಂಕ್​​.. ಇಂದು ಚೀನಾದ ಮುಖವಾಡ ಕಳಚಲು ಸಹಾಯ ಮಾಡುತ್ತಿದೆ..

ಯಾಕಂದ್ರೆ ಅಮೆರಿಕಾ ಮೂಲದ ರೆಕಾರ್ಡೆಡ್ ಫ್ಯೂಚರ್​​​ಗೆ ಸಂಬಂಧಿಸಿದ ಇನ್ಸಿಕ್ಟ್​ ಅನ್ನೋ ಸಂಸ್ಥೆ ಕೂಡ ಚೀನಾದ ರೆಡ್​​ಫಾಕ್ಸ್​ಟ್ರಾಟ್ ನೆಟ್​ವರ್ಕ್​ ಅನ್ನೋ ಹ್ಯಾಕರ್ಸ್​​ ಗ್ರೂಪ್​​.. ಅಕ್ಕಪಕ್ಕದ ಏಷ್ಯನ್ ರಾಷ್ಟ್ರಗಳನ್ನು ಟಾರ್ಗೆಟ್ ಮಾಡ್ತಿರೋದಾಗಿ ತಿಳಿಸಿತ್ತು.. ಅದ್ರಲ್ಲೂ ಭಾರತವೇ ಅದರ ಪ್ರಮುಖ ಟಾರ್ಗೆಟ್ ಅನ್ನೋದು ಕೂಡ ತಿಳಿದು ಬಂದಿತ್ತು..

ರೆಡ್​​ಫಾಕ್ಸ್​ಟ್ರಾಟ್ ನೆಟ್​ವರ್ಕ್​ ಯಾರಿಗೆ ಸಂಬಂಧಿಸಿದ್ದು ಗೊತ್ತಾ?

ರೆಡ್​​ಫಾಕ್ಸ್​​ಟ್ರಾಟ್ ನೆಟ್​ವರ್ಕ್​​ ಅನ್ನೋದು ಯಾವುದೋ ಖಾಸಗೀ ಖದೀಮರ ಗುಂಪಲ್ಲ.. ಬದಲಿಗೆ ಇದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ 69010 ಹೆಸರಿನ ಯೂನಿಟ್​​ನ ಅಂಗಸಂಸ್ಥೆ..! ಅಷ್ಟೇ ಅಲ್ಲ ಇದೇ ಸಂಸ್ಥೆ ಭಾರತದ ಮೂರು ಪ್ರಮುಖ ಕ್ಷೇತ್ರಗಳನ್ನ ಟಾರ್ಗೆಟ್ ಮಾಡ್ತಿರೋದನ್ನ ಕೂಡ ಇನ್ಸಿಕ್ಟ್ ಬಹಿರಂಗ ಮಾಡಿದೆ.. ಯೆಸ್ ಇದನ್ನೇ ಪಶ್ಚಿಮ ಬಂಗಾಳದಲ್ಲಿ ಸಿಕ್ಕಿಬಿದ್ದ ಚೀನಿ ನಾಗರೀಕ ಹೇಳಿದ್ದು..!

ಭಾರತದ ಯಾವ ಕ್ಷೇತ್ರದ ಮೇಲೆ ಚೀನಿ ಟಾರ್ಗೆಟ್?

ರೆಡ್​​ಫಾಕ್ಸ್​​ಟ್ರಾಟ್ ನೆಟ್​ವರ್ಕ್​​ ಅನ್ನೋ ಚೀನಿ ಸೈನಿಕರ ಹ್ಯಾಕಿಂಗ್ ಗ್ರೂಪ್ ಮೊದಲನೇಯದಾಗಿ ಭಾರತದ ಬೆಂಗಳೂರು ಮೂಲದ ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ಸಂಸ್ಥೆ ಮೇಲೆ ಸೈಬರ್ ದಾಳಿ ನಡೆಸಲು ಯತ್ನಿಸುತ್ತಿದೆ. ಎರಡನೇಯದಾಗಿ, ಬಿಎಸ್​​ಎನ್​ಎಲ್ ಹಾಗೂ ಮೂರನೇಯದಾಗಿ ಭಾರತದ ಎರಡು ಏರೋಸ್ಪೇಸ್ ಕಂಪನಿಗಳ ಮೇಲೆ ಇದು ಸೈಬರ್ ಭಯೋತ್ಪಾದಕ ದಾಳಿ ನಡೆಸಿದೆ.. ಆದ್ರೆ ವಿಫಲವಾಗಿದೆ..!

ಇಷ್ಟಕ್ಕೇ ಮುಗಿಯಲ್ಲ ರೆಡ್​​ಫಾಕ್ಸ್​​ಟ್ರಾಟ್ ನೆಟ್​ವರ್ಕ್ ಕರ್ಮಕಾಂಡ

ಹೌದು.. ರೆಡ್​​ಫಾಕ್ಸ್​​ಟ್ರಾಟ್ ನೆಟ್​ವರ್ಕ್ ಕರ್ಮಕಾಂಡ ದೊಡ್ಡದಿದೆ.. ಇದೇ ಹ್ಯಾಕರ್ಸ್​ ಗ್ರೂಪ್ ಭಾರತದ ವಿರುದ್ಧ ಇತ್ತೀಚೆಗೆ ನಡೆದ ಮತ್ತು ನಡೆಸಲು ಯತ್ನಿಸಲಾದ ಸೈಬರ್ ಅಟ್ಯಾಕ್​​​​​ ಹಿಂದಿದೆಯಂತೆ.

ರೆಡ್​​ಫಾಕ್ಸ್​​ಟ್ರಾಟ್ ನೆಟ್​ವರ್ಕ್ ಟಾರ್ಗೆಟ್ ಏನು?

1. ರಕ್ಷಣಾ ಕ್ಷೇತ್ರ
2. ಸರ್ಕಾರ
3. ಟೆಲಿಕಮ್ಯುನಿಕೇಷನ್ಸ್
4. ಗಣಿಗಾರಿಕೆ
5. ಸಂಶೋಧನಾ ಸಂಸ್ಥೆಗಳು

ಚೀನಿ ಸೇನೆಯ ರೆಡ್​​ಫಾಕ್ಸ್​​ಟ್ರಾಟ್ ನೆಟ್​ವರ್ಕ್ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ರಕ್ಷಣಾ ಕ್ಷೇತ್ರ, ಸರ್ಕಾರ, ದೂರಸಂಪರ್ಕ, ಗಣಿಗಾರಿಕೆ ಹಾಗೂ ಸಂಶೋಧನಾ ಸಂಸ್ಥೆಗಳ ಮಾಹಿತಿ ಹ್ಯಾಕ್ ಮಾಡಲು, ವೈರಸ್​ ಬಿಟ್ಟು ಸೈಬರ್ ಅಟ್ಯಾಕ್ ಮಾಡಲು ಅಥವಾ ಸೈಬರ್ ಭಯೋತ್ಪಾದನೆ ನಡೆಸಲು ಯತ್ನ ನಡೆಸುತ್ತಲೇ ಇದೆಯಂತೆ..

ತುರ್ತಾಗಿ ಭಾರತ ಏನು ಮಾಡಬೇಕು?

ಭೂಮಿ, ಆಕಾಶ, ನೀರು ಮತ್ತು ಅಂತರೀಕ್ಷ ಈ ಕ್ಷೇತ್ರಗಳಲ್ಲಿ ಭಾರತ ಇಂದು ಸಾಕಷ್ಟು ಬಲಿಷ್ಠವಾಗಿದೆ. ಈ ಕ್ಷೇತ್ರದಲ್ಲಿ ನೇರವಾಗಿ ಭಾರತದ ಮೇಲೆ ದಾಳಿ ಮಾಡಲು ಶತ್ರುಗಳು ನಡುಗುತ್ತಾರೆ. ಆದ್ರೆ ಆಧುನಿಕ ಸೈಬರ್ ಭಯೋತ್ಪಾದನೆ ಎದುರಿಸಲು ಇದಷ್ಟೇ ಸಾಲುವುದಿಲ್ಲ.. ಇನ್​ಫ್ಯಾಕ್ಟ್​ ಸೈಬರ್ ವಾರ್ ಮತ್ತು ಸೈಬರ್ ಅಟ್ಯಾಕ್​ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಸಾಧಿಸುವುದು ಸಾಕಷ್ಟಿದೆ. ಇದೇ ಕಾರಣದಿಂದಾಗಿ ಕೇಂದ್ರ ಸರ್ಕಾರ ಇಂದು ತುರ್ತಾಗಿ ಭಾರತದ ಸಂರಕ್ಷಣೆಗಾಗಿ 360 ಡಿಗ್ರಿ ಯೋಜನೆ ರೂಪಿಸಬೇಕಿದೆ. ಭಾರತದ ಯುವ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡು ಚೀನಾದ ಎಲ್ಲ ಹುನ್ನಾರಗಳಿಗೂ ತಕ್ಕ ಉತ್ತರ ಕೊಡುವತ್ತ ಗಮನ ಕೇಂದ್ರೀಕರಿಸಬೇಕಿದೆ.
End Anchor: ಚೀನಾದ ರೆಡ್​ಫಾಕ್ಸ್​ಟ್ರಾಟ್ ಅನ್ನೋ ಹ್ಯಾಕರ್ಸ್​ ಗುಂಪು ಕೇವಲ ಭಾರತವನ್ನ ಮಾತ್ರ ಟಾರ್ಗೆಟ್ ಮಾಡ್ತಿಲ್ಲ.. ಬದಲಿಗೆ ಅಫ್ಘಾನಿಸ್ತಾನ, ಕಝಕಿಸ್ತಾನ, ಕಿರಿಗಿಸ್ಥಾನ, ಚೀನಾ ತನ್ನ ಅತ್ಯಾಪ್ತ ರಾಷ್ಟ್ರ ಅಂತ ಹೇಳಿಕೊಳ್ಳುವ ಪಾಕಿಸ್ತಾನ, ತಜಕಿಸ್ತಾನ, ಉಜಬೇಕಿಸ್ಥಾನ ಮುಂತಾದಲ್ಲೂ ಸಾಕಷ್ಟು ಆ್ಯಕ್ಟಿವ್ ಇದೆ. ಆದ್ರೆ, ಅದಕ್ಕೆ ಭಾರತವೇ ಬಲಿಷ್ಠ ಎದುರಾಳಿ ಆಗಿರೋದ್ರಿಂದ ಭಾರತವನ್ನೇ ಹೆಚ್ಚು ಟಾರ್ಗೆಟ್ ಮಾಡ್ತಿದೆ.. ಇದಕ್ಕೆ ತಕ್ಕ ಪಾಠವನ್ನ ಭಾರತ ಕಲಿಸಲೇಬೇಕಿದೆ.

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ನೀವೆಷ್ಟು ಸೇಫ್? ಚೀನಾದ e-ಭಯೋತ್ಪಾದನೆಗೆ ಜಗತ್ತೇ ಗಡಗಡ-ಭಾರತವೇ ಟಾರ್ಗೆಟ್..! appeared first on News First Kannada.

Source: newsfirstlive.com

Source link