ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ನೂತನ ನಾಯಕ ಹೆಸರನ್ನು ಘೋಷಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ತಂಡದ ಮುಂದಿನ ನಾಯಕನನ್ನಾಗಿ KKR ಪ್ರಕಟಿಸಿದೆ. ಕೆಕೆಆರ್ ತನ್ನ ಅಧಿಕೃತ ಟ್ವಿಟರ್ನಲ್ಲಿ ಈ ಬಗ್ಗೆ ಪ್ರಕಟಿಸಿದೆ.
ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಕೆಕೆಆರ್ ಫ್ರಾಂಚೈಸಿ, 12.50 ಕೋಟಿ ನೀಡಿ ಖರೀದಿಸಿದೆ. ಬಹುತೇಕ ತಂಡಗಳು ಅಯ್ಯರ್ ಖರೀದಿಗೆ ಸ್ಫರ್ಧೆ ನಡೆಸಿದರೂ, ಕೆಕೆಆರ್ ಪಟ್ಟು ಬಿಡದೆ ಬಿಡ್ ನಡೆಸಿತು. ಅಂತಿಮವಾಗಿ 12 ಕೋಟಿ 50 ಲಕ್ಷಕ್ಕೆ ಅಯ್ಯರ್, ಶಾರೂಖ್ ನೇತೃತ್ವದ ಪಾಲಾದರು.
ಕಳೆದ ಬಾರಿ ಅಯ್ಯರ್ ಡೆಲ್ಲಿ ಪರ ಕಣಕ್ಕಿಳಿದಿದ್ರು. 2020ರಲ್ಲಿ ಡೆಲ್ಲಿ ತಂಡವನ್ನ ನಾಯಕನಾಗಿ ಅಯ್ಯರ್, ಫೈನಲ್ವರೆಗೂ ಕೊಂಡೊಯ್ದಿದ್ದರು. ಬಳಿಕ ಇಂಜುರಿಗೆ ಒಳಗಾದ ಅಯ್ಯರ್, 14ನೇ ಆವೃತ್ತಿಯ ಮೊದಲಾರ್ಧ ಭಾಗಕ್ಕೆ ದೂರವಾದ್ರು. ಅಯ್ಯರ್ ಅಲಭ್ಯತೆಯಲ್ಲಿ ರಿಷಭ್ ಪಂತ್ ನಾಯಕತ್ವ ನೀಡಲಾಗಿತ್ತು.
ಎರಡನೇ ಹಂತದ IPLಗೆ ಅಯ್ಯರ್, ಕಂಬ್ಯಾಕ್ ಮಾಡಿದ್ರೂ, ಪಂತ್ಗೆ ನಾಯಕತ್ವ ನೀಡಲಾಗಿತ್ತು. ಇದ್ರಿಂದ ಅಯ್ಯರ್ ಅಸಮಾಧಾನಕ್ಕೆ ಒಳಗಾಗಿದ್ರು. ಮುಂದಿನ ಆವೃತ್ತಿಯ ಐಪಿಎಲ್ನಲ್ಲೂ ರಿಷಭ್ ಪಂತ್ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿತ್ತು. ಇದ್ರಿಂದ ಬೇಸರಗೊಂಡ ಶ್ರೇಯಸ್, ತಂಡದಿಂದ ಹೊರ ಬರುವುದಾಗಿ ಹೇಳಿದ್ರು.
ನಾಯಕತ್ವದ ಜವಾಬ್ದಾರಿ ಮರಳಿ ನೀಡಿದರೆ ಮಾತ್ರ ತಂಡದ ಭಾಗವಾಗಿರುವೆ ಎಂದು ಫ್ರಾಂಚೈಸಿಗೆ ಅಯ್ಯರ್ ಹೇಳಿದ್ರು. ಆದ್ರೆ ಫ್ರಾಂಚೈಸಿ ಇದನ್ನು ನಿರಾಕರಿಸಿದ ಪರಿಣಾಮ ಈ ಬಲಗೈ ಬ್ಯಾಟ್ಸ್ಮನ್ಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ರು. ಹರಾಜಿನಲ್ಲಿ 2 ಕೋಟಿ ಮೂಲ ಬೆಲೆ ಹೊಂದಿದ್ದ ಅಯ್ಯರ್, 12.50 ಕೋಟಿಗೆ ಕೆಕೆಆರ್ ತಂಡದ ಪಾಲಾದರು.
ಇನ್ನು ಕೆಕೆಆರ್ ಕೂಡ ಹೊಸ ನಾಯಕನ ಹುಡಕಾಟದಲ್ಲಿತ್ತು. ಕಳೆದ ಬಾರಿ ತಂಡವನ್ನು ಫೈನಲ್ಗೇರಿಸಿದ್ದ ನಾಯಕ ಇಯಾನ್ ಮಾರ್ಗನ್ರನ್ನು ಫ್ರಾಂಚೈಸಿ ಕೈಬಿಟ್ಟಿತ್ತು. ಹಾಗಾಗಿ ಹೊಸ ನಾಯಕನನ್ನು ಖರೀದಿಸಲು ನಿರ್ಧರಿಸಿತ್ತು. ಅಲ್ಲದೆ ಹರಾಜಿಗೂ ಮೊದಲೇ ಅಯ್ಯರ್ ಖರೀದಿಗೆ KKR ಪ್ಲಾನ್ ಹಾಕಿಕೊಂಡಿತ್ತು.
ಹರಾಜಿನಲ್ಲಿ ಎಷ್ಟೇ ಆಗಲಿ ಅಯ್ಯರ್ರನ್ನ ಬಿಟ್ಟುಕೊಡಬಾರದು ಎಂಬ ನಿರ್ಧಾರಕ್ಕೆ ಬಂದಿತ್ತು. ಇದೇ ಕಾರಣದಿಂದ ಪೈಪೋಟಿ ನಡೆಸಿ ಅಯ್ಯರ್ರನ್ನ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಆ ಮೂಲಕ ಕೆಕೆಆರ್ ತಂಡವನ್ನು ಮುನ್ನಡೆಸಿದ ನಾಯಕರ ಪಟ್ಟಿಗೆ ಅಯ್ಯರ್ ಸೇರ್ಪಡೆಗೊಂಡಿದ್ದಾರೆ. ಬ್ರೆಂಡನ್ ಮೆಕಲಮ್, ಸೌರವ್ ಗಂಗೂಲಿ, ಗೌತಮ್ ಗಂಭೀರ್, ದಿನೇಶ್ ಕಾರ್ತಿಕ್, ಇಯಾನ್ ಮಾರ್ಗನ್ ಈ ಹಿಂದೆ ತಂಡವನ್ನು ಮುನ್ನಡೆಸಿದ್ದಾರೆ.