ಬೆಂಗಳೂರು: ನಿನ್ನೆ ಕೇಂದ್ರ ಸರ್ಕಾರದ ಮಹತ್ವದ ಕ್ಯಾಬಿನೆಟ್ ವಿಸ್ತರಣೆ ನಡೆದಿದ್ದು 43 ಸಚಿವರನ್ನು ಕ್ಯಾಬಿನೆಟ್​ಗೆ ಸೇರಿಸಿಕೊಳ್ಳಲಾಗಿದೆ. ಪ್ರಧಾನಿ ಮೋದಿಯ ನೂತನ ಕ್ಯಾಬಿನೆಟ್​ ಬಗ್ಗೆ ವ್ಯಂಗ್ಯವಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು.. ಸಚಿವರ ಕಾರ್ಯನಿವರ್ಹಣೆಯೇ ಸಂಪುಟ ಪುನಾರಚನೆಯ ಮಾನದಂಡವಾಗಿದ್ದರೆ ಮೊದಲು ನರೇಂದ್ರ ಮೋದಿ ಅವರನ್ನು ಪ್ರಧಾನಿ ಪಟ್ಟದಿಂದ ಕಿತ್ತುಹಾಕಬೇಕು ಎಂದಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು..?

ಸಚಿವರ ಕಾರ್ಯನಿವರ್ಹಣೆಯೇ ಸಂಪುಟ ಪುನಾರಚನೆಯ ಮಾನದಂಡವಾಗಿದ್ದರೆ ಮೊದಲು ನರೇಂದ್ರ ಮೋದಿ ಅವರನ್ನು ಪ್ರಧಾನಿ ಪಟ್ಟದಿಂದ ಕಿತ್ತುಹಾಕಬೇಕು. ನೋಟ್ ಬ್ಯಾನ್​ನಿಂದ ಹಿಡಿದು ಕೊರೊನಾ ನಿಯಂತ್ರಣದವರೆಗೆ ಈ ಸರ್ಕಾರ ವಿಫಲಗೊಂಡಿದ್ರೆ ಅದಕ್ಕೆ ನೇರ ಹೊಣೆ ನರೇಂದ್ರ ಮೋದಿಯವರು.

ಹಣಕಾಸು, ಆರೋಗ್ಯ, ಶಿಕ್ಷಣ ಖಾತೆಗಳ ವೈಫಲ್ಯಕ್ಕೆ ಮೋದಿಯೇ ಹೊಣೆ..

ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಏಕವ್ಯಕ್ತಿ ಪ್ರದರ್ಶನವಾಗಿರುವ ಸರ್ಕಾರದಲ್ಲಿ ಸಂಪುಟ ವಿಸ್ತರಣೆಗೆ ಯಾವ ಮಹತ್ವ ಇಲ್ಲ. ಯಾರು ಸಚಿವರಾದರೂ ಅವರೆಲ್ಲರೂ ನಾಮ್ ಕಾವಸ್ತೆ, ಹಣಕಾಸು, ಆರೋಗ್ಯ, ಶಿಕ್ಷಣ ಖಾತೆ ಯಾವುದೇ ಇರಲಿ, ನೀತಿ ನಿರ್ಧಾರಗಳನ್ನು ಪ್ರಕಟಿಸುವುದು ನರೇಂದ್ರ ಮೋದಿ ಅವರೇ ಆಗಿರುವ ಕಾರಣ ಆ ಖಾತೆಗಳ ವೈಫಲ್ಯಕ್ಕೆ ಅವರೇ ಹೊಣೆ.

ನಿಜವಾಗಿ ಮೋದಿಯವರು ರಾಜೀನಾಮೆ ನೀಡಬೇಕಲ್ಲಾ?

ಆಗಾಗ ಟಿವಿಗಳಲ್ಲಿ ಕಾಣಿಸಿಕೊಂಡು ಜಾಗಟೆ ಬಡಿದು, ದೀಪ ಹಚ್ಚಿ ಕೊರೊನಾ ವೈರಸ್ ಓಡಿಸಲು ಹೇಳಿದ ಮತ್ತು ಆರೋಗ್ಯ ಸಚಿವರನ್ನು ಬದಿಗೊತ್ತಿ ಎಲ್ಲ ನಿರ್ಧಾರಗಳನ್ನು ಕೈಗೊಂಡವರು ನರೇಂದ್ರ ಮೋದಿ. ಈಗ ಕೊರೊನಾ ನಿಯಂತ್ರಣದ ವೈಫಲ್ಯಕ್ಕೆ ಡಾ.ಹರ್ಷವರ್ಧನ್ ಎಂಬ ಆರೋಗ್ಯ ಸಚಿವರನ್ನು ಕಿತ್ತುಹಾಕಿದ್ದಾರಂತೆ. ನಿಜವಾಗಿ ಮೋದಿಯವರು ರಾಜೀನಾಮೆ ನೀಡಬೇಕಲ್ಲಾ?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಿತ್ತುಹಾಕಬೇಕಿತ್ತಲ್ವಾ?

ಸಾಧನೆಯೇ ಮಾನದಂಡವಾಗಿದ್ದರೆ ಮೊದಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಿತ್ತುಹಾಕಬೇಕಿತ್ತಲ್ವಾ? ಆರೋಗ್ಯ ಕ್ಷೇತ್ರಕ್ಕಿಂತಲೂ ಹೆಚ್ಚಿನ ವೈಫಲ್ಯ ಆಗಿರುವುದು ಆರ್ಥಿಕ ಕ್ಷೇತ್ರದಲ್ಲಿ. ನೋಟ್ ಬ್ಯಾನ್, GST, ಕೊರೊನಾ ಪರಿಹಾರ ಹೀಗೆ ಹಣಕಾಸು ಖಾತೆಗೆ ಸಂಬಂಧಿಸಿದ ವೈಫಲ್ಯಗಳಿಂದಾಗಿಯೇ ದೇಶ ದುಸ್ಥಿತಿಗೆ ಬಂದಿದೆ.

ಈ ಹೊಸಬರು ಏನು ಮಾಡುತ್ತಾರೋ ಗೊತ್ತಿಲ್ಲ..

ಬಹಳ ಮಂದಿ ಸಚಿವರನ್ನು ಕೈಬಿಟ್ಟಿರುವ ಸುದ್ದಿ ಕೇಳಿಯೇ ಅವರೆಲ್ಲ ಸಂಪುಟದಲ್ಲಿದ್ದರೆಂದು ದೇಶದ ಜನರಿಗೆ ಗೊತ್ತಾಗಿದ್ದು. ಇವರಲ್ಲಿ ಬಹಳಷ್ಟು ಮಂದಿ ಹೊಸಬರು. ದೇಶ ಎದುರಿಸುತ್ತಿರುವ ಇಂದಿನ ಸಂಕಷ್ಟದ ಕಾಲದಲ್ಲಿ ಈ ಹೊಸಬರು ಏನು ಮಾಡುತ್ತಾರೋ ಗೊತ್ತಿಲ್ಲ. ಸಾಮಾನ್ಯವಾಗಿ ಅಸಮರ್ಥರು ಅಸಮರ್ಥರನ್ನೇ ಆಯ್ಕೆ ಮಾಡಿಕೊಂಡು ಜೊತೆಯಲ್ಲಿಟ್ಟುಕೊಳ್ತಾರೆ.

ಇದಕ್ಕಾಗಿಯೇ ನಾನು ಮೋದಿಯವರ ಮನೆದೇವರೇ ಸುಳ್ಳು ಎಂದು ಹೇಳುತ್ತಿರುವುದು

ನರೇಂದ್ರಮೋದಿ ಅವರು ಮೊದಲು ಅಧಿಕಾರಕ್ಕೆ ಬಂದಾಗ ‘Minimum Government Maximum Governance’ ಎಂಬ ಘೋಷಣೆ ಕೂಗುತ್ತಿದ್ದರು. ಈಗಿನ ಸಚಿವ ಸಂಪುಟದಲ್ಲಿ 77 ಸದಸ್ಯರಿದ್ದಾರೆ. ಇದೇನಾ Minimum Government?. ಹೇಳುವುದೊಂದು, ಮಾಡುವುದೊಂದು. ಇದಕ್ಕಾಗಿಯೇ ನಾನು ಮೋದಿಯವರ ಮನೆದೇವರೇ ಸುಳ್ಳು ಎಂದು ಹೇಳುತ್ತಿರುವುದು.

ಕರ್ನಾಟಕದ 6 ಕೇಂದ್ರ ಸಚಿವರಲ್ಲಿ ಹಿಂದುಳಿದ ಜಾತಿಗೆ ಸೇರಿದವರಿಲ್ಲ..

ಕರ್ನಾಟಕದ 6 ಕೇಂದ್ರ ಸಚಿವರಲ್ಲಿ ಹಿಂದುಳಿದ ಜಾತಿಗೆ ಸೇರಿದವರಿಲ್ಲ. ಮೂವರು ಬ್ರಾಹ್ಮಣರು ಹಾಗೂ ಒಕ್ಕಲಿಗ, ಲಿಂಗಾಯತ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ತಲಾ ಒಬ್ಬರು ಸಚಿವರಾಗಿದ್ದಾರೆ. ಯಾವ ಜಾತಿಗೆ ಕೊಟ್ಟರೂ ನನ್ನ ಆಕ್ಷೇಪ ಇಲ್ಲ. ಅರ್ಧಕ್ಕಿಂತ ಹೆಚ್ಚಿನ ಜನಸಂಖ್ಯೆಯ ಸಮುದಾಯಗಳಿಗೆ ಪ್ರಾತಿನಿಧ್ಯ ನಿರಾಕರಿಸುವುದು ಯಾವ ಸಾಮಾಜಿಕ ನ್ಯಾಯ?

ಮಹತ್ವದ ಖಾತೆಗಳನ್ನು ಕೊಟ್ಟರೂ ಇವರಿಗೆ ನಿಭಾಯಿಸುವ ಸಾಮರ್ಥ್ಯವೂ ಇಲ್ಲ

ಕರ್ನಾಟಕದಿಂದ ಸಚಿವರು ಆರಾಗಲಿ, ಹನ್ನೆರಡಾಗಲಿ ಅದರಿಂದ ರಾಜ್ಯಕ್ಕೆ ಏನೂ ಲಾಭವಾಗದು ಎನ್ನುವುದು ಈಗಾಗಲೇ ಸಾಬೀತಾಗಿದೆ. ಹೊಸಬರಲ್ಲಿ ಯಾರೂ ಸಂಪುಟದರ್ಜೆಯ ಸಚಿವರಿಲ್ಲ. ಮಹತ್ವದ ಖಾತೆಗಳೂ ಇಲ್ಲ. ಮಹತ್ವದ ಖಾತೆಗಳನ್ನು ಕೊಟ್ಟರೂ ಇವರಿಗೆ ನಿಭಾಯಿಸುವ ಸಾಮರ್ಥ್ಯವೂ ಇಲ್ಲ ಎಂದು ನರೇಂದ್ರ ಮೋದಿ ಅವರಿಗೆ ಗೊತ್ತಾಗಿರಬೇಕು.

ಪುನರ್ರಚನೆಯಿಂದ ರಾಜ್ಯಕ್ಕೆ ಯಾವ ಲಾಭವೂ ಇಲ್ಲ

ಈ ಸಂಪುಟ ವಿಸ್ತರಣೆ, ಪುನರ್ರಚನೆಯಿಂದ ರಾಜ್ಯಕ್ಕೆ ಯಾವ ಲಾಭವೂ ಇಲ್ಲ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ನರೇಂದ್ರ ಮೋದಿ ಎದುರು ಬಾಯಿಬಿಡುವ ಶಕ್ತಿ ಇಲ್ಲ, 25 ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ. ಹೀಗಿರುವಾಗ ಹೊಸದಾಗಿ ಸಚಿವ ಖಾತೆಯ ಕಿರೀಟ ಇಟ್ಟುಕೊಂಡು ಇವರೇನು ಮಾಡಬಹುದು?

The post ನೂತನ ಸಂಪುಟದಿಂದ ಮೋದಿ, ನಿರ್ಮಲಾ ಅವರನ್ನ ಕಿತ್ತುಹಾಕಬೇಕಿತ್ತಲ್ವಾ? ಸಿದ್ದರಾಮಯ್ಯ ವ್ಯಂಗ್ಯ appeared first on News First Kannada.

Source: newsfirstlive.com

Source link