ನೆಟ್​ಫ್ಲಿಕ್ಸ್​ಗೆ ಕಾಲಿಟ್ಟ ‘ಅಣ್ಣಾಥೆ’; ಬಾಕ್ಸ್​ ಆಫೀಸ್​ನಲ್ಲಿ ರಜನಿ ಸಿನಿಮಾ ಗಳಿಸಿದ್ದೆಷ್ಟು? | Rajinikanth Starrer Annaatthe Movie On Netflix Annaatthe Movie Box Office total collection details


ನೆಟ್​ಫ್ಲಿಕ್ಸ್​ಗೆ ಕಾಲಿಟ್ಟ ‘ಅಣ್ಣಾಥೆ’; ಬಾಕ್ಸ್​ ಆಫೀಸ್​ನಲ್ಲಿ ರಜನಿ ಸಿನಿಮಾ ಗಳಿಸಿದ್ದೆಷ್ಟು?

ರಜನಿಕಾಂತ್​

ರಜನಿಕಾಂತ್​ ನಟನೆಯ ‘ಅಣ್ಣಾಥೆ’ ದೀಪಾವಳಿ ನಿಮಿತ್ತ ನವೆಂಬರ್​ 4ರಂದು ರಿಲೀಸ್​ ಆಗಿತ್ತು. ರಿಲೀಸ್​ ಆದ ಮೂರೇ ವಾರಕ್ಕೆ ರಜನಿ ಸಿನಿಮಾ ನೆಟ್​ಫ್ಲಿಕ್ಸ್​ಗೆ ಬಂದಿದೆ. ಹಾಗಂತ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಕಡಿಮೆ ಗಳಿಕೆ ಮಾಡಿಲ್ಲ. ಈ ಸಿನಿಮಾ ಮೂರು ವಾರಕ್ಕೆ ದೊಡ್ಡ ಮೊತ್ತದ ಗಳಿಕೆ ಮಾಡಿದೆ. ಇದನ್ನು ಕೇಳಿ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಸಾಧ್ಯವಾಗದೆ ಇದ್ದವರು ಒಟಿಟಿಯಲ್ಲಿ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ.  

‘ಅಣ್ಣಾಥೆ’ ಚಿತ್ರ ವಿಶ್ವಾದ್ಯಂತ ಸುಮಾರು 2200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ತಮಿಳುನಾಡು ಒಂದರಲ್ಲೇ 800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಜನಿಕಾಂತ್ ಸಿನಿಮಾ ತೆರೆಗೆ ಬಂದಿತ್ತು. ಕರ್ನಾಟಕ ಹಾಗೂ ಆಂಧ್ರ, ತೆಲಂಗಾಣ ಸೇರಿ ಮತ್ತಿತರ ರಾಜ್ಯಗಳಲ್ಲೂ ಈ ಸಿನಿಮಾ ದೊಡ್ಡ ಮಟ್ಟದಲ್ಲೇ ರಿಲೀಸ್​ ಆಗಿತ್ತು. ವಿಶ್ವ ಮಟ್ಟದಲ್ಲಿ ಈ ಸಿನಿಮಾ ಮೊದಲ ದಿನ 70 ಕೋಟಿ ಗಳಿಕೆ ಮಾಡಿತ್ತು. ಮೂರು ವಾರಗಳಲ್ಲಿ ಈ ಚಿತ್ರ ಬರೊಬ್ಬರಿ 239 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ 250 ಕೋಟಿ ಕ್ಲಬ್​ ತಲುಪೋಕೆ ಚಿತ್ರ ವಿಫಲವಾಗಿದೆ. ಬಾಕ್ಸ್​ ಆಫೀಸ್​ ತಜ್ಞ ಮನೋಬಲ ವಿಜಯ ಬಾಲನ್​ ಮೂರು ವಾರಗಳ ಕಲೆಕ್ಷನ್​ ಕುರಿತು ಮಾಹಿತಿ ನೀಡಿದ್ದಾರೆ.

‘ಅಣ್ಣಾಥೆ’ ಸಿನಿಮಾವನ್ನು ಸನ್​ ಪಿಕ್ಚರ್ಸ್​ ನಿರ್ಮಾಣ ಮಾಡಿದೆ. ರಜನಿಕಾಂತ್​, ಕೀರ್ತಿ ಸುರೇಶ್​, ನಯನತಾರಾ, ಮೀನಾ, ಖುಷ್ಬು, ಪ್ರಕಾಶ್ ರಾಜ್, ಜಗಪತಿ ಬಾಬು ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ. ದೀಪಾವಳಿ ನಿಮಿತ್ತ ಈ ಸಿನಿಮಾ ನವೆಂಬರ್​ 4ರಂದು ತೆರೆಗೆ ಬಂದಿತ್ತು. ಮೂರು ವಾರಗಳ ನಂತರದಲ್ಲಿ ಅಂದರೆ, ನವೆಂಬರ್​ 25ರಂದು ಚಿತ್ರ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ. ನೆಟ್​ಫ್ಲಿಕ್ಸ್​ನಲ್ಲೂ ಸಿನಿಮಾಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.

ಇನ್ನು, ಸಿನಿಮಾಗೆ ಪೈರಸಿ ಕಾಟ ಕೂಡ ತಟ್ಟಿದೆ. ಈ ಚಿತ್ರ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಈ ಸಿನಿಮಾದ ಎಚ್​​ಡಿ ಪ್ರಿಂಟ್​ ಆನ್​ಲೈನ್​ನಲ್ಲಿ ಸೋರಿಕೆ ಆಗಿದೆ. ಕೆಲವರು ಇದರ ಮೂಲಕವೂ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಕೆಲ ಲಿಂಕ್​ಗಳನ್ನು ಡಿಲೀಟ್​ ಮಾಡಲಾಗಿದೆಯಾದರೂ ಮತ್ತೆ ಅಪ್​ಲೋಡ್​ ಮಾಡಲಾಗುತ್ತಿದೆ.

ಇದನ್ನೂ ಓದಿ: ಮಂಕಾಗಿದ್ದ ಚಿತ್ರಮಂದಿರಗಳ ವಹಿವಾಟಿಗೆ ಮರುಜೀವ ನೀಡಿದ ಅಣ್ಣಾಥೆ, ಸೂರ್ಯವಂಶಿ, ಎಟರ್ನಲ್ಸ್​

TV9 Kannada


Leave a Reply

Your email address will not be published. Required fields are marked *