ನೆರೆ ರಾಷ್ಟ್ರಗಳಲ್ಲಿ ವಿದೇಶಿ ವಿನಿಮಯ ಸಂಗ್ರಹ ಖಾಲಿ ಖಾಲಿ! ಭಾರತದ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಸ್ಪೆಷಲ್ ರಿಪೋರ್ಟ್ | Foreign Exchange Reserves what is position of India along with neighbors countries


ನೆರೆ ರಾಷ್ಟ್ರಗಳಲ್ಲಿ ವಿದೇಶಿ ವಿನಿಮಯ ಸಂಗ್ರಹ ಖಾಲಿ ಖಾಲಿ! ಭಾರತದ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಸ್ಪೆಷಲ್ ರಿಪೋರ್ಟ್

ನೆರೆ ರಾಷ್ಟ್ರಗಳಲ್ಲಿ ವಿದೇಶಿ ವಿನಿಮಯ ಸಂಗ್ರಹ ಖಾಲಿ ಖಾಲಿ! ಭಾರತದ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಸ್ಪೆಷಲ್ ರಿಪೋರ್ಟ್

ಶ್ರೀಲಂಕಾದಲ್ಲಿ ವಿದೇಶಿ ವಿನಿಮಯ ಸಂಗ್ರಹ ಸಂಪೂರ್ಣ ಖಾಲಿಯಾಗಿರುವುದರಿಂದ ವಿದೇಶಗಳಿಂದ ತೈಲ, ಆಹಾರ ಸಾಮಗ್ರಿ, ಮೆಡಿಸಿನ್ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಅಮದು ಮಾಡಿಕೊಳ್ಳಲು ಪರದಾಡುತ್ತಿದೆ. ಆದರೆ, ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಈಗ ಎಷ್ಟು ಡಾಲರ್ ಸಂಗ್ರಹ ಇದೆ? ನೇಪಾಳದ ವಿದೇಶಿ ವಿನಿಮಯ ಸಂಗ್ರಹದಲ್ಲಿರುವ ಡಾಲರ್ ನಿಂದ ಎಷ್ಟು ತಿಂಗಳವರೆಗೂ ಸರಕು-ಸೇವೆಗಳನ್ನು ಅಮದು ಮಾಡಿಕೊಳ್ಳಬಹುದು? ಇದರ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ (Foreign Exchange Reserves).

ಭಾರತಕ್ಕೆ ಒಂದು ವರ್ಷ ಅಮದಿಗೆ ತೊಂದರೆ ಇಲ್ಲ
ಬೆಲೆ ಏರಿಕೆ, ಹಣದುಬ್ಬರ ಭಾರತಕ್ಕೆ ಸೀಮಿತವಾದ ಆರ್ಥಿಕ ಸಮಸ್ಯೆಗಳಲ್ಲ. ಬೆಲೆ ಏರಿಕೆ, ಹಣದುಬ್ಬರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದೆ. ಇದರಿಂದಾಗಿ ಅನೇಕ ರಾಷ್ಟ್ರಗಳು ವಿದೇಶಗಳಿಂದ ಸರಕುಗಳನ್ನು ಅಮದು ಮಾಡಿಕೊಳ್ಳಲಾಗದೇ ದಿವಾಳಿ ಸ್ಥಿತಿಗೆ ಬಂದಿವೆ. ಅನೇಕ ರಾಷ್ಟ್ರಗಳಲ್ಲಿ ತಿನ್ನುವ ಅನ್ನಕ್ಕೂ ಜನರು ಪರದಾಡುವ ಸ್ಥಿತಿ ಇದೆ. ಕೆಲ ರಾಷ್ಟ್ರಗಳಲ್ಲಿ ಹಣದುಬ್ಬರ ಶೇ. 50 ರಿಂದ ಶೇ. 200 ವರೆಗೂ ಏರಿಕೆಯಾಗಿದೆ. ಭಾರತದಲ್ಲಿ ಹಣದುಬ್ಬರವು ಮಾರ್ಚ್ ತಿಂಗಳಲ್ಲಿ ಶೇ. 6.95 ರಷ್ಟು ಇದೆ. ಭಾರತದಲ್ಲಿ ಹಣದುಬ್ಬರವನ್ನು ಶೇ. 6ರೊಳಗೆ ನಿಯಂತ್ರಿಸಬೇಕು ಎಂಬ ಗುರಿಯನ್ನು ರಿಸರ್ವ್ ಬ್ಯಾಂಕ್ ಹಾಕಿಕೊಂಡಿದೆ. ಆದರೆ, ಭಾರತದಲ್ಲೂ ಹಣದುಬ್ಬರ ನಿಯಂತ್ರಣ ಮೀರಿ ಏರಿಕೆಯಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರ ಏರಿಕೆ ಮಾಡಿ, ಬ್ಯಾಂಕ್ ಬಡ್ಡಿದರ ಏರಿಕೆಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಭಾರತದಲ್ಲಿ ಆರ್ಥಿಕತೆ ಸದೃಢವಾಗಿರಬೇಕು ಅಂದರೆ ವಿದೇಶಿ ವಿನಿಮಯ ಸಂಗ್ರಹದಲ್ಲಿ ಹೆಚ್ಚಿನ ಡಾಲರ್ ಸಂಗ್ರಹ ಇರಬೇಕು. ಆದರೆ, ರಷ್ಯಾ-ಉಕ್ರೇನ್ ಯುದ್ಧ, ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಬೆಲೆ ಏರಿಕೆ, ಹಣದುಬ್ಬರ, ಕಚ್ಚಾತೈಲದ ಬೆಲೆ ನೂರು ಡಾಲರ್ ಗೆ ಏರಿಕೆಯಾಗಿರುವುದು ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಕುಸಿತವಾಗುತ್ತಿದೆ. ಭಾರತದಲ್ಲಿ ಮಾರ್ಚ್ ತಿಂಗಳ ಅಂತ್ಯಕ್ಕೆ ವಿದೇಶಿ ವಿನಿಮಯ ಸಂಗ್ರಹವು 600 ಬಿಲಿಯನ್ ಡಾಲರ್ ಗೆ ಕುಸಿದಿದೆ. ವಿದೇಶಿ ವಿನಿಮಯ ಸಂಗ್ರಹದಲ್ಲಿರುವ ಡಾಲರ್ ಹಣವನ್ನು ಬಳಸಿಕೊಂಡು ಭಾರತವು 12 ತಿಂಗಳವರೆಗೂ ವಿದೇಶಗಳಿಂದ ಸರಕುಗಳನ್ನು ಅಮದು ಮಾಡಿಕೊಳ್ಳಲು ಸಾಧ್ಯ.

2021ರ ಮಾರ್ಚ್ ಅಂತ್ಯಕ್ಕೆ ಇದ್ದ ವಿದೇಶಿ ವಿನಿಮಯ ಸಂಗ್ರಹದಿಂದ 17.4 ತಿಂಗಳವರೆಗೂ ವಿದೇಶಗಳಿಂದ ಸರಕುಗಳನ್ನು ಅಮದು ಮಾಡಿಕೊಳ್ಳಲು ಅವಕಾಶ ಇತ್ತು. ಅಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಮಾರ್ಚ್ ಗೆ ವಿದೇಶಿ ವಿನಿಮಯ ಸಂಗ್ರಹದಲ್ಲಿ ಕುಸಿತವಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಕುಸಿತವಾಗುತ್ತಿದೆ. ಕಳೆದ 5 ವಾರಗಳಿಂದ ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಕುಸಿತವಾಗುತ್ತಿದೆ. ಭಾರತವು ವಿದೇಶಗಳಿಂದ ಸರಕುಗಳ ಅಮದಿಗೆ ಹೆಚ್ಚಿನ ಡಾಲರ್ ಹಣವನ್ನು ಖರ್ಚು ಮಾಡಬೇಕಾಗಿದೆ.

ಇದರಿಂದಾಗಿ ಕಳೆದ 5 ವಾರಗಳಿಂದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಕುಸಿತವಾಗುತ್ತಿದೆ. ಹೀಗೆ ವಿದೇಶಿ ವಿನಿಮಯ ಸಂಗ್ರಹದಲ್ಲಿ ಕುಸಿತವಾಗಲು ರಿಸರ್ವ್ ಬ್ಯಾಂಕ್ ತನ್ನ ಬಳಿ ಇರುವ ಆಮೆರಿಕನ್ ಡಾಲರ್ ಅನ್ನು ಮಾರಾಟ ಮಾಡುತ್ತಿರುವುದು ಕೂಡ ಒಂದು ಕಾರಣ. ಡಾಲರ್ ಎದುರು ಭಾರತದ ಕರೆನ್ಸಿಯಾದ ರೂಪಾಯಿ ಮೌಲ್ಯ ಕುಸಿತ ತಡೆಯಲು ರಿಸರ್ವ್ ಬ್ಯಾಂಕ್ ಕೆಲವೊಮ್ಮೆ ತನ್ನ ಬಳಿ ಇರುವ ಡಾಲರ್ ಅನ್ನು ಮಾರಾಟ ಮಾಡುತ್ತೆ. ಈಗಲೂ ರಿಸರ್ವ್ ಬ್ಯಾಂಕ್ ರೂಪಾಯಿ ಮೌಲ್ಯ ಕುಸಿತ ತಡೆಯಲು ಡಾಲರ್ ಅನ್ನು ಮಾರಾಟ ಮಾಡುತ್ತಿದೆ.

2021ರ ಸೆಪ್ಟೆಂಬರ್ 3ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ 642 ಬಿಲಿಯನ್ ಡಾಲರ್ ಸಂಗ್ರಹ ಇತ್ತು. ಆದರೇ, ಈ ವರ್ಷದ ಏಪ್ರಿಲ್ 8ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 604 ಬಿಲಿಯನ್ ಡಾಲರ್ ಗೆ ಕುಸಿದಿದೆ. ಕಳೆದ 5 ವಾರಗಳಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ 28.5 ಬಿಲಿಯನ್ ಡಾಲರ್ ಕುಸಿತವಾಗಿದೆ. 2021ರ ಸೆಪ್ಟೆಂಬರ್ 3ಕ್ಕೆ ಕೊನೆಗೊಂಡ ವಾರಕ್ಕೆ ಹೋಲಿಸಿದರೇ, ಈಗ ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ 38 ಬಿಲಿಯನ್ ಡಾಲರ್ ಕುಸಿತವಾಗಿದೆ.

ಭಾರತದಲ್ಲಿ ವಿದೇಶಿ ನೇರ ಹೂಡಿಕೆ ಕಡಿಮೆಯಾಗುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ವಾಪಸ್ ತೆಗೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆಯೂ ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ 604 ಬಿಲಿಯನ್ ಡಾಲರ್ ಸಂಗ್ರಹವಾಗಿರುವುದನ್ನು ನೋಡಿದರೇ, ರಿಸರ್ವ್ ಬ್ಯಾಂಕ್ ಉತ್ತಮವಾಗಿಯೇ ವಿದೇಶಿ ವಿನಿಮಯ ಸಂಗ್ರಹದ ನಿರ್ವಹಣೆ ಮಾಡಿದೆ ಎಂದು ಆರ್ಥಿಕ ತಜ್ಞರು ರಿಸರ್ವ್ ಬ್ಯಾಂಕ್ ಗೆ ಶಹಬಾಸ್‌ಗಿರಿ ನೀಡಿದ್ದಾರೆ.

ಭಾರತಕ್ಕೆ ಬೇರೆ ಬೇರೆ ಮೂಲಗಳಿಂದ ಬರುತ್ತಿದ್ದ ವಿದೇಶಿ ಹೂಡಿಕೆಯಲ್ಲಿ ಕುಂಠಿತವಾಗಿದೆ. ಕಳೆದ ಆಕ್ಟೋಬರ್ ನಿಂದ ಜನವರಿ 2022ರ ಅವಧಿಯಲ್ಲಿ ವಿದೇಶಿ ನೇರ ಹೂಡಿಕೆಯು 11 ಬಿಲಿಯನ್ ಡಾಲರ್ ಗೆ ಕುಸಿದಿದೆ. ವರ್ಷದ ಹಿಂದೆ 18 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ ಭಾರತಕ್ಕೆ ಹರಿದು ಬಂದಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಮೂರನೇ ತ್ರೈಮಾಸಿಕದಲ್ಲಿ ತಮ್ಮ ಹೂಡಿಕೆಯನ್ನು ಹಿಂಪಡೆದು ಮಾರಾಟ ಮಾಡಿದ್ದಾರೆ. ಆದರೇ, ವಿದೇಶದಿಂದ ಅನಿವಾಸಿ ಭಾರತೀಯರ ಠೇವಣಿ ಮೂಲಕ ಸಾಧಾರಣ ಡಾಲರ್ ಹರಿದು ಬಂದಿದೆ.

ನೇಪಾಳದ ಆರ್ಥಿಕ ಸ್ಥಿತಿ ಹೇಗಿದೆ ಗೊತ್ತಾ?
ಭಾರತದ ನೆರೆಯ ಹಿಮಾಲಯನ್ ರಾಷ್ಟ್ರ ನೇಪಾಳದ ಆರ್ಥಿಕ ಸ್ಥಿತಿಯು ಕುಸಿತದ ಹಾದಿಯಲ್ಲಿದೆ. ನೇಪಾಳದಲ್ಲಿ ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ 9.5 ಬಿಲಿಯನ್ ಡಾಲರ್ ಮಾತ್ರ ವಿದೇಶಿ ವಿನಿಮಯ ಸಂಗ್ರಹ ಇದೆ. ಇಷ್ಟು ಡಾಲರ್ ಹಣ ಬಳಸಿ ನೇಪಾಳವು ಮುಂದಿನ ಆರೇಳು ತಿಂಗಳು ಮಾತ್ರ ವಿದೇಶದಿಂದ ಸರಕು ಸಾಮಗ್ರಿ ಅಮದು ಮಾಡಿಕೊಳ್ಳಲು ಸಾಧ್ಯ. ಕಳೆದ ವರ್ಷದ ಜುಲೈ ಮಧ್ಯಭಾಗದಿಂದ ನೇಪಾಳದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಶೇ.17ರಷ್ಟು ಕುಸಿತವಾಗಿದೆ. ಗ್ರಾಹಕ ಬೆಲೆ ಸೂಚ್ಯಂಕವು ಶೇ.7.14ಕ್ಕೆ ಏರಿಕೆಯಾಗಿದೆ. 2022ರ ಹಣಕಾಸು ವರ್ಷದ ಮೊದಲ 8 ತಿಂಗಳುಗಳಲ್ಲಿ ಅಮದು ಶೇ.38ರಷ್ಟು ಏರಿಕೆಯಾಗಿದೆ.
ನೇಪಾಳದಲ್ಲಿ ವಿದೇಶಿ ವಿನಿಮಯ ಸಂಗ್ರಹ ಕುಸಿತದ ಹಾದಿ ಹಿಡಿದಿರುವುದಿಂದ ನೇಪಾಳ ಸರ್ಕಾರವು ಐಷಾರಾಮಿ ಸರಕುಗಳ ಅಮದುನ್ನು ನಿಷೇಧಿಸಿದೆ.

ಆರ್ಥಿಕತೆಯ ಚೇತರಿಕೆಗಾಗಿ ವಿಶ್ವ ಬ್ಯಾಂಕ್ ನಿಂದ 150 ಮಿಲಿಯನ್ ಡಾಲರ್ ಸಾಲ ಪಡೆಯುತ್ತಿದೆ. ಆಮೆರಿಕಾದಿಂದ 659 ಬಿಲಿಯನ್ ಡಾಲರ್ ನೆರವು ಪಡೆಯುತ್ತಿದೆ. ಇನ್ನೂ ವಿದೇಶಿ ವಿನಿಯಮ ಸಂಗ್ರಹವನ್ನು ಹೆಚ್ಚಳ ಮಾಡಿಕೊಳ್ಳಲು ನೇಪಾಳ ಸರ್ಕಾರವು ವಿದೇಶಗಳಲ್ಲಿರುವ ಅನಿವಾಸಿ ನೇಪಾಳಿ ನಾಗರಿಕರಿಗೆ ನೇಪಾಳದಲ್ಲಿ ಡಾಲರ್ ಅಕೌಂಟ್ ತೆರೆದು ಡಾಲರ್ ಠೇವಣಿ ಇಡಲು ಮನವಿ ಮಾಡಿದೆ. ಕನಿಷ್ಠ ಒಂದು ಲಕ್ಷ ಅನಿವಾಸಿ ನೇಪಾಳಿ ನಾಗರಿಕರು ಡಾಲರ್ ಅಕೌಂಟ್ ತೆರೆದು ಡಾಲರ್ ಠೇವಣಿ ಇಟ್ಟರೇ, ನಗದಿಗೆ ಕೊರತೆಯಾಗಲ್ಲ ಎಂದು ನೇಪಾಳದ ಹಣಕಾಸು ಖಾತೆ ಸಚಿವ ಜನಾರ್ಧನ್ ಶರ್ಮಾ ಹೇಳಿದ್ದಾರೆ.

ಕೊರೊನಾದ ಕಾರಣದಿಂದ ನೇಪಾಳದ ಪ್ರವಾಸೋದ್ಯಮದ ಚಟುವಟಿಕೆಗಳು ಸ್ಥಗಿತವಾಗಿದ್ದವು. ಶ್ರೀಲಂಕಾದಂತೆಯೇ ನೇಪಾಳ ಕೂಡ ಆರ್ಥಿಕತೆಯ ಚೇತರಿಕೆಗೆ ಪ್ರವಾಸೋದ್ಯಮ ಅವಲಂಬಿಸಿರುವ ರಾಷ್ಟ್ರ. ಆದರೇ, ಕೊರೊನಾದಿಂದ ನೇಪಾಳದ ಪ್ರವಾಸೋದ್ಯಮ ಮಕಾಡೆ ಮಲಗಿದ್ದರಿಂದ ಈಗ ನಿಧಾನವಾಗಿ ನೇಪಾಳದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗುತ್ತಿದೆ. ಆದರೆ ನೇಪಾಳವನ್ನು ಶ್ರೀಲಂಕಾ, ಪಾಕಿಸ್ತಾನ ದೇಶಗಳ ಜೊತೆಗೆ ಹೋಲಿಸಬೇಡಿ ಎಂದು ನೇಪಾಳ ಸರ್ಕಾರದ ಸಚಿವರು ಹೇಳಿದ್ದಾರೆ.

TV9 Kannada


Leave a Reply

Your email address will not be published.