ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಮುಗಿದು ಐದು ದಿನ ಕಳೆದಿದೆ. ಆದ್ರೆ, ಈ ಪಂದ್ಯದಲ್ಲಿನ ಸೋಲಿನ ಒಳನೋಟದ ಚರ್ಚೆ ಇನ್ನೂ ಜೀವಂತವಾಗಿಯೇ ಇದೆ. ಇದೀಗ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಸೆಲೆಕ್ಷನ್ ಮಾನದಂಡದ ಬಗ್ಗೆ ಚರ್ಚೆ ಎದ್ದಿದೆ. ಆಯ್ಕೆ ನಡೆಯೋದು ಆಟಗಾರರ ಫಾರ್ಮ್​ ಆಧಾರದ ಮೇಲೆ ಅಲ್ಲ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಇದನ್ನ ಹೇಳಿದ್ಯಾರು..? ಇಂಥದ್ದೊಂದು ಚರ್ಚೆ ಹುಟ್ಟಿಗೆ ಕಾರಣವೇನು..? ಇಲ್ಲಿದೆ ಉತ್ತರ

ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಟೀಮ್ ಇಂಡಿಯಾ ಪಾಲಿಗೆ ಪ್ರತಿಷ್ಠೆಯ ಸಮರವೇ ಆಗಿತ್ತು. ಟೆಸ್ಟ್​ ಕ್ರಿಕೆಟ್​ನಲ್ಲಿನ ಅಗ್ರ ತಂಡಗಳ ಈ ಕಾದಾಟ ವಿಶ್ವದ ಗಮನವನ್ನೇ ಸೆಳೆದಿತ್ತು. ಘಟಾನುಘಟಿ ಆಟಗಾರರ ಮುಖಾಮುಖಿ ಪಂದ್ಯಕ್ಕೆ ಮತ್ತಷ್ಟು ಹೈವೋಲ್ಟೇಜ್​ ಟಚ್ ನೀಡಿತ್ತು. ಆದ್ರೆ, ಮಳೆಯಾಟದ ನಡುವೆ ಮಂಕಾದ ಪಂದ್ಯದಲ್ಲಿ, ಆಡಿದ ಕಳಪೆಯಾಟಕ್ಕೆ ಟೀಮ್ ಇಂಡಿಯಾ ಭಾರೀ ಬೆಲೆಯನ್ನೇ ತೆರಬೇಕಾಯ್ತು. ಟೀಮ್ ಕಾಂಬಿನೇಷನ್, ಬ್ಯಾಟ್ಸ್​ಮ್ಯಾನ್​ಗಳ ವೈಫಲ್ಯ, ಎಫೆಕ್ಟ್ಲೆಸ್ ಬೌಲಿಂಗ್ ತಂಡಕ್ಕೆ ಮುಳುವಾಗಿತ್ತು.

ಎದುರಾಳಿ ನ್ಯೂಜಿಲೆಂಡ್ ಮಾತ್ರ ಬ್ಯಾಟಿಂಗ್, ಬೌಲಿಂಗ್​​ನಲ್ಲಿ ಅಬ್ಬರಿಸಿತ್ತು. ಕಿವೀಸ್​​ನ ಛಲದ ಆಟಕ್ಕೆ ಸ್ಟಾರ್​ ಆಟಗಾರರನನ್ನೇ ಒಳಗೊಂಡಿದ್ದ ಟೀಮ್ ಇಂಡಿಯಾ​ ಹೀನಾಯ ಮುಖಭಂಗ ಅನುಭವಿಸಿದೆ. ಟೀಮ್ ಇಂಡಿಯಾದ ಅತಿ ಕೆಟ್ಟ ಪ್ರದರ್ಶನಕ್ಕೆ ಕ್ರಿಕೆಟ್ ದಿಗ್ಗಜರು, ಆಕ್ರೋಶವನ್ನೇ ಹೊರ ಹಾಕಿದ್ದಾರೆ. ಎಲ್ಲರಿಗಿಂತ ಟೀಮ್ ಇಂಡಿಯಾದ ಮಾಜಿ ಆಟಗಾರ ನೀಡಿರುವ ಈ ಒಂದು ಹೇಳಿಕೆ, ಸೆಲೆಕ್ಟರ್ಸ್​ ಎಡವಟ್ಟು ಮಾಡಿದ್ದಾರಾ? ಅನ್ನೋ ಪ್ರಶ್ನೆಯನ್ನ ಹುಟ್ಟಿಸಿದೆ.

ನೇಮ್, ಫೇಮ್​ಗೆ ಮನ್ನಣೆ ನೀಡಿದ್ರಾ ಸೆಲೆಕ್ಟರ್ಸ್..?
ಹೌದು, ಇಂಥದ್ದೊಂದು ಪ್ರಶ್ನೆಗೆ ಕಾರಣ ಪ್ರತಿಷ್ಠಿತ ಪಂದ್ಯಕ್ಕೆ ಅಳೆದು ತೂಗಿ ಆಯ್ಕೆ ಮಾಡದೇ ಸುಖಾಸುಮ್ಮನೆ ತಂಡವನ್ನ ಕಣಕ್ಕಿಳಿಸಿದ್ದು. ಅನುಭವಿ ಹಾಗೂ ಯುವ ಆಟಗಾರರ ಮಿಶ್ರಣದ 20 ಮಂದಿಯ ತಂಡದಲ್ಲಿ ಮ್ಯಾಚ್​ ವಿನ್ನರ್​ ಪ್ಲೇಯರ್​​ಗಳ ದಂಡೇ ಇತ್ತು. ಸದ್ಯ ಅದ್ಬುತ ಲಯದಲ್ಲಿದ್ದ ಯುವ ಆಟಗಾರರು ತಂಡದಲ್ಲಿ ಇದ್ದರು. ಆದ್ರೆ ಇದ್ಯಾವುದನ್ನೂ ಲೆಕ್ಕಿಸದ ಟೀಮ್ ಮ್ಯಾನೇಜ್​​ಮೆಂಟ್ ಸದ್ಯದ ಫಾರ್ಮ್​ ನೋಡದೆ, ಸ್ಟಾರ್​ ಗಿರಿಗೆ ಮಣೆಹಾಕಿತ್ತು.

ಸ್ಟಾರ್​​ ಗಿರಿಗೆ ಮಣೆ ಹಾಕಿದ ಪರಿಣಾಮ ಪ್ರತಿಭಾನ್ವಿತ ಆಟಗಾರರು ಬೆಂಚ್ ಕಾಯಬೇಕಾಯ್ತು. ಅದ್ರಲ್ಲೂ ಬೌಲಿಂಗ್ ವಿಭಾಗದಲ್ಲಿ ಮಾಡಿದ್ದ ಒಂದು ಯಡವಟ್ಟು ಪಂದ್ಯದ ಫಲಿತಾಂಶವನ್ನೇ ಬದಲಿಸಿಬಿಡ್ತು. ಇದೇ ವಿಚಾರವಾಗಿ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಸಾಬ್ ಕರೀಂ, ಸ್ಟಾರ್​ ಆಟಗಾರನಿಗೆ ಮಣೆಹಾಕುವ ಮುನ್ನ, ಫಾರ್ಮ್ ನೋಡಬೇಕಾಗಿತ್ತು ಎಂದು ಮ್ಯಾನೇಜ್​ಮೆಂಟ್​ಗೆ ಟಾಂಗ್ ನೀಡಿದ್ದಾರೆ.

‘ಸ್ಟಾರ್​ ಗಿರಿಗೆ ಮಣೆ’

‘ಬಿಸಿಸಿಐ ಸೆಲೆಕ್ಟರ್ಸ್​ ವೇಗಿ ಜಸ್​​ಪ್ರೀತ್ ಬೂಮ್ರಾ ಮೇಲೆ ಗಮನ ಹರಿಸಿಲ್ಲ ಎಂದು ಅನಿಸುತ್ತೆ. ಇತ್ತೀಚಿನ ದಿನಗಳಲ್ಲಿ ಬೂಮ್ರಾ ಫಾರ್ಮ್ ನೋಡದೆ, ಕೇವಲ ಸ್ಟಾರ್​ಡಮ್​​ ನೋಡಿ ತಂಡಕ್ಕೆ ಆಯ್ಕೆ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಾಯಗೊಂಡ ನಂತರ ಬೂಮ್ರಾ, ಇಂಗ್ಲೆಂಡ್ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಮಾತ್ರವೇ ಆಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧವೂ ಉತ್ತಮ ಲಯದಲ್ಲಿ ದಾಳಿ ನಡೆಸಲಿಲ್ಲ. ಇದು ಟೀಮ್ ಇಂಡಿಯಾಗೆ ಆತಂಕದ ವಿಷಯವಾಗಿದೆ’.
-ಸಾಬ್ ಕರೀಂ ಮಾಜಿ ಆಟಗಾರ

ಹೌದು. ಮಾಜಿ ಆಟಗಾರ ಸಾಬ್ ಕರೀಂ ಹೇಳಿದಂತೆ, ಆಸಿಸ್ ಸರಣಿಯ ಇಂಜುರಿ ಬಳಿಕ ಬೂಮ್ರಾ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. ತವರಿನಲ್ಲಿ ನಡೆದ ಇಂಗ್ಲೆಂಡ್ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ 4 ವಿಕೆಟ್ ಉರುಳಿಸಿದ್ದು ಬಿಟ್ಟರೆ, ನಂತರದ ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಬಳಿಕ ವಿಶ್ರಾಂತಿ ಮೊರೆ ಹೋಗಿದ್ದ ಬೂಮ್ರಾ, ಈಗ ನ್ಯೂಜಿಲೆಂಡ್ ವಿರುದ್ಧದ ಫೈನಲ್​​ನಲ್ಲೂ ವಿಕೆಟ್ ಪಡೆಯೋಕೆ ಪರದಾಟ ನಡೆಸಿದ್ರು. ಬೂಮ್ರಾ ಬೌಲಿಂಗ್​ನಲ್ಲಿ ಲೈನ್ ಆ್ಯಂಡ್ ಲೆನ್ತ್​, ವೇರಿಯೇಷನ್​​ಗಳೇ ಮಾಯವಾಗಿತ್ತು. ಈ ಇಂಗ್ಲೆಂಡ್​ ಕಂಡೀಷನ್​ನಲ್ಲಿ ಬೂಮ್ರಾ ಪರಿಣಾಮಕಾರಿಯಾಗಲ್ಲ ಅನ್ನೋದು ಗೊತ್ತಿದ್ದೂ, ಸಿರಾಜ್​ಗೆ ಅವಕಾಶ ನೀಡದಿದ್ದದ್ದು ತಂಡಕ್ಕೆ ಹಿನ್ನಡೆ ತಂದೊಡ್ಡಿತು.

ಬೂಮ್ರಾ ಲಯ ಟೀಮ್ ಇಂಡಿಯಾಕ್ಕೆ ಕಳವಳ
ಬೂಮ್ರಾ ಮ್ಯಾಚ್ ವಿನ್ನರ್ ಬೌಲರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್ 19 ಪಂದ್ಯಗಳಿಂದ 83 ವಿಕೆಟ್ ಉರುಳಿಸಿರೋದು. ಆದ್ರೆ, ನ್ಯೂಜಿಲೆಂಡ್ ವಿರುದ್ಧದ ಫೈನಲ್​​ ಪಂದ್ಯದಲ್ಲಿ ಲಯಬದ್ಧ ದಾಳಿ ನಡೆಸದಿದ್ದದ್ದೂ ಆತಂಕ ಮೂಡಿಸಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲೂ ಫಾರ್ಮ್​ ಹೀಗೆ ಮುಂದುವರಿದರೆ, ಟೀಮ್ ಇಂಡಿಯಾಗೆ ಮತ್ತಷ್ಟು ಸಂಕಷ್ಟ ಎದುರಾಗೋದು ಗ್ಯಾರಂಟಿ. ಹೀಗಾಗಿ ಆದಷ್ಟು ಬೇಗ ಬೂಮ್ರಾ ಕಮ್​ಬ್ಯಾಕ್ ಮಾಡಲೇಬೇಕಾದ ಅವಶ್ಯಕತೆ ಎದುರಾಗಿದೆ.

ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಫೈಟ್​​ನಲ್ಲಿ ಮುಗ್ಗರಿಸಿರುವ ಟೀಮ್ ​ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಿದ್ಧತೆ ನಡೆಸಿದೆ. ಸಿಗೋ ಒಂದು ತಿಂಗಳ ಅಂತರದಲ್ಲಿ ಬೂಮ್ರಾ ಸಂಪೂರ್ಣ ಫಿಟ್ ಆಗಿ ಮರಳ್ತಾರಾ..? ಅಥವಾ ಮ್ಯಾನೇಜ್​ಮೆಂಟ್​​ ಬೂಮ್ರಾಗೆ ಕೊಕ್​ ನೀಡಿ ಯುವ ಆಟಗಾರರಿಗೆ ಅವಕಾಶ ನೀಡುತ್ತಾ ಕಾದು ನೋಡಬೇಕಿದೆ.

The post ನೇಮ್, ಫೇಮ್​ಗೆ ಮನ್ನಣೆ ನೀಡಿದ್ರಾ ಸೆಲೆಕ್ಟರ್ಸ್? ಆಯ್ಕೆ ಸಮಿತಿ ಮೇಲೆ ಮಾಜಿ ಕ್ರಿಕೆಟಿಗ ಕರೀಂ ಗರಂ appeared first on News First Kannada.

Source: newsfirstlive.com

Source link